ಸುಂಟಿಕೊಪ್ಪ, ಜು. 14: ತಾ. 12ರಿಂದ ಸುಂಟಿಕೊಪ್ಪ ವಿಭಾಗದಲ್ಲಿ ಪುರ್ನವಸ್ಸು ಮಳೆಯ ಆರ್ಭಟ ಮುಂದುವರಿದಿದ್ದು, ರೈತರ ಮುಖದಲ್ಲಿ ಆಶಾಕಿರಣ ಮೂಡಿದೆ. ಭತ್ತದ ಗದ್ದೆಗಳನ್ನು ಪಾಳುಬಿಟ್ಟ ರೈತರು ಕೂಲಿಕಾರ್ಮಿಕರ ಸಮಸ್ಯೆ, ದುಬಾರಿ ಸಂಬಳದಿಂದ ಹೈರಾಣಾಗಿ ಹೋಗಿದ್ದಾರೆ. ಕನಿಷ್ಟ ತಮ್ಮ ವಾರ್ಷಿಕ ಖರ್ಚಿಗಾಗಿ ಒಂದೆರೆಡು ಗದ್ದೆಯಲ್ಲಿ ಭತ್ತದ ನಾಟಿ ಬೆಳೆಯುವವರೂ ಇದ್ದಾರೆ. ಜೂನ್ ತಿಂಗಳಲ್ಲಿ ಉತ್ತಮ ಮಳೆಯಾಗಿದ್ದರೆ ಗದ್ದೆಯಲ್ಲಿ ಸಸಿ ಮಡಿಗೆ ಹದಮಾಡಿ ಮೊಳಕೆ ಹಾಕುವ ಕಾರ್ಯ ಮಾಡಲಾಗುತ್ತಿತ್ತು. ಜುಲೈನಲ್ಲಿ ಭತ್ತದ ಗದ್ದೆಯನ್ನು ಹದಮಾಡಿ ಉತ್ತಮ ಫಸಲು ನೀಡುವ ಭತ್ತದ ತಳಿಯನ್ನು ಗದ್ದೆಗೆ ಹಾಕುವ ಮೂಲಕ ಕೃಷಿಕರ ಚಟುವಟಿಕೆಗಳನ್ನು ಉಳಿಸಿ ಪೋಷಿಸಲು ಗ್ರಾಮೀಣ ರೈತರು ಪ್ರಯತ್ನಿಸುತ್ತಿರುವದು ಕಂಡು ಬಂದಿದೆ.

ಸುಂಟಿಕೊಪ್ಪ ವಿಭಾಗದ ಗದ್ದೆಹಳ್ಳ, ಎಮ್ಮೆಗುಂಡಿ, ಶ್ರೀದೇವಿ, ಕೆಂಚೆಟ್ಟಿ, ಗಿರಿಯಪ್ಪಮನೆ, ಈರಳೆವಳಮುಡಿ, ಅಭ್ಯತ್‍ಮಂಗಲ, ಕೆದಕಲ್, ಹೊರೂರು, ಹರದೂರು, ಗರಗಂದೂರು, ನಾಕೂರು ಶಿರಂಗಾಲ, ಕೊಡಗರಹಳ್ಳಿ, ಕಂಬಿಬಾಣೆ ವಿಭಾಗದ ರೈತರು ಪ್ರತಿವರ್ಷ ತಮ್ಮ ಸ್ವಾಧೀನದಲ್ಲಿರುವ ಗದ್ದೆಯಲ್ಲಿ ಕೃಷಿ ಇಲಾಖೆಯಿಂದ ಭತ್ತದ ಬೀಜವನ್ನು ಪಡೆದುಕೊಂಡು ಕೃಷಿ ಮಾಡುತ್ತಾ ಬಂದಿದ್ದಾರೆ. ಅನ್ನದಾತ ರೈತರಿಗೆ ಇಂದಿನ ಐಟಿಬಿಟಿ ಯುಗದಲ್ಲಿ ಸರಕಾರದ ಸರಿಯಾದ ಪ್ರೋತ್ಸಾಹ ದೊರೆಯದೆ ಇರುವದರಿಂದ ಸಾವಿರಾರು ಎಕ್ರೆ ಭತ್ತದ ಗದ್ದೆಗಳು ಪಾಳು ಬಿದ್ದಿರುವದು ಎಲ್ಲೆಡೆ ಕಾಣುತ್ತಿದೆ. ಕೆಲ ಕಾಫಿಬೆಳೆಗಾರರು ಭತ್ತದ ಗದ್ದೆಯನ್ನು ಕಾಫಿ, ಅಡಕೆ, ತೋಟವಾಗಿ ಪರಿವರ್ತಿಸಿದ್ದಾರೆ. ರೈತರಿಗೆ ಸರಕಾರದ ಪ್ರೋತ್ಸಾಹ ಲಭಿಸಿದರೆ ಅಕ್ಕಿ, ಗೋಧಿ, ಮಕ್ಕೆಜೋಳ, ರಾಗಿ, ಮೆಂತೆ, ಕೃಷಿಗೆ ಹೆಗಲು ಕೊಡಲಿದ್ದಾರೆ. ಅದಕ್ಕೆ ಸರಕಾರದ ಆಭಯ ಹಸ್ತವನ್ನು ರೈತರು ನಿರೀಕ್ಷಿಸುತ್ತಿದ್ದಾರೆ.

ಮಳೆ ಹೆಚ್ಚಳ: ಸುಂಟಿಕೊಪ್ಪ ಹೋಬಳಿಯಲ್ಲಿ ಕಳೆದ ವರ್ಷ ತಾ. 12 ರವರೆಗೆ 20.54 ಇಂಚು ಮಳೆಯಾಗಿತ್ತು.

ಈ ವರ್ಷ ಜನವರಿಯಿಂದ ಜುಲೈ 12ರವರೆಗೆ 25.01 ಇಂಚು ಮಳೆಯಾಗಿದೆ. ಈ ವರ್ಷ 4.54 ಇಂಚು ಅಧಿಕ ಮಳೆಯಾಗಿದ್ದರೂ ಜೂನ್ ಅಂತ್ಯಕ್ಕೆ ಜುಲೈನಲ್ಲಿ ಪ್ರತಿ ವರ್ಷದಂತೆ ಮುಂಗಾರು ಕಡಿಮೆಯಾಗಿದ್ದರಿಂದ ಕಾಫಿ ಬೆಳೆಗಾರರು ರೈತರು ಮಳೆಗಾಗಿ ಪ್ರಾರ್ಥಿಸುತ್ತಿದ್ದಾರೆ. ಪುನರ್ವಸು ಮಳೆಯ ಬಿರುಸು ಅಧಿಕವಾಗಿದ್ದು ಜುಲೈ 20 ರಿಂದ ಪುಷ್ಯ ಮಳೆ ಆರಂಭಗೊಳ್ಳಲಿದ್ದು ಜನಸಾಮಾನ್ಯರು ರೈತರು ಕಾಫಿ ಬೇಳೆಗಾರರು ಉತ್ತಮ ಮಳೆ ನಿರೀಕ್ಷೆಯಲ್ಲಿ ಕಾತುರರಾಗಿದ್ದಾರೆ.