ಮಡಿಕೇರಿ, ಜು. 14: ಮಡಿಕೇರಿ ನಗರ ದಸರಾ ಸಮಿತಿ ಕಾರ್ಯಾಧ್ಯಕ್ಷರನ್ನು ದಶಮಂಟಪಗಳ ಪ್ರತಿನಿಧಿಗಳು ಹಾಗೂ 4 ಕರಗಗಳ ಪ್ರತಿನಿಧಿಗಳು ಆಯ್ಕೆ ಮಾಡುವಂತೆ ಬೈಲಾದಲ್ಲಿರುವ ಈ ಹಿಂದಿನ ನಿಯಮವನ್ನೇ ಮುಂದುವರಿಸುವಂತೆ ತೀರ್ಮಾನ ಕೈಗೊಳ್ಳಲಾಯಿತು. ನಗರದ ಕಾವೇರಿ ಕಲಾಕ್ಷೇತ್ರದಲ್ಲಿ ನಡೆದ ನಗರ ದಸರಾ ಸಮಿತಿಯ ಬೈಲಾ ತಿದ್ದುಪಡಿ ಸಭೆಯಲ್ಲಿ ಚರ್ಚೆ ವಿಚರ್ಚೆಗಳ ಬಳಿಕ ತೀರ್ಮಾನ ಕೈಗೊಳ್ಳಲಾಯಿತು.
ಕಾರ್ಯಾಧ್ಯಕ್ಷರ ಆಯ್ಕೆಗೆ ನಗರಸಭಾ ಸದಸ್ಯರು, ದಶಮಂಟಪಗಳ ಪ್ರತಿನಿಧಿಗಳು ಹಾಗೂ ನಾಲ್ಕು ಕರಗ ಪ್ರತಿನಿಧಿಗಳಿಗೆ ಅವಕಾಶ ಮಾಡಿಕೊಟ್ಟು ಈ ಹಿಂದಿನ ನಿಯಮವನ್ನು ತಿದ್ದುಪಡಿ ಮಾಡುವಂತೆ ಬೈಲಾ ತಿದ್ದುಪಡಿ ಸಮಿತಿ ಅಭಿಪ್ರಾಯ ಬಯಸಿದಾಗ ಈ ಹಿಂದಿನ ನಿಯಮವನ್ನೇ ಮುಂದುವರೆ ಸುವಂತೆ ಆಗ್ರಹ ಪೂರ್ವಕ ಸಲಹೆ ಸಭೆಯಲ್ಲಿ ಕೇಳಿಬಂದಿತು.
ಕಾರ್ಯಾಧ್ಯಕ್ಷ ಸ್ಥಾನಕ್ಕೆ ಆಯ್ಕೆ ಬಯಸಿದಾಗ ದಶಮಂಟಪ ಸಮಿತಿ ಹಾಗೂ ನಾಲ್ಕು ಕರಗ ಪ್ರತಿನಿಧಿಗಳಿಗೆ ಮಾತ್ರ ಮತದಾನದ ಹಕ್ಕು ಕಲ್ಪಿಸುವಂತೆ ಸಭೆಯಲ್ಲಿದ್ದ ನಗರ ದಸರಾ ಸಮಿತಿ ಪದಾಧಿಕಾರಿಗಳು, (ಮೊದಲ ಪುಟದಿಂದ) ದಶಮಂಟಪ ಸಮಿತಿಯ ಪ್ರಮುಖರು ಸೇರಿದಂತೆ ಹಲವರು ಸಲಹೆ ಮುಂದಿಟ್ಟರು. ನಗರಸಭಾ ಚುನಾಯಿತ ಪ್ರತಿನಿಧಿಗಳು, ದಶಮಂಟಪ ಸಮಿತಿ ಪ್ರತಿನಿಧಿಗಳು ಹಾಗೂ ನಾಲ್ಕು ಕರಗ ಪ್ರತಿನಿಧಿಗಳು ಸೇರಿದಂತೆ ಎಲ್ಲರಿಗೂ ಕಾರ್ಯಾಧ್ಯಕ್ಷರನ್ನು ಆಯ್ಕೆ ಮಾಡುವ ಅವಕಾಶ ನೀಡುವಂತೆಯೂ ಸಲಹೆಯನ್ನು ಕೆಲವರು ನೀಡಿದರು.