*ಗೋಣಿಕೊಪ್ಪಲು, ಜು. 13: ಜಾನುವಾರು ಕಳ್ಳತನದಿಂದ ಕೋಮು ಸೌಹಾರ್ದತೆ ಹಾಳಾಗುತ್ತಿದೆ. ಕೇರಳಕ್ಕೆ ಸಾಗಾಟವಾಗುತ್ತಿರುವ ಅಕ್ರಮ ಗೋಸಾಗಾಟ ತಡೆಗಟ್ಟಲು ಪೊಲೀಸ್ ಇಲಾಖೆ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳ ಬೇಕೆಂದು ಸಂಸದ ಪ್ರತಾಪ್ ಸಿಂಹ ಸೂಚಿಸಿದರು.ಪೊನ್ನಂಪೇಟೆ ತಾ.ಪಂ. ಸಾಮಥ್ರ್ಯ ಸೌಧದಲ್ಲಿ ನಡೆದ ತಾಲೂಕು ಪ್ರಗತಿ ಪರಿಶೀಲನಾ ಸಭೆಯಲ್ಲಿ ಈ ವಿಚಾರ ಮಾತನಾಡಿದರು.ತಾಲೂಕಿನಲ್ಲಿ ಮಾದಕ ಪದಾರ್ಥಗಳ ಮಾರಾಟ ಹೆಚ್ಚಾಗುತ್ತಿದೆ. ವಿದ್ಯಾರ್ಥಿಗಳು ವ್ಯಸನಕ್ಕೆ ಬಲಿಯಾಗುತ್ತಾ ಜೀವನದ ಮೌಲ್ಯವನ್ನು ಕಳೆದು ಕೊಳ್ಳುತ್ತಿದ್ದಾರೆ. ಕೇರಳ ಭಾಗಕ್ಕೆ ಜಾನು ವಾರುಗಳ ಸಾಗಾಟ ನಡೆಯುತ್ತಿದೆ. ಈ ಬಗ್ಗೆ ಕೇರಳದ ಗಡಿಯಲ್ಲಿರುವ ಚೆಕ್ ಪೋಸ್ಟ್‍ನಲ್ಲಿ ವಾಹನಗಳ ತಪಾಸಣೆ ನಡೆಸಬೇಕು. ಈ ಬಗ್ಗೆ ಪೊಲೀಸ್ ಇಲಾಖೆ ಶಿಸ್ತು ಕ್ರಮ ಕೈಗೊಳ್ಳಬೇಕು ಎಂದು ಹೇಳಿದರು.

ತಾಲೂಕಿನಲ್ಲಿರುವ 23 ಸಾವಿರ ಜನ ರೈತರಿಗೆ ಪ್ರಧಾನ ಮಂತ್ರಿ ಕೃಷಿ ಯೋಜನೆಗಳು ಸದ್ಬಳಕೆಯಾಗಬೇಕು. ಕೃಷಿ ಇಲಾಖೆಯಲ್ಲಿ ಹೆಚ್ಚಿನ ಪ್ರಗತಿ ಕಂಡು ಪ್ರತಿ ರೈತನು ಭತ್ತ ಬೆಳೆದು ಆರ್ಥಿಕ ಸ್ಥಿತಿಯನ್ನು ಸುಧಾರಿಸಿಕೊಳ್ಳಬೇಕು. ರೈತರಿಗೆ ಅನುದಾನಗಳ ಹಾಗೂ ವಿನೂತನ ಕೃಷಿ ಕಾರ್ಯಗಳ ಬಗ್ಗೆ ಕಾರ್ಯಾಗಾರ ನಡೆಸಬೇಕು ಎಂದು ತಾಲೂಕು ಪ್ರಭಾರ ಸಹಾಯಕ ಅಧಿಕಾರಿ ರೀನಾ ಅವರಿಗೆ ಸೂಚಿಸಿದರು.

ಜಿಲ್ಲೆಯಲ್ಲಿ ಕಾಳುಮೆಣಸು ಬೆಳೆ ಹೆಚ್ಚಾಗಿ ಬೆಳೆಯಲಾಗುತ್ತಿದೆ. ಆದರೆ ಆರ್.ಟಿ.ಸಿ.ಯಲ್ಲಿ ಕಾಳುಮೆಣಸು ಬೆಳೆ ನೊಂದಾವಣೆಯಾಗಿಲ್ಲ. ಇದರಿಂದ ಬೆಳೆಗೆ ಸರಕಾರದಿಂದ ಯಾವದೇ ಅನುದಾನ ರೈತರಿಗೆ ತಲುಪುತ್ತಿಲ್ಲ. ಕಂದಾಯ ಇಲಾಖೆ ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಿ ಆರ್.ಟಿ.ಸಿ.ಯಲ್ಲಿ ಕಾಳುಮೆಣಸು ಬೆಳೆಯನ್ನು ನೊಂದಾಯಿಸಿ ರೈತರಿಗೆ ಅನುಕೂಲ ಕಲ್ಪಿಸಬೇಕು ಎಂದು ಹೇಳಿದರು.

