ಕುಶಾಲನಗರ, ಜು. 12: ಅಭಿವೃದ್ಧಿ ಯೋಜನೆಗಳ ಸಂದರ್ಭ ಬಾಧಿತ ಜನರಿಗೆ ಸೂಕ್ತ ಪುನರ್ವಸತಿ ಒದಗಿಸುವಲ್ಲಿ ಸರಕಾರ ಬದ್ಧವಾಗಿದೆ ಎಂದು ಕರ್ನಾಟಕ ವಿಧಾನಸಭಾ ಉಪಾಧ್ಯಕ್ಷ ಹಾಗೂ ಅರ್ಜಿ ಸಮಿತಿಯ ಅಧ್ಯಕ್ಷ ಶಿವಶಂಕರ ರೆಡ್ಡಿ ತಿಳಿಸಿದರು.ಹಾರಂಗಿಯ ಪ್ರವಾಸಿ ಮಂದಿರದಲ್ಲಿ ಯಡವನಾಡು ಮತ್ತು ಅತ್ತೂರು ಗ್ರಾಮಸ್ಥರಿಗೆ ಹಕ್ಕುಪತ್ರ ವಿತರಿಸಿ ಮಾತನಾಡಿದ ಅವರು, ಕಳೆದ 4 ದಶಕಗಳಿಂದ ಕಂದಾಯ ಗ್ರಾಮದ ನಿರೀಕ್ಷೆಯಲ್ಲಿದ್ದ ಗ್ರಾಮಸ್ಥರಿಗೆ ಹಕ್ಕುಪತ್ರ ಭಾಗ್ಯ ಒದಗಿಬಂದಿದೆ. ಕೆಲವು ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿ ಅರಣ್ಯ ಭೂಮಿಯನ್ನು ಕಂದಾಯ ಗ್ರಾಮವಾಗಿಸುವಲ್ಲಿ ವಿಳಂಬ ಉಂಟಾಗಿರುವ ಬಗ್ಗೆ ವಿಷಾದ ವ್ಯಕ್ತಪಡಿಸಿದ ಅವರು ಈ ಸಂಬಂಧ ಹೆಚ್ಚಿನ ಮುತುವರ್ಜಿ ವಹಿಸಿದ್ದ ಶಾಸಕ ರಂಜನ್, ಕೊಡಗು ಜಿಲ್ಲಾಧಿಕಾರಿ ಹಾಗೂ ಮುಖ್ಯ ಅರಣ್ಯ ಸಂರಕ್ಷಣಾ ಅಧಿಕಾರಿಗಳ ಬಗ್ಗೆ ಶ್ಲಾಘನೆ ವ್ಯಕ್ತಪಡಿಸಿದರು.

ವಿಧಾನಸಭೆಯಲ್ಲಿನ 15 ಸಮಿತಿಗಳು ವಿವಿಧ ವಿಚಾರಗಳಿಗೆ ಸಂಬಂಧಿಸಿದಂತೆ

(ಮೊದಲ ಪುಟದಿಂದ) ಕಾರ್ಯನಿರ್ವಹಿಸು ತ್ತಿದೆ. ಈ ಸಮಿತಿಗಳ ಪೈಕಿ ಅರ್ಜಿ ಸಮಿತಿ ಅತ್ಯಂತ ಪ್ರಬಲವಾಗಿದ್ದು ಸಮಿತಿ ವ್ಯಾಪ್ತಿಗೆ ಒಳಪಡುವ ಅರ್ಜಿಗಳನ್ನು ಪರಿಶೀಲಿಸಿ ಸಮಸ್ಯೆಗಳ ಪರಿಹಾರಕ್ಕೆ ಪ್ರಾಮಾಣಿಕವಾಗಿ ಕಾರ್ಯನಿರ್ವಹಿಸಲಾಗುವದು ಎಂದು ಅವರು ತಿಳಿಸಿದರು.

