ಮಡಿಕೇರಿ, ಜು. 13: ಜಿಲ್ಲೆಯಲ್ಲಿ ಬಾಲ್ಯ ವಿವಾಹದ ಬಗ್ಗೆ ವರದಿಗಳು ಕೇಳಿ ಬರುತ್ತಿದ್ದು, ಬಾಲ್ಯ ವಿವಾಹ ಮಾಡುವ ಪೋಷಕರ ವಿರುದ್ಧ ಎಫ್.ಐ.ಆರ್. ದಾಖಲು ಮಾಡುವಂತೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಡಾ. ರಿಚರ್ಡ್ ವಿನ್ಸೆಂಟ್ ಡಿಸೋಜ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.

ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಬಾಲ್ಯ ವಿವಾಹ ತಡೆಯುವ ಕುರಿತು ನಡೆದ ಜಿಲ್ಲಾ ಮಟ್ಟದ ಸಮನ್ವಯ ಮತ್ತು ಪರಿಶೀಲನಾ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಜಿಲ್ಲೆಯಲ್ಲಿ ಇನ್ನೂ ಬಾಲ್ಯವಿವಾಹ ನಡೆಯುತ್ತಿರುವದು ಅಕ್ಷಮ್ಯ ಅಪರಾಧವಾಗಿದೆ. ಬಾಲ್ಯ ವಿವಾಹ ಪ್ರಕರಣಗಳು ಕೇಳಿ ಬಂದರೆ ನಿಮ್ಮ (ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಅಧಿಕಾರಿಗಳ) ವಿರುದ್ಧವೇ ಕ್ರಮ ತೆಗೆದುಕೊಳ್ಳಬೇಕಾಗುತ್ತದೆ.

ಕಾನೂನಿನ ಭಯವಿಲ್ಲದಿದ್ದರೆ ಈ ರೀತಿ ಆಗುತ್ತದೆ. ಪ್ರತಿಯೊಬ್ಬರಲ್ಲೂ ಕಾನೂನಿನ ಬಗ್ಗೆ ಅರಿವು ಇರಬೇಕು. ಜೊತೆಗೆ ಭಯವೂ ಸಹ ಇರಬೇಕು. ಹಾಗಾದಾಗ ಮಾತ್ರ ಬಾಲ್ಯ ವಿವಾಹ ತಡೆಯಲು ಸಾಧ್ಯ ಎಂದು ಅವರು ನುಡಿದರು.

ಬಾಲ್ಯ ವಿವಾಹ ನಿಯಂತ್ರಿಸುವ ನಿಟ್ಟಿನಲ್ಲಿ ರೋಟರಿ, ಲಯನ್ಸ್ ಮತ್ತಿತರ ಸರ್ಕಾರೇತರ ಸಂಸ್ಥೆಗಳನ್ನು ಸೇರಿಸಿಕೊಂಡು ಬಾಲ್ಯ ವಿವಾಹ ನಿಷೇಧ ಸಂಬಂಧಿಸಿದಂತೆ ಅರಿವು ಮೂಡಿಸುವ ಕಾರ್ಯಕ್ರಮ ಆಯೋಜಿಸಬೇಕು. ಹಾಗೆಯೇ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪ ನಿರ್ದೇಶಕರೊಂದಿಗೆ ಚರ್ಚಿಸಿ ಜಿಲ್ಲೆಯ ಎಲ್ಲಾ ಪ್ರೌಢಶಾಲೆಗಳಲ್ಲಿ ಬಾಲ್ಯ ವಿವಾಹದಿಂದ ಉಂಟಾಗುವ ದುಷ್ಪರಿಣಾಮಗಳ ಬಗ್ಗೆ ಪೋಸ್ಟರ್ ಅಳವಡಿಸುವಂತೆ ಜಿಲ್ಲಾಧಿಕಾರಿ ಸಲಹೆ ಮಾಡಿದರು. ಜಿಲ್ಲೆಯಲ್ಲಿ ಖಾಸಗಿಯಾಗಿ ನಿರ್ವಹಿಸುವ ಅಂಗನವಾಡಿಗಳಿಗೆ ಸ್ವಂತ ನಿವೇಶನ ಪಡೆಯುವ ನಿಟ್ಟಿನಲ್ಲಿ ಅಗತ್ಯ ಕ್ರಮ ಕೈಗೊಳ್ಳುವಂತೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ತಾಲೂಕು ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ನಿರ್ದೇಶನ ನೀಡಿದರು.