ಜಿಲ್ಲೆ ಬರಪ್ರದೇಶ ಎಂದು ಘೋಷಣೆಯಾಗಿದೆ. ಆದರೆ ಜಾನುವಾರುಗಳಿಗೆ ಮೇವು ನೀಡಲಾಗಿದೆಯೇ ಎಂದು ಪಶುಸಂಗೋಪನಾ ಇಲಾಖೆ ಅಧಿಕಾರಿ ತಮ್ಮಯ್ಯ ಅವರಲ್ಲಿ ಪ್ರಶ್ನಿಸಿದರು. ಇದಕ್ಕೆ ಉತ್ತರ ನೀಡಿದ ಅಧಿಕಾರಿ ಮೇವಿಗಾಗಿ ಅರ್ಜಿಗಳು ಬಂದಿವೆ. ಆದರೆ ಸರಕಾರದಿಂದ ಮೇವು ಬಂದಿಲ್ಲ. ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಅಂತರ್‍ರಾಜ್ಯಕ್ಕೆ ಸಾಗಾಟಮಾಡುತ್ತಿದ್ದ ಮೇವನ್ನು ಜಪ್ತಿ ಮಾಡಿ ವಶಪಡಿಸಿಕೊಂಡ ಮೇವನ್ನು ಫಲಾನುಭವಿಗಳಿಗೆ ವಿತರಿಸಲು ಮುಂದಾಗಿದೆ ಎಂದು ಹೇಳಿದರು.

ಗೋಣಿಕೊಪ್ಪ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಅವ್ಯವಹಾರ ಹೆಚ್ಚಾಗಿದೆ. ರಕ್ಷಾ ಸಮಿತಿಯಲ್ಲಿ ಪಾರದರ್ಶಕತೆ ಇಲ್ಲ. ಸಭೆಯನ್ನು ಕರೆಯದೆ ನಿರ್ಲಕ್ಷ್ಯ ವಹಿಸಲಾಗುತ್ತಿದೆ. ಈ ಬಗ್ಗೆ ಸಭೆ ಕರೆದು ಅನುದಾನ ಸದ್ಭಳಕೆಯಾಗುವಂತೆ ಕ್ರಮ ಕೈಗೊಳ್ಳುವಂತೆ ತಾಲೂಕು ಆರೋಗ್ಯಾಧಿಕಾರಿ ಯತಿರಾಜ್ ಅವರಿಗೆ ಸೂಚಿಸಿದರು.

ದೇಶಕ್ಕೆ ಸೈನಿಕರನ್ನು, ಕ್ರೀಡಾಪಟುಗಳನ್ನು ನೀಡುವ ಜಿಲ್ಲೆಯಲ್ಲಿ ಎಸ್.ಎಸ್.ಎಲ್.ಸಿ.ಯ ಶೇಕಡವಾರು ಸಾಧನೆ ಮೆಚ್ಚಿಕೊಳ್ಳುವಂತದಲ್ಲ. ಹೆಚ್ಚು ಸಾಧನೆ ನಿರೀಕ್ಷೆ ಇದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಪಾಂಡು ಅವರನ್ನು ತಾಲೂಕಿನ ಶಾಲೆಗಳ ಶಿಕ್ಷಣದ ಗುಣಮಟ್ಟವನ್ನು ಪ್ರಶ್ನಿಸಿದರು. ಶಾಲೆಗಳಲ್ಲಿ ಮಕ್ಕಳ ಸಂಖ್ಯೆ ಕಡಿಮೆಯಾಗುತ್ತಿದೆ. ಅಸ್ಸಾಂ ಮಕ್ಕಳನ್ನು ಶಾಲೆಗೆ ಸೇರಿಸಿಕೊಳ್ಳಲಾಗುತ್ತಿದ್ದು, ಯಾವದೇ ದಾಖಲಾತಿ ಮಾಡುತ್ತಿಲ್ಲ. ಶಿಕ್ಷಣವಷ್ಟೆ ನೀಡಲಾಗುತ್ತಿದೆ. ಅಸ್ಸಾಂ ವಿದ್ಯಾರ್ಥಿಗಳು ಕನ್ನಡ ಕಲಿಯುತ್ತಿದ್ದಾರೆ ಎಂದು ಅಧಿಕಾರಿ ಸಭೆಗೆ ತಿಳಿಸಿದರು.

