ಮಡಿಕೇರಿ, ಜು. 12: ಕೊಡಗು ಜಿಲ್ಲೆಯ ಪುಷ್ಪಗಿರಿ, ತಲಕಾವೇರಿ ಹಾಗೂ ಭಾಗಮಂಡಲ ಸೇರಿದಂತೆ ಬ್ರಹ್ಮಗಿರಿ ಸೂಕ್ಷ್ಮ ಪರಿಸರ ವಲಯದ ಘೋಷಣೆ ಸಂಬಂಧ, ರಾಜ್ಯ ಸರಕಾರ ಅಧ್ಯಯನ ನಡೆಸಿ ಸಮಂಜಸ ವರದಿ ಸಲ್ಲಿಸುವಂತೆ ವೀರಾಜಪೇಟೆ ಕ್ಷೇತ್ರದ ಶಾಸಕ ಕೆ.ಜಿ. ಬೋಪಯ್ಯ ಆಗ್ರಹಪಡಿಸಿದ್ದಾರೆ.ಈ ಬಗ್ಗೆ ‘ಶಕ್ತಿ'ಯೊಂದಿಗೆ ಅಭಿಪ್ರಾಯ ಹಂಚಿಕೊಂಡ ಶಾಸಕರು, ಹಿಂದೆ ತಾವು ವಿಧಾನಸಭಾ ಅಧ್ಯಕ್ಷರಾಗಿದ್ದ ವೇಳೆಯಲ್ಲಿ, ರಾಷ್ಟ್ರೀಯ ಅಭಯಾರಣ್ಯದಿಂದ ಕೂಡಿರುವ ನಾಗರಹೊಳೆ ಸುತ್ತಮುತ್ತಲಿನ ಗ್ರಾಮಗಳಿಗೆ ಸಂಬಂಧಿಸಿದಂತೆ, ಸಾರ್ವಜನಿಕ ಬದುಕಿಗೆ ಅಡಚಣೆಯಾಗದಂತೆ ರಾಜ್ಯ ಸರಕಾರದಿಂದ ಕೇಂದ್ರಕ್ಕೆ ವರದಿ ಸಲ್ಲಿಸಿ ಸಮಸ್ಯೆ ಬಗೆಹರಿಸಿದ್ದಾಗಿ ಉದಾಹರಿಸಿದರು.

ಪ್ರಸಕ್ತ ಕೇಂದ್ರ ಸರಕಾರದ ಪ್ರಸ್ತಾವನೆಯನ್ನು ಪುನರ್‍ಪರಿಶೀಲಿಸಿ, ಗ್ರಾಮೀಣ ಜನತೆಯ ಮೂಲಭೂತ ಹಕ್ಕುಗಳಿಗೆ ಅಡ್ಡಿಪಡಿಸದಂತೆ, ಕೇಂದ್ರದಿಂದ ನಿರ್ದೇಶನ ಪಡೆಯಲು ರಾಜ್ಯ ಸರಕಾರಕ್ಕೆ 2 ವರ್ಷಗಳ ಮುಕ್ತ ಅವಕಾಶವಿದ್ದರೂ, ಮುಖ್ಯಮಂತ್ರಿ ಹಾಗೂ ಅರಣ್ಯ ಸಚಿವರು ಕೊಡಗಿನ ಜನತೆಯ ಹಿತಾಸಕ್ತಿ ಕಾಪಾಡುವ ದಿಸೆಯಲ್ಲಿ ಆಸಕ್ತಿ ವಹಿಸುತ್ತಿಲ್ಲವೆಂದು ಅವರು ಟೀಕಿಸಿದರು.