ಎಲ್ಲ್ಲರಿಗೂ ಅವಕಾಶ ನೀಡಿದಲ್ಲಿ ರಾಜಕೀಯ ಪ್ರವೇಶವಾಗುತ್ತದೆ. ಅವಕಾಶ ಬೇಡ ಎಂಬ ಅಭಿಪ್ರಾಯವೂ ಸಭೆಯಲ್ಲಿ ಕೇಳಿ ಬಂದಿತು. ನಗರಸಭಾ ಚುನಾಯಿತ ಪ್ರತಿನಿಧಿಗಳು ಕಾರ್ಯಾಧ್ಯಕ್ಷರ ಆಯ್ಕೆ ಪ್ರಕ್ರಿಯೆಯಲ್ಲಿ ಭಾಗವಹಿಸಲು ಅವಕಾಶ ನೀಡದಿದ್ದಾಗ ಬೈಲಾ ಮಾಡಲು ಅಸಾಧ್ಯ ಎಂಬ ಸಲಹೆ ಕೇಳಿಬಂದಾಗ ಸಭೆಯಲ್ಲಿ ಗೊಂದಲವೇರ್ಪಟ್ಟಿತು.
ಈ ಸಂದರ್ಭ ವಿಧಾನಪರಿಷತ್ ಸದಸ್ಯ ಎಂ.ಪಿ. ಸುನಿಲ್ ಸುಬ್ರಮಣಿ ಮಾತನಾಡಿ, ಸಭೆಯಲ್ಲಿ ಗೊಂದಲ ಬೇಡ ದಸರಾ ನಾಡಹಬ್ಬ, ದೇವರ ಪೂಜೆ, ದಸರಾ ಉತ್ಸವ ಚೆನ್ನಾಗಿ ಆಗಬೇಕು. ಎಲ್ಲಾ ಪಕ್ಷದವರು ಇಲ್ಲಿ ಇದ್ದಾರೆ. ಎಲ್ಲರೂ ಒಟ್ಟಾಗಿ ನಾಡಹಬ್ಬ ದಸರಾ ಆಚರಿಸೋಣ. ಕಾರ್ಯಾಧ್ಯಕ್ಷ ಸ್ಥಾನದ ಆಯ್ಕೆ ಬಗ್ಗೆ ಚರ್ಚೆ ಬೇಡ. ಈ ಹಿಂದಿನ ನಿಯಮದಂತೆ ಕಾರ್ಯಾಧ್ಯಕ್ಷರ ಆಯ್ಕೆಯಾಗಲಿ ಕಾರ್ಯಾಧ್ಯಕ್ಷÀ ಸ್ಥಾನದ ಆಕಾಂಕ್ಷಿಯಿದ್ದವರು ನಗರ ದಶಮಂಟಪಗಳ ದೇವಸ್ಥಾನ ಸಮಿತಿ ಸದಸ್ಯರಾಗಿ ಸೇರಿಕೊಂಡು ಸೇವೆ ಮಾಡಲಿ ಎಂದು ಸಲಹೆ ನೀಡಿದರು. ಬಳಿಕ ಎಲ್ಲರ ಸಲಹೆಯಂತೆ ಈ ಹಿಂದಿನ ನಿಯಮದಂತೆ ಕಾರ್ಯಾಧ್ಯಕ್ಷ ಆಯ್ಕೆ ಮಾಡುವಂತೆ ಸಲಹೆ ಪಡೆಯಲಾಯಿತು.