ಅಂಗನವಾಡಿ ಮಕ್ಕಳಿಗೆ ಪೂರಕ ಪೌಷ್ಟಿಕ ಆಹಾರ ಸಮರ್ಪಕವಾಗಿ ವಿತರಣೆ ಮಾಡಬೇಕು. ಗರ್ಭೀಣಿಯರು, ಬಾಣಂತಿಯರು, ಕಿಶೋರಿಯರು ಇವರಿಗೆ ಗುಣಮಟ್ಟದ ಪೂರಕ ಪೌಷ್ಟಿಕ ಆಹಾರ ವಿತರಣೆಯ ಮೆನು ಚಾರ್ಟ್ ತಯಾರಿಸುವಂತೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಜಿ.ಪಂ. ಸಿಇಓ ಚಾರುಲತಾ ಸೋಮಲ್ ಮಾತನಾಡಿ, ಅಂಗನವಾಡಿ ಕಟ್ಟಡ ಕಾಮಗಾರಿಗಳಿಗೆ ಸಂಬಂಧಿಸಿ ದಂತೆ ಮಾಹಿತಿ ಪಡೆದು ಬಾಕಿ ಇರುವ ಅಂಗನವಾಡಿ ಕಟ್ಟಡಗಳ ಕಾಮಗಾರಿ ಯನ್ನು ಶೀಘ್ರ ಪೂರ್ಣಗೊಳಿಸುವಂತೆ ಜಿ.ಪಂ. ಇಂಜಿನಿಯರ್ ಅವರಿಗೆ ನಿರ್ದೇಶನ ನೀಡಿದರು.

ಅಂಗನವಾಡಿ ಮಕ್ಕಳಿಗೆ ಪೂರಕ ಪೌಷ್ಟಿಕ ಆಹಾರ ಒದಗಿಸುವ ನಿಟ್ಟಿನಲ್ಲಿ ಸ್ಥಳೀಯ ವಾತಾವರಣಕ್ಕೆ ಹೊಂದಿಕೊಂಡಂತೆ ಗುಣಮಟ್ಟದ ಆಹಾರ ಪೂರೈಸುವಂತೆ ಜಿ.ಪಂ. ಸಿಇಓ ಅವರು ನಿರ್ದೇಶನ ನೀಡಿದರು.

ಆರು ವರ್ಷದೊಳಗಿನ ಮಕ್ಕಳಿಗೆ ಪೌಷ್ಟಿಕತೆ ಮಟ್ಟ ಹಾಗೂ ಆರೋಗ್ಯ ಸ್ಥಿತಿ ಸುಧಾರಿಸುವದು, ಮಗುವಿನ ಮಾನಸಿಕ ದೈಹಿಕ ಬೆಳವಣಿಗೆಗೆ ಪೂರಕ ಪೌಷ್ಟಿಕ ಆಹಾರ ಒದಗಿಸುವದು. ಮಕ್ಕಳ ಬೆಳವಣಿಗೆಗೆ ಆರೋಗ್ಯ ಇಲಾಖೆ ಜೊತೆ ಸೇರಿ ಮಾಹಿತಿ ನೀಡುವದು. ಶಿಶು ಮರಣ ತಡೆಯುವದು, ಅಪೌಷ್ಟಿಕತೆ ನಿವಾರಣೆ ಮಾಡುವದು, ಮಗುವಿನ ಸರ್ವಾಂಗೀಣ ಅಭಿವೃದ್ಧಿಗೆ ಅಗತ್ಯ ಕ್ರಮ ಕೈಗೊಳ್ಳಬೇಕು.

ಆರು ವರ್ಷದೊಳಗಿನ ಮಕ್ಕಳಿಗೆ, ಗರ್ಭಿಣಿ ಹಾಗೂ ಬಾಣಂತಿಯರಿಗೆ ಪೂರಕ ಪೌಷ್ಟಿಕ ಆಹಾರ ನೀಡುವದು, ಮಕ್ಕಳಿಗೆ ಹಾಗೂ ತಾಯಂದಿರಿಗೆ ರೋಗ ನಿರೋಧಕ ಚುಚ್ಚು ಮದ್ದು ನೀಡುವದು, ಆರೋಗ್ಯ ತಪಾಸಣೆ ಮಾಡುವದು, ಸಲಹಾ ಸೇವೆ ಒದಗಿಸುವದು, ಮಹಿಳೆಯರಿಗೆ ಆರೋಗ್ಯ ಮತ್ತು ಪೌಷ್ಟಿಕ ಶಿಕ್ಷಣ ನೀಡುವದು. 3 ರಿಂದ 6 ವರ್ಷದ ಮಕ್ಕಳಿಗೆ ಶಾಲಾ ಪೂರ್ವ ಚಟುವಟಿಕೆಯನ್ನು ನಡೆಸುವಂತೆ ಹೇಳಿದರು.

