ಮಡಿಕೇರಿ, ಜು. 12: ನಗರದ ಹೃದಯ ಭಾಗದಲ್ಲಿರುವ ಬಾರೊಂದರ ಮೇಲೆ ಕುಡುಕರ ಗುಂಪೊಂದು ಸಿನಿಮೀಯ ರೀತಿಯಲ್ಲಿ ಧಾಳಿ ನಡೆಸಿ, ಅಂದಾಜು ರೂ. ಒಂದು ಲಕ್ಷದಷ್ಟು ನಷ್ಟಗೊಳಿಸಿರುವ ದುಷ್ಕøತ್ಯ ತಾ. 10 ರಂದು ಸಂಭವಿಸಿದೆ.ಅಂದು ಅಪರಾಹ್ನ 4 ಗಂಟೆ ಬಳಿಕ ಇಲ್ಲಿನ ರಾಜ್ಯ ಸಾರಿಗೆ ಬಸ್ ನಿಲ್ದಾಣ ಮುಂಭಾಗವಿರುವ ಮಾರುತಿ ಬಾರ್‍ಗೆ ಕೆಲವರು ಬಂದು ಮದ್ಯ ಸೇವಿಸಿದ್ದಾರೆ. ಈ ವೇಳೆ ಮದ್ಯ ಸೇವನೆ ನಡುವೆ ಪರಸ್ಪರ ಗಲಾಟೆಯೂ ಮಾಡಿಕೊಂಡಿದ್ದಾರೆ. ಅಷ್ಟರಲ್ಲಿ ಬಾರ್ ಸಿಬ್ಬಂದಿ ಉಭಯ ಕಡೆ ಸಮಾಧಾನಗೊಳಿಸಿ, ಇತರ ಗಿರಾಕಿಗಳಿಗೆ ತೊಂದರೆ ಯಾಗದಂತೆ ಹೊರಗೆ ಹೋಗಿ ಜಗಳ ಮಾಡಿಕೊಳ್ಳಿ, ಇಲ್ಲಿ ಯಾರಿಗೂ ಅಡ್ಡಿಯುಂಟು ಮಾಡಬೇಡಿ ಎಂದು ಬುದ್ಧಿಹೇಳಿ ಹೊರಗೆ ಕಳುಹಿಸಿದ್ದಾರೆ.ಅಲ್ಲಿಂದ ಹೊರ ಹೋಗಿರುವ ಎರಡು ಕಡೆ ಯುವಕರ ಗುಂಪು, ರಾತ್ರಿ ಬಾಲಭವನ ಬಳಿ ವಾಹನಗಳನ್ನು ನಿಲ್ಲಿಸಿ, ಹೆಲ್ಮೆಟ್‍ಗಳನ್ನು ಧರಿಸಿಕೊಂಡು ಮತ್ತೆ ಸಿನಿಮೀಯ ರೀತಿ ಬಾರ್ ಮೇಲೆ ಧಾಳಿ ನಡೆಸಿದ್ದಾರೆ. ಬಾರ್‍ನೊಳಗೆ ಪ್ರವೇಶಿಸುತ್ತಲೇ ಸಿಕ್ಕ ಸಿಕ್ಕ ವಸ್ತುಗಳಿಗೆ ಮತ್ತು ಗಲ್ಲ ಪೆಟ್ಟಿಗೆಯತ್ತ ಕಲ್ಲುಗಳನ್ನು ತೂರಿದ್ದಾರೆ. ಹಠಾತ್ ಧಾಳಿಯಿಂದ ಕಂಗಾಲಾಗಿರುವ ಬಾರ್ ಸಿಬ್ಬಂದಿ ಅಡಗಿಕೊಂಡು ಅಪಾಯದಿಂದ ಪಾರಾಗಿದ್ದಾರೆ. ಇತ್ತ ಹತ್ತರಿಂದ ಹನ್ನೆರಡು ಸಂಖ್ಯೆಯಲ್ಲಿದ್ದ ಈ ಕುಡುಕರ ಗುಂಪು ದುಷ್ಕøತ್ಯದ ಬಳಿಕ ಅಲ್ಲಿಂದ ಪರಾರಿಯಾಗಿದ್ದಾರೆ. ಈ ಬಗ್ಗೆ ನಗರ ಠಾಣೆ ಪೊಲೀಸರಿಗೆ ದೂರು ನೀಡಲಾಗಿದ್ದು, ಮೊಕದ್ದಮೆ ದಾಖಲಿಸಿ ಕೊಂಡಿರುವ ಪೊಲೀಸರು ಸಿಸಿ ಕ್ಯಾಮೆರಾ ದೃಶ್ಯಾವಳಿ ಗಮನಿಸಿ ಆರೋಪಿಗಳ ಬಂಧನಕ್ಕೆ ಬಲೆ ಬೀಸಿದ್ದಾರೆ. ಈ ಸಂಬಂಧ ಪೊಲೀಸ್ ಕಾಯ್ದೆ 143, 147, 427, 324, 506 ಆರ್/ಡಬ್ಲ್ಯು 149 ರಂತೆ ದೂರು ದಾಖಲಿಸಿಕೊಂಡಿದ್ದಾರೆ.