ದಸರಾವನ್ನು ನಾಡಹಬ್ಬವಾಗಿ ಪರಿಗಣನೆ
ಮಡಿಕೇರಿ ನಗರ ದಸರಾವನ್ನು ಜನೋತ್ಸವ ಎಂಬದಾಗಿ ಕರೆಯುವದು ಬೇಡ. ನಾಡಹಬ್ಬವಾಗಿ ಪರಿಗಣಿಸುವದರೊಂದಿಗೆ ದಸರಾ ಹಬ್ಬವನ್ನು ಆಚರಿಸುವಂತೆ ಒಕ್ಕೊರಲ ಸಲಹೆ ಕೇಳಿಬಂದಿತು. ಮಡಿಕೇರಿ ದಸರಾವನ್ನು ಜನೋತ್ಸವ ಅಥವಾ ನಾಡಹಬ್ಬ ಎಂಬದಾಗಿ ಆಚರಿಸುವದೇ ಎಂಬದಾಗಿ ಸಲಹೆ ಬಯಸಿದಾಗ ಜನೋತ್ಸವ ಬೇಡ, ನಾಡಹಬ್ಬವಾಗಿ ಪರಿಗಣಿಸುವಂತೆ ಸಲಹೆ ಕೇಳಿಬಂದಿತು. ಈ ಸಲಹೆಗೆ ಸಭೆಯಲ್ಲಿದ್ದ ಹಲವರು ಸಮ್ಮತಿ ಸೂಚಿಸಿದರು.
ನಾಡಹಬ್ಬ ದಸರಾ ಪ್ರಯುಕ್ತ ಕ್ರೀಡಾಕೂಟ, ನವರಾತ್ರಿ ಸಂದರ್ಭ ಸಾಂಸ್ಕøತಿಕ ಕಾರ್ಯಕ್ರಮ, ವಿದ್ಯಾರ್ಥಿಗಳಿಗಾಗಿ ವಿವಿಧ ಸ್ಪರ್ಧೆಗಳನ್ನು ಆಯೋಜಿಸುವದು, ವಸ್ತು ಪ್ರದರ್ಶನ, ಛಾಯಾಚಿತ್ರ ಪ್ರದರ್ಶನ, ಫಲಪುಷ್ಪ ಪ್ರದರ್ಶನ, ವಿವಿಧ ಕಲೆಗಳ ಪ್ರದರ್ಶನ, ಕೊಡಗಿನ ಸಾಂಪ್ರದಾಯಿಕ ಆಹಾರ ಪದ್ಧತಿಗಳ ಪ್ರದರ್ಶನ ಸೇರಿದಂತೆ ಹಲವು ಮಾಹಿತಿಗಳನ್ನೊಳಗೊಂಡ ಬೈಲಾ ತಯಾರಿಸುವಂತೆ ಸಭೆಯಲ್ಲಿ ಸಲಹೆ ಕೇಳಿಬಂದಿತು.
ನಾಡಹಬ್ಬ ದಸರಾ ಸಂದರ್ಭದ 9 ದಿನಗಳ ಕಾಲ ಆಯೋಜಿಸುವ ವಿವಿಧ ಕಾರ್ಯಕ್ರಮಗಳನ್ನು ನಿಗದಿಪಡಿಸಿ ಬೈಲಾದಲ್ಲಿ ಅಳವಡಿಸುವಂತೆಯೂ ಸಲಹೆ ಬಂದಿತು.