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪ ನಿರ್ದೇಶಕಿ ಮಮ್ತಾಜ್ ಮಾಹಿತಿ ನೀಡಿ, ಅಂಗನವಾಡಿ ಕಟ್ಟಡ ಉನ್ನತ್ತೀಕರಣ, ಬಾಲ ಸ್ನೇಹಿ ಅಂಗನವಾಡಿ ಕೇಂದ್ರಗಳು, ಅಂಗನವಾಡಿ ಕೇಂದ್ರಗಳ ದುರಸ್ತಿ ಬಗ್ಗೆ ಮಾಹಿತಿ ನೀಡಿದರು.

ಜಿಲ್ಲೆಯಲ್ಲಿ 871 ಅಂಗನವಾಡಿ ಗಳಿದ್ದು, 694 ಸ್ವಂತ ಕಟ್ಟಡಗಳಿವೆ. 12 ಪಂಚಾಯಿತಿ ಕಟ್ಟಡಗಳು, 25 ಸಮುದಾಯ ಭವನದಲ್ಲಿ, 7 ಮಹಿಳಾ ಮಂಡಲದಲ್ಲಿ, 16 ಶಾಲೆಗಳಲ್ಲಿ 65 ಬಾಡಿಗೆ ಕಟ್ಟಡದಲ್ಲಿ ಹಾಗೂ 52 ತಾತ್ಕಾಲಿಕ ವ್ಯವಸ್ಥೆಯಲ್ಲಿ ಕಾರ್ಯ ನಿರ್ವಹಿಸುತ್ತಿವೆ ಎಂದು ಅವರು ಮಾಹಿತಿ ನೀಡಿದರು.

ಜಿಲ್ಲಾ ಆಸ್ಪತ್ರೆಯಲ್ಲಿ ಮಹಿಳಾ ವಿಶೇಷ ಘಟಕದಲ್ಲಿ ದಾಖಲಾದ ಪ್ರಕರಣಗಳು ಮತ್ತು ಒದಗಿಸಲಾದ ಸೇವೆಗಳು ಹಾಗೂ ಸ್ಥೈರ್ಯ ನಿಧಿ ಯೋಜನೆಯಡಿ ಪರಿಹಾರ ಬಗ್ಗೆ ಮಾಹಿತಿ ನೀಡಿದರು.

ಜಿಲ್ಲಾ ವಿಕಲಚೇತನರ ಅಧಿಕಾರಿ ಜಗದೀಶ್, ಸಿಡಿಪಿಓ ಗಳಾದ ದಮಯಂತಿ, ಲೀಲಾವತಿ, ಸಂಪತ್‍ಕುಮಾರ್ ಅವರು ಹಲವು ಮಾಹಿತಿ ನೀಡಿದರು.

ಆಹಾರ ಇಲಾಖೆ ಉಪ ನಿರ್ದೇಶಕ ಪುಟ್ಟಸ್ವಾಮಿ, ಸಾರ್ವಜನಿಕ ಶಿಕ್ಷಣ ಇಲಾಖೆ ಉಪ ನಿರ್ದೇಶಕರಾದ ಜಿ.ಆರ್. ಬಸವರಾಜು., ಇನ್ಸ್‍ಪೆಕ್ಟರ್ ಐ.ಪಿ. ಮೇದಪ್ಪ, ಡಾ. ರಾಜೇಶ್ವರಿ, ಡಾ. ನವೀನ್, ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಸಾಂಸ್ಥಿಕ ರಕ್ಷಣಾಧಿಕಾರಿ ಮಂಜುನಾಥ್, ಕಾನೂನು ಸೇವಾ ಪ್ರಾಧಿಕಾರದ ಆಡಳಿತ ಸಹಾಯಕರಾದ ಜಯಪ್ಪ, ಜಾಯ್ಸ್ ಮೇನೇಜಸ್, ಸತ್ಯಭಾಮ, ಜಯಂತಿ, ಯಶೋದÀ ಇತರರು ಇದ್ದರು.