ಸೋಮವಾರಪೇಟೆ, ಜು. 12: ಪ್ರಾರಂಭದಲ್ಲಿ ಆಶಾದಾಯಕವಾಗಿ ಸುರಿದ ಮಳೆ ಕಳೆದ ಮೂರು ದಿನಗಳಿಂದ ಈ ಭಾಗದಲ್ಲಿ ನಾಪತ್ತೆಯಾಗಿದ್ದು, ಕೃಷಿ ಕಾರ್ಯಕ್ಕಾಗಿ ಭೂಮಿಯನ್ನು ಹದಗೊಳಿಸುತ್ತಿದ್ದ ರೈತಾಪಿ ವರ್ಗದಲ್ಲಿ ಆತಂಕದ ಛಾಯೆ ಮೂಡುವಂತೆ ಮಾಡಿದೆ.

ತಾಲೂಕಿನ ಪುಷ್ಪಗಿರಿ ಬೆಟ್ಟಶ್ರೇಣಿ ಪ್ರದೇಶದ ಶಾಂತಳ್ಳಿಯಲ್ಲಿ ಈವರೆಗೆ 45 ಇಂಚಿಗೂ ಅಧಿಕ ಮಳೆಯಾಗಿರುವದನ್ನು ಹೊರತುಪಡಿಸಿದರೆ ಉಳಿದೆಡೆ ಆಶಾದಾಯಕ ಮಳೆಯಾಗಿಲ್ಲ. ಕೊಡ್ಲಿಪೇಟೆ, ಶನಿವಾರಸಂತೆ, ಮಾದಾಪುರ, ಸುಂಟಿಕೊಪ್ಪ, ಕುಶಾಲನಗರ, ಬಾಣಾವರ, ಆಲೂರು-ಸಿದ್ದಾಪುರ, ಗೌಡಳ್ಳಿ, ಅಬ್ಬೂರುಕಟ್ಟೆ, ಸೋಮವಾರಪೇಟೆ ಪಟ್ಟಣ ಪ್ರದೇಶ ಸೇರಿದಂತೆ ಸುತ್ತಮುತ್ತಲಲ್ಲಿ ಮಳೆ ಕೈಕೊಟ್ಟ ಪರಿಣಾಮ ಕೃಷಿ ಕಾರ್ಯಕ್ಕೆ ಹಿನ್ನಡೆಯಾಗುವ ಆತಂಕ ಎದುರಾಗಿದೆ.

ಪ್ರಾರಂಭದ ದಿನಗಳಲ್ಲಿ ದಿನದ 24 ಗಂಟೆಯೂ ಸುರಿಯುತ್ತಿದ್ದ ಮಳೆ ಕಳೆದ 3 ದಿನಗಳಿಂದ ಮಾಯವಾಗಿದೆ. ಜೀವಕಳೆ ಪಡೆದುಕೊಂಡಿದ್ದು ಸಣ್ಣಪುಟ್ಟ ತೊರೆಗಳಲ್ಲಿ ಮೂರೇ ದಿನಕ್ಕೆ ನೀರಿನ ಹರಿವು ಕ್ಷೀಣಿಸುತ್ತಿದೆ. ಪ್ರಸಕ್ತ ವರ್ಷ ಗಾಳಿ-ಮಳೆ ಇಲ್ಲದ ಕಾರಣ ಗದ್ದೆಗಳಲ್ಲಿ ಜಲ ಮೂಡದೇ ಮಳೆ ನೀರನ್ನೇ ಸಂಗ್ರಹಿಸಬೇಕಾದ ಅನಿವಾರ್ಯತೆ ಸೃಷ್ಟಿಯಾಗಿದೆ.

ತಾಲೂಕಿನೆಲ್ಲೆಡೆ ಗದ್ದೆ ಉಳುಮೆ, ಸಸಿಮಡಿ ತಯಾರಿ, ನಾಟಿ ಕಾರ್ಯಗಳು ಪ್ರಗತಿಯಲ್ಲಿದ್ದು, ದಿನಂಪ್ರತಿ ಮಳೆಯ ಅಗತ್ಯವಿದೆ. ಸಸಿಮಡಿ ತಯಾರಿಕೆಯ ‘ಅಗಡಿ’ಗಳಿಗೂ ನೀರಿನ ಕೊರತೆ ಎದುರಾಗಿದ್ದು, ಮಳೆ ಕೈಕೊಟ್ಟರೆ ರೈತರ ಬದುಕು ಬಾಣಲೆಯಿಂದ ಬೆಂಕಿಗೆ ಬೀಳುವ ಪರಿಸ್ಥಿತಿ ನಿರ್ಮಾಣವಾಗಲಿದೆ ಎಂದು ಹಾನಗಲ್ಲು ಗ್ರಾಮದ ಕೃಷಿಕ ಕೆ.ಟಿ. ಪ್ರಸಾದ್ ಆತಂಕ ಹೊರಹಾಕಿದ್ದಾರೆ.

ವರುಣನ ಕೃಪೆ ಇಂದಲ್ಲ ನಾಳೆ ಬಂದೇ ಬರುತ್ತದೆ ಎಂಬ ಆಶಾಭಾವನೆಯೊಂದಿಗೆ ರೈತರು ನಾಟಿ ಕಾರ್ಯದಲ್ಲಿ ತೊಡಗಿದ್ದಾರೆ. ಕೆಲವರು ಕೆರೆ, ಬೋರ್‍ವೆಲ್‍ಗಳಿಂದ ಗದ್ದೆಗೆ ನೀರು ಹಾಯಿಸುವ ಬಗ್ಗೆ ಚಿಂತನೆ ಹರಿಸುತ್ತಿದ್ದಾರೆ. ಒಂದೆರಡು ದಿನದಲ್ಲಿ ಮಳೆ ಬೀಳಲೇ ಬೇಕು. ಬಿಸಿಲಿನ ಬೇಗೆ ಹೀಗೆಯೇ ಮುಂದುವರೆದರೆ ಕೃಷಿ ಕಾರ್ಯಕ್ಕೆ ತೀವ್ರ ಹಿನ್ನಡೆಯಾಗುತ್ತದೆ ಎಂದು ಕೃಷಿಕರು ಅಭಿಪ್ರಾಯಿಸಿದ್ದಾರೆ.