ಮಡಿಕೇರಿ, ಜು. 14 : ದಕ್ಷಿಣ ಕನ್ನಡ ಜಿಲ್ಲೆಯ ಕಲ್ಲಡ್ಕ ಹಾಗೂ ಬಂಟ್ವಾಳÀದಲ್ಲಿ ನಡೆದÀ ಕೋಮು ಗಲಭೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಂಸದರಾದ ಶೋಭ ಕರಂದ್ಲಾಜೆ, ನಳೀನ್ ಕುಮಾರ್ ಕಟೀಲ್ ಹಾಗೂ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರುಗಳು ತಮ್ಮ ತಮ್ಮ ಸ್ಥಾನಗಳಿಗೆ ರಾಜಿನಾಮೆ ನೀಡಬೇಕೆಂದು ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾದ ಕೊಡಗು ಜಿಲ್ಲಾ ಸಮಿತಿ ಒತ್ತಾಯಿಸಿದೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಪಿಎಫ್‍ಐ ಸಂಘನೆಯ ಜಿಲ್ಲಾಧ್ಯಕ್ಷ ಟಿ.ಎ. ಹ್ಯಾರಿಸ್, ಮುಂಬರುವ ಚುನಾವಣೆಯನ್ನು ದೃಷ್ಟಿಯಲ್ಲಿಟ್ಟುಕೊಂಡು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸಂಘ ಪರಿವಾರ ಹಾಗೂ ಬಿಜೆಪಿ ಪ್ರಮುಖರು ಒಂದು ಕೋಮಿನ ಮೇಲೆ ದೌರ್ಜನ್ಯವೆಸಗುತ್ತಾ ಬಂದಿದೆ. ಅಮಾಯಕ ಹಿಂದೂಗಳನ್ನು ಮುಸ್ಲಿಮರ ವಿರುದ್ಧ ಎತ್ತಿಕಟ್ಟುವ ಕೆಲಸವನ್ನು ನಿರಂತರವಾಗಿ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.

ಕಲ್ಲಡ್ಕದ ಗಲಭೆಗೆ ಸಂಘ ಪರಿವಾರದ ಪ್ರಭಾಕರ ಭಟ್ ಮೂಲ ಕಾರಣ ಎಂಬವದು ಪೊಲೀಸ್ ಇಲಾಖೆಗೆ ಗೊತ್ತಿದ್ದರೂ ಕ್ರಮ ಜರುಗಿಸದಂತೆ ಬಿಜೆಪಿ ಒತ್ತಡ ಹೇರುತ್ತಿದೆ. ನಿಷೇಧಾಜ್ಞೆ ಜಾರಿಯಲ್ಲಿದ್ದರೂ ಅದನ್ನು ಉಲ್ಲಂಘಿಸಿ ಕೋಮು ಭಾವನೆ ಕೆರಳಿಸುವ ರೀತಿಯಲ್ಲಿ ಮೆರವಣಿಗೆ ಹಾಗೂ ಭಾಷಣಗಳನ್ನು ಬಿಜೆಪಿಯ ಸಂಸದರು ಮಾಡಿದ್ದಾರೆ ಎಂದು ಆರೋಪಿಸಿದ ಹ್ಯಾರಿಸ್, ಸಮಾಜಘಾತುಕ ಶಕ್ತಿಗಳ ವಿರುದ್ದ ಸರಕಾರ ನಿರ್ಧಾಕ್ಷಿಣ್ಯ ಕ್ರಮ ಜರುಗಿಸಬೇಕೆಂದು ಒತ್ತಾಯಿಸಿದರು.

ಗಲಭೆಯನ್ನು ಮುಂದಿಟ್ಟುಕೊಂಡು ಪಾಪ್ಯುಲರ್ ಫ್ರಂಟ್ ಹಾಗೂ ಎಸ್‍ಡಿಪಿಐ ಸಂಘಟನೆಗಳನ್ನು ನಿಷೇಧಿಸುವಂತೆ ಒತ್ತಾಯಿಸುತ್ತಿರುವ ಸಂಘ ಪರಿವಾರದ ಕಾರ್ಯಕರ್ತರು ತಮ್ಮ ತಪ್ಪನ್ನು ಇತರರ ಮೇಲೆ ಹೇರಲು ಪ್ರಯತ್ನಿಸುತ್ತಿದ್ದಾರೆ. ಬಂಟ್ವಾಳದಲ್ಲಿ ನಡೆದ ಹರೀಶ್ ಪೂಜಾರಿಯ ಕೊಲೆ, ಬಜ್ಪೆಯ ಕಾರ್ತಿಕ್ ರಾಜ್ ಹಾಗೂ ಉಡುಪಿಯ ಪ್ರವೀಣ್ ಪೂಜಾರಿಯ ಕೊಲೆ ಸೇರಿದಂತೆ ಇನ್ನೂ ಕೆಲವು ಹಿಂದೂಗಳ ಹತ್ಯೆಯನ್ನು ಮಾಡಿದವರು ಯಾರು ಎನ್ನುವದನ್ನು ಸಂಘ ಪರಿವಾರದ ನಾಯಕರು ಜನತೆಯ ಮುಂದಿಡಲಿ ಎಂದು ಅವರು ಆಗ್ರಹಿಸಿದರು.

ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ಕಾರ್ಯದರ್ಶಿ ಟಿ.ಎಂ. ಇಬ್ರಾಹಿಂ, ಜಿಲ್ಲಾ ಸಮಿತಿ ಸದಸ್ಯ ರಿಯಾಝ್, ನಗರ ಘಟಕ ಕಾರ್ಯದರ್ಶಿ ಜಲೀಲ್, ಸದಸ್ಯರಾದ ಅಬ್ದುಲ್ ಸತ್ತಾರ್ ಹಾಗೂ ಮನ್ಸೂರ್ ಉಪಸ್ಥಿತರಿದ್ದರು.