ಸಿದ್ದಾಪುರ, ಜು. 14: ಕಸದ ವಿಲೇವಾರಿಗೆ ಶಾಶ್ವತ ಜಾಗ ಒದಗಿಸಿಕೊಡಬೇಕೆಂದು ಒತ್ತಾಯಿಸಿ ತಾ. 17 ರಂದು ನೆಲ್ಯಹುದಿಕೇರಿ ಬಂದ್‍ಗೆ ಕರೆ ನೀಡಲಾಗಿದೆ ಎಂದು ಗ್ರಾಮಸ್ಥರು ತಿಳಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕಾರ್ಮಿಕ ಮುಖಂಡ ಪಿ.ಆರ್ ಭರತ್, ಕಳೆದ 15 ವರ್ಷಗಳಿಂದ ನೆಲ್ಯಹುದಿಕೇರಿ ಭಾಗದಲ್ಲಿ ಕಸದ ವಿಲೇವಾರಿ ಸಮಸ್ಯೆ ಇದ್ದು, ಸಾಕಷ್ಟು ಪೈಸಾರಿ ಜಾಗವಿದ್ದರೂ ಕಂದಾಯ ಇಲಾಖೆ ಹಾಗೂ ಜಿಲ್ಲಾಡಳಿತ ಕಸ ಸಮಸ್ಯೆಯನ್ನು ಬಗೆಹರಿಸುವಲ್ಲಿ ನಿರ್ಲಕ್ಷ್ಯ ವಹಿಸುತ್ತಿದೆ ಎಂದು ಆರೋಪಿಸಿದರು. ಈಗಾಗಲೇ ನೆಲ್ಯಹುದಿಕೇರಿ ಭಾಗದಲ್ಲಿ ಸಾಂಕ್ರಾಮಿಕ ರೋಗಗಳು ಹರಡುತ್ತಿದ್ದು, ಜನರು ಭಯಭೀತರಾಗಿದ್ದಾರೆ. ಕಸ ವಿಲೇವಾರಿಗೆ ಶಾಶ್ವತ ಜಾಗ ನೀಡಬೇಕೆಂದು ಒತ್ತಾಯಿಸಿ ಹಲವಾರು ಹೋರಾಟಗಳು ನಡೆದಿದ್ದರೂ, ಜಿಲ್ಲಾಡಳಿತ ಯಾವದೇ ಕ್ರಮ ಕೈಗೊಳ್ಳದೆ ಕುರುಡುತನ ಪ್ರದರ್ಶಿಸುತ್ತಿದೆ ಎಂದು ಆರೋಪಿಸಿದರು.

ಜಿ.ಪಂ. ಸದಸ್ಯೆ ಸುನಿತಾ ಮಂಜುನಾಥ್ ಮಾತನಾಡಿ, ನೆಲ್ಯಹುದಿಕೇರಿ ಕಸ ಸಮಸ್ಯೆ ಬಗ್ಗೆ ಜಿ.ಪಂ. ಸಭೆಗಳಲ್ಲಿ ಪ್ರಸ್ತಾಪಿಸಲಾಗಿದೆ. ಜಿಲ್ಲಾಧಿಕಾರಿಗಳಿಗೂ ಸಮಸ್ಯೆಯ ಬಗ್ಗೆ ಮನವಿ ಸಲ್ಲಿಸಲಾಗಿದ್ದು, 15 ದಿನಗಳಲ್ಲಿ ಕ್ರಮ ಕೈಗೊಳ್ಳುವ ಬಗ್ಗೆ ಜಿಲ್ಲಾಧಿಕಾರಿಗಳು ಭರವಸೆ ನೀಡಿದ್ದರು. ಬಳಿಕ ಯಾವದೇ ಕ್ರಮ ಕೈಗೊಳ್ಳದ ಕಾರಣ ತಾ. 17 ರಂದು ನೆಲ್ಯಹುದಿಕೇರಿ ಬಂದ್‍ಗೆ ಕರೆ ನೀಡಲಾಗಿದೆ ಎಂದರು. ಬಂದ್ ಬಳಿಕವೂ ಸಮಸ್ಯೆ ಬಗೆಹರಿಯದಿದ್ದಲ್ಲಿ ಜನಪ್ರತಿನಿಧಿಗಳು ಸಾಮೂಹಿಕ ರಾಜೀನಾಮೆ ನೀಡುತ್ತೇವೆ ಎಂದು ತಿಳಿಸಿದರು.

