ಮಡಿಕೇರಿ, ಜು. 12: ಆಧುನಿಕ ಕೃಷಿಯಂತ್ರ ಬಳಕೆಯೊಂದಿಗೆ ರೈತರು ತಮ್ಮ ಜಮೀನುಗಳನ್ನು ಪಾಳು ಬಿಡದೆ ನಾಟಿ ಕೈಗೊಳ್ಳುವಂತೆ, ಕೃಷಿ ಇಲಾಖೆಯ ಅಧಿಕಾರಿಗಳು ಸಲಹೆ ನೀಡುವದರೊಂದಿಗೆ, ಈ ಸಲುವಾಗಿ ಸರಕಾರದಿಂದ ರೈತರಿಗೆ ಸಹಾಯಧನ ಬಿಡುಗಡೆ ಮಾಡಲಿರುವದಾಗಿ ಮಾಹಿತಿ ನೀಡಿದ್ದಾರೆ.

ಗದ್ದೆಗಳಲ್ಲಿ ಭತ್ತದ ನಾಟಿ ಮಾಡುವದರಿಂದ ಮಾತ್ರ ಜಲ ಮೂಲದ ಸಂರಕ್ಷಣೆ ಹಾಗೂ ಅಂತರ್ಜಲ ಮಟ್ಟ ಕಾಪಾಡಿ ಕೊಳ್ಳುವದು ಸಾಧ್ಯವೆಂದು ಅಭಿಪ್ರಾಯ ಪಟ್ಟಿರುವ ಕೃಷಿ ಅಧಿಕಾರಿಗಳು, ಭತ್ತದ ಗದ್ದೆಗಳನ್ನು ನಾಟಿಯಿಂದ ಬೆಳೆ ಬೆಳೆಸುವಲ್ಲಿ ಉಳಿಸಿಕೊಳ್ಳದಿದ್ದರೆ, ಭವಿಷ್ಯದಲ್ಲಿ ಕುಡಿಯುವ ನೀರಿಗೂ ಪರಿತಪಿಸಬೇಕಾದೀತು ಎಂದು ಮುನ್ಸೂಚನೆ ನೀಡಿದ್ದಾರೆ.

ಭತ್ತ ಬೆಳೆಯುವದು ಲಾಭದಾಯಕವಲ್ಲವೆಂದು ಕೆಲವರು ಅಭಿಪ್ರಾಯ ವ್ಯಕ್ತಪಡಿಸುತ್ತಿರುವ ಹಿನ್ನೆಲೆಯಲ್ಲಿ, ಸರಕಾರ ಆಧುನಿಕ ಕೃಷಿ ಯಂತ್ರ ಬಳಕೆಯಿಂದ ಕೂಲಿ ಕಾರ್ಮಿಕರಿಗೆ ಭೂಮಾಲೀಕ ಸಂಬಳ ನೀಡಲಾರದೆ ತೊಂದರೆ ಅನುಭವಿಸುವದನ್ನು ತಪ್ಪಿಸಲು ಕಾಳಜಿ ಹೊಂದಿರುವದಾಗಿ ತಾಂತ್ರಿಕ ಕೃಷಿ ಅಧಿಕಾರಿ ರಮೇಶ್ ತಿಳಿಸಿದ್ದಾರೆ.

‘ಶಕ್ತಿ’ ರೈತರ ಸಮಸ್ಯೆ ಬಗ್ಗೆ ಗಮನ ಸೆಳೆದಾಗ ಪ್ರತಿಕ್ರಿಯಿಸಿದ ಅವರು, ಕೃಷಿಯಂತ್ರ ಬಳಸಿ ನಾಟಿ ಕೈಗೊಳ್ಳಲು ಪ್ರತಿ ಹೆಕ್ಟೇರ್‍ಗೆ ರೂ. 4 ಸಾವಿರ ಹಾಗೂ ಎಕರೆಗೆ ರೂ. 1400ರಂತೆ ಸಹಾಯಧನ ನೀಡುತ್ತಿದ್ದು, ರೈತರು ಸಮೀಪದ ರೈತ ಸಂಪರ್ಕ ಕೇಂದ್ರಗಳಿಂದ ಹೆಚ್ಚಿನ ಮಾಹಿತಿ ಪಡೆದುಕೊಂಡು ಸಹಾಯಧನ ಹಾಗೂ ಇತರ ಸೌಲಭ್ಯದ ಬಗ್ಗೆ ತಿಳುವಳಿಕೆಗೆ ಮುಂದಾಗುವಂತೆ ಕೋರಿದ್ದಾರೆ.

