ಮಡಿಕೇರಿ, ಜು. 13: ಮಂಗಳೂರಿನಲ್ಲಿ ಇಂಜಿನಿಯರ್ ಆಗಿ ಕೆಲಸ ನಿರ್ವಹಿಸುತ್ತಿದ್ದ ಕೊಡಗಿನ ಕಾನೂರಿನ ಯುವಕನೋರ್ವ ಜೂನ್ 7 ರಿಂದ ನಿಗೂಢ ರೀತಿಯಲ್ಲಿ ನಾಪತ್ತೆಯಾಗಿದ್ದು, 18 ದಿನಗಳ ಬಳಿಕ ಆತನ ಮೃತದೇಹ ಕಾರವಾರ ಜಿಲ್ಲೆಯಲ್ಲಿ ಪತ್ತೆಯಾಗಿದೆ. ಇದೊಂದು ಕೊಲೆ ಪ್ರಕರಣ ಎಂಬ ಶಂಕೆ ವ್ಯಕ್ತಗೊಂಡಿದ್ದು, ಪೊಲೀಸ್ ತನಿಖೆ ಮುಂದುವರಿಯುತ್ತಿದೆ.ಕಾನೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಲ್ಲಿ ಮುಖ್ಯ ಕಾರ್ಯನಿರ್ವಹಣಾಧಿಕಾರಿಯಾಗಿರುವ ವಿ.ಆರ್. ಉಮೇಶ್ ಅವರ ಪುತ್ರ ವಿ.ಯು. ನಿಶಾಂತ್ ನಿಗೂಢ ರೀತಿಯಲ್ಲಿ ಸಾವಿಗೀಡಾಗಿರುವ ದುರ್ದೈವಿ. ಈ ಪ್ರಕರಣ ಹಲವು ರೀತಿಯಲ್ಲಿ ಸಂಶಯಕ್ಕೆ ಎಡೆಮಾಡಿದ್ದು, ಬಹುತೇಕ ಇದು ಕೊಲೆಯೇ ಎಂಬದು ಪೋಷಕರ ದೃಢ ನಿಲುವು.ಪ್ರಕರಣದ ಕುರಿತ ವಿವರಬಿ.ಎ. ಪದವೀಧರ ಸಾಫ್ಟ್ವೇರ್ ಇಂಜಿನಿಯರ್ ನಿಶಾಂತ್ ಮೊದಲು ಬೆಂಗಳೂರಿನಲ್ಲಿದ್ದು, ಅಲ್ಲಿಂದ ಕ್ಯಾಂಪಸ್ ಸೆಲೆಕ್ಷನ್ ಮೂಲಕ ಮಂಗಳೂರಿನ ಎಂ.ಜಿ. ರಸ್ತೆಯಲ್ಲಿರುವÀ ಪ್ರಸನ್ನ
(ಮೊದಲ ಪುಟದಿಂದ) ಇದಕ್ಕೆ ಮುನ್ನ ಅವರು ಬೆಂಗಳೂರಿನ ಕಂಪೆನಿಯೊಂದರಲ್ಲಿ ಎರಡು ಸುತ್ತಿನ ಸಂದರ್ಶನದಲ್ಲಿ ಉತ್ತೀರ್ಣರಾಗಿದ್ದರು. ಇದರ ನಡುವೆಯೇ ಉದ್ಯೋಗ ಲಭಿಸಿದ್ದರಿಂದ ಮಂಗಳೂರಿನ ಸಂಸ್ಥೆಗೆ ಸೇರ್ಪಡೆಗೊಂಡಿದ್ದ ಈತನಿಗೆ ಜೂನ್ 6 ರಂದು ಬೆಂಗಳೂರಿನ ಸಂಸ್ಥೆಯಿಂದ ಅಂತಿಮ ಸುತ್ತಿನ ಸಂದರ್ಶನಕ್ಕೆ ಹಾಜರಾಗುವಂತೆ ಸಂದೇಶ ಬಂದಿದೆ. ಇದರಂತೆ ಪೋಷಕರಿಗೆ ಮಾಹಿತಿ ನೀಡಿದ ನಿಶಾಂತ್ ಜೂನ್ 7 ರಂದು ಬೆಂಗಳೂರಿಗೆ ತೆರಳಿದ್ದರಂತೆ. ಅಲ್ಲಿನ ಸಂದರ್ಶನದಲ್ಲಿ ಈತ ಉದ್ಯೋಗಕ್ಕೆ ಆಯ್ಕೆಯಾಗಿದ್ದು, ಜೂನ್ರಿಂದ ವರದಿ ಮಾಡಿಕೊಳ್ಳಬೇಕಿತ್ತು.
