ಸೋಮವಾರಪೇಟೆ, ಜು. 14: ಪಟ್ಟಣದಲ್ಲಿ ದಿನದಿಂದ ದಿನಕ್ಕೆ ಬಿಗಡಾಯಿಸುತ್ತಿರುವ ಕಸ ವಿಲೇವಾರಿ ಸಮಸ್ಯೆಯನ್ನು ಮುಂದಿನ 8 ದಿನಗಳ ಒಳಗೆ ಪರಿಹರಿಸದಿದ್ದಲ್ಲಿ ಪಟ್ಟಣ ಪಂಚಾಯಿತಿ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟಿಸಲಾಗುವದು ಎಂದು ಕರ್ನಾಟಕ ರಕ್ಷಣಾ ವೇದಿಕೆ ಎಚ್ಚರಿಸಿದೆ.

ನಗರದ ಪತ್ರಿಕಾಭವನದಲ್ಲಿ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಈ ಬಗ್ಗೆ ಮಾತನಾಡಿದ ವೇದಿಕೆಯ ತಾಲೂಕು ಅಧ್ಯಕ್ಷ ಕೆ.ಎನ್. ದೀಪಕ್, ಬಿಗಡಾಯಿಸುತ್ತಿರುವ ಕಸ ವಿಲೇವಾರಿ ಸಮಸ್ಯೆಯನ್ನು ಪರಿಹರಿಸಲು ಪಟ್ಟಣ ಪಂಚಾಯಿತಿ ಆಡಳಿತ ಮಂಡಳಿ ವಿಫಲಗೊಂಡಿದೆ ಎಂದು ಆರೋಪಿಸಿದರು. ಕಸ ವಿಲೇವಾರಿಗೆ ಅಗತ್ಯ ಜಾಗ ನೀಡಲು ಕರ್ಕಳ್ಳಿಯ ವ್ಯಕ್ತಿಯೋರ್ವರು ಮುಂದೆÉ ಬಂದಿದ್ದರೂ ಸಹ ಪಂಚಾಯಿತಿ ಆಡಳಿತ ಮಂಡಳಿ ನಿರ್ಲಕ್ಷ್ಯವಹಿಸಿ ಕಸದ ಸಮಸ್ಯೆಯನ್ನು ಜೀವಂತವಿರಿಸಿದೆ. ಈಗಾಗಲೇ ಪಟ್ಟಣದಲ್ಲಿ ಡೆಂಗ್ಯೂ, ಮಲೇರಿಯಾ ದಂತಹ ಮಾರಕ ರೋಗದ ಭೀತಿ ಎದುರಾಗಿದೆ ಎಂದರು.

ಪಟ್ಟಣದಿಂದ ಕೇವಲ ಎರಡು ಕಿ.ಮೀ.ದೂರವಿರುವ ಸ್ಥಳದಲ್ಲಿ ಜಾಗ ಇದ್ದರೂ ಇದನ್ನು ಪರಿಶೀಲಿಸಲು ಜನಪ್ರತಿನಿಧಿಗಳಿಗೆ ಸಾಧ್ಯವಾಗಿಲ್ಲ. ಆಡಳಿತ ಮಂಡಳಿ ಸದಸ್ಯರ ನಡುವೆ ಹೊಂದಾಣಿಕೆ ಕೊರತೆ ಇದ್ದು, ಕೇಂದ್ರ ಸರಕಾರದ ಸ್ವಚ್ಛತಾ ಆಂದೋಲನ ಕಾರ್ಯಕ್ರಮ ಇಲ್ಲಿನ ಪಟ್ಟಣಕ್ಕೆ ಅನ್ವಯಿಸುತ್ತಿಲ್ಲ. ಆಡಳಿತ ನಿರ್ವಹಣೆ ಯಲ್ಲಿ ಎಲ್ಲ ಸದಸ್ಯರೂ ವಿಫಲ ರಾಗಿದ್ದಾರೆ ಎಂದು ಆರೋಪಿಸಿದರು.

ಪಂಚಾಯಿತಿ ವ್ಯಾಪ್ತಿಯ ಎಲ್ಲಾ ಮನೆಗಳಿಗೆ ಕಸ ಸಂಗ್ರಹಣೆಗೆಂದು ಬುಟ್ಟಿಗಳನ್ನು ನೀಡಲಾಗಿದ್ದು, ಇದರಲ್ಲಿ ಶೇಖರಣೆಯಾಗುವ ತ್ಯಾಜ್ಯವನ್ನು ಪಂಚಾಯಿತಿ ಸಿಬ್ಬಂದಿಗಳು ತೆಗೆದುಕೊಂಡು ಹೋಗುತ್ತಿಲ್ಲ. ಇದರಿಂದಾಗಿ ಪ್ರತಿ ಮನೆಯೂ ಕ್ರಿಮಿಕೀಟಗಳ ಆವಾಸಸ್ಥಾನವಾಗಿ, ಸಾಂಕ್ರಾಮಿಕ ರೋಗಗಳನ್ನು ಹರಡುವ ಕೇಂದ್ರಗಳಾಗುತ್ತಿವೆ ಎಂದು ಗೋಷ್ಠಿಯಲ್ಲಿದ್ದ ನಗರ ಘಟಕದ ಅಧ್ಯಕ್ಷ ಮಂಜುನಾಥ್ ದೂರಿದರು.

ನಗರದ ಹಲವು ಭಾಗದಲ್ಲಿ ಸುಂದರ ಹಾಗೂ ಸ್ವಚ್ಛ ಪಂಚಾಯಿತಿ ಎಂದು ಬೋರ್ಡ್ ಹಾಕಿದ್ದಾರೆ. ಆದರೆ ನಗರದಲ್ಲಿ ಸಂಗ್ರಹಗೊಳ್ಳುವ ಕಸವನ್ನು ವಿಲೇವಾರಿ ಮಾಡುತ್ತಿಲ್ಲ. ಗಬ್ಬೆದ್ದು ನಾರುತ್ತಿರುವ ನಗರವನ್ನು ಕಸದ ಕೊಂಪೆಯನ್ನಾಗಿ ಮಾಡಲು ಪಂಚಾಯಿತಿ ಪಣತೊಟ್ಟಿರುವಂತೆ ಕಂಡುಬರುತ್ತಿದೆ ಎಂದು ವೇದಿಕೆಯ ಕಾರ್ಯದರ್ಶಿ ಕೆ.ಪಿ. ರವೀಶ್ ಟೀಕಿಸಿದರು.

ಗೋಷ್ಠಿಯಲ್ಲಿ ಕರ್ನಾಟಕ ರಕ್ಷಣಾ ವೇದಿಕೆಯ ನಗರ ಉಪಾಧ್ಯಕ್ಷ ಅಬ್ಬಾಸ್, ಸಂತೋಷ್, ಸಹ ಕಾರ್ಯದರ್ಶಿ ಬೇಟು, ಸಂಘಟನಾ ಕಾರ್ಯದರ್ಶಿ ರುಬೀನಾ ಅವರುಗಳು ಉಪಸ್ಥಿತರಿದ್ದರು.