ಸೋಮವಾರಪೇಟೆ, ಜು. 14 : ನೋಟ್ ಬ್ಯಾನ್ ಮಾಡಿದ ಸಂದರ್ಭ ವಶಪಡಿಸಿಕೊಂಡ ಹಣದಲ್ಲಿ ರಾಷ್ಟ್ರೀಕೃತ ಬ್ಯಾಂಕ್‍ಗಳಲ್ಲಿನ ರೈತರ ಸಾಲವನ್ನು ಕೇಂದ್ರ ಸರ್ಕಾರ ಮನ್ನಾ ಮಾಡಬಹುದಿತ್ತು ಎಂದು ಐಎನ್‍ಟಿಯುಸಿ ಉಪಾಧ್ಯಕ್ಷ ನಾಪಂಡ ಮುತ್ತಪ್ಪ ಹೇಳಿದರು.

ಇಲ್ಲಿನ ಮಾನಸ ಸಭಾಂಗಣದಲ್ಲಿ ಇಂಡಿಯನ್ ನ್ಯಾಷನಲ್ ಟ್ರೇಡ್ ಯೂನಿಯನ್ ಕಾಂಗ್ರೆಸ್ ವತಿಯಿಂದ ಆಯೋಜಿಸಲಾಗಿದ್ದ ಸೋಮವಾರಪೇಟೆ ಪಟ್ಟಣ ಪಂಚಾಯಿತಿ, ಚೌಡ್ಲು, ಹಾನಗಲ್ ಹಾಗೂ ಬೇಳೂರು ಪಂಚಾಯಿತಿ ವ್ಯಾಪ್ತಿಯ ಬೂತ್ ಮಟ್ಟದ ಸಮಿತಿ ರಚನೆ ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದರು.

ದೇಶದಲ್ಲಿ ಸುಮಾರು ಶೇ. 80 ರಷ್ಟು ಮಂದಿ ಕಾರ್ಮಿಕರಿದ್ದಾರೆ. ರಾಜ್ಯವನ್ನು ಹಸಿವು ಮುಕ್ತ ಮಾಡುವ ಉದ್ದೇಶದಿಂದ ರಾಜ್ಯದ ಕಾಂಗ್ರೆಸ್ ಸರಕಾರ ಅನ್ನಭಾಗ್ಯ ಹಾಗೂ ಅಂತ್ಯೋದಯ ಯೋಜನೆ ಮೂಲಕ ಓರ್ವ ವ್ಯಕ್ತಿಗೆ ಮಾಸಿಕ 7 ಕೆ.ಜಿ. ಅಕ್ಕಿಯನ್ನು ವಿತರಿಸುತ್ತಿದೆ. ಈ ಯೋಜನೆಯನ್ನು ದೂರುವ ಬಿಜೆಪಿಗೆ ಹಸಿದವರ ಬಗ್ಗೆ ಯಾವದೇ ಅನುಕಂಪವಿಲ್ಲ ಎಂದು ಆರೋಪಿಸಿದರು.

ಜಿಲ್ಲೆಯಲ್ಲಿ ಸುಮಾರು 80 ಸಾವಿರ ಮಂದಿ ಸದಸ್ಯತ್ವ ಪಡೆದಿದ್ದಾರೆ. ಇದೀಗ ಕೊಡಗು, ಮೈಸೂರು ಹಾಗೂ ಚಾಮರಾಜನಗರ ಜಿಲ್ಲೆಗಳಲ್ಲಿ ಬೂತ್ ಮಟ್ಟದಲ್ಲಿ ಸಂಘಟನೆಯನ್ನು ಸದೃಢಗೊಳಿಸುವ ನಿಟ್ಟಿನಲ್ಲಿ ಕಾಯೋನ್ಮುಖವಾಗಿದೆ ಎಂದರು.

ಸಭೆಯ ಅಧ್ಯಕ್ಷತೆ ವಹಿಸಿದ್ದ ಸಂಘಟನೆಯ ಜಿಲ್ಲಾಧ್ಯಕ್ಷ ಹಮೀದ್ ಮಾತನಾಡಿ, ಜಿಲ್ಲೆಯಲ್ಲಿ ದುಡಿಯುವ ಶ್ರಮಜೀವಿಗಳಾದ ರೈತಾಪಿ ವರ್ಗ, ಕಟ್ಟಡ ಕಾರ್ಮಿಕರು, ಉದ್ಯೋಗ ಖಾತ್ರಿಯಲ್ಲಿ ನೋಂದಾಯಿಸಿಕೊಂಡಿರುವ ಎಲ್ಲಾ ಕಾರ್ಮಿಕರು ಸದಸ್ಯತ್ವವನ್ನು ಪಡೆದುಕೊಳ್ಳಲು ಅರ್ಹರಾಗಿರುತ್ತಾರೆ ಎಂದರು.

ಹೋಬಳಿ ಅಧ್ಯಕ್ಷ ಬಿ.ಎಸ್. ಅನಂತ್‍ಕುಮಾರ್ ಮಾತನಾಡಿದರು. ಸಭೆಯಲ್ಲಿ ವಿವಿಧ ಪಕ್ಷಗಳನ್ನು ತೊರೆದ ಕಾರ್ಯಕರ್ತರು ಐಎನ್‍ಟಿಯುಸಿ ಮೂಲಕ ಕಾಂಗ್ರೆಸ್ ಪಕ್ಷ ಸೇರ್ಪಡೆಗೊಂಡರು. ವೇದಿಕೆಯಲ್ಲಿ ಸಂಘಟನೆಯ ಜಿಲ್ಲಾ ಉಪಾಧ್ಯಕ್ಷ ಸಿದ್ದಲಿಂಗಪುರ ಕಿಶೋರ್, ಜಿಲ್ಲಾ ಸಂಘಟನಾ ಕಾರ್ಯದರ್ಶಿ ಅಶ್ರಫ್, ಪ್ರಮುಖರುಗಳಾದ ಹೊಸಬೀಡು ಹೂವಯ್ಯ, ಗೋವಿಂದರಾಜ್ ದಾಸ್, ಯತೀಶ್ ಉಪಸ್ಥಿತರಿದ್ದರು.