ಕುಶಾಲನಗರ, ಜು. 12: ರಾಷ್ಟ್ರೀಯ ಮಕ್ಕಳ ವಿಜ್ಞಾನ ಸಮಾವೇಶ ವಿದ್ಯಾರ್ಥಿಗಳಲ್ಲಿ ವೈಜ್ಞಾನಿಕ ಸಂಶೋಧನೆ ಪ್ರವೃತ್ತಿ ಬೆಳೆಸುವದರೊಂದಿಗೆ ಅವರನ್ನು ಭವಿಷ್ಯದ ವಿಜ್ಞಾನಿಗಳಾಗಿ ರೂಪಿಸಲು ಉತ್ತಮ ವೇದಿಕೆ ಒದಗಿಸುತ್ತದೆ ಎಂದು ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್‍ನ ಕೇಂದ್ರ ಸಮಿತಿಯ ಗೌರವ ಕಾರ್ಯದರ್ಶಿ ಗಿರೀಶ್ ಕಡ್ಲೆವಾಡ ಹೇಳಿದರು.

ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್, ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ, ಸಾರ್ವಜನಿಕ ಶಿಕ್ಷಣ ಇಲಾಖೆ, ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಕೊಡಗು, ವಿವೇಕಾನಂದ ಪದವಿಪೂರ್ವ ಕಾಲೇಜು ಕುಶಾಲನಗರ ಸಂಯುಕ್ತ ಆಶ್ರಯದಲ್ಲಿ ರಾಷ್ಟ್ರೀಯ ಮಕ್ಕಳ ವಿಜ್ಞಾನ ಸಮಾವೇಶಕ್ಕೆ ಪೂರ್ವಭಾವಿ ಯಾಗಿ ‘ಸುಸ್ಥಿರ ಅಭಿವೃದ್ಧಿಗೆ ವಿಜ್ಞಾನ, ತಂತ್ರಜ್ಞಾನ ಮತ್ತು ನವೀನ ಅನ್ವಯಗಳ ಬಳಕೆ’ ವಿಷಯದಡಿ ವಿವೇಕಾನಂದ ಕಾಲೇಜು ಸಭಾಂಗಣದಲ್ಲಿ ನಡೆದ ರಾಜ್ಯಮಟ್ಟದ ಜಿಲ್ಲಾ ಸಮನ್ವಯಕಾರರ ತರಬೇತಿ ಕಾರ್ಯಾಗಾರದ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಮಾತನಾಡಿದರು.

25ನೇ ರಾಷ್ಟ್ರೀಯ ಮಕ್ಕಳ ವಿಜ್ಞಾನ ಸಮಾವೇಶಕ್ಕೆ ಪೂರಕವಾಗಿ ಶಿಕ್ಷಕರು ವಿದ್ಯಾರ್ಥಿ ಗಳಿಂದ ಉತ್ತಮ ವೈಜ್ಞಾನಿಕ ಯೋಜನಾ ಪ್ರಬಂಧಗಳನ್ನು ಸಿದ್ದಪಡಿಸುವ ಮೂಲಕ ಮಕ್ಕಳಲ್ಲಿ ವಿಜ್ಞಾನ ಕಲಿಕೆಗೆ ಹೆಚ್ಚಿನ ಪ್ರೋತ್ಸಾಹ ನೀಡಬೇಕು ಎಂದರು.

ವಿಜ್ಞಾನ ಪರಿಷತ್‍ನ ಜನವಿಜ್ಞಾನ ಚಳುವಳಿಯ ಉಪಸಮಿತಿ ಅಧ್ಯಕ್ಷ ಬಿ. ಬಸವರಾಜು ಮಾತನಾಡಿ, ವಿದ್ಯಾರ್ಥಿಗಳು ಮತ್ತು ಸಮುದಾಯದಲ್ಲಿ ಮೌಢ್ಯ ನಿವಾರಣೆ, ಪರಿಸರ ಶಿಕ್ಷಣ ಸೇರಿದಂತೆ ಜನ ವಿಜ್ಞಾನ ಚಳುವಳಿ ಮೂಲಕ ಜನರನ್ನು ಮೌಢ್ಯತೆಯಿಂದ ವಿಜ್ಞಾನದೆಡೆಗೆ ಕೊಂಡೊಯ್ಯುವ ಜವಾಬ್ದಾರಿ ನಮ್ಮ ಮೇಲಿದೆ ಎಂದರು.

ರಾಜ್ಯ ವಿಜ್ಞಾನ ಪರಿಷತ್ ಕೊಡಗು ಜಿಲ್ಲಾ ಸಮಿತಿಯ ಗೌರವಾಧ್ಯಕ್ಷ ಕೆ.ಕೆ. ಮಂಜುನಾಥ್ ಕುಮಾರ್, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ವಿ.ಪಿ. ಶಶಿಧರ್ ಮಾತನಾಡಿದರು.

ವಿವೇಕಾನಂದ ಎಜ್ಯುಕೇಶನ್ ಟ್ರಸ್ಟ್ ಅಧ್ಯಕ್ಷ ಶಂಭುಲಿಂಗಪ್ಪ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ವಿಜ್ಞಾನ ಪರಿಷತ್ ಕೊಡಗು ಜಿಲ್ಲಾ ಸಮಿತಿ ಅಧ್ಯಕ್ಷ ಫಿಲಿಪ್‍ವಾಸ್, ಮಕ್ಕಳ ಸಮಾವೇಶದ ರಾಜ್ಯ ಸಂಯೋಜಕ ಹೆಚ್.ಜಿ. ಹುದ್ದಾರ್, ಶೈಕ್ಷಣಿಕ ಸಂಯೋಜಕ ಸಿ. ಕೃಷ್ಣೇಗೌಡ, ಕಾರ್ಯಕ್ರಮ ಸಂಯೋಜಕ ಟಿ.ಜಿ. ಪ್ರೇಮ್‍ಕುಮಾರ್, ಜಿಲ್ಲಾ ಪಿಯು ಕಾಲೇಜುಗಳ ಪ್ರಾಂಶುಪಾಲರ ಸಂಘದ ಅಧ್ಯಕ್ಷ ಕೆಂಚಪ್ಪ, ವಿಜ್ಞಾನ ಪರಿಷತ್ ಜಿಲ್ಲಾ ಸಮಿತಿ ಉಪಾಧ್ಯಕ್ಷರಾದ ಎಂ.ಇ. ಮೊಯಿದ್ದೀನ್, ಎಂ.ಎನ್. ವೆಂಕಟನಾಯಕ್, ಗೌರವ ಕೋಶಾಧಿಕಾರಿ ಎಸ್.ಹೆಚ್. ಈಶ, ಸಮಾವೇಶದ ಜಿಲ್ಲಾ ಸಂಯೋಜಕ ಸಿ.ಎಸ್. ಸುರೇಶ್, ಶೈಕ್ಷಣಿಕ ಸಂಯೋಜಕ ಜಿ. ಶ್ರೀಹರ್ಷ, ಶಿಕ್ಷಕಿ ಮಾಲಾದೇವಿ ಇದ್ದರು.