ವೀರಾಜಪೇಟೆ, ಜು. 12: ಸೇವಾ ಮನೋಭಾವ ಹೊಂದಿರುವ ಯಾವದೇ ವಿದ್ಯಾರ್ಥಿಯು ಎನ್.ಎಸ್.ಎಸ್. ನೀಡುವ ಅವಕಾಶ ಸದುಪಯೋಗಪಡಿಸಿಕೊಂಡಾಗ ಮುಂದೆ ಸಮಾಜದಲ್ಲಿ ಕೇವಲ ವ್ಯಕ್ತಿಯಾಗದೆ ಶಕ್ತಿಯಾಗಿ ಹೊರ ಹೊಮ್ಮುತ್ತಾನೆ ಎಂದು ಸುಂಟಿಕೊಪ್ಪದ ‘ಸ್ವಸ್ಥ’ ವಿಶೇಷ ಶಾಲೆಯ, ಸಮುದಾಯ ಆಧಾರಿತ ಪುನರ್ವಸತಿ ಕೇಂದ್ರದ ಸಂಯೋಜಕ ಎಸ್. ಮುರುಗೇಶ್ ಅಭಿಪ್ರಾಯಪಟ್ಟರು.

ವೀರಾಜಪೇಟೆಯ ಸಂತ ಅನ್ನಮ್ಮ ಪದವಿ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆಯ 2017-18ನೇ ಸಾಲಿನ ಉದ್ಘಾಟನಾ ಸಮಾರಂಭವನ್ನು ಗಿಡಕ್ಕೆ ನೀರುಣಿಸುವ ಮೂಲಕ ಉದ್ಘಾಟಿಸಿ ಮಾತನಾಡಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ, ಸಂತ ಅನ್ನಮ್ಮ ಪದವಿ ಕಾಲೇಜಿನ ಪ್ರಾಂಶುಪಾಲರು ಹಾಗೂ ಎನ್.ಎಸ್.ಎಸ್. ಘಟಕದ ನಿರ್ದೇಶಕ ರೆ.ಫಾ. ಐಸಾಕ್ ರತ್ನಾಕರ್ ಸ್ವಯಂ ಸೇವಾ ವಿದ್ಯಾರ್ಥಿಗಳಿಗೆ ಪ್ರತಿಜ್ಞಾ ವಿಧಿ ಬೋಧಿಸಿ ಮಾತನಾಡಿ, ತಾವು ಸ್ವಯಂ ಸೇವಾ ವಿದ್ಯಾರ್ಥಿಯಾಗಿದ್ದಾಗಿನ ಅನುಭವ ಹಂಚಿಕೊಂಡರು.

ಕಾರ್ಯಕ್ರಮದ ಸಾನ್ನಿಧ್ಯ ವಹಿಸಿದ್ದ ಸಂತ ಅನ್ನಮ್ಮ ವಿದ್ಯಾಸಂಸ್ಥೆಗಳ ವ್ಯವಸ್ಥಾಪಕರು ಹಾಗೂ ಪದವಿಪೂರ್ವ ವಿಭಾಗದ ಪ್ರಾಂಶುಪಾಲ ರೆ.ಫಾ. ಮದಲೈಮುತ್ತು ಅವರು ಆಶೀರ್ವಚನ ನುಡಿಗಳನ್ನಾಡಿ, ಕಾಲೇಜಿನ ಎನ್.ಎಸ್.ಎಸ್. ಘಟಕಕ್ಕೆ ಹಾಗೂ ಹೊಸದಾಗಿ ಆಯ್ಕೆಯಾದ ಸ್ವಯಂ ಸೇವಾ ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು.

2016-17ನೇ ಸಾಲಿನ ಎನ್.ಎಸ್.ಎಸ್. ಘಟಕದ ವಿದ್ಯಾರ್ಥಿ ನಾಯಕ ಎ.ಸಿ. ಅಯ್ಯಪ್ಪ, 2017-18 ನೇ ಸಾಲಿನಲ್ಲಿ ಎನ್.ಎಸ್.ಎಸ್. ಘಟಕದ ವಿದ್ಯಾರ್ಥಿ ನಾಯಕರಾಗಿ ಆಯ್ಕೆಯಾಗಿರುವ ಐ.ಸಿ. ಮದನ್ ಅವರಿಗೆ ಎನ್.ಎಸ್.ಎಸ್. ಧ್ವಜ ಹಸ್ತಾಂತರ ಮಾಡಿ ಶುಭಕೋರಿದರು. ಈ ಸಂದರ್ಭ ಘಟಕದ ಇನ್ನಿತರ ಸ್ವಯಂ ಸೇವಾ ವಿದ್ಯಾರ್ಥಿ ಮುಖಂಡರಾದ ಪ್ರಧಾನ್ ರಾಜಪ್ಪ, ಪಿ.ಸಿ. ಅಶ್ವಿನಿ, ಮೋನಿಕಾ, ಎಂ.ಎ. ಸರಸ್ವತಿ ಉಪಸ್ಥಿತರಿದ್ದರು. ನಂತರ ಸ್ವಯಂ ಸೇವಾ ವಿದ್ಯಾರ್ಥಿಗಳಿಂದ ರಾಷ್ಟ್ರೀಯ ಭಾವೈಕ್ಯತಾ ಗೀತೆ ಹಾಡಲಾಯಿತು.

ಎನ್.ಎಸ್.ಎಸ್. ಘಟಕದ ಯೋಜನಾಧಿಕಾರಿ ಹೆಚ್.ಆರ್. ಅರ್ಜುನ್ ಪ್ರಾಸ್ತಾವಿಕ ನುಡಿಗಳ ನ್ನಾಡಿದರು. ವಿಸ್ಮಯ ತಂಡ ಪ್ರಾರ್ಥಿಸಿದರೆ, ವಿದ್ಯಾರ್ಥಿಗಳಾದ ಶಯನ್ ಚಿಟ್ಟಿಯಪ್ಪ ನಿರೂಪಣೆ, ಸಿ.ಪಿ. ಗಿರಿಧರ್ ಸ್ವಾಗತಿಸಿ, ಗ್ರೀಷ್ಮಾ ಜೈನ್ ವಂದಿಸಿದರು.

ಇದೇ ಸಂದರ್ಭ ಕಾಲೇಜಿನ ಎನ್.ಎಸ್.ಎಸ್.ಗೆ ಸಂಬಂಧಿಸಿದ ಸಾಕ್ಷ್ಯಚಿತ್ರ ಪ್ರದರ್ಶಿಸಲಾಯಿತು.