ಸೋಮವಾರಪೇಟೆ,ಜು.13: ಕಳೆದ ತಾ. 8ರಂದು ಮೈಸೂರಿನ ನಾರಾಯಣ ಹೃದಯಾಲಯದಲ್ಲಿ ಸಾವನ್ನಪ್ಪಿದ ನಗರದ ಮಹದೇಶ್ವರ ಬಡಾವಣೆಯ ನಿವಾಸಿ ಪ್ರಕಾಶ್ ರೈ(47) ಅವರ ಸಾವಿಗೆ ಹೆಚ್1 ಎನ್1 ಸೋಂಕು ಕಾರಣ ಎಂದು ವೈದ್ಯಕೀಯ ವರದಿ ತಿಳಿಸಿದೆ.
ನಗರದ ಎಂ.ಡಿ. ಬ್ಲಾಕ್ ನಿವಾಸಿಯಾಗಿದ್ದ ಪ್ರಕಾಶ್ ಅವರು ಟಿ.ವಿ. ಕೇಬಲ್ ಆಪರೇಟರ್ ಆಗಿ ಕೆಲಸ ನಿರ್ವಹಿಸುತ್ತಿದ್ದರು. ಕಳೆದ ಜೂನ್ 29ರಂದು ಚಳಿ ಜ್ವರ ಕಾಣಿಸಿಕೊಂಡಿದ್ದು, ಇಲ್ಲಿನ ಖಾಸಗಿ ಕ್ಲಿನಿಕ್‍ನಲ್ಲಿ ಚಿಕಿತ್ಸೆ ಪಡೆದಿದ್ದರು. ಆದರೂ ಜ್ವರ ಕಡಿಮೆಯಾಗದ ಹಿನ್ನೆಲೆ ಜೂ. 30ಕ್ಕೆ ಇಲ್ಲಿನ ಸರ್ಕಾರಿ ಆಸ್ಪತ್ರೆಗೆ ತೆರಳಿ ಚಿಕಿತ್ಸೆ ಪಡೆದುಕೊಂಡಿದ್ದರು.
ಜುಲೈ 3ರಂದು ಮತ್ತೆ ಜ್ವರ ಉಲ್ಬಣಗೊಂಡಿದ್ದು, ಮಡಿಕೇರಿಯ ವೈವಸ್ ಆಸ್ಪತ್ರೆಗೆ ತೆರಳಿ ಪರೀಕ್ಷೆಗೆ ಒಳಗಾಗಿದ್ದರು. ಅಲ್ಲಿ ಪ್ರಕಾಶ್ ಅವರ ಎದೆಭಾಗದ ಎಕ್ಸ್‍ರೇ, ರಕ್ತ ಪರೀಕ್ಷೆ ಮಾಡಿಸಿದ್ದು, ಹೆಚ್ಚಿನ ಚಿಕಿತ್ಸೆಗೆ ಮೈಸೂರಿಗೆ ತೆರಳುವಂತೆ ಸೂಚಿಸಿದ್ದರು.
ಅದರಂತೆ ಪ್ರಕಾಶ್ ಅವರು ಮೈಸೂರಿನ ಕೆ.ಆರ್. ಆಸ್ಪತ್ರೆಗೆ ತೆರಳಿ ಚಿಕಿತ್ಸೆಗೆ ಒಳಗಾಗಿದ್ದರು. ಶ್ವಾಸಕೋಶ ಮತ್ತು ಶ್ವಾಸನಾಳದಲ್ಲಿ ನೀರು ಮತ್ತು ಕಫ ಶೇಖರಣೆಗೊಂಡಿದ್ದು, ವೆಂಟಿಲೇಟರ್ ಸೌಲಭ್ಯ ಇರುವ ಆಸ್ಪತ್ರೆಗೆ ದಾಖಲಿಸುವಂತೆ ಸಲಹೆ ನೀಡಿದರು.
ನಂತರ ನಾರಾಯಣ ಹೃದಯಾಲಯಕ್ಕೆ ದಾಖಲಿಸಿ ರಕ್ತ ಸಂಗ್ರಹಿಸಿ ಮಣಿಪಾಲ್ ಸೇರಿದಂತೆ ಇತರೆಡೆಗೆ ರವಾನಿಸಲಾಯಿತು. ಈ ಸಂದರ್ಭ ಪ್ರಕಾಶ್ ಅವರಿಗೆ ಡೆಂಗ್ಯೂ ಜ್ವರ ತಗುಲಿದೆ ಎಂಬ ಮಾಹಿತಿ ಲಭಿಸಿತು. ಅಷ್ಟರಲ್ಲಾಗಲೇ ಮಾರಕ ಡೆಂಗ್ಯೂ ಅಪಾಯಕಾರಿಯಾಗಿ ದೇಹವನ್ನು ಆವರಿಸಿದ್ದು, ತಾ. 8ರಂದು ಕೊನೆಯುಸಿರೆಳೆದರು.
ಈ ಬಗ್ಗೆ ಪ್ರಕಾಶ್ ಅವರ ಪೋಷಕರಿಗೆ ಸ್ಪಷ್ಟ ಮಾಹಿತಿ ಲಭಿಸಿರಲಿಲ್ಲ. ಟೈಫಾಯಿಡ್ ಅಥವಾ ಡೆಂಗ್ಯೂ ಜ್ವರದಿಂದ ಸಾವನ್ನಪ್ಪಿರಬಹುದು ಎಂದೇ ಶಂಕಿಸಲಾಗಿತ್ತು. ಆದರೆ ಪ್ರಕಾಶ್ ಅವರ ಮರಣೋತ್ತರ ಪರೀಕ್ಷಾ ವರದಿ ಇದೀಗ ಪೋಷಕರ ಕೈಸೇರಿದ್ದು, ಹೆಚ್1 ಎನ್1 ಸೋಂಕಿನಿಂದ ಮರಣ ಸಂಭವಿಸಿದೆ ಎಂದು ಉಲ್ಲೇಖಿಸಲಾಗಿದೆ. ಸೋಮವಾರಪೇಟೆ ಮಟ್ಟಿಗೆ ಈ ಮಾರಕ ಖಾಯಿಲೆಯಿಂದ ಸಾವು ಸಂಭವಿಸಿರುವದು ಇದೇ ಪ್ರಥಮ ಪ್ರಕರಣವಾಗಿದೆ.