ಮಡಿಕೇರಿ, ಜು. 14: ಕೊಡಗು ಜಿಲ್ಲೆಯಲ್ಲಿ ನಿರಂತರವಾಗಿ ಕಳೆದ 3 ವರ್ಷಗಳಿಂದ ಮಳೆ ಪ್ರಮಾಣ ಕ್ಷೀಣಿಸುತ್ತಿದ್ದು, ಪ್ರಸ್ತುತ ಸಾಲಿನಲ್ಲಿಯೂ ಕೂಡಾ ಮಳೆಯ ಪ್ರಮಾಣ ಇಳಿಮುಖವಾಗಿದೆ. ಬಹುತೇಕ ಅಂತರ್ಜಲ ಕುಸಿಯುತ್ತಿರುವದರಿಂದ ಮುಂದಿನ ದಿನಗಳಲ್ಲಿ ಕೊಡಗಿನ ಬಹುತೇಕ ಗ್ರಾಮಗಳಲ್ಲಿ ಕುಡಿಯುವ ನೀರಿಗಾಗಿ ಹಾಹಾಕಾರ ತಲೆದೋರುವದರಿಂದ ಸರಕಾರ ಈಗಲೇ ಎಚ್ಚೆತ್ತುಕೊಂಡಿದ್ದು, ಬಹುಗ್ರಾಮ ಕುಡಿಯುವ ನೀರಿನ ಯೋಜನೆಯನ್ನು ಅನುಷ್ಠಾನ ಗೊಳಿಸಲು ಮುಂದಾಗಬೇಕಾಗಿದೆ ಎಂದು ಜಿ.ಪಂ. ಅಧ್ಯಕ್ಷ ಬಿ.ಎ. ಹರೀಶ್ ಸರಕಾರಕ್ಕೆ ಮನವಿ ಪತ್ರ ಸಲ್ಲಿಸಿ ಆಗ್ರಹಿಸಿದ್ದಾರೆ.
ಜಿಲ್ಲೆಯಲ್ಲಿ ಹಲವಾರು ನದಿ ತೊರೆಗಳು ಹರಿಯುತ್ತಿದ್ದು, ನದಿಗಳಿಂದ ಕುಡಿಯುವ ನೀರಿನ ಸದ್ಬಳಕೆ ಮಾಡುವಲ್ಲಿ ಸರಕಾರ ವಿಫಲವಾಗಿದ್ದು, ಸರಕಾರ ಮೊಳಕ್ಕೊಂದು ಕೊಳವೆ ಬಾವಿ ತೆಗೆಯುತ್ತಿರುವ ದರಿಂದ ನೀರಿನ ಅಂತರ್ಜಲ ಮಟ್ಟ ಕುಸಿಯುತ್ತಿದೆ. 50-60 ಅಡಿಗಳಲ್ಲಿ ಈ ಹಿಂದೆ ನೀರು ಲಭಿಸುತ್ತಿತ್ತು. ಆದರೆ ಅಂತರ್ಜಲ ಕುಸಿಯುತ್ತಿರುವ ದರಿಂದ ಮುನ್ನೂರು ನಾನೂರು ಅಡಿಗಳಷ್ಟು ಕೊರೆದರೂ ಕೂಡಾ ನೀರು ಲಭಿಸುತ್ತಿಲ್ಲದಿರುವದು ವಿಪರ್ಯಾಸವೇ ಸರಿ. ಬರ ಪರಿಹಾರ ಕಾಮಗಾರಿಗಳಲ್ಲಿ ತೆರೆದ ಬಾವಿಗಳಿಗೆ ಅನುದಾನ
(ಮೊದಲ ಪುಟದಿಂದ) ಒದಗಿಸಿದರೂ ಬಹುತೇಕ ಕೊಡಗಿನಲ್ಲಿ ಮಳೆಯ ಪ್ರಮಾಣ ಕಡಿಮೆಯಾಗಿರುವದರಿಂದ ತೆರೆದ ಬಾವಿಗಳು ಮತ್ತು ಬೋರ್ವೆಲ್ಗಳು ನೀರಿಲ್ಲದೆ ಬತ್ತಿ ಹೋಗಿವೆ. ಈ ಕೊರತೆಯನ್ನು ನೀಗಿಸಲು ಕೊಡಗಿನಲ್ಲಿ ಹರಿಯುತ್ತಿರುವ ನದಿಗಳಿಂದ ಸಮೀಪವಿರುವ ಗ್ರಾಮಗಳಿಗೆ ಕುಡಿಯುವ ನೀರನ್ನು ಒದಗಿಸಲು ಬಹು ಗ್ರಾಮ ಕುಡಿಯುವ ನೀರು ಯೋಜನೆ ಸಹಕಾರಿಯಾಗಲಿದೆ ಎಂದು ಮನವರಿಕೆ ಮಾಡಿದ್ದಾರೆ.
ಈಗಾಗಲೇ ಶಾಸಕರುಗಳಾದ ಕೆ.ಜಿ. ಬೋಪಯ್ಯ ಮತ್ತು ಅಪ್ಪಚ್ಚು ರಂಜನ್ ಅವರುಗಳು ಬಹುಗ್ರಾಮ ಕುಡಿಯುವ ನೀರಿನ ಯೋಜನೆಗಾಗಿ ಈ ಕೆಳಗಿನ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳುವಂತೆ ಕೋರಿ ಸರಕಾರಕ್ಕೆ ಪ್ರಸ್ತಾವನೆಯನ್ನು ಕಳೆದ 3 ವರ್ಷಗಳ ಹಿಂದೆಯೇ ಕಳುಹಿಸಿದ್ದು, ಸರಕಾರ ಇದನ್ನು ಕೈಗೆತ್ತಿಕೊಳ್ಳಲು ಮೀನಾಮೇಷ ಎಣಿಸುತ್ತಿದೆ. ಈ ಹಿಂದೆ ಶಾಸಕರು ಸೂಚಿಸಿದ ಕಾಮಗಾರಿಗಳು ಈ ಕೆಳಗಿನಂತಿವೆ.
