ಮಡಿಕೇರಿ, ಜು. 12: ಮಡಿಕೇರಿ ನಗರಸಭೆಯಲ್ಲಿ ನಗರಸಭೆಯ ವಿವಿಧ ಯೋಜನೆಗಳು, ಅಗತ್ಯದಾಖಲೆ ಯಂತಹ ಮಾಹಿತಿಗಳನ್ನು ಸಾರ್ವಜನಿಕರಿಗೆ ತಿಳಿಯಪಡಿಸಲು ಇತ್ತೀಚೆಗಷ್ಟೇ ನಗರಸಭೆಯ ಆವರಣದಲ್ಲಿ ಎಲ್‍ಇಡಿ ಪರದೆ ಯೊಂದನ್ನು ಅಳವಡಿಸಲಾಗಿದೆ. ಈ ಪರದೆಯಲ್ಲಿ ಇಂತಹ ಮಾಹಿತಿಗಳು ಪ್ರದರ್ಶನಗೊಳ್ಳುತ್ತಿವೆ. ಈ ನಡುವೆ ಇಂತಹ ಮಾಹಿತಿಯ ನಡುವೆ ಅಚಾನಕ್ ಆಗಿ ಅಶ್ಲೀಲ ಚಿತ್ರ ಪ್ರದರ್ಶನ ಮೂಡಿ ಬಂದಿದೆ ಎಂಬ ಆರೋಪ. ಗುಸು ಗುಸು ಕೇಳಿಬಂದಿದ್ದು, ಇದು ರಾಜ್ಯಾದ್ಯಂತ ಸುದ್ದಿಗೆ ಗ್ರಾಸವಾಗಿದ್ದ ಪ್ರಕರಣ ಇಂದು ನಡೆದಿದೆ.

ಇದು ನಡೆದದ್ದು ನಾಲ್ಕೈದು ದಿನಗಳ ಹಿಂದೆಯಂತೆ, ಆದರೆ ಸುದ್ದಿಗೆ ಗ್ರಾಸವಾಗಿದ್ದು, ನಿನ್ನೆ ಸಂಜೆಯ ಬಳಿಕ ದೃಶ್ಯಮಾಧ್ಯಮಗಳಲ್ಲಿ ಇದು ಭಾರೀ ಸುದ್ದಿಯಾಗಿದ್ದು, ಇಂದು ನಗರಸಭೆಯ ಆವರಣದಲ್ಲಿ ಸಂಚಲನ ಸೃಷ್ಟಿಯಾಗಿತ್ತು. ಪ್ರಕರಣ ಗಂಭೀರ ಸ್ವರೂಪ ಪಡೆದುಕೊಂಡಿದ್ದು, ಈ ಬಗ್ಗೆ ತನಿಖೆಯೂ ಮುಂದುವರಿಯುವಷ್ಟರ ಮಟ್ಟಿಗೆ ತಿರುವು ಪಡೆದಿದೆ. ಜಿಲ್ಲಾಧಿಕಾರಿಗಳ ಆದೇಶದಂತೆ ನಗರ ಸಭೆಯ ಯೋಜನಾ ನಿರ್ದೇಶಕರು ತನಿಖೆ ನಡೆಸಿದ್ದು, ಈ ಬಗ್ಗೆ ಜಿಲ್ಲಾಧಿಕಾರಿಗಳಿಗೆ ವರದಿ ಸಲ್ಲಿಸಲಿದ್ದಾರೆ.

ಏನಿದು ಪ್ರಕರಣ?: ನಗರಸಭೆ ಸಭಾಂಗಣದ ಎದುರು ಕಳೆದ ಐದು ತಿಂಗಳ ಹಿಂದೆ ನಗರಸಭೆ ಹಾಗೂ ಸರ್ಕಾರದ ಯೋಜನೆಗಳ ಬಗ್ಗೆ ಸಾರ್ವಜನಿಕರಿಗೆ ಮಾಹಿತಿ ನೀಡಲು ಬೃಹತ್ ಟಿ.ವಿ. ಅಳವಡಿಸಲಾಗಿತ್ತು. ಜುಲೈ 5 ರಂದು ಮಧ್ಯಾಹ್ನ 3 ಗಂಟೆಯ ವೇಳೆ ಎರಡು ನಿಮಿಷಗಳ ಕಾಲ ದಿಢೀರನೆ ಸಂಬಂಧವಿಲ್ಲದ ಮೂರು ಚಿತ್ರಗಳು ಪ್ರದರ್ಶನ ಗೊಂಡಿದ್ದವಂತೆ. ಕಚೇರಿಯ ಹೊರಗಿದ್ದ ಸಿಬ್ಬಂದಿಯೊಬ್ಬರು ಅದನ್ನು ಗಮನಿಸಿ ಟಿ.ವಿ. ಆಫ್ ಮಾಡುವಂತೆ ಡಾಟಾ ಆಪರೇಟರ್ ವಿಭಾಗದ ಸಿಬ್ಬಂದಿಗೆ ಸೂಚಿಸಿದ್ದರು. ಅದನ್ನು ಗಮನಿಸಿದ್ದ ಸ್ಥಾಯಿ ಸಮಿತಿ ಅಧ್ಯಕ್ಷ ಕೆ.ಎಸ್. ರಮೇಶ್ ಅವರು ಉಪಾಧ್ಯಕ್ಷ ಟಿ.ಎಸ್. ಪ್ರಕಾಶ್‍ಗೆ ಮಾಹಿತಿ ನೀಡಿದ್ದರು.

