ಮಡಿಕೇರಿ, ಜು. 14: ನಗರಸಭೆಯ ಆವರಣದಲ್ಲಿ ಅಳವಡಿಸಿ ರುವ ಪ್ರೊಜೆಕ್ಟರ್‍ನಲ್ಲಿ ಯಾವದೇ ರೀತಿಯ ಅಶ್ಲೀಲ ಚಿತ್ರಗಳು ಪ್ರದರ್ಶನವಾಗಿಲ್ಲ ಎಂದು ನಗರಸಭಾಧ್ಯಕ್ಷೆ ಕಾವೇರಮ್ಮ ಸೋಮಣ್ಣ ಸ್ಪಷ್ಟಪಡಿಸಿದ್ದಾರೆ ಅಧ್ಯಕ್ಷರ ಕಚೇರಿಯಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ನಗರಸಭೆಯ ವಿವಿಧ ಯೋಜನೆಗಳು, ಅಗತ್ಯ ದಾಖಲಾತಿಗಳಂತಹ ಮಾಹಿತಿಯನ್ನು ಸಾರ್ವಜನಿಕವಾಗಿ ತಿಳಿಯಪಡಿಸಲು ಆವರಣದಲ್ಲಿ ಅಳವಡಿಸಿರುವ ಎಲ್‍ಇಡಿ ಪರದೆಯಲ್ಲಿ ತೋರಿಸಲಾಗುತ್ತದೆ. ಈ ಮಾಹಿತಿಗಳು ವೈಫೈ ಇಂಟರ್‍ನೆಟ್‍ನಲ್ಲಿ ತಿತಿತಿ.mಡಿಛಿ.gov.iಟಿ ವೆಬ್‍ಸೈಟ್ ಮೂಲಕ ಬೆಂಗಳೂರು ಕೇಂದ್ರವಾಗಿಟ್ಟುಕೊಂಡು ಪ್ರಸಾರವಾಗುತ್ತದೆ. ಎಲ್‍ಇಡಿಗೆ ಯಾವದೇ ಸಿ.ಡಿ., ಪೆನ್‍ಡ್ರೈವ್ ಅಥವಾ ಕಂಪ್ಯೂಟರ್ ಕನೆಕ್ಷನ್ ಇಲ್ಲ. ವೈಫೈ ಪಾಸ್‍ವರ್ಡ್ ನಗರಸಭೆಯ ಎಲ್ಲಾ ಸದಸ್ಯರು, ಸಿಬ್ಬಂದಿಗಳು ಹಾಗೂ ನಗರಸಭೆಯ ವಾಹನ ಚಾಲಕರಲ್ಲಿಯೂ ಇದ್ದು, ಅವರೆಲ್ಲರೂ ನಗರಸಭೆಯ ವೈಫೈಯನ್ನು ಉಪಯೋಗಿಸುತ್ತಿದ್ದಾರೆ. ಎಲ್‍ಇಡಿಯಲ್ಲಿ ಯಾವದೇ ಅಶ್ಲೀಲ ಚಿತ್ರ ಪ್ರಸಾರವಾಗಿಲ್ಲ ಎಂದು ಹೇಳಿದರು.

ನಗರದಲ್ಲಿ ಸುದ್ದಿವಾಹಿನಿಯಲ್ಲಿ ಪ್ರಸಾರವಾದ ಬಳಿಕ ತನಗೆ ಮಾಹಿತಿ ದೊರೆತಿದ್ದು,

(ಮೊದಲ ಪುಟದಿಂದ) ನಗರ ಸ್ಥಾಯಿ ಸಮಿತಿ ಅಧ್ಯಕ್ಷರು ದುರುದ್ದೇಶದಿಂದ ತನ್ನ ವಿರುದ್ಧ ಆರೋಪ ಹೊರಿಸಿ ತನಗೆ ಆಡಳಿತ ನಡೆಸಲು ಬರುತ್ತಿಲ್ಲ ಎಂದು ಹೇಳಿ ತನ್ನ ರಾಜೀನಾಮೆಗೆ ಆಗ್ರಹಿಸಿದ್ದಾರೆ. ಸುದ್ದಿವಾಹಿನಿಗೆ ಮಾಹಿತಿ ನೀಡುವ ಮೊದಲು ಸ್ಥಾಯಿ ಸಮಿತಿ ಅಧ್ಯಕ್ಷರು ತನ್ನ ಗಮನಕ್ಕೆ ತರಬಹುದಿತ್ತು. ಬಳಿಕ ತನಿಖೆಗೆ ಆಗ್ರಹಿಸಬಹುದಿತ್ತು. ವಾಹಿನಿ ಮೂಲಕ ಹೇಳಿಕೆ ನೀಡಿದ್ದು ಸರಿಯಲ್ಲ. ನಗರಸಭೆ ಈ ಮಟ್ಟಕ್ಕೆ ಹೋಗಲು ಅವರೇ ಕಾರಣವಾಗಿದ್ದಾರೆ ಎಂದು ಆರೋಪಿಸಿದರು.

