ಮಡಿಕೇರಿ, ಜು. 13: ಸಂಬಂಧಿ ಯೊಬ್ಬರ ಕೋವಿ ಕಾಣೆಯಾಗಿರುವ ಬಗ್ಗೆ ಬಾರೊಂದರಲ್ಲಿ ಕುಡಿಯುತ್ತಿದ್ದ ವೇಳೆ, ಪರಸ್ಪರ ಜಗಳ ಮಾಡಿ ಕೊಂಡಿದ್ದಾಗ, ಮಧ್ಯಪ್ರವೇಶಿಸಲು ಹೋದವರು ಅತಿರೇಕ ವರ್ತನೆ ತೋರಿದ ಪರಿಣಾಮ ಮತ್ಯಾರೋ ಸೆರೆವಾಸ ಅನುಭವಿಸಬೇಕಾದ ಪ್ರಸಂಗ ಎದುರಾಗಿದೆ. ತಾ. 10 ರಂದು ನಗರದ ಹೃದಯ ಭಾಗದಲ್ಲಿರುವ ಮಾರುತಿ ಬಾರ್‍ನಲ್ಲಿ ಸಂಭವಿಸಿದ ಕೃತ್ಯದ ಒಳಮರ್ಮವಿದಾಗಿದೆ. ಈ ಬಗ್ಗೆ ಜಿಲ್ಲಾ ಪೊಲೀಸ್ ಅಧೀಕ್ಷಕ ಪಿ. ರಾಜೇಂದ್ರ ಪ್ರಸಾದ್ ಸುದ್ದಿ ಗೋಷ್ಠಿಯಲ್ಲಿ ಮಾಹಿತಿ ನೀಡಿದರು.ತಾ. 10 ರಂದು ಸಂಜೆ ಮಡಿಕೇರಿ ನಗರದ ಕೆಎಸ್‍ಆರ್‍ಟಿಸಿ ಬಸ್ ನಿಲ್ದಾಣ ಸಮೀಪದ ಮಾರುತಿ ಬಾರ್‍ಗೆ ಹೆಲ್ಮೆಟ್ ಧರಿಸಿಕೊಂಡು ಬಂದು ಕಲ್ಲು ತೂರಿ ದಾಂಧಲೆ ನಡೆಸಿರುವ ಆರೋಪಿತರನ್ನು ಪತ್ತೆಹಚ್ಚುವಲ್ಲಿ ಕೊಡಗು ಜಿಲ್ಲಾ ಡಿಸಿಐಬಿ ತಂಡ ಯಶಸ್ವಿಯಾಗಿದ್ದು, ಈ ವೇಳೆ ಬೆಳಕಿಗೆ ಬಂದ ಸಂಗತಿಯಿದು ಎಂದು ವಿವರಣೆ ನೀಡಿದರು. ತಾ. 10 ರಂದು ಸಂಜೆ 4 ಗಂಟೆಗೆ ಮಾರುತಿ ಬಾರ್‍ನಲ್ಲಿ ಮದ್ಯಪಾನ ಮಾಡಲು ಬಂದಿದ್ದ ಗಾಳಿಬೀಡು ಗ್ರಾಮದ ಮೊಣ್ಣಪ್ಪ ಅಲಿಯಾಸ್ ಸರಾ ಎಂಬವರು ಮನೆಯಲ್ಲಿ ಇಟ್ಟಿದ್ದ ಕೋವಿ ಕಾಣೆಯಾಗಿರುವ ಬಗ್ಗೆ ಅದೇ ಗ್ರಾಮದ ಕುಡಿಯರ ಲವ ಮತ್ತು ಕೀರ್ತನ್ ಎಂಬವರ ಜೊತೆಯಲ್ಲಿ ವಾಗ್ವಾದ ನಡೆದಿದೆ.

(ಮೊದಲ ಪುಟದಿಂದ) ಈ ವೇಳೆ ಅಲ್ಲಿಗೆ ಮದ್ಯಪಾನ ಮಾಡಲು ಬಂದ ದೇಶಿಕ್ ಮತ್ತು ಮನೋಜ್ ಎಂಬವರು ತಮಗೆ ಸಂಬಂಧ ಇಲ್ಲದ ವಿಷಯದಲ್ಲಿ ಜಗಳ ಮಾಡಿದವರನ್ನು ಬಾರ್‍ನ ಸಿಬ್ಬಂದಿ ಜತೆ ಸೇರಿ ಜಗಳ ಬಿಡಿಸಿ ಕಳುಹಿಸಿ ರುತ್ತಾರೆ. ಈ ವೇಳೆ ಮನೋಜ್ ಮತ್ತು ದೇಶಿಕ್ ಅತಿರೇಕದ ವರ್ತನೆ ತೋರಿದ್ದಾರೆ.

