ಪೊನ್ನಂಪೇಟೆ, ಜು. 13: ಕೊಡವ ಮುಸ್ಲಿಂ ಅಸೋಸಿಯೇಷನ್ (ಕೆ.ಎಂ.ಎ.) ವತಿಯಿಂದ ತಾ. 16 ರಂದು ವೀರಾಜಪೇಟೆಯಲ್ಲಿ ಸಂಸ್ಥೆಯ ಸದಸ್ಯರ ಮಕ್ಕಳಿಗೆ ವಿದ್ಯಾರ್ಥಿವೇತನ ಮತ್ತು ಪ್ರತಿಭಾ ಪುರಸ್ಕಾರ ವಿತರಣೆ ಮತ್ತು ಜನಾಂಗದ ಯುವ ಸಾಧಕರಿಗೆ ಸನ್ಮಾನ ಸಮಾರಂಭವನ್ನು ಆಯೋಜಿಸಲಾಗಿದೆ ಎಂದು ಕೆ.ಎಂ. ಎ. ಅಧ್ಯಕ್ಷ ದುದ್ದಿಯಂಡ ಹೆಚ್. ಸೂಫಿ ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಈ ಮಾಹಿತಿ ನೀಡಿದ ಅವರು, ತಾ. 16 ರಂದು ಬೆಳಿಗ್ಗೆ 10.30 ಗಂಟೆಗೆ ವೀರಾಜಪೇಟೆಯ ಮಹಿಳಾ ಸಮಾಜ ಸಭಾಂಗಣದಲ್ಲಿ ನಡೆಯುವ ಈ ಕಾರ್ಯಕ್ರಮವನ್ನು ಕೊಡವ ಮುಸ್ಲಿಂ ಅಸೋಸಿಯೇಷನ್‍ನ ಸ್ಥಾಪಕ ಅಧ್ಯಕ್ಷ ಕುವೇಂಡ ವೈ ಹಂಝತುಲ್ಲಾ ಅವರು ಉದ್ಘಾಟಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಹೆಚ್. ಕಾಂತರಾಜು, ವೀರಾಜಪೇಟೆ ಕ್ಷೇತ್ರದ ಶಾಸಕ ಕೆ.ಜಿ. ಬೋಪಯ್ಯ, ಮಾಜಿ ಶಿಕ್ಷಣ ಸಚಿವ ಬೆಂಗಳೂರಿನ ಬಿ.ಎ. ಮೊಹಿದೀನ್, ಸಿ.ಪಿ.ಐ.(ಎಂ) ಜಿಲ್ಲಾ ಕಾರ್ಯದರ್ಶಿ ಡಾ. ಐ.ಆರ್. ದುರ್ಗಾ ಪ್ರಸಾದ್, ಜೆ.ಡಿ.ಎಸ್. ಮುಖಂಡ ಮೇರಿಯಂಡ ಸಂಕೇತ್ ಪೂವಯ್ಯ ಮತ್ತಿತರರು ಭಾಗವಹಿಸಲಿದ್ದಾರೆ ಎಂದು ವಿವರಿಸಿದ ದುದ್ದಿಯಂಡ ಹೆಚ್. ಸೂಫಿ ಅವರು, ಸಮಾರಂಭದಲ್ಲಿ ವಿರಾಜಪೇಟೆಯ ಅನ್ವರುಲ್ ಹುದಾ ದಹ್‍ವಾ ಕಾಲೇಜಿನ ವಿದ್ಯಾರ್ಥಿ ಪೊಳಂಗೋಟಂಡ ಸಮೀಜ್ ಅವರು ದಿಕ್ಸೂಚಿ ಭಾಷಣ ಮಾಡಲಿದ್ದಾರೆ ಎಂದು ವಿವರಣೆ ನೀಡಿದರು.