ಅಲ್ಪಾವಧಿ ಬೆಳೆಗೆ ಕರೆ: ಈಗಾಗಲೇ ಮುಂಗಾರು ಬೆಳೆ ದೀರ್ಘಾವಧಿ ಭತ್ತ ನಾಟಿಗೆ ಕಾಲಾವಕಾಶ ಮುಗಿದಿದ್ದು, ಅಲ್ಪಾವಧಿ ಭತ್ತ ಬೆಳೆಯಲು ಇನ್ನು ಕಾಲಾವಕಾಶ ಇರುವದಾಗಿ ಅಭಿಪ್ರಾಯಪಟ್ಟಿರುವ ಅಧಿಕಾರಿ, ಈ ದಿಸೆಯಲ್ಲಿ ರೈತ ಸಂಪರ್ಕ ಕೇಂದ್ರಗಳಲ್ಲಿ ಅಗತ್ಯ ಸಸಿಮಡಿ ತಯಾರಿಸಲು ಸಹಾಯಧನದೊಂದಿಗೆ ಬೀಜ ಲಭ್ಯವಿದೆ ಎಂದರು. ಅಲ್ಲದೆ ಪ್ಲಾಸ್ಟಿಕ್ ಅಥವಾ ಬಟ್ಟಲುಗಳ ಬಳಕೆಯಿಂದ ಕೇವಲ ಎರಡು ಇಂಚು ದಪ್ಪದಲ್ಲಿ ಮಣ್ಣು ಗೊಬ್ಬರ ಮಿಶ್ರಣದ ಪದರ ನಿರ್ಮಿಸಿ ಭತ್ತದ ಬೀಜ ಹರಡುವ ಮೂಲಕ ಸುಲಭ ವಿಧಾನದಿಂದ ಆಧುನಿಕ ನಾಟಿ ಪದ್ಧತಿಗೆ ರೈತರು ತಯಾರಿ ಮಾಡಿಕೊಳ್ಳುವಂತೆಯೂ ಅವರು ಕರೆ ನೀಡಿದರು.

ಜಿಲ್ಲೆಯಲ್ಲಿ ಕೃಷಿ ಪ್ರಗತಿ : ಕೊಡಗು ಜಿಲ್ಲೆಯಲ್ಲಿ ಒಟ್ಟು 34500 ಹೆಕ್ಟೇರ್ ಮುಂಗಾರು ಬೆಳೆ ಗುರಿ ಹೊಂದಿರುವದಾಗಿ ತಿಳಿಸಿದ ಅಧಿಕಾರಿ ರಮೇಶ್, ಈಗಾಗಲೇ 3440 ಹೆಕ್ಟೇರ್‍ನಷ್ಟು (9.97 ಶೇಕಡ) ಸಾಧನೆಯಷ್ಟೇ ಆಗಿದೆ ಎಂದು ಮಾಹಿತಿ ನೀಡಿದರು. ಮಡಿಕೇರಿ ತಾಲೂಕಿನ ಗ್ರಾಮೀಣ ಪ್ರದೇಶ ಹಮ್ಮಿಯಾಲ, ಮುಟ್ಲು, ಕುಂಬಾರ ಗಡಿಗೆ, ಸೂರ್ಲಬ್ಬಿ, ಕಿಕ್ಕರಳ್ಳಿ, ಮಂಕ್ಯ ಗ್ರಾಮಗಳಲ್ಲಿ ನಾಟಿ ಬಹುತೇಕ ಮುಗಿಯುವ ಹಂತದಲ್ಲಿದ್ದು, ಸೋಮವಾರಪೇಟೆ ತಾಲೂಕಿನ ಗ್ರಾಮೀಣ ಪ್ರದೇಶದಲ್ಲಿ 3440 ಹೆಕ್ಟೇರ್ ಕೃಷಿ ಮಾಡಲಾಗಿದೆ. ಸೋಮವಾರ ಪೇಟೆ ತಾಲೂಕಿನಲ್ಲಿ 14 ಸಾವಿರ ಹೆಕ್ಟೇರ್ ಹಾಗೂ ಮಡಿಕೇರಿ ತಾಲೂಕಿನಲ್ಲಿ 6500 ಹೆಕ್ಟೇರ್ ಮತ್ತು ವೀರಾಜಪೇಟೆ ತಾಲೂಕಿನಲ್ಲಿ 14 ಸಾವಿರ ಹೆಕ್ಟೇರ್ ಮುಂಗಾರು ಗುರಿ ಹೊಂದಿರುವದಾಗಿ ಅಧಿಕಾರಿ ತಿಳಿಸಿದ್ದಾರೆ. ಪ್ರಸಕ್ತ ಕೊಡಗು ಜಿಲ್ಲೆಯಲ್ಲಿ ಮುಂಗಾರು ಬೆಳೆಯನ್ನು ಬೆಳೆಯಲು ಮಳೆ ಹಿನ್ನಡೆಯಾಗಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದ ಅವರು, ಪರಿಸ್ಥಿತಿ ಹೀಗೆ ಮುಂದುವರಿದರೆ, ದಕ್ಷಿಣ ಕೊಡಗು ಹಾಗೂ ಉತ್ತರ ಕೊಡಗಿನ ಬಯಲು ಸೀಮೆಯಲ್ಲಿ ಮುಂಗಾರು ಬೆಳೆಗೆ ತೊಂದರೆ ಯಾಗುವ ಸಾಧ್ಯತೆಯನ್ನು ತಳ್ಳಿ ಹಾಕುವಂತಿಲ್ಲ ಎಂದು ಸುಳಿವು ನೀಡಿದ್ದಾರೆ.

