ಮಡಿಕೇರಿ, ಜು. 14: ಕೊಡಗು ಜಿಲ್ಲೆಯ ವಿದ್ಯಾರ್ಥಿಗಳು ಉನ್ನತ ಶಿಕ್ಷಣಕ್ಕಾಗಿ ಬೆಂಗಳೂರು, ಮೈಸೂರು, ಮಂಗಳೂರನ್ನು ಅವಲಂಭಿಸ ಬೇಕಾಗಿದ್ದ ಸನ್ನಿವೇಶದ ನಡುವೆ ಕೊಡಗು ಜಿಲ್ಲೆಯಲ್ಲಿ ಚಿಕ್ಕ ಅಳುವಾರದಲ್ಲಿ ಸ್ನಾತಕೋತ್ತರ ಕೇಂದ್ರವನ್ನು ಪ್ರಾರಂಭಿಸಲಾಗಿದೆ. ಕಳೆದ ಮೂರು ವರ್ಷಗಳ ಹಿಂದೆ ಕಾರ್ಯಾರಂಭಗೊಂಡಿರುವ ಈ ಕೇಂದ್ರ ಅಗತ್ಯ ಮೂಲಭೂತ ಸೌಲಭ್ಯಗಳೊಂದಿಗೆ ಉತ್ತಮ ಕೇಂದ್ರವಾಗಿ ರೂಪುಗೊಳ್ಳುತ್ತಿದೆ. ಇದರೊಂದಿಗೆ ಜಿಲ್ಲೆಯ ವಿವಿಧ ಭಾಗಗಳಲ್ಲಿ ಇನ್ನಷ್ಟು ಕಾಲೇಜುಗಳು ಪ್ರಾರಂಭಗೊಳ್ಳುವಂತಾಗಬೇಕು. ಈ ಮೂಲಕ ಮುಂದಿನ ವರ್ಷಗಳಲ್ಲಿ ಕೊಡಗು ಜಿಲ್ಲೆಯಲ್ಲಿ ಪ್ರತ್ಯೇಕವಾದ ವಿಶ್ವವಿದ್ಯಾನಿಲಯ ಸ್ಥಾಪನೆಯಾಗ ಬೇಕಿದ್ದು, ಈ ನಿಟ್ಟಿನಲ್ಲಿ ಅಗತ್ಯ ಕಾಳಜಿ ವಹಿಸಬೇಕಿದೆ ಎಂದು ಮಂಗಳೂರು ವಿಶ್ವವಿದ್ಯಾನಿಲಯದ ಉಪಕುಲಪತಿ ಪ್ರೊ. ಕೆ. ಭೈರಪ್ಪ ಅವರು ಸಲಹೆ ನೀಡಿದರು.
ಮಡಿಕೇರಿಯಲ್ಲಿ ಕೆಲವು ಶಿಕ್ಷಣ ಪ್ರೇಮಿಗಳು ಸೇರಿ ಪ್ರಾರಂಭಿಸಿರುವ ಕೂರ್ಗ್ ಎಜುಕೇಷನ್ ಟ್ರಸ್ಟ್‍ನ ವತಿಯಿಂದ ಪ್ರಸಕ್ತ ಶೈಕ್ಷಣಿಕ ವರ್ಷದಿಂದ ನಗರದ ಜಿ.ಟಿ. ವೃತ್ತದಲ್ಲಿರುವ
(ಮೊದಲ ಪುಟದಿಂದ) ಎ.ಎಂ.ಸಿ. ಕಾಂಪ್ಲೆಕ್ಸ್‍ನಲ್ಲಿ ಕಾರ್ಯಾರಂಭಗೊಳ್ಳಲಿರುವ ಕೂರ್ಗ್ ಇನ್ಸ್‍ಟಿಟ್ಯೂಟ್ ಆಫ್ ಹಾಸ್ಪಿಟಾಲಿಟಿ ಸೈನ್ಸ್ ಕೋರ್ಸ್‍ಗೆ ಚಾಲನೆ ನೀಡಿ ಅವರು ಮಾತನಾಡುತ್ತಿದ್ದರು.