ಇತ್ತೀಚೆಗೆ ಪ್ರಕಟಗೊಂಡ ಕೆ.ಪಿ.ಎಸ್.ಸಿ. ಪರೀಕ್ಷೆ ಫಲಿತಾಂಶದಲ್ಲಿ ತಹಶೀಲ್ದಾರರಾಗಿ ಆಯ್ಕೆಗೊಂಡಿರುವ ಜಿಲ್ಲೆಯ ಕುಂಞÂ ಅಹಮ್ಮದ್ ಅವರನ್ನು ಸಂಸ್ಥೆಯ ಪರವಾಗಿ ವಿಶೇಷವಾಗಿ ಸನ್ಮಾನಿಸಿ ಗೌರವಿಸಲಾಗುವದು. ಅಲ್ಲದೆ ಪ್ರತಿಷ್ಠಿತ ಯಷ್ ಬ್ಯಾಂಕಿನ ಉಪಾಧ್ಯಕ್ಷರಾಗಿ ನೇಮಕಗೊಂಡಿರುವ ಕೊಡಗಿನ ಎಡಪಾಲದವರಾದ ಕುಪ್ಪೋಡಂಡ ಎ. ಅಶ್ರಫ್ ಮತ್ತು ಭಾರತೀಯ ಕ್ರೀಡಾ ಪ್ರಾಧಿಕಾರ ತಂಡದ ರಾಷ್ಟ್ರೀಯ ಹಾಕಿ ಯುವ ಆಟಗಾರ ಕುಂಜಿಲದ ವಯಕೋಲಂಡ ಫಹದ್ ಅವರನ್ನು ‘ಯುವ ಸಾಧಕ’ರೆಂದು ಪರಿಗಣಿಸಿ ಜನಾಂಗದ ಪರವಾಗಿ ಸನ್ಮಾನಿಸಲಾಗುವದು ಎಂದು ಹೇಳಿದ ದುದ್ದಿಯಂಡ ಹೆಚ್. ಸೂಫಿ , ಈ ಬಾರಿ ಜನಾಂಗದ 30 ಪ್ರತಿಭಾವಂತ ವಿದ್ಯಾರ್ಥಿಗಳಿಗೆ ತಲಾ ರೂ. 10 ಸಾವಿರದಂತೆ ಒಟ್ಟು 3 ಲಕ್ಷ ಮೊತ್ತದ ವಿದ್ಯಾರ್ಥಿ ವೇತನ ವಿತರಿಸಲಾಗುವದು. ಅಲ್ಲದೇ ಕಳೆದ ಶೈಕ್ಷಣಿಕ ಸಾಲಿನಲ್ಲಿ ಎಸ್.ಎಸ್. ಎಲ್.ಸಿ. ಮತ್ತು ಪಿ.ಯು.ಸಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಪಡೆದ ತಲಾ 10 ವಿದ್ಯಾರ್ಥಿಗಳಿಗೆ ಹಾಗೂ ಮದರಸಾ ಪರೀಕ್ಷೆಯಲ್ಲಿ ಅತ್ಯಧಿಕ ಅಂಕ ಪಡೆದು ತೇರ್ಗಡೆ ಹೊಂದಿರುವ ಇಬ್ಬರು ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಉತ್ತೇಜಿಸಲಾಗುತ್ತಿದೆ ಎಂದು ತಿಳಿಸಿದರಲ್ಲದೆ, ಪ್ರಸಕ್ತ ಸಾಲಿನಿಂದ ಸಂಸ್ಥೆಯ ಸದಸ್ಯರ ಮಕ್ಕಳಿಗೆ ಮಾತ್ರ ವಿದ್ಯಾರ್ಥಿ ವೇತನ ಮತ್ತು ಪ್ರತಿಭಾ ಪುರಸ್ಕಾರವನ್ನು ನೀಡಲು ಉದ್ದೇಶಿಸಲಾಗಿದೆ ಎಂದು ಹೇಳಿದರು. ಕಳೆದ ಮೂರು ವರ್ಷಗಳಿಂದ ಪ್ರತಿಭಾ ಪುರಸ್ಕಾರ ಮತ್ತು ಕಳೆದ 2 ವರ್ಷಗಳಿಂದ ಆರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನವನ್ನು ನೀಡುತ್ತಿದ್ದು, ಮುಂದೆ ಇದನ್ನು ಮತ್ತಷ್ಟು ವಿಸ್ತರಿಸುವದಾಗಿ ಹೇಳಿದರು.
ಗೋಷ್ಠಿಯಲ್ಲಿ ಸಂಸ್ಥೆಯ ಹಿರಿಯ ಉಪಾಧ್ಯಕ್ಷ ಆಲೀರ ಎ. ಅಹಮ್ಮದ್ ಹಾಜಿ, ಉಪಾಧ್ಯಕ್ಷ ಡಾ. ಜೊಯಿಪೆರ ಕುಂಞÂ ಅಬ್ದುಲ್ಲಾ, ಸಂಸ್ಥೆಯ ಸದಸ್ಯತ್ವ ಅಭಿಯಾನ ಉಪ ಸಮಿತಿ ಅಧ್ಯಕ್ಷ ಚಿಮ್ಮಿಚ್ಚಿರ ಕೆ. ಇಬ್ರಾಹಿಂ (ಉಮ್ಣಿ), ಜಂಟಿ ಕಾರ್ಯದರ್ಶಿ ಕರ್ತರೆರ ಕೆ. ಮುಸ್ತಾಫ, ಸಹ ಕಾರ್ಯದರ್ಶಿ ಮಂಡೇಂಡ ಎ. ಮೊಯ್ದು ಉಪಸ್ಥಿತರಿದ್ದರು.