ಸಮಾಜ ಕಲ್ಯಾಣ ಇಲಾಖೆ, ತೋಟಗಾರಿಕಾ ಇಲಾಖೆ, ಸಣ್ಣ ನೀರಾವರಿ, ಪರಿಶಿಷ್ಟ ಪಂಗಡ ಇಲಾಖೆಗಳ ಪ್ರಗತಿಯನ್ನು ಪರಿಶೀಲಿಸಿದರು.

ಶಾಸಕ ಕೆ.ಜಿ. ಬೋಪಯ್ಯ ಮಾತನಾಡಿ, ಪೊಲೀಸ್ ಇಲಾಖೆಯಲ್ಲಿ ಹಿಂದೂ ಧÀ್ವಜಗಳನ್ನು ಹಿಡಿದ ಕಾರ್ಯಕರ್ತರ ಮೇಲೆ ಕೇಸ್ ದಾಖಲಿಸಿ ಕಿರುಕುಳ ನೀಡಲಾಗುತ್ತಿದೆ. ದನ ಸಾಗಿಸುವವರು, ಗಾಂಜಾ ಮಾರಾಟಗಾರರ ಮೇಲೆ ಕೇಸು ದಾಖಲಿಸುತ್ತಿಲ್ಲ. ಇಲಾಖೆಯಲ್ಲಿ ಈ ತಾರತಮ್ಯ ಮಾಡಬಾರದು ಎಂದು ಡಿ.ವೈ.ಎಸ್.ಪಿ. ನಾಗಪ್ಪ ಅವರಿಗೆ ಸೂಚಿಸಿದರು. ಕಾರ್ಯಕರ್ತರ ಮೇಲೆ ಕೇಸು ದಾಖಲಿಸುವ ಬದಲು ಮರಗಳ್ಳತನ, ಮರಳುಗಳ್ಳತನ ಮಾಡುವವರ ಮೇಲೆ ಕ್ರಮ ಕೈಗೊಳ್ಳಿ ಎಂದು ಹೇಳಿದರು. ವನ್ಯಜೀವಿ ವಿಭಾಗದ ಅರಣ್ಯಾಧಿಕಾರಿ ಪ್ರತಿ ಸಭೆಗೆ ಗೈರು ಹಾಜರಾಗುತ್ತಿದ್ದಾರೆ. ಅಧಿಕಾರಿಗೆ ಶೋಕಾಸ್ ನೋಟೀಸ್ ನೀಡುವಂತೆ ಈ ಸಂದರ್ಭ ಸೂಚಿಸಿದರು.

ಈ ಸಂದರ್ಭ ಸಂಸದ ಪ್ರತಾಪ್ ಸಿಂಹ ಅವರನ್ನು ತಾ.ಪಂ. ವತಿಯಿಂದ ಸನ್ಮಾನಿಸಲಾಯಿತು.

ತಾ.ಪಂ. ಅಧ್ಯಕ್ಷೆ ಬೊಳ್ಳಚಂಡ ಸ್ಮಿತಾ ಪ್ರಕಾಶ್, ಉಪಾಧ್ಯಕ್ಷ ನೆಲ್ಲಿರ ಚಲನ್ ಕುಮಾರ್, ಆರೋಗ್ಯ ಮತ್ತು ಶಿಕ್ಷಣ ಸ್ಥಾಯಿ ಸಮಿತಿ ಅಧ್ಯಕ್ಷ ಮೂಕೊಂಡ ಶಶಿ ಸುಬ್ರಮಣಿ, ಜಿ.ಪಂ. ಸದಸ್ಯ ಅಚ್ಚಪಂಡ ಮಹೇಶ್, ತಾಲೂಕು ಸ್ಥಾಯಿ ಸಮಿತಿ ಅಧ್ಯಕ್ಷ ಬಿ.ಎಂ. ಗಣೇಶ್, ಡಿ.ವೈ.ಎಸ್.ಪಿ. ನಾಗಪ್ಪ, ಕಾರ್ಯನಿರ್ವಹಣಾಧಿಕಾರಿ ಕಿರಣ್ ಪಡ್ನೇಕರ್ ಉಪಸ್ಥಿತರಿದ್ದರು.

-ಎನ್. ಎನ್. ದಿನೇಶ್