ಮಡಿಕೇರಿ, ಜು. 14: ಜಿಲ್ಲೆಯಲ್ಲಿ ಕಾಂಗ್ರೆಸ್ ಪಕ್ಷದ ಬಲವರ್ಧನೆಗಾಗಿ 5 ಬ್ಲಾಕ್ಗಳು ಮತ್ತು ಎಲ್ಲಾ ಬೂತ್ ಸಮಿತಿಗಳನ್ನು ರಚಿಸಿ ಸಮಾವೇಶವನ್ನು ನಡೆಸಲು ನಿರ್ಧರಿಸಲಾಗಿದೆ ಎಂದು ಜಿಲ್ಲಾ ಕಾಂಗ್ರೆಸ್ ಸಮಿತಿಯ ನೂತನ ಅಧ್ಯಕ್ಷ ಮುಕ್ಕಾಟಿರ ಶಿವು ಮಾದಪ್ಪ ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ತಾ. 18 ರಂದು ಬೆಳಿಗ್ಗೆ 11 ಗಂಟೆಗೆ ಸೋಮವಾರಪೇಟೆಯ ಕೊಡವ ಸಮಾಜದಲ್ಲಿ ಹಾಗೂ ಮಧ್ಯಾಹ್ನ 2.30 ಗಂಟೆಗೆ ಮಡಿಕೇರಿಯ ಕೂರ್ಗ್ ಕಮ್ಯೂನಿಟಿ ಹಾಲ್ನಲ್ಲಿ ಸಮಾವೇಶ ನಡೆಯಲಿದ್ದು, ಎಐಸಿಸಿ ಕಾರ್ಯದರ್ಶಿ ವೇಣುನಾಥನ್ ಪಾಲ್ಗೊಳ್ಳಲಿದ್ದಾರೆ ಎಂದರು.
ಎಲ್ಲಾ ಬ್ಲಾಕ್ ಮತ್ತು ಬೂತ್ ಸಮಿತಿಗಳ ರಚನೆಯಾದ ನಂತರ ಜಿಲ್ಲೆಯಾದ್ಯಂತ ವಲಯ ಮಟ್ಟಕ್ಕೆ ಭೇಟಿ ನೀಡಿ ಪಕ್ಷವನ್ನು ಸಂಘಟಿಸಲಾಗುವದು. ರಾಜ್ಯ ಕಾಂಗ್ರೆಸ್ ಸರ್ಕಾರದ ನಾಲ್ಕು ವರ್ಷಗಳ ಸಾಧನೆಯನ್ನು ಸಾರ್ವಜನಿಕರಿಗೆ ಮನವರಿಕೆ ಮಾಡಿಕೊಡಲಾಗುವದೆಂದ ಅವರು, 12 ಸಾವಿರ ರೈತರ ರೂ. 145.75 ಕೋಟಿ ಸಾಲವನ್ನು ರಾಜ್ಯ ಸರಕಾರ ಮನ್ನಾ ಮಾಡಿರುವದು ಸ್ವಾಗತಾರ್ಹವೆಂದರು. ಜಿಲ್ಲೆಯಲ್ಲಿ ಅಭಿವೃದ್ಧಿ ಕುಂಠಿತವಾಗಿದೆ ಎನ್ನುವದು ಸುಳ್ಳು ಆರೋಪವಾಗಿದ್ದು, ಸರ್ಕಾರ ನೀಡಿರುವ ವಿಶೇಷ ಪ್ಯಾಕೇಜ್ ಅನುದಾನದಲ್ಲಿ ರಸ್ತೆಗಳ ಅಭಿವೃದ್ಧಿಯಾಗುತ್ತಿದೆÀಯೆಂದು ಸ್ಪಷ್ಟಪಡಿಸಿದರು.
ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಜಿಲ್ಲೆಯ ಎರಡು ವಿಧಾನಸಭಾ ಸ್ಥಾನಗಳನ್ನು ಕಾಂಗ್ರೆಸ್ ಗೆಲ್ಲುವ ವಿಶ್ವಾಸ ವ್ಯಕ್ತಪಡಿಸಿದರು. ಜಿಲ್ಲಾ ಕಾಂಗ್ರೆಸ್ ಮಾಜಿ ಪ್ರಬಾರ ಅಧ್ಯಕ್ಷ ಟಿ.ಪಿ. ರಮೇಶ್ ಮಾತನಾಡಿ, ಕೆಪಿಸಿಸಿ ಸೂಚನೆಯಂತೆ ಬ್ಲಾಕ್ ಕಾಂಗ್ರೆಸ್ನ ಸಮಾವೇಶ ನಡೆಸಲಾಗುತ್ತಿದ್ದು, ತಾ. 30 ರಂದು ಉಳಿದ ಮೂರು ಬ್ಲಾಕ್ಗಳ ಸಮಾವೇಶ ನಡೆಸಲಾಗುವದೆಂದು ತಿಳಿಸಿದರು. ಜಿಲ್ಲೆಯಲ್ಲಿ ಪಕ್ಷವನ್ನು ಇನ್ನಷ್ಟು ಪರಿಣಾಮಕಾರಿಯಾಗಿ ಬೆಳೆಸಲು ನೂತನ ಅಧ್ಯಕ್ಷರಿಗೆ ಸಂಪೂರ್ಣ ಬೆಂಬಲ ನೀಡುವದಾಗಿ ಹೇಳಿದರು.
ರಾಜ್ಯ ಸರ್ಕಾರ ಬಿಡುಗಡೆ ಮಾಡಿದ ವಿಶೇಷ ಅನುದಾನದಲ್ಲಿ ಗ್ರಾಮೀಣ ರಸ್ತೆಗಳು ಅಭಿವೃದ್ಧಿ ಯಾಗಲಿದೆ. ಟೆಂಡರ್ ಪ್ರಕ್ರಿಯೆ ವಿಳಂಬವಾಗಿರುವದು ನಿಜವೆಂದು ಒಪ್ಪಿಕೊಂಡ ಅವರು, ರಾಜ್ಯ ಸರ್ಕಾರದಿಂದ ಸಾಕಷ್ಟು ಅಭಿವೃದ್ಧಿ ಕಾರ್ಯಗಳು ನಡೆದಿದೆ ಎಂದರು. ಮಡಿಕೇರಿ ನಗರಸಭೆಗೆ ಈಗಾಗಲೇ 1 ಕೋಟಿ ರೂ.ಗಳನ್ನು ಬಿಡುಗಡೆ ಮಾಡಲಾಗಿದ್ದು, ಆಯಾ ವಾರ್ಡ್ಗಳ ಸದಸ್ಯರ ಒಪ್ಪಿಗೆಯಂತೆ ಕ್ರಿಯಾಯೋಜನೆ ಸಿದ್ಧವಾಗಲಿದೆ ಎಂದರು. ಡಾ. ಕಸ್ತೂರಿ ರಂಗನ್ ವರದಿಗೆ ಸಂಬಂಧಿಸಿದಂತೆ ಜಿಲ್ಲೆಯ ರೈತವರ್ಗಕ್ಕೆ ಹಾಗೂ ಗ್ರಾಮೀಣ ಜನರಿಗೆ ರಕ್ಷಣೆ ನೀಡುವ ರೀತಿಯಲ್ಲೇ ರಾಜ್ಯ ಸರ್ಕಾರ ಕೇಂದ್ರಕ್ಕೆ ವರದಿ ಸಲ್ಲಿಸಿದೆ ಎಂದು ರಮೇಶ್ ಸ್ಪಷ್ಟಪಡಿಸಿದರು.
ಗೋಷ್ಠಿಯಲ್ಲಿ ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ವಿ.ಪಿ. ಸುರೇಶ್, ಕೊಡವ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಬಿ.ಎಸ್. ತಮ್ಮಯ್ಯ, ಪಕ್ಷದ ನಗರಾಧ್ಯಕ್ಷ ಅಬ್ದುಲ್ ರಜಾóಕ್ ಹಾಗೂ ಜಿಲ್ಲಾ ಉಪಾಧ್ಯಕ್ಷ ಪೆಮ್ಮಂಡ ಪೊನ್ನಪ್ಪ ಉಪಸ್ಥಿತರಿದ್ದರು.