ಮಡಿಕೇರಿ ಕ್ಷೇತ್ರ ಶಾಸಕ ಅಪ್ಪಚ್ಚುರಂಜನ್ ಮಾತನಾಡಿ, ಹಾರಂಗಿ ಜಲಾಶಯ ನಿರ್ಮಾಣದಿಂದ ನಿರಾಶ್ರಿತರಾದವರಿಗೆ ಯಡವನಾಡು ಹಾಗೂ ಅತ್ತೂರಿನಲ್ಲಿ ನೆಲೆ ಕಲ್ಪಿಸಲಾಗಿತ್ತಾದರೂ ಇದುವರೆಗೆ ಅವರ ಜಾಗದ ಸಂಪೂರ್ಣ ಮಾಲೀಕತ್ವ ಒದಗಿಸಲು ಸಾಧ್ಯವಾಗಿರಲಿಲ್ಲ. ವಿಧಾನಸಭಾ ಅರ್ಜಿ ಸಮಿತಿಗೆ ತಾನು ಅಧ್ಯಕ್ಷನಾಗಿದ್ದ ಸಂದರ್ಭ ಅರ್ಜಿಗಳನ್ನು ಪಡೆದು ಸಮಿತಿಗೆ ಸಲ್ಲಿಸಲಾಗಿತ್ತು. 2009 ರಿಂದ 23 ಬಾರಿ ವಿಧಾನಸಭೆಯಲ್ಲಿ ಸಮಸ್ಯೆ ಬಗ್ಗೆ ಪ್ರಸ್ತಾಪಿಸಲಾಗಿತ್ತು. 15 ಕ್ಕೂ ಅಧಿಕ ಬಾರಿ ಅರಣ್ಯ ಸಚಿವರು ಹಾಗೂ ಸಂಬಂಧಿಸಿದ ಅಧಿಕಾರಿಗಳ ಜೊತೆ ಚರ್ಚೆ ನಡೆಸಲಾಗಿತ್ತು ಎಂದು ನೆನಪಿಸಿದರು.

ಆ ನಂತರದ ದಿನಗಳಲ್ಲಿ ಕೆಲವು ಅಧಿಕಾರಿಗಳಿಂದ ಸೂಕ್ತ ಸ್ಪಂದನ ದೊರಕದ ಕಾರಣ ಸಮಸ್ಯೆಗೆ ತಕ್ಷಣ ಪರಿಹಾರ ಒದಗಿಸಲು ವಿಳಂಬ ಉಂಟಾಗಿದ್ದು ಇದೀಗ ಆ ಕಾರ್ಯ ಸಂಪೂರ್ಣಗೊಂಡಿರುವ ಬಗ್ಗೆ ಅವರು ಹರ್ಷ ವ್ಯಕ್ತಪಡಿಸಿದರು. ಅರ್ಜಿ ಸಮಿತಿ ಸದಸ್ಯರಾದ ಕುಣಿಗಲ್ ಕ್ಷೇತ್ರ ಶಾಸಕ ನಾಗರಾಜಯ್ಯ ಮಾತನಾಡಿದರು.

ಇದೇ ಸಂದರ್ಭ ಯಡವನಾಡು ಮತ್ತು ಅತ್ತೂರು ಗ್ರಾಮದ ಕೆಲವು ಗ್ರಾಮಸ್ಥರಿಗೆ ಸಾಂಕೇತಿಕವಾಗಿ ಹಕ್ಕುಪತ್ರ ವಿತರಿಸಲಾಯಿತು. ವಿವಿಧ ಸಮಸ್ಯೆಗಳ ಬಗ್ಗೆ ಸಾರ್ವಜನಿಕರಿಂದ ಅರ್ಜಿಗಳನ್ನು ಸ್ವೀಕರಿಸಲಾಯಿತು.

ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷೆ ಲೋಕೇಶ್ವರಿ ಗೋಪಾಲ್, ಸದಸ್ಯೆ ಕೆ.ಆರ್. ಮಂಜುಳಾ, ಜಿಲ್ಲಾಧಿಕಾರಿ ರಿಚರ್ಡ್ ವಿನ್ಸೆಂಟ್ ಡಿಸೋಜ, ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಎಸ್.ಎಸ್.ಲಿಂಗರಾಜು, ಮಡಿಕೇರಿ ವಿಭಾಗ ಉಪ ಅರಣ್ಯ ಸಂರಕ್ಷಣಾಧಿಕಾರಿ ಸೂರ್ಯಸೇನ್, ಅಪರ ಜಿಲ್ಲಾಧಿಕಾರಿ ಸತೀಶ್ ಕುಮಾರ್, ಗೊರೂರು ಅಣೆಕಟ್ಟು ವಿಭಾಗದ ಮುಖ್ಯ ಅಭಿಯಂತರ ಪ್ರಸನ್ನಕುಮಾರ್, ಉಪವಿಭಾಗಾಧಿಕಾರಿ ನಂಜುಂಡೇಗೌಡ, ವಿಧಾನಸಭಾ ಅರ್ಜಿ ಸಮಿತಿಯ ಉಪ ಕಾರ್ಯದರ್ಶಿ ಅಂಬಾ, ಯಶವಂತ್, ಭೂದಾಖಲೆಗಳ ಸಹಾಯಕ ನಿರ್ದೇಶಕ ಶಂಷುದ್ದೀನ್, ಡಿವೈಎಸ್ಪಿ ಸಂಪತ್‍ಕುಮಾರ್ ಸೇರಿದಂತೆ ನೀರಾವರಿ ನಿಗಮದ ಅಧಿಕಾರಿಗಳು, ಸ್ಥಳೀಯ ಜನಪ್ರತಿನಿಧಿಗಳು, ಎರಡು ಗ್ರಾಮಗಳ ಗ್ರಾಮಸ್ಥರು ಇದ್ದರು.