ಶೈಕ್ಷಣಿಕವಾಗಿ ಜಿಲ್ಲೆ ಮುಂದಿನ ಐದು ವರ್ಷಗಳಲ್ಲಿ ಇನ್ನಷ್ಟು ಬೆಳೆದರೆ ಕೊಡಗಿಗೆ ಪ್ರತ್ಯೇಕ ವಿಶ್ವವಿದ್ಯಾಲಯ ಹೊಂದಿಕೊಳ್ಳಲು ಅವಕಾಶ ಇದೆ. ಈ ನಿಟ್ಟಿನಲ್ಲಿ ಇನ್ನಷ್ಟು ಹೊಸ ಕಾಲೇಜುಗಳು ಬರಬೇಕಿದೆ. ಜಿಲ್ಲೆ ಇತ್ತೀಚಿನ ವರ್ಷಗಳಲ್ಲಿ ಉತ್ತಮ ಶಿಕ್ಷಣ ಕೇಂದ್ರವಾಗಿ ಪ್ರಗತಿ ಕಾಣುತ್ತಿದೆ. ಹಾಸ್ಪಿಟಾಲಿಟಿ ಸೈನ್ಸ್ ಮೂಲಕ ಉದ್ಯಮಶೀಲತಾ ತರಬೇತಿಯ ಪ್ರಯತ್ನ ಸ್ವಾಗತಾರ್ಹ ಎಂದು ಅವರು ಅಭಿಪ್ರಾಯಪಟ್ಟರು.
ಅತಿಥಿ ಸತ್ಕಾರಕ್ಕೆ ಜಿಲ್ಲೆ ಹೆಸರಾಗಿದೆ. ಇಲ್ಲಿನ ಜನತೆಯ ಈ ಮನೋಭಾವನೆಯಿಂದಲೇ ಕೊಡಗಿನಲ್ಲಿ ಪ್ರವಾಸೋದ್ಯಮ ಕ್ಷಿಪ್ರಗತಿಯಲ್ಲಿ ಬೆಳೆದಿದೆ. ಪ್ರವಾಸೋದ್ಯಮದ ಬೆಳವಣಿಗೆಯ ನಡುವೆ ಕೊಡಗಿನ ನೈಜತೆ, ಪರಿಸರವೂ ಸಂರಕ್ಷಣೆಯಾಗಬೇಕು. ಇದಕ್ಕೆ ಯಾವದೇ ಧಕ್ಕೆಯಾಗದಂತಹ ಮಾರ್ಗದರ್ಶನವನ್ನೂ ಈ ಮೂಲಕ ನೀಡಬೇಕು ಎಂದು ಪ್ರೊ. ಭೈರಪ್ಪ ಸಲಹೆಯಿತ್ತರು. ನೂತನ ಶಿಕ್ಷಣ ಸಂಸ್ಥೆ ಪ್ರವಾಸಿ ಕೇಂದ್ರ ಮಡಿಕೇರಿಗೆ ಹೊಸತೊಂದು ಗರಿ ಎಂದ ಅವರು ಸಂಸ್ಥೆಯಲ್ಲಿನ ವ್ಯವಸ್ಥೆಯ ಬಗ್ಗೆಯೂ ಮೆಚ್ಚುಗೆ ವ್ಯಕ್ತಪಡಿಸಿದರು.
ಅತಿಥಿಗಳಾಗಿದ್ದ ಮಂಗಳೂರು ವಿಶ್ವವಿದ್ಯಾನಿಲಯದ ಸಿಂಡಿಕೇಟ್ ಸದಸ್ಯೆ, ಫೀ.ಮಾ. ಕಾರ್ಯಪ್ಪ ಕಾಲೇಜಿನ ನಿವೃತ್ತ ಪ್ರಾಂಶುಪಾಲೆ ಡಾ. ಮಂಡೇಪಂಡ ಪುಷ್ಪಾ ಕುಟ್ಟಣ್ಣ ಅವರು ಮಾತನಾಡಿ, ಗುಣಮಟ್ಟದ ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ ನೀಡಬೇಕು, ಜಿಲ್ಲೆಯಲ್ಲಿ ಸುಮಾರು 20 ಪದವಿ ಕಾಲೇಜುಗಳಿದ್ದು, ಬಹುತೇಕ ಕಾಲೇಜುಗಳಿಗೆ ಅಗತ್ಯ ಮೂಲಭೂತ ಸೌಲಭ್ಯಗಳು ಕಲ್ಪಿತವಾಗಬೇಕಿದೆ ಎಂದರು. ಕೊಡಗು ಜಿಲ್ಲಾಧಿಕಾರಿ ಡಾ. ರಿಚರ್ಡ್ ವಿನ್ಸೆಂಟ್ ಡಿಸೋಜ ಅವರು ಅನಿಸಿಕೆ ವ್ಯಕ್ತಪಡಿಸಿ, ಯಾವದೇ ಉದ್ಯಮಕ್ಕೆ ಕೌಶಲ್ಯ ಅಭಿವೃದ್ಧಿ ಅತ್ಯಗತ್ಯ. ಕೊಡಗು ಅತಿಥಿ ಸತ್ಕಾರಕ್ಕೆ ಹೆಸರಾಗಿದೆ. ಉತ್ತಮ ತರಬೇತಿಯೊಂದಿಗೆ ಉದ್ಯೋಗದಲ್ಲಿ ತೊಡಗಿದರೆ ಇನ್ನಷ್ಟು ಪ್ರಗತಿ ಸಾಧ್ಯ ಎಂದರು. ಕ್ಲಬ್ ಮಹೀಂದ್ರದ ಕಾರ್ಯನಿರ್ವಾಹಕ ಬಾಣಸಿಗ (ಎಕ್ಸಿಕ್ಯೂಟಿವ್ ಶೆಫ್) ದೇಬ್ರಜ್ ಬಹುಮಿಕ್ ಮಾತನಾಡಿ, ಆಸಕ್ತ ವಿದ್ಯಾರ್ಥಿಗಳಿಗೆ ಈ ಕೋರ್ಸ್ ಜಿಲ್ಲೆಯಲ್ಲಿ ಪ್ರಾರಂಭವಾಗಿರುವದು ಉತ್ತಮ ಅವಕಾಶವಾಗಿದೆ. ಉತ್ತಮ ವ್ಯವಸ್ಥೆಯೊಂದಿಗೆ ಪ್ರಾರಂಭವಾಗಿರುವ ಈ ಸಂಸ್ಥೆಯ ಸದುಪಯೋಗ ಪಡೆದುಕೊಳ್ಳುವಂತೆ ಕರೆ ನೀಡಿದರು. ಮತ್ತೋರ್ವ ಅತಿಥಿ ಕ್ಲಬ್ ಮಹೀಂದ್ರ ವ್ಯವಸ್ಥಾಪಕ ಸ್ವಪ್ನದಾಸ್ ಶುಭ ಹಾರೈಸಿದರು.
ಆಹ್ವಾನಿತರಾಗಿದ್ದ ‘ಶಕ್ತಿ’ ಸಂಪಾದಕ ಜಿ. ಚಿದ್ವಿಲಾಸ್ ಅವರು ಅಭಿಪ್ರಾಯ ವ್ಯಕ್ತಪಡಿಸಿ ಮಡಿಕೇರಿಯಲ್ಲಿ ಈ ಸಂಸ್ಥೆ ಪ್ರಾರಂಭಿಸಿರುವ ಪ್ರಯತ್ನವನ್ನು ಶ್ಲಾಘಿಸಿದರು. ಉದ್ಯಮ ಶೀಲತೆ ಇಂದಿನ ಅಗತ್ಯವಾಗಿದೆ. ಪ್ರವಾಸೋದ್ಯಮದಲ್ಲಿ ಜಿಲ್ಲೆ ಬೆಳೆಯುತ್ತಿದೆ ಆದರೆ ಪ್ರವಾಸಿ ಕೇಂದ್ರಗಳಲ್ಲಿ ಅಗತ್ಯ ಮೂಲಭೂತ ಸೌಲಭ್ಯವಾಗಲಿ ಸೂಕ್ತ ಮಾಹಿತಿಯಾಗಲಿ ಸಿಗದಂತಾಗಿದೆ. ಈ ಬಗ್ಗೆ ಜಿಲ್ಲಾಡಳಿತ ಮುತುವರ್ಜಿ ವಹಿಸಬೇಕಿದೆ ಎಂದು ಜಿಲ್ಲಾಧಿಕಾರಿಗಳಲ್ಲಿ ಮನವಿ ಮಾಡಿದರು.
ಕೂರ್ಗ್ ಎಜುಕೇಷನ್ ಟ್ರಸ್ಟ್‍ನ ಅಧ್ಯಕ್ಷೆ ಡಾ. ಕನ್ನಂಡ ನಿರ್ಮಲಾ ಸೋಮಣ್ಣ ಅಧ್ಯಕ್ಷತೆ ವಹಿಸಿದ್ದರು. ಟ್ರಸ್ಟಿಗಳಾದ ಮಂಡೇಪಂಡ ರತನ್ ಕುಟ್ಟಯ್ಯ, ಅಪ್ಪಾರಂಡ ವೇಣು, ಕುಂಡ್ಯೋಳಂಡ ದಿನೇಶ್ ಕಾರ್ಯಪ್ಪ ಹಾಜರಿದ್ದರು.