ಪ್ರಕಾಶ್ ಅವರು ಪೌರಾಯುಕ್ತರಿಗೆ ತನಿಖೆ ನಡೆಸುವಂತೆ ಮನವಿ ಮಾಡಿದ್ದರು. ಕೆಲವು ಸದಸ್ಯರು ಅಶ್ಲೀಲ ಚಿತ್ರವೇ ಟಿ.ವಿ. ಯಲ್ಲಿ ಪ್ರಸಾರವಾಗಿದೆ ಎಂದು ಆರೋಪಿಸಿದ್ದರು. ಶುಭಾ ರಜೆಯಲ್ಲಿದ್ದ ಕಾರಣ ಪ್ರಕರಣ ತಣ್ಣಗಾಗಿತ್ತು. ಬುಧವಾರ ಬೆಳಿಗ್ಗೆ ಮಾಧ್ಯಮಗಳಲ್ಲಿ ವರದಿ ಪ್ರಸಾರ ವಾಗುತ್ತಿದ್ದಂತೆಯೇ ಜಿಲ್ಲಾಧಿಕಾರಿ ರಿಚರ್ಡ್ ವಿನ್ಸೆಂಟ್ ಡಿಸೋಜ ಅವರು ತನಿಖೆ ನಡೆಸಿ ವರದಿ ನೀಡುವಂತೆ ಯೋಜನಾ ನಿರ್ದೇಶಕ ಮಹಮ್ಮದ್ ಮುನೀರ್‍ಗೆ ಸೂಚಿಸಿದರು. ಬೆಳಿಗ್ಗೆ 10 ಗಂಟೆಗೆ ನಗರಸಭೆಗೆ ಬಂದ ಯೋಜನಾ ನಿರ್ದೇಶಕರು ಎಲ್ಲಾ ಸಿಬ್ಬಂದಿಯನ್ನು ವಿಚಾರಣೆಗೆ ಒಳಪಡಿಸಿ ಸಿಸಿ ಟಿ.ವಿ. ಕ್ಯಾಮೆರಾದ ದೃಶ್ಯಾವಳಿ ಪರಿಶೀಲಿಸಿದರು.

ಅಶ್ಲೀಲ ಚಿತ್ರ ಪ್ರಸಾರವಾಗಿಲ್ಲ

ಯಾವದೇ ಅಶ್ಲೀಲ ಚಿತ್ರ ಪ್ರಸಾರವಾಗಿಲ್ಲ. ಅಂದು ಮಧ್ಯಾಹ್ನ 3 ಗಂಟೆ 7 ನಿಮಿಷ ಸಂದರ್ಭದಲ್ಲಿ ಮೂರು ಚಿತ್ರಗಳ ದಿಢೀರ್ ಆಗಿ ಟಿ.ವಿ.ಯಲ್ಲಿ ಮೂಡಿವೆ. ಅದನ್ನೇ ಅಶ್ಲೀಲ ಚಿತ್ರವೆಂದು ಕೆಲವರು ಭಾವಿಸಿರುವ ಸಾಧ್ಯತೆಯಿದೆ. ಆ ಟಿ.ವಿ.ಯಲ್ಲಿ ಮಾಹಿತಿ ಬಿಟ್ಟರೆ ಬೇರೆ ಯಾವ ದೃಶ್ಯಾವಳಿಯೂ ಪ್ರಸಾರ ಮಾಡಬಾರದು. ಜಿಲ್ಲಾಧಿಕಾರಿಗೆ ವರದಿ ನೀಡಲಾಗುವದು ಎಂದು ಮಹಮ್ಮದ್ ಮುನೀರ್ ಸುದ್ದಿಗಾರರಿಗೆ ತಿಳಿಸಿದರು. ನಗರಸಭೆ ಸಿಬ್ಬಂದಿಯನ್ನು ವಿಚಾರಣೆ ಮಾಡಲಾಗಿದೆ. ವೈಫೈ ಪಾಸ್‍ವರ್ಡ್ ಎಲ್ಲಾ ಸಿಬ್ಬಂದಿಗೂ ಗೊತ್ತಿದೆ. ನಗರಸಭೆ ಚಾಲಕರು, ಸದಸ್ಯರೂ ವೈಫೈ ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಮೊಬೈಲ್‍ನ ಚಿತ್ರಗಳು ಟಿ.ವಿ.ಯಲ್ಲಿ ಪ್ರಸಾರವಾಗಿರುವ ಸಾಧ್ಯತೆಯಿದೆ ಎಂದು ಸ್ಪಷ್ಟನೆ ನೀಡಿದ್ದಾರೆ. ಆದರೂ, ಡಾಟಾ ಆಪರೇಟರ್‍ಗೆ ಸೈಬರ್ ಕ್ರೈಂಗೆ ದೂರು ನೀಡಲು ಸೂಚಿಸಲಾಗಿದೆ ಎಂದು ತಿಳಿಸಿದರು.

