ಮಡಿಕೇರಿ, ಜು. 12: ಕರ್ನಾಟಕ ರಾಜ್ಯ ಸಹಕಾರ ಪತ್ತಿನ ಸಂಘಗಳ ಮಹಾಮಂಡಲ ಬೆಂಗಳೂರು ಇದರ ವಾರ್ಷಿಕ 13ನೇ ಮಹಾಸಭೆಯಲ್ಲಿ 2016-17ನೇ ಸಾಲಿನಲ್ಲಿ ರಾಜ್ಯದಲ್ಲಿ ಅತೀ ಹೆಚ್ಚು ಮುದ್ರಾಂಕ ಶುಲ್ಕ ಪಡೆದು ಮತ್ತು ಇ-ಸ್ಟ್ಯಾಂಪಿಂಗ್ ಪ್ರತಿ ಗಳನ್ನು ಮುದ್ರಿಸಿ ಗ್ರಾಹಕರಿಗೆ ಮಾರಾಟ ಮಾಡಿರುವ ಸಹಕಾರ ಸಂಘಗಳನ್ನು ಗುರುತಿಸಿ ಸನ್ಮಾನಿಸಲಾಯಿತು.

2016-17ನೇ ಸಾಲಿನಲ್ಲಿ ಸುಳ್ಯದ ಶ್ರೀ ವೆಂಕಟರಮಣ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿಯು ದಕ್ಷಿಣ ಕನ್ನಡ ಹಾಗೂ ಕೊಡಗು ಜಿಲ್ಲೆಯ ಮಡಿಕೇರಿ ಶಾಖೆಯಲ್ಲಿ ಅತೀ ಹೆಚ್ಚು ಮುದ್ರಾಂಕ ಶುಲ್ಕ ಸಂಗ್ರಹಣೆಯಲ್ಲಿ ಒಟ್ಟು 2 ಪ್ರಶಸ್ತಿಗಳನ್ನು ಪಡೆದುಕೊಂಡಿದೆ.

ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಕರ್ನಾಟಕ ರಾಜ್ಯ ಸಹಕಾರ ಇಲಾಖೆಯ ಪ್ರಧಾನ ಕಾರ್ಯದರ್ಶಿ ಎಸ್.ಎಸ್. ಪಟ್ಟಣ ಶೆಟ್ಟಿ, ರಾಜ್ಯ ಸ್ಟಾಕ್ ಹೋಲ್ಡಿಂಗ್ ಕಾರ್ಪೋ ರೇಷನ್ ಆಫ್ ಇಂಡಿಯಾ ಪ್ರಾದೇಶಿಕ ವ್ಯವಸ್ಥಾಪಕ ಎಂ. ರಾಘವೇಂದ್ರ ಸ್ವಾಮಿ, ಸಹಕಾರ ಇಲಾಖೆಯ ಜಂಟಿ ನಿಬಂಧಕ ಎಂ.ಡಿ. ನರಸಿಂಹ ಮೂರ್ತಿ, ಮಹಾಮಂಡಲದ ಅಧ್ಯಕ್ಷ ಸಿ.ಎಂ. ಮಾರೇಗೌಡ, ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಕೆ.ಎಸ್. ಗುರುಪ್ರಸಾದ್ ಹಾಗೂ ನಿರ್ದೇಶಕರು ಉಪಸ್ಥಿತರಿದ್ದರು. ಸಂಘದ ಅಧ್ಯಕ್ಷ ಚಂದ್ರಾ ಕೋಲ್ಚಾರ್, ಉಪಾಧ್ಯಕ್ಷ ಪಿ.ಎಸ್. ಗಂಗಾಧರ್ ಹಾಗೂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕೆ.ಟಿ. ವಿಶ್ವನಾಥ್ ಇವರಿಗೆ ಪ್ರಶಸ್ತಿ ಯನ್ನು ನೀಡಿ ಗೌರವಿಸಲಾಯಿತು.