ಕುಶಾಲನಗರ, ಜು. 12: ಸಮರ್ಪಕ ಕಸ ವಿಲೇವಾರಿಗೆ ಶಾಶ್ವತ ಪರಿಹಾರ ಕಲ್ಪಿಸುವಂತೆ ಆಗ್ರಹಿಸಿ ಮುಳ್ಳುಸೋಗೆ ಗ್ರಾಮ ಪಂಚಾಯಿತಿ ಆಡಳಿತ ಮಂಡಳಿ ಪ್ರತಿನಿಧಿಗಳು ಅನಿರ್ದಿಷ್ಟಾವಧಿ ಉಪವಾಸ ಸತ್ಯಾಗ್ರಹ ಆರಂಭಿಸಿದ್ದಾರೆ. ಪಂಚಾಯಿತಿ ವ್ಯಾಪ್ತಿಯಲ್ಲಿ ಸಂಗ್ರಹವಾಗುವ ಕಸ ವಿಲೇವಾರಿಗೊಳಿಸಲು ಜಿಲ್ಲಾಡಳಿತ ಸೂಕ್ತ ಸ್ಥಳಾವಕಾಶ ಗುರುತಿಸಿಕೊಡುವಲ್ಲಿ ವಿಫಲವಾಗಿದೆ ಎಂದು ಆರೋಪಿಸಿರುವ ಆಡಳಿತ ಮಂಡಳಿ ಪದಾಧಿಕಾರಿಗಳು ಶಾಶ್ವತ ಪರಿಹಾರ ದೊರಕುವ ತನಕ ಸತ್ಯಾಗ್ರಹ ಕೈಬಿಡುವದಿಲ್ಲ ಎಂದು ತಿಳಿಸಿದ್ದಾರೆ.

ಕಳೆದ 1 ವರ್ಷದಿಂದಲೂ ಕಸ ವಿಲೇವಾರಿ ಸಮಸ್ಯೆ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳ ಗಮನಕ್ಕೆ ತರಲಾಗುತ್ತಿದ್ದರೂ ಇದುವರೆಗೆ ಸಮಸ್ಯೆ ನಿವಾರಿಸುವಲ್ಲಿ ಯಾವುದೇ ಅಧಿಕಾರಿಗಳು ಮುಂದಾಗಿಲ್ಲ. ಪಂಚಾಯ್ತಿ ವ್ಯಾಪ್ತಿಯ ಸರ್ವೆ ನಂ 5/1 ರಲ್ಲಿ 1 ಎಕರೆ ಸ್ಥಳ ಗುರುತಿಸಲಾಗಿದೆಯಾದರೂ ಸಮೀಪದಲ್ಲಿ ಕಾಲೇಜು, ವಸತಿ ನಿಲಯಗಳು ಹಾಗೂ ವಸತಿ ಬಡಾವಣೆಯೊಂದು ಇರುವ ಕಾರಣ ಅಲ್ಲಿ ಕಸ ವಿಲೇವಾರಿಗೊಳಿಸಲು ಸಾಧ್ಯವಿಲ್ಲ. ಹೀಗಾಗಿ ಜಿಲ್ಲಾಡಳಿತ ಆಸಕ್ತಿ ವಹಿಸಿ ಕಸ ವಿಲೇವಾರಿಗೆ ಸೂಕ್ತ ಜಾಗ ಗುರುತಿಸಿ ಆದೇಶ ಹೊರಡಿಸಬೇಕೆಂದು ಪಂಚಾಯಿತಿ ಅಧ್ಯಕ್ಷೆ ಭವ್ಯ ಹಾಗೂ ಉಪಾಧ್ಯಕ್ಷ ತಾರಾನಾಥ್ ಆಗ್ರಹಿಸಿದ್ದಾರೆ.

ಸಧ್ಯದ ಪರಿಸ್ಥಿತಿಯಲ್ಲಿ ಬಡಾವಣೆಗಳಲ್ಲಿ ಸಂಗ್ರಹವಾಗುತ್ತಿರುವ ಕಸ ವಿಲೇವಾರಿಗೊಳಿಸಲು ಸಾಧ್ಯವಾಗುತ್ತಿಲ್ಲ. ಈ ಹಿನ್ನೆಲೆಯಲ್ಲಿ ಮಾರಕ ರೋಗಗಳು ಕಾಡುವ ಭೀತಿಯಿದ್ದು ಈಗಾಗಲೆ ಡೆಂಗ್ಯು ರೋಗಕ್ಕೆ ಮಗುವೊಂದು ಬಲಿಯಾಗಿದೆ, ಹಲವರು ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಾಗಿದ್ದಾರೆ. ಪಂಚಾಯ್ತಿ ವತಿಯಿಂದ ಕಸ ವಿಲೇವಾರಿಗೆ ಎಲ್ಲಾ ಸಿದ್ಧತೆ ನಡೆಸಲಾಗಿದ್ದರೂ ಸೂಕ್ತ ಸ್ಥಳಾವಕಾಶದ ಕೊರತೆ ಕಾಡುತ್ತಿದೆ. ಜಿಲ್ಲಾಡಳಿತ ಕೂಡಲೆ ಈ ಬಗ್ಗೆ ಗಮನಹರಿಸಿ ಸಮಸ್ಯೆ ಬಗೆಹರಿಸಬೇಕೆಂದು ಪಂಚಾಯಿತಿ ಸದಸ್ಯರುಗಳು ಆಗ್ರಹಿಸಿದ್ದಾರೆ.