ಮಡಿಕೇರಿ, ಜು. 13: ಕೊಡಗು ಜಿಲ್ಲೆಯಲ್ಲಿ ಕರ್ತವ್ಯ ನಿರ್ವಹಿಸಿದ ಅವಧಿಯಲ್ಲಿ ತಮಗೆ ಉತ್ತಮ ಅನುಭವದೊಂದಿಗೆ ವೃತ್ತಿಗೆ ಸಂಬಂಧಿಸಿದಂತೆ ಕಲಿಯಲು ಸಾಕಷ್ಟು ಅವಕಾಶ ದೊರೆತಿರುವದಾಗಿ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿಯಾಗಿದ್ದು, ಇದೀಗ ಬಡ್ತಿಯೊಂದಿಗೆ ಬೆಂಗಳೂರಿಗೆ ವರ್ಗವಾಗುತ್ತಿರುವ ಚಾರುಲತಾ ಸೋಮಲ್ ಅವರು ಅನಿಸಿಕೆ ವ್ಯಕ್ತಪಡಿಸಿದರು.

ಬೆಂಗಳೂರಿನ ಮುಖ್ಯಮಂತ್ರಿಗಳ ಸೆಕ್ರೆಟೇರಿಯೇಟ್ ಕಚೇರಿಯ ಉಪ ಕಾರ್ಯದರ್ಶಿಯಾಗಿ ನಿಯುಕ್ತಿಗೊಳ್ಳುತ್ತಿರುವ ಚಾರುಲತಾ ಸೋಮಲ್ ‘ಶಕ್ತಿ'ಗೆ ನೀಡಿದ ಸಂದರ್ಶನದಲ್ಲಿ ಜಿಲ್ಲೆಯ ಕುರಿತು ಅನುಭವ ಹಂಚಿಕೊಂಡರು. ತಮ್ಮ ಸೇವಾವಧಿಯಲ್ಲಿ ಸ್ಥಳೀಯ ಜನತೆ, ಜನಪ್ರತಿನಿಧಿಗಳು, ಸಿಬ್ಬಂದಿಗಳು ಹೀಗೆ ಎಲ್ಲರ ಸಹಕಾರ ದೊರೆತಿದೆ. ವಿವಿಧ ಇಲಾಖೆಗಳಿಗೆ ಸಂಬಂಧಿಸಿದಂತೆ ಏನೇನು ಆಗಬೇಕು, ಮುಂದೆ ಹೇಗೆ ಕೆಲಸ ನಿರ್ವಹಿಸಬೇಕು ಎಂಬ ಅನುಭವವಾಗಿದೆ. ಇದು ತಮ್ಮ ಮುಂದಿನ ಕರ್ತವ್ಯಕ್ಕೆ ನೆರವಾಗಲಿದೆ. ಎಲ್ಲಾ ಕ್ಷೇತ್ರಗಳಲ್ಲೂ ಸವಾಲು ಇರುತ್ತದೆ. ಕೊಡಗು ಭೌಗೋಳಿಕವಾಗಿ ಸ್ವಲ್ಪಮಟ್ಟಿಗೆ ‘ಚ್ಯಾಲೆಂಜಿಂಗ್' ಆಗಿದ್ದರೂ ಇದಕ್ಕೆ ತಕ್ಕಂತೆ ಕೆಲಸ ನಿರ್ವಹಿಸಲು, ಯೋಜನೆಗಳ ಅನುಷ್ಠಾನಕ್ಕೆ ಪ್ರಯತ್ನಿಸಲಾಗಿದೆ. ಕೆಲವು ಕ್ಷೇತ್ರಗಳಿಗೆ ಸಂಬಂಧಿಸಿದಂತೆ ಸಾಕಷ್ಟು ಪ್ರಗತಿ ಸಾಧಿಸಲಾಗಿದೆ. ಇನ್ನು ಹಲವಾರು ಕೆಲಸ - ಕಾರ್ಯಗಳನ್ನು ಅನುಷ್ಠಾನಗೊಳಿಸಲು ಬಾಕಿ ಇತ್ತು. ಮುಂದೆಯೂ ಉತ್ತಮ ಅಧಿಕಾರಿಗಳು ಜಿಲ್ಲೆಗೆ ಬರಲಿದ್ದು, ಈ ಕೆಲಸಗಳು ಪೂರ್ಣಗೊಳ್ಳಲಿವೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.ಸಾಹಸ ಪ್ರವೃತ್ತಿಯವರೂ, ಚಾರಣಪ್ರಿಯರೂ ಆಗಿದ್ದ ಚಾರುಲತಾ, ಕೊಡಗಿನ ನೈಸರ್ಗಿಕ ಪರಿಸರವನ್ನು ಸ್ಮರಿಸಿಕೊಂಡರು. ತಡಿಯಂಡಮೋಳ್, ಪುಷ್ಪಗಿರಿ, ಬ್ರಹ್ಮಗಿರಿ, ಮಾಕುಟ್ಟ, ಮಾಂದಲ್‍ಪಟ್ಟಿ ಸನಿಹ ಕೈಗೊಂಡ ಚಾರಣವನ್ನು ಅವರು ನೆನಪಿಸಿಕೊಂಡರು. ಯಾವ ಜಿಲ್ಲೆಯಾದರೂ ಅಲ್ಲಿಗೆ ಸಂಬಂಧಿಸಿದಂತೆ ಹಲವಾರು ಸಮಸ್ಯೆಗಳಿರುತ್ತವೆ. ನಿರಂತರ ಪ್ರಯತ್ನವಿದ್ದರೆ ಮುನ್ನಡೆಯಬಹುದು, ಪ್ರಯತ್ನವಿದ್ದರೆ ಒಂದು ಸೆಂಟಿಮೀಟರ್ ಆಗಲಿ, ಒಂದು ಮೀಟರ್ ಆಗಲಿ, ಒಂದು ಕಿ.ಮೀ. ಆಗಲಿ ಮುನ್ನಡೆ ಸಾಧಿಸಬಹುದು ಎಂದು ಹೇಳಿದ ಅವರು, ಯಾವದೇ ಅಧಿಕಾರಿಗಳು ಬಂದರೂ ಕೊಡಗಿನಲ್ಲಿ ಉತ್ತಮ ಅನುಭವ ಪಡೆಯಲಿದ್ದಾರೆ. ತಮಗಂತೂ ಇಲ್ಲಿ ಕರ್ತವ್ಯ ನಿರ್ವಹಿಸಿದಷ್ಟು ಸಮಯದಲ್ಲಿ ‘ಬ್ಯಾಡ್ ಎಕ್ಸ್‍ಪೀರಿಯನ್ಸ್’ ಎಂಬದು ಯಾವದೂ ಇಲ್ಲ. ಜಿಲ್ಲೆ ಹಾಗೂ ಜನರ ಬಗ್ಗೆ ಸದಭಿಪ್ರಾಯವೇ ಇರುವದಾಗಿ ನುಡಿದ ಚಾರುಲತಾ ಸ್ವಚ್ಛ ಭಾರತ್ ಯೋಜನೆಗೆ ಸಂಬಂಧಿಸಿದಂತೆ ಜಿಲ್ಲೆ ಸಾಕಷ್ಟು ಪ್ರಗತಿ ಕಂಡಿರುವದಾಗಿ ಹೇಳಿದರು. -ಶಶಿ.