ಕಾವೇರಿ ನದಿಯಿಂದ ನೆಲ್ಯಹುದಿಕೇರಿ, ವಾಲ್ನೂರು - ತ್ಯಾಗತ್ತೂರು ಹಾಗೂ ಚೆಟ್ಟಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗ್ರಾಮಗಳಿಗೆ ಕುಡಿಯುವ ನೀರಿನ ಯೋಜನೆ, ಕಣಿವೆ ಕಾವೇರಿ ಹೊಳೆಯಿಂದ ತೊರೆನೂರು ಮುಖಾಂತರ ಆಲೂರು - ಸಿದ್ದಾಪುರದ ಸುತ್ತಮುತ್ತಲ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗ್ರಾಮಗಳಿಗೆ ಕುಡಿಯುವ ನೀರಿನ ಯೋಜನೆ, ಕಾವೇರಿ ನದಿಯಿಂದ ಹಾಲುಗುಂದ, ಕಣ್ಣಂಗಾಲ, ಅಮ್ಮತ್ತಿ, ಕಾರ್ಮಾಡು, ಸಿದ್ದಾಪುರ, ಪಾಲಿಬೆಟ್ಟ, ಹೊಸೂರು, ಗೋಣಿಕೊಪ್ಪ ಗ್ರಾಮ ಪಂಚಾಯಿತಿ ವ್ಯಾಪ್ರಿಯ ಗ್ರಾಮಗಳಿಗೆ ಕುಡಿಯುವ ನೀರಿನ ಯೋಜನೆ, ಬಿ. ಶೆಟ್ಟಿಗೇರಿ ಕೊಂಗಣ ಹೊಳೆಯಿಂದ ದಕ್ಷಿಣ ಕೊಡಗಿನ ಬಹುತೇಕ ಗ್ರಾಮಗಳಿಗೆ ಕುಡಿಯುವ ನೀರಿನ ಯೋಜನೆ, ನಬಾರ್ಡ್ ಅನುದಾನದಲ್ಲಿ ಕದನೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗ್ರಾಮಗಳಿಗೆ ಕುಡಿಯುವ ನೀರಿನ ಯೋಜನೆ. ಶಾಸಕರುಗಳು ಸೂಚಿಸಿದ ಪ್ರಸ್ತಾವನೆಗಳು ರಾಜ್ಯ ಸರಕಾರದ ಮುಂದೆ ಕಳೆದ 3 ವರ್ಷಗಳಿಂದ ಇದ್ದು, ಶಾಸಕ ಕೆ.ಜಿ. ಬೋಪಯ್ಯನವರು ಈ ಬಗ್ಗೆ ಕಳೆದ ಅಧಿವೇಶನದಲ್ಲಿ ಪ್ರಸ್ತಾಪಿಸಿ, ಈ ಯೋಜನೆಗಳ ಬಗ್ಗೆ ರಾಜ್ಯ ಸರಕಾರ ನಿರ್ಲಕ್ಷ್ಯ ಧೋರಣೆ ತೋರುತ್ತಿರುವ ಬಗ್ಗೆ ಆಕ್ಷೇಪಣೆ ವ್ಯಕ್ತಪಡಿಸಿರುತ್ತಾರೆ. ರಾಜ್ಯ ಸರಕಾರವು ಈ ಪ್ರಸ್ತಾವನೆಯನ್ನು ಒಪ್ಪಿ ಈ ಕಡತವನ್ನು ಕೇಂದ್ರ ಸರಕಾರಕ್ಕೆ ಸಲ್ಲಿಸಿದಲ್ಲಿ, ಬಹುಗ್ರಾಮ ಕುಡಿಯುವ ನೀರಿನ ಯೋಜನೆಗೆ ಸಾಕಷ್ಟು ಪ್ರಮಾಣದ ಅನುದಾನ ಲಭ್ಯವಿರುವದರಿಂದ ರಾಜ್ಯ ಸರಕಾರ ಶೀಘ್ರವಾಗಿ ಕೇಂದ್ರಕ್ಕೆ ಕಡತವನ್ನು ಸಲ್ಲಿಸುವ ಬಗ್ಗೆ ಕ್ರಮ ಕೈಗೊಂಡು ಕಾರ್ಯರೂಪಕ್ಕೆ ತರಬೇಕಾಗಿದೆ ಎಂದು ಆಗ್ರಹಿಸಿದ್ದಾರೆ.
ಕುಡಿಯುವ ನೀರಿನ ಉದ್ದೇಶವಾಗಿರುವದರಿಂದ ಜಿಲ್ಲೆಯಲ್ಲಿ ಪಕ್ಷಾತೀತವಾಗಿ ಸಂಘಟಿಸಿ ಜಿಲ್ಲೆಯಾದ್ಯಂತ ಹೋರಾಟ ಹಮ್ಮಿಕೊಳ್ಳಲಾಗುವದು ಎಂದು ಎಚ್ಚರಿಕೆ ನೀಡಿದ್ದಾರೆ.