ದಶಮಂಟಪ ಸ್ಪರ್ಧೆಗೆ ಬಹುಮಾನ
ದಶಮಂಟಪಗಳ ಪೈಪೋಟಿಯಿಂದ ಸಾಕಷ್ಟು ಸಮಸ್ಯೆಯಾಗುತ್ತಿದೆ. ಇದರಿಂದ ಪೊಲೀಸ್ ಇಲಾಖೆ ತುಂಬಾ ತೊಂದರೆ ಅನುಭವಿಸಿದೆ ಎಂದು ಪೊಲೀಸ್ ಅಧಿಕಾರಿಗಳು ಸಭೆಯ ಗಮನ ಸೆಳೆದರು. ಈ ಸಂದರ್ಭ ದಶಮಂಟಪಗಳ ಪೈಪೋಟಿ ಬೇಡ ಎಂಬ ಸಲಹೆ ಕೆಲವರು ನೀಡಿದರು. ಪೈಪೋಟಿ ಅಗತ್ಯವಿದೆ. ಯಾವಾಗಲೂ ಹಿಂದಕ್ಕೆ ಹೋಗಬಾರದು. ಮುಂದಕ್ಕೆ ಹೋಗಬೇಕು. ಪೈಪೋಟಿ, ಬಹುಮಾನ ಇಲ್ಲದಿದ್ದಲ್ಲಿ ಮಂಟಪಗಳಿಗೆ ಶೋಭೆ ಇರುವದಿಲ್ಲ. ಈಗಾಗಲೇ ದಶಮಂಟಪ ಸಮಿತಿಗಳು ಎಲ್ಲಾ ತಯಾರಿಗಳನ್ನು ಮಾಡಿಕೊಂಡಿವೆ. ಯುವಕರಿಗೆ ಹುರುಪು ಇರಬೇಕಾದರೆ ಪೈಪೋಟಿ ಅಗತ್ಯವಿದೆ. ದಶಮಂಟಪಗಳ ಸ್ಪರ್ಧೆ ಬೇಕು ಎಂದು ಸಭೆಯಲ್ಲಿದ್ದ ಹಲವರು ಸಲಹೆ ನೀಡಿದರು. ದಶಮಂಟಪ ಸ್ಪರ್ಧೆಯಲ್ಲಿ ಭಾಗವಹಿಸಿ ಬಹುಮಾನವನ್ನು ತಿರಸ್ಕರಿಸಿದಲ್ಲಿ ಶಿಸ್ತುಕ್ರಮವಾಗಿ ಅನುದಾನವನ್ನು ಕಡಿತಗೊಳಿಸುವ ನಿರ್ಣಯವನ್ನು ಬೈಲಾದಲ್ಲಿ ಅಳವಡಿಸುವ ಸಲಹೆ ಕೇಳಿಬಂದಿತು.
ನಗರ ದಸರಾ ಸಮಿತಿ ಪದಾಧಿಕಾರಿಗಳು
ನಗರ ದಸರಾ ಸಮಿತಿ ಮಹಾ ಪೋಷಕರಾಗಿ ಕೊಡಗು - ಮೈಸೂರು ಸಂಸದರು, ಜಿಲ್ಲೆಯ ಇಬ್ಬರು ಶಾಸಕರು, ವಿಧಾನಪರಿಷತ್ ಸದಸ್ಯರು, ಜಿ.ಪಂ. ಅಧ್ಯಕ್ಷರು ಹಾಗೂ ಪೋಷಕರಾಗಿ ಜಿಲ್ಲಾಧಿಕಾರಿಗಳು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು, ಕೊಡವ ಸಾಹಿತ್ಯ ಅಕಾಡೆಮಿ ಹಾಗೂ ಅರೆಭಾಷೆ ಗೌಡ ಸಾಂಸ್ಕøತಿಕ ಅಕಾಡೆಮಿ ಅಧ್ಯಕ್ಷರು ಇರುತ್ತಾರೆ. ಗೌರವಾಧ್ಯಕ್ಷರಾಗಿ ಈ ಹಿಂದಿನ ಕಾರ್ಯಾಧ್ಯಕ್ಷರು, ಹಿಂದಿನ ನಗರಸಭಾ ಅಧ್ಯಕ್ಷರು, ಮೂಡಾ ಅಧ್ಯಕ್ಷರು ಹಾಗೂ ನಗರ ಚೇಂಬರ್ ಆಫ್ ಕಾಮರ್ಸ್ನ ಅಧ್ಯಕ್ಷರು ಇರುತ್ತಾರೆ. ಅಧ್ಯಕ್ಷರಾಗಿ ನಗರಸಭಾ ಅಧ್ಯಕ್ಷರು, ಉಪಾಧ್ಯಕ್ಷರಾಗಿ ನಗರಸಭಾ ಉಪಾಧ್ಯಕ್ಷರು, ಗೌರವ ಉಪಾಧ್ಯಕ್ಷರಾಗಿ ದಶಮಂಟಪ ಸಮಿತಿ ಅಧ್ಯಕ್ಷರು, ಖಜಾಂಚಿಯಾಗಿ ನಗರಸಭಾ ಆಯುಕ್ತರು ಇರುತ್ತಾರೆ.