ಬಿಜೆಪಿ ಆಕ್ರೋಶ

ಕೊಡಗು ಜಿಲ್ಲೆಯಲ್ಲಿ ಹವಾಮಾನ ವೈಪರೀತ್ಯಕ್ಕೆ ರಾಜ್ಯ ಸರಕಾರವೇ ಹೊಣೆಯೆಂದು ಬಿಜೆಪಿ ಜಿಲ್ಲಾ ಕಾರ್ಯದರ್ಶಿ ರವಿಬಸಪ್ಪ ಟೀಕಿಸಿದ್ದು, ಪ್ರಕೃತಿಗೆ ವಿರುದ್ಧವಾಗಿ ಮೋಡ ಬಿತ್ತನೆಯೇ ಇಂದಿನ ಗಂಭೀರ ಪರಿಸ್ಥಿತಿಗೆ ಕಾರಣವೆಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈ ಬಗ್ಗೆ ‘ಶಕ್ತಿ’ಯೊಂದಿಗೆ ಹೇಳಿಕೆ ನೀಡಿರುವ ಅವರು, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಮೋಡ ಬಿತ್ತನೆ ಯಂತಹ ಕಾರ್ಯವೈಖರಿಯಿಂದ ಜಿಲ್ಲೆಯ ಕೃಷಿಕರು ಅನೇಕ ಸಂದರ್ಭಗಳಲ್ಲಿ ತೊಂದರೆ ಅನುಭವಿಸಿದ್ದಾಗಿ ಆರೋಪಿಸಿದ್ದಾರೆ. ಅಲ್ಲದೆ, ಸಮಕಾಲೀನ ಮಳೆ ಯಾಗುತ್ತಿರುವ ಕೊಡಗಿನಲ್ಲಿ ಮೋಡ ಬಿತ್ತನೆಯಿಂದಾಗಿ, ಪ್ರಸಕ್ತ ಮುಂಗಾರು ವಿನಲ್ಲಿ ಡಿಸೆಂಬರ್ ಬೆಳೆ ಕಾಫಿ ಹಣ್ಣಾಗಿ ಕೊಳೆಯುವಂತಾಗಿದೆ ಎಂದು ಬೊಟ್ಟು ಮಾಡಿದ್ದಾರೆ. ಮೋಡ ಬಿತ್ತನೆ ಲೆಕ್ಕದಲ್ಲಿ ರೂ. 30 ಕೋಟಿ ವ್ಯಯ ಮಾಡುವದನ್ನು ಕಾವೇರಿ ನಾಡಿನ ರೈತರಿಗೆ ಕೃಷಿ ನಷ್ಟದ ಬಾಪ್ತು ಪ್ಯಾಕೇಜ್ ರೂಪದಲ್ಲಿ ಒದಗಿಸಿ, ಸಕಾಲಿಕ ಮಳೆ ನೀರನ್ನು ಜಿಲ್ಲೆಯಿಂದ ಹೊಂದಿಕೊಳ್ಳುವಂತೆ ಆಗ್ರಹಿಸಿದ್ದಾರೆ.

ಬಿಜೆಪಿ ಹಿರಿಯ ಮುಖಂಡ ಹಾಗೂ ಕಾಫಿ ಬೆಳೆಗಾರರ ಸಹಕಾರ ಸಂಘದ ಅಧ್ಯಕ್ಷ ಎಂ.ಬಿ. ದೇವಯ್ಯ ಹೇಳಿಕೆ ನೀಡಿ, ಸರಕಾರದಿಂದ ಕೊಡಗಿನಲ್ಲಿ ಮೋಡ ಬಿತ್ತನೆ ಮಾಡುವ ಮುನ್ನ, ವಿಶೇಷ ಪ್ಯಾಕೇಜ್ ಒದಗಿಸುವಂತೆ ಒತ್ತಾಯಿಸಿದ್ದಾರೆ. ಕೊಡಗಿನ ನೈಸರ್ಗಿಕ ತಾಪಮಾನ ಹಾಗೂ ಪರಿಸರಕ್ಕೆ ಮೋಡ ಬಿತ್ತನೆ ಹಾನಿಕಾರಕವೆಂದು ಟೀಕಿಸಿದ್ದಾರೆ.