ಗೋಣಿಕೊಪ್ಪಲು, ಜು. 13: ಜೀವನದಲ್ಲಿ ಸೋಲಿನೊಂದಿಗೆ ಸಾಧಿಸುವ ಛಲವಿದ್ದರೆ ಗುರಿ ತಲುಪಲು ಅವಕಾಶವಿದೆ ಎಂದು ಯುಪಿಎಸ್ಸಿಯಲ್ಲಿ 501 ನೇ ರ್ಯಾಂಕ್ ವಿಜೇತ ಪುನೀತ್ ಕುಟ್ಟಯ್ಯ ಅಭಿಪ್ರಾಯಟ್ಟರು.
ಕೊಡವ ಎಜುಕೇಷನ್ ಸೊಸೈಟಿ ಆಶ್ರಯದಲ್ಲಿ ಹಳ್ಳಿಗಟ್ಟು ಕೂರ್ಗ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಕಾಲೇಜಿನಲ್ಲಿ ಆರಂಭಗೊಂಡ ಪದವಿಪೂರ್ವ ಕಾಲೇಜು ಕೇಂದ್ರವನ್ನು ಉದ್ಘಾಟಿಸಿ ಮಾತನಾಡಿ, ಜೀವನದಲ್ಲಿ ನಾವು ಎಷ್ಟೇ ಬಾರಿ ಸೋಲನ್ನು ಅನುಭವಿಸಿದರೂ ಸಾಧಿಸುವ ಛಲವಿದ್ದರೆ ಗುರಿ ತಲಪಬಹುದು. ಪ್ರಸ್ತುತ ವಿದ್ಯಾಕ್ಷೇತ್ರದಲ್ಲಿ ವಿದ್ಯಾರ್ಥಿಗಳಿಗೆ ಹಲವು ಬಗೆಯ ಕೋರ್ಸ್ಗಳು ತೆರೆದುಕೊಂಡಿದ್ದು ವಿದ್ಯಾರ್ಥಿಗಳು ತಮಗೆ ಇಷ್ಟವಾದ ಹಾಗೂ ಪ್ರೀತಿಸುವ ಕೋರ್ಸ್ನಿಂದ ಪದವಿ ಪಡೆಯಬಹುದು. ಪದವಿ ನಂತರ ನಾವು ಉದ್ಯೋಗದೊಂದಿಗೆ ಬೆರೆತುಕೊಳ್ಳದಿದ್ದಲ್ಲಿ ತೃಪ್ತಿ ಕಾಣುವದಿಲ್ಲ ಎಂದು ಸಲಹೆ ನೀಡಿದರು. ಕೊಡವ ಎಜುಕೇಶನ್ ಸೊಸೈಟಿ ನಿರ್ದೇಶಕ ಚೆಪ್ಪುಡೀರ ಎಂ. ಸುಬ್ಬಯ್ಯ ಮಾತನಾಡಿ, ಪಾಲಕರು ಮಕ್ಕಳಿಗೆ ಇದೇ ಶಿಕ್ಷಣ ಪಡೆಯಬೇಕೆಂಬ ಒತ್ತಡ ಮಾಡದೆ ಮಕ್ಕಳು ಪ್ರೀತಿಸುವ ಶಿಕ್ಷಣ ನೀಡಲು ಅವಕಾಶ ನೀಡಬೇಕು ಎಂದರು.
ಪಿಯು ಕಾಲೇಜು ಪ್ರಾಂಶುಪಾಲ ಡಾ. ಸಣ್ಣುವಂಡ ರೋಹಿಣಿ ತಿಮ್ಮಯ್ಯ ಮಾತನಾಡಿ, ವಿದ್ಯಾರ್ಥಿಗಳು ಗುಣಮಟ್ಟದ ಜ್ಞಾನರ್ಜನೆಗೆ ಆದ್ಯತೆ ನೀಡುವ ಮೂಲಕ ಸ್ವಅಭಿವೃದ್ಧಿಯೊಂದಿಗೆ ಶಿಕ್ಷಣ ಸಂಸ್ಥೆಯನ್ನು ಬೆಳೆಸುವತ್ತ ಚಿಂತನೆ ನಡೆಸಬೇಕು ಎಂದರು.
ವೇದಿಕೆಯಲ್ಲಿ ಕೊಡವ ಎಜುಕೇಶನ್ ಸೊಸೈಟಿ ಅಧ್ಯಕ್ಷ ಸಿ.ಪಿ. ಬೆಳ್ಯಪ್ಪ, ಕಾರ್ಯದರ್ಶಿ ರಾಕೇಶ್ ಪೂವಯ್ಯ, ಉಪಾಧ್ಯಕ್ಷರುಗಳಾದ ಎಮ್.ಸಿ ಕಾರ್ಯಪ್ಪ, ರವಿ ಉತ್ತಪ್ಪ, ಖಜಾಂಜಿ ಕೆ.ಎಮ್ ಉತ್ತಪ್ಪ, ಸಹ ಕಾರ್ಯದರ್ಶಿ ಚೆರಿಯಪಂಡ ರಾಜ ನಂಜಪ್ಪ, ಇಂಜಿನಿಯರಿಂಗ್ ಕಾಲೇಜು ಪ್ರಾಂಶುಪಾಲ ಮಹಾಬಲೇಶ್ವರಪ್ಪ ಉಪಸ್ಥಿತರಿದ್ದರು. ಸಾಯಿಲಕ್ಷೀ ಪ್ರಾರ್ಥಿಸಿದರು, ಅನುರಾಧ ಸ್ವಾಗತಿಸಿದರು.