ತಾ. 8 ರಂದು ಈ ಬಗ್ಗೆ ಮತ್ತೆ ಪೋಷಕರಿಗೆ ಮಾಹಿತಿ ನೀಡಿದ್ದ ನಿಶಾಂತ್ ಮಂಗಳೂರಿನಿಂದ ಅಗತ್ಯ ದಾಖಲಾತಿ ಪಡೆಯಲು ಆ ದಿನವೇ ಬೆಂಗಳೂರು - ಕಾರವಾರ ರೈಲಿನಲ್ಲಿ ಮಂಗಳೂರಿಗೆ ತೆರಳುವದಾಗಿ ತಿಳಿಸಿದ್ದ. ರೈಲು ಹತ್ತಿದ ಬಳಿಕ ಮಂಗಳೂರಿನ ಸಂಗಡಿಗನಿಗೂ ಕರೆ ಮಾಡಿದ್ದ ನಿಶಾಂತ್ ಮಂಗಳೂರು ತಲುಪಲೇ ಇಲ್ಲ. ಮರುದಿನ ಬೆಳಿಗ್ಗೆ ತಂದೆ ಉಮೇಶ್ಗೆ ಕರೆ ಮಾಡಿದಾಗ ಮೊಬೈಲ್ ಸ್ವಿಚ್ಆಫ್ ಆಗಿದ್ದು, ಮನೆಯವರು ಗಾಬರಿಗೊಂಡಿದ್ದರು. ಈತನ ಸುಳಿವು ಲಭಿಸದ ಹಿನ್ನೆಲೆಯಲ್ಲಿ ಉಮೇಶ್ ಬೆಂಗಳೂರಿನಲ್ಲಿ ಪೊಲೀಸ್ ಇಲಾಖೆಯಲ್ಲಿರುವ ಕಾನೂರಿನ ಸ್ನೇಹಿತರೊಬ್ಬರನ್ನು ಸಂಪರ್ಕಿಸಿದ್ದು, ಅವರ ಸಹಕಾರದಿಂದ ಮೊಬೈಲ್ ಟವರ್ ಲೊಕೇಷನ್ ಹುಡುಕಿದಾಗ ಜೂನ್ 8 ರ ರಾತ್ರಿ 12 ಗಂಟೆಗೆ ಕೆ.ಆರ್. ನಗರದ ಬಿಎಸ್ಎನ್ಎಲ್ ಟವರ್ ವ್ಯಾಪ್ತಿಯಲ್ಲಿ ಲೋಕೇಶನ್ ಸಿಕ್ಕಿದ್ದು, ನಂತರ ಮೊಬೈಲ್ ಸ್ವಿಚ್ಆಫ್ ಆಗಿದೆ. ಇದಾದ ಬಳಿಕ ಕೆ.ಆರ್. ನಗರ ವ್ಯಾಪ್ತಿ, ಬೆಂಗಳೂರು ಮತ್ತಿತರ ಕಡೆಗಳಲ್ಲಿ ಹುಡುಕಾಟ ನಡೆಸಿದರೂ ಪ್ರಯೋಜನವಾಗದ ಹಿನ್ನೆಲೆಯಲ್ಲಿ ಜೂನ್ 12 ರಂದು ಮಂಗಳೂರಿನ ಕದ್ರಿ ಠಾಣೆಯಲ್ಲಿ (ನಿಶಾಂತ್ ಕೆಲಸದಲ್ಲಿದ್ದ ಠಾಣಾ ವ್ಯಾಪ್ತಿ) ನಾಪತ್ತೆ ಪ್ರಕರಣ ದಾಖಲಿಸಲಾಗಿತ್ತು.
ಜೂನ್ 27 ರಂದು ಮೃತದೇಹ ಪತ್ತೆ
ಜೂನ್ 12 ರಿಂದ ಪೊಲೀಸರು ತನಿಖೆ ನಡೆಸುತ್ತಿದ್ದರೂ ಸುಳಿವು ಲಭ್ಯವಾಗಿರಲಿಲ್ಲ. ಜೂನ್ 27 ರಂದು ಕಾರವಾರ ರೈಲ್ವೇ ಸ್ಟೇಷನ್ ಬಳಿಯ ಕಡವಾಡ ಎಂಬಲ್ಲಿನ ಪಾಳು ಬಿದ್ದ ಮನೆಯೊಂದರ ಬಳಿ ಈತನ ದೇಹ ಪತ್ತೆಯಾಗಿದೆ. ಬೆಳಗ್ಗಿನ ಜಾವ ನಿಶಾಂತ್ ಇಲ್ಲಿ ಹಲ್ಲೆಗೊಳಗಾಗಿ ಗಾಯಗೊಂಡು ಒದ್ದಾಡುತ್ತಿದ್ದುದಾಗಿ ಹೇಳಲಾಗಿದ್ದು, ವಾಕಿಂಗ್ ತೆರಳುತ್ತಿದ್ದವರಾರೋ ಅಲ್ಲಿನ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಅಷ್ಟರಲ್ಲಿ ಈತ ಸಾವನ್ನಪ್ಪಿದ್ದಾನೆ. ಮೃತ ವ್ಯಕ್ತಿ ಯಾರೆಂದು ತಿಳಿಯದ ಹಿನ್ನೆಲೆಯಲ್ಲಿ ಜುಲೈ 5 ರ ತನಕ ಮೃತದೇಹ ಇರಿಸಿಕೊಂಡಿದ್ದ ಕಾರವಾರ ಪೊಲೀಸರು ಜುಲೈ 5 ರಂದು ಅಂತ್ಯಸಂಸ್ಕಾರ ನೆರವೇರಿಸಿದ್ದರು.