ತನ್ನ ವಿರುದ್ಧ ಅವಮಾನಕಾರಿ ಹೇಳಿಕೆ ನೀಡಿರುವ ನಗರಸ್ಥಾಯಿ ಸಮಿತಿ ಅಧ್ಯಕ್ಷರ ವಿರುದ್ಧ ತಾನೂ ಅದೇ ಧಾಟಿಯಲ್ಲಿ ಮಾತನಾಡಿದರೆ ಏನು ಆಗಬಹುದು ಎಂದು ಪ್ರಶ್ನಿಸಿದ ನಗರಸಭಾ ಅಧ್ಯಕ್ಷರು ಪ್ರಕರಣದ ಬಗ್ಗೆ ಸಂಪೂರ್ಣ ತನಿಖೆಗೆ ಜಿಲ್ಲಾಧಿಕಾರಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ತಿಳಿಸಿದ್ದೇನೆ. ತನಿಖಾಧಿಕಾರಿಗಳು ಎಲ್ಲರನ್ನೂ ವಿಚಾರಣೆ ಮಾಡಿದ್ದಾರೆ. ತಪ್ಪು ನಡೆದಿದ್ದರೆ ತಪ್ಪಿತಸ್ಥರಿಗೆ ಶಿಕ್ಷೆಯಾಗಲಿದೆ ಎಂದು ಹೇಳಿದರು.

ನಗರಸಭಾ ಸದಸ್ಯ ಹೆಚ್.ಎಂ. ನಂದಕುಮಾರ್ ಮಾತನಾಡಿ, ಐಟಿ ಅಧಿಕಾರಿ ಸಂಧ್ಯಾ ಅವರನ್ನು ನಗರಸಭೆಯಿಂದ ತೆಗೆದುಹಾಕಲು ಕಳೆದ ಒಂದು ವರ್ಷಗಳಿಂದ ನಗರ ಸ್ಥಾಯಿ ಸಮಿತಿ ಅಧ್ಯಕ್ಷರು ಪ್ರಯತ್ನಿಸುತ್ತಿದ್ದಾರೆ. ಅಧಿಕಾರಿ ಸಂಧ್ಯಾ ಅವ್ಯವಹಾರಕ್ಕೆ ಸಹಕಾರ ನೀಡುತ್ತಿಲ್ಲ ಅನ್ನುವ ದುರುದ್ದೇಶದಿಂದ ಕೆ.ಎಸ್. ರಮೇಶ್ ಮತ್ತು ನಗರಸಭಾ ಉಪಾಧ್ಯಕ್ಷ ಟಿ.ಎಸ್. ಪ್ರಕಾಶ್ ಅಪಪ್ರಚಾರ ಮತ್ತು ದುರುದ್ದೇಶದಿಂದಾಗಿ ಆರೋಪ ಹೊರಿಸುತ್ತಿದ್ದಾರೆ ಎಂದು ಆರೋಪಿಸಿದರು. ಅಶ್ಲೀಲ ಚಿತ್ರ ಪ್ರಸಾರದ ಪ್ರಕರಣಕ್ಕೆ ಸಂಬಂಧಿಸಿದಂತೆ ಸೈಬರ್ ಕ್ರೈಂ ಪ್ರಕರಣ ದಾಖಲಿಸಿಕೊಂಡಿದೆ. 15 ದಿನದಲ್ಲಿ ವರದಿ ಬರುತ್ತದೆ. ಬಳಿಕ ವಕೀಲರೊಂದಿಗೆ ಚರ್ಚಿಸಿ ಕ್ರಿಮಿನಲ್ ಪ್ರಕರಣ ದಾಖಲಿಸಲಾಗುವದು ಎಂದು ಹೇಳಿದರು.

ಈ ಸಂದರ್ಭ ಅಧಿಕಾರಿ ರಮೇಶ್ ಅವರನ್ನು ಅಧ್ಯಕ್ಷರು ಕರೆಯಿಸಿ ಪ್ರಕರಣಕ್ಕೆ ಸಂಬಂಧಿಸಿದಂತೆ ವಿವರಣೆ ನೀಡುವಂತೆ ಕೇಳಿದಾಗ, ನಗರಸಭೆಯ ಮಾಹಿತಿಗೆ ಸಂಬಂಧಿಸಿದಲ್ಲದೆ ಬೇರೆ ಏನೋ ಪ್ರಸಾರವಾದಾಗ ಮೊಬೈಲ್‍ನಲ್ಲಿ ಚಿತ್ರ ತೆಗೆದಿದ್ದೇನೆ. ಆದರೆ ಅದು ಅಶ್ಲೀಲ ಚಿತ್ರವಲ್ಲ. ಸಭ್ಯತೆಯ ಚಿತ್ರವಿತ್ತು ಎಂದು ಸಮರ್ಥಿಸಿಕೊಂಡರು.