ಮಡಿಕೇರಿ, ಜು. 14: ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ ಪ್ರತಿವರ್ಷ ಬೇಲ್ ನಮ್ಮೆ (ಕೃಷಿ ಹಬ್ಬ) ಎಂಬ ಕಾರ್ಯಕ್ರಮ ನಡೆಸಿಕೊಂಡು ಬರುತ್ತಿದ್ದು, ಕೊಡವ/ಕೊಡವ ಭಾಷಿಕ ಜನಾಂಗದ ಆಚಾರ-ವಿಚಾರ, ಪದ್ಧತಿ-ಪರಂಪರೆಗೆ ಸಂಬಂಧಿಸಿದ ಕೃಷಿ ಪ್ರಧಾನ ಜಿಲ್ಲೆಯಾದ ಕೊಡಗಿನಲ್ಲಿ ಭತ್ತದ ಕೃಷಿ ಚಟುವಟಿಕೆ ಮೂಲೆಗುಂಪಾಗುತ್ತಿದೆ. ಇದನ್ನು ಜೀವಂತವಾಗಿರಿಸುವ ನಿಟ್ಟಿನಲ್ಲಿ ಹಾಗೂ ಕೊಡಗಿನ ಪದ್ಧತಿ-ಪರಂಪರೆಯನ್ನು ಉಳಿಸುವ ನಿಟ್ಟಿನಲ್ಲಿ ಸಾರ್ವಜನಿಕರಿಗೆ, ಯುವಕ, ಯುವತಿಯರಿಗೆ ಹಾಗೂ ಮುಂದಿನ ಪೀಳಿಗೆಯಾದ ವಿದ್ಯಾರ್ಥಿ-ವಿದ್ಯಾರ್ಥಿನಿಯರಿಗೆ ಕೃಷಿ ಚಟುವಟಿಕೆಯಲ್ಲಿ ಆಸಕ್ತಿ ಮೂಡಿಸುವ ನಿಟ್ಟಿನಲ್ಲಿ ಅಕಾಡೆಮಿ ಪ್ರತಿವರ್ಷ ಬೇರೆ ಬೇರೆ ಕಡೆ ಬೇಲ್ ನಮ್ಮೆ ನಡೆಸಿಕೊಂಡು ಬರುತ್ತಿದ್ದು, ಈ ವರ್ಷ ನಾಪೋಕ್ಲುವಿನ ಬಿದ್ದಾಟಂಡ ಕುಟುಂಬದ ದಿ. ದೇವಯ್ಯ ಅವರ ಬುಟ್ಟಿ ಗದ್ದೆಯಲ್ಲಿ ಏರ್ಪಡಿಸಲಾಗಿದ್ದು, ತಾ. 22 ರಂದು ಬೆಳಿಗ್ಗೆ 9.30 ರಿಂದ ಬೇಲ್ ನಮ್ಮೆ ನಡೆಯಲಿದೆ.

ವಿದ್ಯಾರ್ಥಿ-ವಿದ್ಯಾರ್ಥಿನಿಯರಿಗೆ ವಿವಿಧ ಸ್ಪರ್ಧೆ ಹಾಗೂ ತರಬೇತಿ ಕಾರ್ಯಕ್ರಮದಲ್ಲಿ ತೊಡಗಿಸಿಕೊಳ್ಳಲು ಅವಕಾಶ ನೀಡಲಾಗಿದೆ. ಸ್ಪರ್ಧೆಗಳಲ್ಲಿ ಭಾಗವಹಿಸುವ ವಿದ್ಯಾರ್ಥಿ-ವಿದ್ಯಾರ್ಥಿನಿಯರಿಗೆ ಅಕಾಡೆಮಿ ವತಿಯಿಂದ ಪ್ರಶಂಸನಾ ಪತ್ರ ಹಾಗೂ ಬಹುಮಾನ ನೀಡಲಾಗುವದು.

ವಿದ್ಯಾರ್ಥಿನಿಯರಿಗೆ ಪೈರು ತೆಗೆಯುವ ತರಬೇತಿ, ವಿದ್ಯಾರ್ಥಿಗಳಿಗೆ ಪೈರು ನೆಡುವ ತರಬೇತಿ, ವಿದ್ಯಾರ್ಥಿನಿಯರಿಗೆ ಪೈರು ಕೀಳುವ ಸ್ಪರ್ಧೆ, ವಿದ್ಯಾರ್ಥಿಗಳಿಗೆ ನಾಟಿ ನೆಡುವ ಸ್ಪರ್ಧೆ, ಶಾಲಾ-ಕಾಲೇಜು ವಿದ್ಯಾರ್ಥಿಗಳಿಗೆ ಪುರುಷ ಹಾಗೂ ಮಹಿಳೆಯರಿಗೆ ಕೆಸರು ಗದ್ದೆ ಓಟ. ಶಕ್ತಿಕೋಲ್ ಪೈಪೋಟಿ, ಹಗ್ಗಜಗ್ಗಾಟ ಇತರ ಸ್ಪರ್ಧೆಗಳು ನಡೆಯಲಿದೆ.

ಹೆಚ್ಚಿನ ಮಾಹಿತಿಗೆ ಅಕಾಡೆಮಿ ಕಚೇರಿ ದೂರವಾಣಿ-08272-229074 ಮತ್ತು ಮಣವಟ್ಟಿರ ದಯಾ ಕುಟ್ಟಪ್ಪ-9448904785, ಬಿದ್ದಾಟಂಡ ಪಾಪ ಮುದ್ದಯ್ಯ-9481773039 ನ್ನು ಸಂಪರ್ಕಿಸಬಹುದು ಎಂದು ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಬಿದ್ದಾಟಂಡ ಎಸ್. ತಮ್ಮಯ್ಯ ತಿಳಿಸಿದ್ದಾರೆ.