ಕುಶಾಲನಗರ, ಜು. 13: ಗುರುಪೂರ್ಣಿಮೆ ಅಂಗವಾಗಿ ಕಾವೇರಿ ನದಿ ತಟದಲ್ಲಿ ಸ್ವಚ್ಛತಾ ಕಾರ್ಯಕ್ರಮ ಹಾಗೂ ಜೀವನದಿ ಕಾವೇರಿ ನದಿಗೆ 6 ಕಡೆ ಏಕ ಕಾಲದಲ್ಲಿ ಮಹಾ ಆರತಿ ಕಾರ್ಯಕ್ರಮಗಳು ಜರುಗಿದವು.

ಶ್ರೀ ಅಯ್ಯಪ್ಪಸ್ವಾಮಿ ದೇವಾಲಯ ಬಳಿ ಕಾವೇರಿ ನದಿಗೆ 67ನೇ ಮಹಾ ಆರತಿ ಬೆಳಗಲಾಯಿತು. ಕಾವೇರಿ ಮಹಾ ಆರತಿ ಬಳಗದ ವತಿಯಿಂದ ಕಾವೇರಿ ನದಿ ತಟದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮುಖ್ಯ ಅರ್ಚಕ ಕೃಷ್ಣಮೂರ್ತಿ ಭಟ್ ನೇತೃತ್ವದಲ್ಲಿ ಅಷ್ಟೋತ್ತರ, ಪೂಜಾ ವಿಧಿವಿಧಾನಗಳೊಂದಿಗೆ ಭಕ್ತಾದಿಗಳು ಜೀವನದಿಗೆ ಮಹಾ ಆರತಿ ಬೆಳಗಿದರು.

ಈ ಸಂದರ್ಭ ಅಯ್ಯಪ್ಪ ಸ್ವಾಮಿ ದೇವಾಲಯ ಟ್ರಸ್ಟ್‍ನ ಅಧ್ಯಕ್ಷ ಕೆ.ಆರ್. ಶಿವಾನಂದ, ಡಿ.ಆರ್. ಸೋಮಶೇಖರ್, ವಚನ ಸಾಹಿತ್ಯ ಪರಿಷತ್ ಅಧ್ಯಕ್ಷ ಕೆ.ಎಸ್. ಮೂರ್ತಿ, ಚೌಡೇಶ್ವರಿ ದೇವಾಲಯ ಸಮಿತಿ ಅಧ್ಯಕ್ಷ ವಿಜಯೇಂದ್ರ, ಕಾವೇರಿ ಮಹಾ ಆರತಿ ಬಳಗದ ಸಂಚಾಲಕಿ ವನಿತಾ ಚಂದ್ರಮೋಹನ್, ಕರ್ನಾಟಕ ಕಾವಲುಪಡೆ ಕೊಪ್ಪ ಘಟಕದ ಅಧ್ಯಕ್ಷ ಕೃಷ್ಣ, ಮಹಿಳಾ ಭಜನಾ ಮಂಡಳಿ ಪ್ರಮುಖರು ಮತ್ತು ಆರತಿ ಬಳಗದ ಸದಸ್ಯರು ಇದ್ದರು.

ಕುಶಾಲನಗರ ಕೊಪ್ಪ ಸೇತುವೆ ಬಳಿ ಕಾವೇರಿ ಪ್ರತಿಮೆಗೆ ಹುಣ್ಣಿಮೆ ಅಂಗವಾಗಿ 50ನೇ ಅಭಿಷೇಕ ನಂತರ ವಿಶೇಷ ಪೂಜಾ ಕಾರ್ಯಕ್ರಮಗಳು ಜರುಗಿದವು. ಈ ಸಂದರ್ಭ ಕಾವೇರಿ ನದಿಗೆ ಬಾಗಿನ ಅರ್ಪಿಸಲಾಯಿತು.

ಬಾರವಿ ಕಾವೇರಿ ಕನ್ನಡ ಸಂಘದ ಆಶ್ರಯದಲ್ಲಿ ನಡೆದ ಕಾರ್ಯಕ್ರಮದಲ್ಲಿ ಕುಶಾಲನಗರ ಅಯ್ಯಪ್ಪಸ್ವಾಮಿ ದೇವಾಲಯ ಬಳಿ ಕಾವೇರಿ ನದಿಯಿಂದ ಕಲಶಗಳನ್ನು ಹೊತ್ತು ವೀರಗಾಸೆ, ವಾದ್ಯಗೋಷ್ಠಿ ಗಳೊಂದಿಗೆ ಮೆರವಣಿಗೆ ಮೂಲಕ ಕಾವೇರಿ ಮಾತೆ ಪ್ರತಿಮೆ ಬಳಿ ಸೇರಿದ ಭಕ್ತಾದಿಗಳು ವಿಶೇಷ ಪೂಜೆ ಸಲ್ಲಿಸಿದರು.

ಕಾರ್ಯಕ್ರಮದ ನಂತರ ಭಕ್ತಾದಿಗಳಿಗೆ ಅನ್ನಸಂತರ್ಪಣೆ ನಡೆಯಿತು.

ಈ ಸಂದರ್ಭ ಕಾವೇರಿ ಕನ್ನಡ ಸಂಘದ ಪ್ರಮುಖರಾದ ಬಬೀಂದ್ರ ಪ್ರಸಾದ್, ರವೀಂದ್ರ ಪ್ರಸಾದ್, ವಿಜಯೇಂದ್ರ ಪ್ರಸಾದ್ ಮತ್ತಿತರರು ಇದ್ದರು.

ಕುಶಾಲನಗರ ಆದಿಶಂಕರಾ ಚಾರ್ಯ ಬಡಾವಣೆ ಬಳಿ ಕಾವೇರಿ ನದಿ ತಟದಲ್ಲಿ ಗಣಪತಿ ದೇವಾಲಯ ಮುಖ್ಯ ಅರ್ಚಕ ಆರ್.ಎಸ್. ಕಾಶೀಪತಿ ಅವರ ನೇತೃತ್ವದಲ್ಲಿ 55ನೇ ಮಹಾ ಆರತಿ ಕಾರ್ಯಕ್ರಮ ನಡೆಯಿತು.