ಶನಿವಾರಸಂತೆ, ಜು. 14: ಕೊಡ್ಲಿಪೇಟೆಯ ಕೆರೋಡಿ ಸೇತುವೆಯ ಬಳಿ ಬಾಳುಪೇಟೆಗೆ ಪಿಕ್‍ಅಪ್ (ಕೆಎ 13 ಸಿ-1974)ರಲ್ಲಿ ಅಕ್ರಮವಾಗಿ ಹೊನ್ನೆ ಮತ್ತು ನಂದಿ ಮರದ ದಿಮ್ಮಿಗಳನ್ನು (ಮೌಲ್ಯ ವಾಹನ ಸೇರಿದಂತೆ ರೂ. 3.50 ಲಕ್ಷ) ಸಾಗಾಟ ಮಾಡುತ್ತಿದ್ದುದನ್ನು ಶನಿವಾರಸಂತೆ ಅರಣ್ಯ ಇಲಾಖೆಯವರು ಶುಕ್ರವಾರ ಬೆಳಗ್ಗಿನ ಜಾವ ತಡೆದು ಮರ ಸಹಿತ ವಾಹನವನ್ನು ವಶಪಡಿಸಿಕೊಂಡು ಇಬ್ಬರು ಆರೋಪಿಗಳನ್ನು ಬಂಧಿಸಿದ ಪ್ರಕರಣ ಶನಿವಾರಸಂತೆ ಅರಣ್ಯ ಇಲಾಖೆಯಲ್ಲಿ ದಾಖಲಾಗಿದೆ.
ಶನಿವಾರಸಂತೆ ಅರಣ್ಯ ವಲಯಾಧಿಕಾರಿ ಕೆ. ಕೊಟ್ರೇಶ್ ಹಾಗೂ ಸಿಬ್ಬಂದಿಗಳು ಶುಕ್ರವಾರ ಬೆಳಗ್ಗಿನ ಜಾವ ಗಸ್ತಿನಲ್ಲಿದ್ದಾಗ ಸೋಮವಾರಪೇಟೆ ಉಪವಿಭಾಗದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಎಂ.ಎಸ್. ಚಿನ್ನಪ್ಪ ಅವರ ಮಾರ್ಗದರ್ಶನದಲ್ಲಿ ಕೆರೋಡಿ ಸೇತುವೆಯ ಬಳಿ ಬಾಳುಪೇಟೆಗೆ ಪಿಕ್‍ಅಪ್ ವಾಹನದಲ್ಲಿ ಹೊನ್ನೆ ಮತ್ತು ನಂದಿ ಮರವನ್ನು ಅಕ್ರಮ ಸಾಗಾಟ ಮಾಡುತ್ತಿರುವಾಗ ವಾಹನವನ್ನು ತಡೆದು ವಾಹನ ಸಹಿತ ಮರವನ್ನು ವಶಪಡಿಸಿಕೊಂಡು ಆರೋಪಿಗಳಾದ ಹಂಪಾಪುರದ ರವಿ ಹಾಗೂ ವಾಹನ ಮಾಲೀಕ ಹಾಗೂ ಚಾಲಕ ಕೆರಗನಹಳ್ಳಿಯ ವಸಂತ ಅವರುಗಳನ್ನು ಬಂಧಿಸಿ ಪ್ರಕರಣ ದಾಖಲಿಸಿದ್ದಾರೆ.
ಕಾರ್ಯಾಚರಣೆಯಲ್ಲಿ ಅರಣ್ಯ ವಲಯಾಧಿಕಾರಿ ಕೆ. ಕೊಟ್ರೇಶ್, ಉಪ ಅರಣ್ಯ ವಲಯಾಧಿಕಾರಿಗಳಾದ ಎಸ್.ವೈ. ಸುಕ್ಕೂರ್, ಸತೀಶ್, ಅರಣ್ಯ ರಕ್ಷಕರುಗಳಾದ ರಮೇಶ್, ರಾಮಕೃಷ್ಣಶೆಟ್ಟಿ, ಚಾಲಕ ಭರತ್ ಹಾಗೂ ಹರೀಶ್ ಕುಮಾರ್ ಪಾಲ್ಗೊಂಡಿದ್ದರು.