ಕ್ರಮಕ್ಕೆ ಬಿಜೆಪಿ, ಜೆಡಿಎಸ್ ಸದಸ್ಯರ ಆಗ್ರಹ

ಸೈಬರ್ ಕ್ರೈಂಗೆ ದೂರು

ನಗರಸಭೆ ಆವಣರದಲ್ಲಿ ಯೋಜನೆಗಳ ಬಗ್ಗೆ ಸಾರ್ವಜನಿಕರಿಗೆ ಮಾಹಿತಿ ನೀಡಲು ಅಳವಡಿಸಿದ್ದ ಟಿ.ವಿ.ಯಲ್ಲಿ ಅನ್ಯ ದೃಶ್ಯಾವಳಿ ಯೊಂದನ್ನು ಪ್ರಸಾರ ಮಾಡಲಾಗಿದೆ ಎಂಬ ಆರೋಪ ಕೇಳಿ ಬಂದಿದ್ದು, ಇದರ ವಿರುದ್ಧ ಸೈಬರ್ ಕ್ರೈಂ ವಿಭಾಗಕ್ಕೆ ದೂರು ಸಲ್ಲಿಸಲಾಗಿದೆ. ಡಾಟಾ ಆಪರೇಟರ್ ವಿಭಾಗದ ಸಿಬ್ಬಂದಿಯ ನಿರ್ಲಕ್ಷ್ಯದಿಂದ ಈ ಘಟನೆ ನಡೆದಿದ್ದು, ತಪ್ಪಿತಸ್ಥ ಸಿಬ್ಬಂದಿಯ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಬಿಜೆಪಿ ಹಾಗೂ ಜೆಡಿಎಸ್ ಸದಸ್ಯರು ಆಗ್ರಹಿಸಿ ಯೋಜನಾ ನಿರ್ದೇಶಕ ಮಹಮ್ಮದ್ ಮುನೀರ್‍ಗೆ ಮನವಿ ಸಲ್ಲಿಸಿದರು.

ಇಂತಹ ತಪ್ಪು ನಡೆದಿದ್ದಲ್ಲಿ ತಪ್ಪಿತಸ್ಥರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು. ನಗರಸಭೆಗೆ ಇದು ಅವಮಾನ ಎಂದು ಸದಸ್ಯ ಕೆ.ಎಂ. ಗಣೇಶ್ ಪ್ರತಿಕ್ರಿಯಿಸಿದ್ದಾರೆ. ಮತ್ತೋರ್ವ ಸದಸ್ಯ ಚುಮ್ಮಿ ದೇವಯ್ಯ ಅವರೂ ಇದೇ ಅಭಿಪ್ರಾಯ ವ್ಯಕ್ತಪಡಿಸಿದ್ದರೆ, ಮಾಜಿ ಅಧ್ಯಕ್ಷ ಶ್ರೀಮತಿ ಬಂಗೇರ ನಾನೂ ಅಧ್ಯಕ್ಷಳಾಗಿದ್ದೆ. ಆದರೆ ಇಂತಹ ಘಟನೆಗೆ ಆಸ್ಪದವಾಗಿರಲಿಲ್ಲ ಎಂದರು. ಅಪರಾಹ್ನ ಬಿಜೆಪಿ ಹಾಗೂ ಜೆಡಿಎಸ್‍ನ ಸದಸ್ಯರು ತನಿಖಾಧಿಕಾರಿಗೆ ಈ ಬಗ್ಗೆ ಪ್ರತ್ಯೇಕವಾಗಿ ಮನವಿ ಸಲ್ಲಿಸಿದ್ದು, ಇಂದು ನಡೆದ ಬೆಳವಣಿಗೆಯಾಗಿತ್ತು.