ಗ್ರಾಮಸ್ಥ ಹೊಸಮನೆ ವಸಂತ್‍ಕುಮಾರ್ ಮಾತನಾಡಿ, ಹಲವಾರು ವರ್ಷಗಳಿಂದ ಕಸ ವಿಲೇವಾರಿ ಸಮಸ್ಯೆ ಇದ್ದು, ಹಲವಾರು ಹೋರಾಟಗಳು ನಡೆದಿವೆ. ಪೈಸಾರಿ ಜಾಗಗಳು ಕೂಡ ಈ ಭಾಗದಲ್ಲಿದ್ದು, ಕಂದಾಯ ಇಲಾಖೆ ನಿರ್ಲಕ್ಷ್ಯ ವಹಿಸುತ್ತಿದೆ. ಜಿಲ್ಲಾಧಿಕಾರಿಗಳು ಮನಸು ಮಾಡಿದರೆ ಒಂದೇ ದಿನದಲ್ಲಿ ಜಾಗ ನೀಡಬಹುದು ಎಂದರು.

ಗ್ರಾ.ಪಂ. ಸದಸ್ಯ ಎ.ಕೆ. ಹಕೀಂ ಮಾತನಾಡಿ, ಗ್ರಾ.ಪಂ ವತಿಯಿಂದ ಈ ಹಿಂದೆ ಜಿಲ್ಲಾಡಳಿತ ಹಾಗೂ ಕಂದಾಯ ಇಲಾಖೆಗೆ ಮನವಿ ಮಾಡಲಾಗಿದ್ದರೂ ಸೂಕ್ತ ರೀತಿಯಲ್ಲಿ ಸ್ಪಂದಿಸಲಿಲ್ಲ. ಹೀಗಾಗಿ ತಾ. 17 ರಂದು ಬಂದ್‍ಗೆ ಕರೆ ನೀಡಲಾಗಿದೆ. ಅಂದು ಬೆಳಗ್ಗೆ 7 ಗಂಟೆಯಿಂದ ಸಂಜೆ 6 ಗಂಟೆಯವರೆಗೆ ಉಪವಾಸ ಸತ್ಯಾಗ್ರಹ ನಡೆಯಲಿದೆ ಎಂದರು.

ಗೋಷ್ಠಿಯಲ್ಲಿ ಗ್ರಾ.ಪಂ ಅಧ್ಯಕ್ಷೆ ಪದ್ಮಾವತಿ, ಉಪಾಧ್ಯಕ್ಷೆ ಸಫಿಯಾ, ತಾ.ಪಂ ಸದಸ್ಯೆ ಸುಹದಾ ಅಶ್ರಫ್, ಮಹಿಳಾ ಸಂಘದ ಪ್ರಮುಖರಾದ ಗ್ರೇಸಿ ಮಣಿ, ಪ್ರಮೀಳ, ಗ್ರಾಮಸ್ಥರಾದ ಓ.ಎಂ ಮುಸ್ತಫ, ಆಲಿ ಇದ್ದರು.

ಸಭೆಯಲ್ಲಿ ತೀರ್ಮಾನ

ನೆಲ್ಯಹುದಿಕೇರಿ ಗ್ರಾಮದ ಕಸ ವಿಲೇವಾರಿ ಸಮಸ್ಯೆಯ ಬಗ್ಗೆ ಈ ಹಿಂದೆ ಜಿಲ್ಲಾಧಿಕಾರಿಗಳಿಗೆ ಜನಪ್ರತಿನಿಧಿಗಳು ತೆರಳಿ ಮನವಿ ನೀಡಿದ್ದ ಸಂದರ್ಭ 15 ದಿನಗಳ ಒಳಗೆ ಸಮಸ್ಯೆ ಬಗೆಹರಿಸುವದಾಗಿ ಜಿಲ್ಲಾಧಿಕಾರಿಗಳು ಆಶ್ವಾಸನೆ ನೀಡಿದ್ದರು. ಆದರೇ 15 ದಿನಗಳು ಕಳೆದರೂ ಯಾವದೇ ಕ್ರಮ ಕೈಗೊಳ್ಳದ ಕಾರಣ ನೆಲ್ಯಹುದಿಕೇರಿ ಗ್ರಾ.ಪಂ. ಸಭಾಂಗಣದಲ್ಲಿ ಗ್ರಾಮಸ್ಥರು ಹಾಗೂ ಜನಪ್ರತಿನಿಧಿಗಳ ಸಭೆ ಕರೆಯಲಾಗಿತ್ತು. ಸಭೆಯಲ್ಲಿ ಭಾಗವಹಿಸಿದ ಗ್ರಾಮಸ್ಥರು ಜಿಲ್ಲಾಡಳಿತದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದು, ನೆಲ್ಯಹುದಿಕೇರಿ ಬಂದ್ ಮಾಡುವಂತೆ ಸಲಹೆ ನೀಡಿದರು. ಅಲ್ಲದೆ ಬಂದ್‍ಗೆ ಗ್ರಾಮಸ್ಥರ ಸಂಪೂರ್ಣ ಬೆಂಬಲ ನೀಡುವದಾಗಿ ತೀರ್ಮಾನಿಸಿದರು.