ವರದಿ : ಎ.ಎನ್ ವಾಸು
ಸಿದ್ದಾಪುರ, ಜು. 13: ಗುಹ್ಯ ಗ್ರಾಮದಲ್ಲಿ ಕಾಡಾನೆ ಹಿಂಡು ಬೀಡುಬಿಟ್ಟಿದ್ದು, ಗ್ರಾಮಸ್ಥರಲ್ಲಿ ಆತಂಕ ಎದುರಾಗಿದೆ.
ಕಳೆದ ಕೆಲವು ದಿನಗಳಿಂದ ಗುಹ್ಯ ಗ್ರಾಮದಲ್ಲಿ ಬೀಡುಬಿಟ್ಟಿರುವ ಕಾಡಾನೆ ಹಿಂಡು ಕಾಫಿ ತೋಟಗಳಲ್ಲಿ ರಾಜಾರೋಷವಾಗಿ ನಡೆದಾಡುತ್ತಿದ್ದು, ಕಾಫಿ ಗಿಡ ಹಾಗೂ ಬೆಳೆಗಳನ್ನು ನಾಶಪಡಿಸುತ್ತಿವೆ ಎಂದು ಕಾಫಿ ಬೆಳೆಗಾರರು ದೂರಿದ್ದಾರೆ.
ಕಾಫಿ ತೋಟಗಳಲ್ಲಿ ಕಾಡಾನೆಗಳ ಹಿಂಡು ಬೀಡುಬಿಟ್ಟಿರುವ ಕಾರಣ ಕಾರ್ಮಿಕರು ತೋಟಗಳಲ್ಲಿ ಕೆಲಸಕ್ಕೆ ತೆರಳಲು ಹಿಂಜರಿಯುತ್ತಿದ್ದು, ವಿದ್ಯಾರ್ಥಿಗಳು ಕೂಡ ಶಾಲೆಗೆ ತೆರಳುತ್ತಿಲ್ಲ. ಮಾತ್ರವಲ್ಲದೇ ಗ್ರಾಮಸ್ಥರು ಭಯದಿಂದಲೇ ರಸ್ತೆಯಲ್ಲಿ ಸಂಚರಿಸ ಬೇಕಾದ ಸ್ಥಿತಿ ನಿರ್ಮಾಣವಾಗಿದೆ.
ಗುಹ್ಯ ಗ್ರಾಮದ ಮಂಡೇಪಂಡ ರಮೇಶ್ ತೋಟದಲ್ಲಿ ಬೀಡುಬಿಟ್ಟದ್ದ ಕಾಡಾನೆ ಹಿಂಡು ಇದೀಗ ಪಳನಿ ಎಸ್ಟೇಟ್, ಗುಹ್ಯ ಶಾಲೆಯ ಬಳಿ ಬೀಡುಬಿಟ್ಟಿವೆ. ಮರಿ ಆನೆಗಳು ಸೇರಿದಂತೆ 9 ಕಾಡಾನೆಗಳು ಹಿಂಡಿನಲ್ಲಿದ್ದು, ಬಾಳೆ, ಅಡಿಕೆ ಸೇರಿದಂತೆ ಕೃಷಿ ಫಸಲನ್ನು ನಾಶಪಡಿಸುತ್ತಿವೆ. ಮಾತ್ರವಲ್ಲದೇ ಮಂಡೇಪಂಡ ದೇವಯ್ಯ ಅವರ ತೋಟದಲ್ಲಿ 24 ಕಾಡಾನೆಗಳು ಬೀಡುಬಿಟ್ಟಿದ್ದು, ದಿನಂಪ್ರತಿ ಹಾವಳಿಯಿಂದ ಕೃಷಿ ಮಾಡಲು ಸಾಧ್ಯವಾಗದ ಸ್ಥಿತಿ ನಿರ್ಮಾಣವಾಗಿದೆ ಎಂದು ಅಳಲನ್ನು ತೋಡಿ ಕೊಂಡಿದ್ದಾರೆ. ಅರಣ್ಯ ಇಲಾಖೆ ಕಾಡಾನೆಗಳನ್ನು ಕೂಡಲೇ ಕಾಡಿಗಟ್ಟಬೇಕೆಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.
ಕಾರ್ಯಾಚರಣೆ : ನೂತನವಾಗಿ ಆರಂಭಿಸಿರುವ ಅರಣ್ಯ ಇಲಾಖೆಯ ಆರ್.ಆರ್.ಟಿ (ರ್ಯಾಪಿಡ್ ರೆಸ್ಪಾನ್ಸ್ ಟೀಮ್) ತಂಡ ಗುಹ್ಯ ಗ್ರಾಮಕ್ಕೆ ಭೇಟಿ ನೀಡಿ ಕಾಡಾನೆಗಳು ಧಾಳಿ ನಡೆಸಿದ ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದರು. ಕಳೆದ ಎರಡು ದಿನಗಳಿಂದ ಆರ್.ಆರ್.ಟಿ ತಂಡ ಗುಹ್ಯ ಗ್ರಾಮದಲ್ಲಿ ಬೀಡುಬಿಟ್ಟು ಕಾಡಾನೆಗಳ ಚಲನವಲನಗಳನ್ನು ಗಮನಿಸಿದೆ. ಸಂಜೆ ವೇಳೆಯಲ್ಲಿ ಜನವಸತಿ ಪ್ರದೇಶದಿಂದ ಕಾಡಾನೆಗಳನ್ನು ಓಡಿಸುವ ಕಾರ್ಯ ಮುಂದು ವರೆದಿದ್ದು, ವಲಯ ಅರಣ್ಯಾಧಿಕಾರಿ ಗೋಪಾಲ್ ಮಾರ್ಗದರ್ಶನದಲ್ಲಿ ಉಪವಲಯ ಅರಣ್ಯಾಧಿಕಾರಿ ದೇವಯ್ಯ ನೇತೃತ್ವದಲ್ಲಿ ತಂಡ ಕಾರ್ಯಾಚರಣೆ ನಡೆಸಿದೆ. ಆದರೆ ಓಡಿಸಿದ ಕಾಡಾನೆಗಳು ರಾತ್ರಿ ವೇಳೆಯಲ್ಲಿ ಮತ್ತೆ ಜನವಸತಿ ಪ್ರದೇಶಕ್ಕೆ ಬರುತ್ತಿದ್ದು, ಇದರಿಂದಾಗಿ ಗ್ರಾಮಸ್ಥರು ಆತಂಕಕ್ಕೆ ಸಿಲುಕಿದ್ದಾರೆ.