ಈಗ ತಾನೆ ಐಟಿಐ ಪೂರ್ಣಗೊಳಿಸಿರುವ ದೇಶಿಕ್ ಹಾಗೂ ಮನೋಜ್ ತಮಗೆ ಬಾರಿನಲ್ಲಿದ್ದವರು ಹಲ್ಲೆ ನಡೆಸಿರುತ್ತಾರೆಂದು ದೂರವಾಣಿ ಕರೆ ಮಾಡಿ ತಮ್ಮ ಗೆಳೆಯರನ್ನು ಮಡಿಕೇರಿಗೆ ಕರೆಸಿಕೊಂಡಿದ್ದಾರೆ. ಸ್ನೇಹಿತನ ಮೇಲೆ ಹಲ್ಲೆಗೆ ಕಾರಣವಾದ ಮಾರುತಿ ಬಾರ್‍ನ ಮೇಲೆ ಪ್ರತೀಕಾರ ತೀರಿಸಲು ಮಡಿಕೇರಿಗೆ ಬಂದ ಯುವಕರ ತಂಡ, ಕಲ್ಲು ಮತ್ತು ಸೋಡಾ ಬಾಟಲ್‍ಗಳನ್ನು ಸಂಗ್ರಹಿಸಿ ಹಠಾತ್ ಸಿನಿಮೀಯ ರೀತಿಯಲ್ಲಿ ಮಾರುತಿ ಬಾರ್‍ನ ಮೇಲೆ ಧಾಳಿ ಮಾಡಿದ್ದಾರೆ. ಬಾರಿನಲ್ಲಿದ್ದ ಕೆಲಸಗಾರರ ಮೇಲೆ ಹಲ್ಲೆ ಮಾಡಿ ಮದ್ಯದ ಬಾಟಲಿಗಳನ್ನು ನಾಶಪಡಿಸುತ್ತಾರೆ. ಈ ಬಗ್ಗೆ ಮಡಿಕೇರಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಗಳ ಪತ್ತೆಯ ಬಗ್ಗೆ ಕೊಡಗು ಜಿಲ್ಲಾ ಪೊಲೀಸ್ ಅಧೀಕ್ಷಕ ಪಿ. ರಾಜೇಂದ್ರ ಪ್ರಸಾದ್ ಅವರು, ಡಿಸಿಐಬಿ ಇನ್ಸ್‍ಪೆಕ್ಟರ್ ಕರೀಂ ರಾವ್‍ತರ್ ನೇತೃತ್ವದಲ್ಲಿ ತಂಡ ರಚಿಸಿದ್ದಾರೆ. ಆ ಮೇರೆಗೆ ಆರೋಪಿಗಳಲ್ಲಿ ಮಾರುತಿ ಬಾರ್ ಮೇಲೆ ಧಾಳಿ ನಡೆಸಿದ ಈ ಕೆಳಕಂಡ ಆರೋಪಿಗಳನ್ನು ದಸ್ತಗಿರಿ ಮಾಡಲಾಗಿದೆ.

ಆರೋಪಿಗಳಲ್ಲಿ ಟಿ.ಜಿ. ದೇಶಿಕ್ (23), ಮಡಿಕೇರಿ ಮೆಡಿಕಲ್ ಕಾಲೇಜಿನಲ್ಲಿ ಸ್ಟೋರ್ ಕೀಪರ್ ಕೆಲಸದೊಂದಿಗೆ ಅರ್ವತೊಕ್ಲು ಗ್ರಾಮ ನಿವಾಸಿಯಾಗಿದ್ದಾನೆ. ಮನೋಜ್ ಕೆ.ಎನ್. (21), ಮಡಿಕೇರಿ ಮೆಡಿಕಲ್ ಕಾಲೇಜಿನಲ್ಲಿ ಸೆಕ್ಯೂರಿಟಿ ಕೆಲಸದೊಂದಿಗೆ ಕಡಿಯತ್ತೂರು ಗ್ರಾಮದ ನಿವಾಸಿ ಪಿ.ಡಿ. ಕುಶ (20), ಪ್ಯಾಷನ್ ಡಿಸೈನಿಂಗ್ ವಿದ್ಯಾರ್ಥಿ ಅರ್ವತೊಕ್ಲು. ಶ್ರವಣ್ (20) ಹಾಗೂ ಫಯಾಜ್ (20), ಇಬ್ಬರು ಕಾರ್ಪೆಂಟರ್ ವೃತ್ತಿಯೊಂದಿಗೆ ಕಂಡಕೆರೆ ನಿವಾಸಿಗಳು. ಕಿರಣ್ (20), ಕಾರ್ಮಿಕ, ಮಂಗಳಾದೇವಿ ನಗರ ನಿವಾಸಿಗಳಾಗಿದ್ದಾರೆ.