ಉಪಸಮಿತಿ ರಚನೆ
ಉಪಸಮಿತಿ ಆಯ್ಕೆ ಪ್ರಕ್ರಿಯೆಯಲ್ಲಿ ನಗರಸಭಾ ಚುನಾಯಿತ ಪ್ರತಿನಿಧಿಗಳು, ದಶಮಂಟಪ ಪ್ರತಿನಿಧಿಗಳು ಹಾಗೂ ನಾಲ್ಕು ಕರಗ ಪ್ರತಿನಿಧಿಗಳು ಮಹಾಸಭೆ ನಡೆಸಿ ವಿವಿಧ ಉಪಸಮಿತಿ ರಚನೆ ಮಾಡುತ್ತಾರೆ.
ಉಪಸಮಿತಿಯ ಅಧ್ಯಕ್ಷರು ಸೇರಿದಂತೆ 4 ಮಂದಿ ನಗರಸಭಾ ಚುನಾಯಿತ ಪ್ರತಿನಿಧಿಗಳು ಮತ್ತು 5 ಮಂದಿ ಇತರ ಸದಸ್ಯರು ಇರುತ್ತಾರೆ. ವಿವಿಧ ಇಲಾಖೆಯ ಅಧಿಕಾರಿಗಳನ್ನು ಉಪಸಮಿತಿ ಸಂಚಾಲಕರುಗಳಾಗಿ ನೇಮಕ ಮಾಡುವಂತೆ ಬೈಲಾ ತಿದ್ದುಪಡಿ ಮಾಡುವಂತೆ ನಿರ್ಣಯ ಕೈಗೊಳ್ಳಲಾಯಿತು.
ಸಭೆಯ ಅಧ್ಯಕ್ಷತೆಯನ್ನು ನಗರಸಭಾ ಅಧ್ಯಕ್ಷೆ ಕಾವೇರಮ್ಮ ಸೋಮಣ್ಣ ವಹಿಸಿದ್ದರು. ಬೈಲಾ ತಿದ್ದುಪಡಿಯ ಸಲಹೆಯನ್ನು ಬೈಲಾ ತಿದ್ದುಪಡಿ ಸಮಿತಿಯ ಅಧ್ಯಕ್ಷ ಜಿ. ಚಿದ್ವಿಲಾಸ್ ಹಾಗೂ ಈ ಹಿಂದಿನ ಬೈಲಾ ರಚನೆ ಮಾಡಿದವರು ಹಾಗೂ ರಾಜ್ಯ ರೇಷ್ಮೆ ಮಂಡಳಿ ಅಧ್ಯಕ್ಷ ಟಿ.ಪಿ. ರಮೇಶ್ ಪಡೆದುಕೊಂಡರು.
ವೇದಿಕೆಯಲ್ಲಿ ವಿಧಾನ ಪರಿಷತ್ ಸದಸ್ಯೆ ಶಾಂತೆಯಂಡ ವೀಣಾ ಅಚ್ಚಯ್ಯ, ಮೂಡಾ ಅಧ್ಯಕ್ಷ ಚುಮ್ಮಿದೇವಯ್ಯ, ನಗರಸಭೆ ಉಪಾಧ್ಯಕ್ಷ ಟಿ.ಎಸ್. ಪ್ರಕಾಶ್, ನಗರ ಪೊಲೀಸ್ ವೃತ್ತ ನಿರೀಕ್ಷಕ ಮೇದಪ್ಪ ಇದ್ದರು. ಸಭೆಯಲ್ಲಿ ನಗರಸಭಾ ಸದಸ್ಯರು ಹಾಗೂ ನಗರ ದಸರಾ ಸಮಿತಿ ಪದಾಧಿಕಾರಿಗಳು, ದಶಮಂಟಪ ಸಮಿತಿ ಪದಾಧಿಕಾರಿಗಳು, ವಿವಿಧ ದೇವಸ್ಥಾನ ಸಮಿತಿ ಪ್ರಮುಖರು ಹಾಗೂ ಇನ್ನಿತರರು ಇದ್ದರು.