ವೀರಾಜಪೇಟೆ, ಜು. 12: ದಕ್ಷಿಣ ಕನ್ನಡದ ಬಿ.ಸಿ. ರಸ್ತೆಯಲ್ಲಿ ಆರ್‍ಎಸ್‍ಎಸ್ ಕಾರ್ಯಕರ್ತ ಶರತ್ ಹತ್ಯೆ ಹಾಗೂ ಜಮ್ಮುವಿನ ಅಮರನಾಥ ಯಾತ್ರಾರ್ಥಿಗಳ ಮೇಲೆ ಭಯೋತ್ಪಾದಕರು ನಡೆಸಿದ ಗುಂಡಿನ ದಾಳಿಯನ್ನು ಖಂಡಿಸಿ ಹಿಂದೂ ಪರ ಸಂಘಟನೆಗಳು ಗಡಿಯಾರ ಕಂಬದ ಬಳಿ ಪ್ರತಿಭಟನೆ ನಡೆಸಿ ತಹಶೀಲ್ದಾರರ ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಿದರು.

ರಾಜ್ಯದಲ್ಲಿ ನಿರಂತರವಾಗಿ ಹಿಂದೂಗಳ ಹತ್ಯೆ ಹಾಗೂ ಹಲ್ಲೆ ನಡೆಸುತ್ತಿದ್ದಾರೆ. ಈ ಕೃತ್ಯಗಳ ಹಿಂದೆ ಹಿಂದೂ ವಿರೋಧಿ ಭಯೋತ್ಪಾದಕ ಸಂಘಟನೆಗಳಾದ ಪಿಎಫ್‍ಐ, ಎಸ್‍ಡಿಪಿಐ, ಕೆಎಫ್‍ಡಿ ಸಂಘಟನೆಗಳ ಕೈವಾಡವಿದೆ. ಇಂತಹ ಸಂಘಟನೆ ಗಳನ್ನು ರಾಜ್ಯದಲ್ಲಿ ನಿಷೇಧಿಸಬೇಕು. ಗಲಭೆಗೆ ಕಾರಣಕರ್ತರಾದ ಸಚಿವರುಗಳಾದ ರಮಾನಾಥ ರೈ, ಯು.ಟಿ ಖಾದರ್ ಅವರುಗಳನ್ನು ಕೂಡಲೇ ಬಂಧಿಸಿ ಕ್ರಿಮಿನಲ್ ಪ್ರಕರಣ ದಾಖಲಿಸಬೇಕು. ಹಿಂದೂಗಳ ಪವಿತ್ರ ಸ್ಥಳವಾದ ಅಮರನಾಥ ಯಾತ್ರೆಗೆ ಭಕ್ತಾದಿಗಳು ತೆರಳುತ್ತಿದ್ದ ಸಂದರ್ಭ ಭಯೋತ್ಪಾದಕ ಸಂಘಟನೆಗಳು ಗುಂಡಿನ ಧಾಳಿಯನ್ನು ನಡಸಿರುವ ದನ್ನು ತೀವ್ರವಾಗಿ ಖಂಡಿಸಲಾಗುವದು. ಉಗ್ರಗಾಮಿಗಳನ್ನು ಬಂಧಿಸಿ ಅಮರನಾಥ ಯಾತ್ರೆಗೆ ತೆರಳುವ ಎಲ್ಲಾ ಭಕ್ತಾದಿಗಳಿಗೆ ಹೆಚ್ಚಿನ ಬಂದೋಬಸ್ತ್ ಒದಗಿಸುವಂತೆ ಆಗ್ರಹಿಸಿದ್ದಾರೆ.

ಇದೇ ಸಂದರ್ಭ ಶಾಸಕ ಕೆ.ಜಿ ಬೋಪಯ್ಯ, ತಾಲೂಕು ವಿಹೆಚ್‍ಪಿ ಅಧ್ಯಕ್ಷ ಉದ್ದಪಂಡ ಜಗತ್, ಭಜರಂಗದಳದ ನಗರ ಅಧ್ಯಕ್ಷ ನಾಗೇಶ್, ವಿವೇಕ್ ರೈ, ಪೊನ್ನಪ್ಪ ರೈ, ಟಿ.ಪಿ. ಕೃಷ್ಣ, ಪಟ್ಟಣ ಪಂಚಾಯಿತಿ ಸ್ಥಾಯಿ ಸಮಿತಿ ಅಧ್ಯಕ್ಷ ರಚನ್ ಮೇದಪ್ಪ, ಎನ್.ಪಿ. ದಿನೇಶ್ ನಾಯರ್ ಸೇರಿದಂತೆ ಕಾರ್ಯಕರ್ತರು ಪಾಲ್ಗೊಂಡಿದ್ದರು.