ಬಾರ್ ಮೇಲಿನ ಧಾಳಿ ಸಂದರ್ಭ ಒಟ್ಟು ಹನ್ನೊಂದು ಮಂದಿಯಿದ್ದು, ಈ ಪೈಕಿ ಭರತ್ ಹಾಗೂ ಸುಮನ್ ಎಂಬಿಬ್ಬರು ಘಟನೆಯನ್ನು ದೂರದಿಂದ ಗಮನಿಸಿದ್ದರೂ, ಯಾವದೇ ಕೃತ್ಯದಲ್ಲಿ ಭಾಗಿಯಾಗಿಲ್ಲವೆಂದು ಎಸ್‍ಪಿ ಸ್ಪಷ್ಟನೆ ನೀಡಿದರು. ಅಲ್ಲದೆ ಹೆಲ್ಮೆಟ್ ಧರಿಸಿಕೊಂಡು ಕಲ್ಲು ತೂರಾಟ ನಡೆಸಿದ್ದ ಮೇಕೇರಿಯ ದೀಪಕ್, ಕತ್ತಲೆಕಾಡುವಿನ ಶಿವ ಹಾಗೂ ಪುಟ್ಟ ಈ ಕೃತ್ಯದಲ್ಲಿ ಭಾಗಿಯಾಗಿದ್ದು, ಘಟನೆ ಬಗ್ಗೆ ದೃಶ್ಯ ಮಾಧ್ಯಮಗಳಲ್ಲಿ ವಿಷಯ ನೋಡಿ ತಲೆಮರೆಸಿಕೊಂಡಿದ್ದು, ಇವರುಗಳ ಬಂಧನಕ್ಕೆ ಬಲೆ ಬೀಸಲಾಗಿದೆ ಎಂದು ಸುಳಿವು ನೀಡಿದರು. ಆರೋಪಿಗಳ ವಿರುದ್ಧ ಬಾರ್ ವ್ಯವಸ್ಥಾಪಕ ಮುದ್ದಪ್ಪ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ಪ್ರಗತಿಯಲ್ಲಿದ್ದು, ವಿಚಾರಣೆಗೆ ಈಗಾಗಲೇ ಮೇಲಿನ ಆರು ಮಂದಿಯನ್ನು ಒಳಪಡಿಸಲಾಗಿದೆ ಎಂದು ಎಸ್‍ಪಿ ತಿಳಿಸಿದರು.

ಈ ಪ್ರಕರಣವನ್ನು ಪೊಲೀಸ್ ಅಧೀಕ್ಷಕ ರಾಜೇಂದ್ರ ಪ್ರಸಾದ್ ಅವರ ಮಾರ್ಗದರ್ಶನದಲ್ಲಿ ಡಿಸಿಐಬಿ ಪೊಲೀಸ್ ಇನ್ಸ್‍ಪೆಕ್ಟರ್ ಕರೀಂ ಕಾವ್‍ತರ್ ನೇತೃತ್ವದ ಕಾರ್ಯಾಚರಣೆಯಲ್ಲಿ ಸಿಬ್ಬಂದಿಗಳಾದ ಎಎಸ್‍ಐ ಕೆ.ವೈ. ಹಮೀದ್, ಎನ್.ಟಿ. ತಮ್ಮಯ್ಯ, ಸಿಬ್ಬಂದಿಗಳಾದ ವಿ.ಜಿ. ವೆಂಕಟೇಶ್, ಕೆ.ಎಸ್. ಅನಿಲ್‍ಕುಮಾರ್, ಎಂ.ಎನ್. ನಿರಂಜನ್, ಬಿ.ಎಲ್. ಯೋಗೇಶ್ ಕುಮಾರ್, ಕೆ.ಆರ್. ವಸಂತ, ಕೆ.ಎಸ್. ಶಶಿಕುಮಾರ್, ಯು.ಎ. ಮಹೇಶ್ ಅವರು ಪಾಲ್ಗೊಂಡಿದ್ದು, ಇವರ ಕಾರ್ಯವೈಖರಿಯನ್ನು ಪೊಲೀಸ್ ಅಧೀಕ್ಷಕರು ಶ್ಲಾಘಿಸಿದ್ದಾರೆ.