ಅಲ್ಲದೆ ಸೂಕ್ಷ್ಮ ಪರಿಸರ ವಲಯ ಸಂಬಂಧ ರಾಜ್ಯ ಸರಕಾರಕ್ಕೆ ವರದಿ ಸಲ್ಲಿಸಲು ಸಾಕಷ್ಟು ಕಾಲಾವಕಾಶವಿದ್ದರೂ, ಇದುವರೆಗೆ ಯಾರೊಬ್ಬರನ್ನು ಈ ಸಂಬಂಧ ಅಧ್ಯಯನ ನಡೆಸಿ ಕೇಂದ್ರಕ್ಕೆ ವಾಸ್ತವದ ಬಗ್ಗೆ ವರದಿ ಸಿದ್ಧಗೊಳಿಸುವತ್ತ ಕೂಡ ಮುಂದಾಗಿಲ್ಲವೆಂದು ಶಾಸಕರು ಬೊಟ್ಟು ಮಾಡಿದರು.

ಕಸ್ತೂರಿ ರಂಗನ್ ವರದಿ ಸೇರಿದಂತೆ ಸೂಕ್ಷ್ಮ ಪರಿಸರ ವಲಯದ ಬಗ್ಗೆ ಇನ್ನಾದರೂ ರಾಜ್ಯ ಸರಕಾರ ರಾಜಕೀಯ ಮಾಡದೆ, ಸಮಗ್ರ ಅಧ್ಯಯನ ಕೈಗೊಂಡು ಈಗಾಗಲೇ ಕೇರಳ ರಾಜ್ಯದ ತೀರ್ಮಾನದಂತೆ ಕೊಡಗು ಹಾಗೂ ಮಲೆನಾಡು ಜಿಲ್ಲೆಗಳ ಜನತೆಯ ಹಿತ ಕಾಯ್ದುಕೊಳ್ಳಲು ಮುಂದಾಗಬೇಕೆಂದು ಒತ್ತಾಯಿಸಿದರು.

ಅಲ್ಲದೆ, ಕೇರಳ ಸರಕಾರವು ಕೇಂದ್ರಕ್ಕೆ ಸಲ್ಲಿಸಿರುವ ವರದಿಯ ಪ್ರತಿಯನ್ನು ಸಂಗ್ರಹಿಸಿ, ಕರ್ನಾಟಕದ ಮುಖ್ಯಮಂತ್ರಿ ಹಾಗೂ ಅರಣ್ಯ ಸಚಿವ ರಮಾನಾಥ ರೈ ಅವರಿಗೆ ತಾನು ಖುದ್ದು ಸಲ್ಲಿಸಿದ್ದರೂ, ಅದನ್ನು ಪರಿಶೀಲಿಸುವ ಸೌಜನ್ಯ ತೋರಿಲ್ಲವೆಂದು ಬೋಪಯ್ಯ ಗಂಭೀರ ಆರೋಪ ಮಾಡಿದರು.

ಸಮಿತಿ ಮುಂದೆ ಪ್ರಸ್ತಾಪಿಸುವೆ: ಸೂಕ್ಷ್ಮ ಪರಿಸರ ವಲಯದ ಸಂಬಂಧ ಮೈಸೂರು ಪ್ರಾದೇಶಿಕ ಆಯುಕ್ತರ ನೇತೃತ್ವದಲ್ಲಿ, ಜನಪ್ರತಿನಿಧಿಗಳ ಸಮಿತಿಯೊಂದು ಈ ಸಂಬಂಧ ಕಾರ್ಯನಿರ್ವಹಿಸಲಿದೆ ಎಂದು ವಿವರಿಸಿದ ಬೋಪಯ್ಯ, ಆ ಸಮಿತಿಯಲ್ಲಿ ಕೊಡಗಿನ ಶಾಸಕರು ಇರಲಿದ್ದು, ತಾನು ಅಲ್ಲಿ ವಿಷಯ ಪ್ರಸ್ತಾಪಿಸಿ ಪರ್ಯಾಯ ಕ್ರಮಕ್ಕೆ ಕೋರಲಿರುವದಾಗಿ ಭರವಸೆ ನೀಡಿದರು.