ಮಡಿಕೇರಿ, ಜು. 13: ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ (ಕೆಪಿಸಿಸಿ) ಉಪಾಧ್ಯಕ್ಷರುಗಳಲ್ಲಿ ಒಬ್ಬರಾಗಿ ಕೊಡಗು ಕಾಂಗ್ರೆಸ್‍ನ ಪ್ರಮುಖರಾದ ಹಿರಿಯ ಕಾಂಗ್ರೆಸ್ಸಿಗ ಬೊಟ್ಟೋಳಂಡ ಜಿ. ಮಿಟ್ಟು ಚಂಗಪ್ಪ ಅವರನ್ನು ನೇಮಕ ಮಾಡಿ ಅಖಿಲ ಭಾರತ ಕಾಂಗ್ರೆಸ್ ಸಮಿತಿ (ಎಐಸಿಸಿ) ಆದೇಶ ಹೊರಡಿಸಿದೆ. ಕೆಪಿಸಿಸಿ ಉಪಾಧ್ಯಕ್ಷರುಗಳಾಗಿ ರಾಜ್ಯದ 17 ಮಂದಿಯನ್ನು ಎಐಸಿಸಿ ನೇಮಕ ಮಾಡಿದ್ದು, ಇವರಲ್ಲಿ ಮಿಟ್ಟು ಚಂಗಪ್ಪ ಒಬ್ಬರಾಗಿದ್ದಾರೆ.

ಈ ಹಿಂದೆ ಎಐಸಿಸಿ ಸದಸ್ಯರಾಗಿ 14ವರ್ಷ, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿಯಾಗಿ 14 ವರ್ಷ ಕೊಡಗು ಜಿಲ್ಲಾ ಕಾಂಗ್ರೆಸ್‍ನ ಖಜಾಂಚಿಯಾಗಿ 20 ವರ್ಷ ಇವರು ಕರ್ತವ್ಯ ನಿರ್ವಹಿಸಿದ್ದಾರೆ.

‘ಶಕ್ತಿ’ಯೊಂದಿಗೆ ಪ್ರತಿಕ್ರಿಯಿಸಿರುವ ಮಿಟ್ಟು ಚಂಗಪ್ಪ ಅವರು ಪಕ್ಷ ಮತ್ತೊಮ್ಮೆ ಜವಾಬ್ದಾರಿ ನೀಡಿದ್ದು, ಜಿಲ್ಲೆಯ ಎರಡು ಕ್ಷೇತ್ರಗಳಲ್ಲಿ ಗೆಲುವು ಸಾಧಿಸಲು ಪ್ರಯತ್ನಿಸಲಾಗುವದು. ರಾಜ್ಯದ ನಾಯಕರು ಸಹಕಾರ ನೀಡುತ್ತಿದ್ದಾರೆ ಎಂದರು. ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾಗಿ ಮಿಟ್ಟು ಚಂಗಪ್ಪ ಆಯ್ಕೆ ಖಚಿತವೆನಿಸಿದ್ದರೂ ಅವರೇ

(ಮೊದಲ ಪುಟದಿಂದ) ಇದಕ್ಕೆ ಹಿಂದೇಟು ಹಾಕಿದ್ದರು. ಇದೀಗ ಜಿಲ್ಲಾ ಕಾಂಗ್ರೆಸ್‍ಗೆ ಯುವ ಅಧ್ಯಕ್ಷರನ್ನು ನೇಮಿಸಲಾಗಿದೆ. ಈ ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸಿದ ಮಿಟ್ಟು, ಯುವ ಅಧ್ಯಕ್ಷ ಶಿವು ಮಾದಪ್ಪ ಅವರಿಗೆ ಪೂರ್ಣ ಸಹಕಾರ ನೀಡಲಾಗುವದು. ಈ ಮೂಲಕ ಪಕ್ಷ ಸಂಘಟನೆಯನ್ನೂ ಮಾಡಬೇಕಿದೆ.

ಪಕ್ಷಕ್ಕೆ ಯುವಕರನ್ನು ಅಧ್ಯಕ್ಷರನ್ನಾಗಿ ಮಾಡಿರಬಹುದು. ಆದರೆ ಕಾಂಗ್ರೆಸ್ ಪಕ್ಷದಲ್ಲಿ ಸಾಕಷ್ಟು ಹಿರಿಯರು ಇದ್ದಾರೆ ಇವರೆಲ್ಲರನ್ನೂ ನೂತನ ಅಧ್ಯಕ್ಷರು ವಿಶ್ವಾಸಕ್ಕೆ ತೆಗೆದುಕೊಳ್ಳಬೇಕು. ಅಲ್ಲದೆ ಕೆಲವು ಸಮಯ ಜಿಲ್ಲಾ ಕೇಂದ್ರದಲ್ಲೂ ಅವರು ಲಭ್ಯರಾಗಬೇಕಿದ್ದು, ಈ ಕುರಿತು ಸಲಹೆ ನೀಡುವದಾಗಿ ತಿಳಿಸಿದರು. ಕೆಪಿಸಿಸಿ ಅಧ್ಯಕ್ಷ ಡಾ. ಪರಮೇಶ್ವರ್ ಸೇರಿದಂತೆ ಇತರ ನಾಯಕರು ಚರ್ಚಿಸಿರುವದಾಗಿ ಅವರು ಹೇಳಿದರು.

ಕಾರ್ಯದರ್ಶಿಗಳು

ಕೆಪಿಸಿಸಿ ಪ್ರಧಾನ ಕಾರ್ಯದರ್ಶಿಯಾಗಿ ಕೊಡಗಿನವರಾದ ಮಾಜಿ ಶಾಸಕ ಕೆ.ಎಂ. ಇಬ್ರಾಹಿಂ . ಬಿ.ಎ. ಹಸನಬ್ಬ ಹಾಗೂ ಕಾರ್ಯದರ್ಶಿಗಳಾಗಿ ಮಾಜಿ ಎಂಎಲ್‍ಸಿ ಸಿ.ಎಸ್. ಅರುಣ್‍ಮಾಚಯ್ಯ ಹಾಗೂ ಮೆಹರೋಜ್‍ಖಾನ್ ಅವರುಗಳನ್ನು ನೇಮಕ ಮಾಡಲಾಗಿದೆ.