ವಾಟ್ಸಾಪ್ ಮಾಹಿತಿ
ನಿಶಾಂತ್ನ ತಂದೆ ಉಮೇಶ್ ಅವರ ಚಿಕ್ಕಪ್ಪ ವೀರಾಜಪೇಟೆಯಲ್ಲಿ ಪೊಲೀಸ್ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದು, ಅವರಿಗೆ ವಾಟ್ಸಾಪ್ ಮೂಲಕ ಬಂದ ಸಂದೇಶದ ಆಧಾರದಲ್ಲಿ ಜುಲೈ 7 ರಂದು ಕಾರವಾರದಲ್ಲಿ ಪತ್ತೆಯಾಗಿದ್ದ ಅಪರಿಚಿತ ಶವ ನಿಶಾಂತ್ನದ್ದು ಎಂದು ಅರಿವಾಗಿದ್ದು, ಪೋಷಕರಿಗೆ ವಿಚಾರ ತಿಳಿದು ಬಂದಿದೆ. ಬಳಿಕ ಇವರು ಕಾರವಾರ ತಲುಪಿ ಅಲ್ಲಿ ಕಾನೂನಿನ ಪಾಲನೆಯೊಂದಿಗೆ ಹೂತಿದ್ದ ಮೃತದೇಹವನ್ನು ಹೊರ ತೆಗೆದು ಜುಲೈ 8 ರಂದು ಕಾನೂರಿಗೆ ತಂದು ಇಲ್ಲಿ ಅಂತ್ಯಸಂಸ್ಕಾರ ನೆರವೇರಿಸಲಾಗಿದೆ. ಮಂಗಳೂರು, ಕಾರವಾರದಲ್ಲಿ ನಡೆದ ಪ್ರಕರಣ ಇದಾಗಿದ್ದರಿಂದ ಕೊಡಗಿನಲ್ಲಿ ಇದು ಸುದ್ದಿಯಾಗಿರಲಿಲ್ಲ.
ತಮ್ಮ ಪುತ್ರ ಪ್ರತಿಭಾವಂತನಾಗಿದ್ದು, ಉತ್ತಮ ನಡತೆ ಹೊಂದಿದ್ದ. ಯಾರೂ ಶತ್ರುಗಳಿರಲಿಲ್ಲ. ಬೆಂಗಳೂರಿನಿಂದ ಜೂನ್ 8 ರಂದು ರೈಲು ಹತ್ತಿದ ಬಳಿಕ ಏನೋ ನಡೆದಿದೆ. ಪುತ್ರ ಹಲ್ಲೆಗೊಳಗಾಗಿದ್ದ ಸನ್ನಿವೇಶ ಗಮನಿಸಿದರೆ ಇದು ಭೀಕರ ಹತ್ಯೆಯಾಗಿದೆ. ಈ ಬಗ್ಗೆ ಈಗಾಗಲೇ ಪೊಲೀಸರಿಗೆ ದೂರು ನೀಡಲಾಗಿದ್ದು, ಪೊಲೀಸರ ತನಿಖೆಯಿಂದ ಸತ್ಯಾಂಶ ತಿಳಿದು ಬರಬೇಕಿದೆ. ಯಾವದೋ ಹುನ್ನಾರಕ್ಕೆ ಪುತ್ರನನ್ನು ಕಳೆದುಕೊಂಡಿರುವದಾಗಿ ನಿಶಾಂತ್ನ ತಂದೆ ಉಮೇಶ್ ನೋವು ತೋಡಿಕೊಂಡರು. ಕಾರವಾರ ಪೊಲೀಸರು ಪ್ರಕರಣದ ತನಿಖೆ ನಡೆಸುತ್ತಿದ್ದಾರೆ.