ಮಡಿಕೇರಿ, ಜು. 15: ಭಾರತದ ವಿರುದ್ಧ ಚೀನಾ ನಡೆಸುತ್ತಿರುವ ಮಿಲಿಟರಿ ಆಕ್ರಮಣ ಎಲ್ಲರ ಕಣ್ಣಿಗೆ ಕಂಡು ಬಂದಿದ್ದರೂ ಚೀನಾದ ಆರ್ಥಿಕ ಆಕ್ರಮಣ ಇನ್ನು ಹೆಚ್ಚು ಅಪಾಯಕಾರಿ ಯಾಗಿದೆ. ಈ ಹಿನ್ನೆಲೆಯಲ್ಲಿ ಆ. 6 ರಿಂದ 20 ರವರೆಗೆ ರಾಷ್ಟ್ರೀಯ ಸ್ವದೇಶಿ ಸುರಕ್ಷಾ ಅಭಿಯಾನದ ಮೂಲಕ ಚೀನಾ ವಸ್ತುಗಳನ್ನು ದೇಶಾದ್ಯಂತ ಬಹಿಷ್ಕ ರಿಸುವ ನಿರ್ಧಾರ ಕೈಗೊಳ್ಳಲಾಗಿದೆ ಈ ನಿಟ್ಟಿನಲ್ಲಿ ಯೋಧರ ನಾಡು ಕೊಡಗು ಜಿಲ್ಲೆಯ ಜನತೆ ಕೂಡ ಚೀನಾ ವಸ್ತುಗಳನ್ನು ಬಹಿಷ್ಕರಿಸುವಂತೆ ಸ್ವದೇಶಿ ಜಾಗರಣಾ ಮಂಚ್‍ನ ಕರ್ನಾಟಕ-ತೆಲಂಗಾಣ ರಾಜ್ಯಗಳ ಸಂಘಟನಾ ಕಾರ್ಯದರ್ಶಿ ಸ್ವದೇಶಿ ಜಗದೀಶ್ ಕರೆ ನೀಡಿದ್ದಾರೆ.ನಗರದಲ್ಲಿಂದು ಚೀನಾ ವಸ್ತು ಬಹಿಷ್ಕಾರ ಸಂಬಂಧ ನಡೆದ ಪೂರ್ವಭಾವಿ ಸಭೆಯಲ್ಲಿ ಭಾಗವಹಿಸಿ ಮಾತನಾಡಿದರು. 1991ರಲ್ಲಿ ಭಾರತ ಮುಕ್ತ ವ್ಯಾಪಾರ ನೀತಿಯನ್ನು ಅಳವಡಿಸಿಕೊಳ್ಳುವವರೆಗೆ ಚೀನಾ ಮತ್ತು ಭಾರತದ ದ್ವಿಪಕ್ಷೀಯ ವ್ಯಾಪಾರ ಬಹಳ ಕಡಿಮೆ ಮಟ್ಟದಲ್ಲಿತ್ತು. ಆದರೆ ಕಳೆದ 25

(ಮೊದಲ ಪುಟದಿಂದ) ವರ್ಷಗಳಲ್ಲಿ ಚೀನಾದೊಂದಿಗೆ ನಮ್ಮ ದೇಶದ ವ್ಯಾಪಾರ ಸಂಬಂಧ ಬಹಳ ವೇಗವಾಗಿ ಬೆಳೆದಿದೆ.

1991ರಲ್ಲಿ ಕೆಲವೇ ದಶಲಕ್ಷ ಡಾಲರ್‍ಗಳಷ್ಟಿದ್ದ ವ್ಯಾಪಾರದ ಪ್ರಮಾಣ 2016ರಲ್ಲಿ 71 ಶತಕೋಟಿ ಡಾಲರ್‍ನಷ್ಟು ಮುಟ್ಟಿತು. ಭಾರತದೊಂದಿಗಿನ ವ್ಯಾಪಾರದಿಂದ ಚೀನಾಕ್ಕೆ ಲಾಭದಾಯಕವಾಗಿದೆ. ಆದರೆ ಭಾರತಕ್ಕೆ ಆತಂಕಕಾರಿಯಾಗಿದೆ. ಕಳೆದ 10 ವರ್ಷಗಳಲ್ಲಿ ಭಾರತ ಹಲವು ಸಂದರ್ಭಗಳಲ್ಲಿ ಭಯೋತ್ಪಾದನೆ ವಿಷಯದಲ್ಲಿ ಸಂಯುಕ್ತ ರಾಷ್ಟ್ರಗಳಲ್ಲಿ ಮಾಡಿದ ಪ್ರಸ್ತಾವನೆಯನ್ನು ಚೀನಾ ವಿರೋಧಿಸಿದೆ. ನ್ಯೂಕ್ಲಿಯರ್ ಸಪ್ಲೆಯರ್ಸ್ ಗ್ರೂಪಿಗೆ ಭಾರತ ಸೇರ್ಪಡೆಯಾಗುವದಕ್ಕೆ ಅಡ್ಡಗಾಲು ಹಾಕಿದೆ. ಬ್ರಹ್ಮಪುತ್ರ ನದಿ ನೀರನ್ನು ತಡೆಯುವ ಪ್ರಯತ್ನ ಪಾಕ್ ಆಕ್ರಮಿತ ಕಾಶ್ಮೀರ ಪ್ರದೇಶದಲ್ಲಿ ಚೀನಾ ನಡೆಸುತ್ತಿರುವ ಬಂಡವಾಳ ಹೂಡಿಕೆ, ಹಲವು ಬಾರಿ ಭಾರತ-ಚೀನಾ ಗಡಿಯಲ್ಲಿ ಚೀನಾ ಉಲ್ಲಂಘನೆ ಸೇರಿದಂತೆ ಹಲವು ರೀತಿಯಲ್ಲಿ ಶತ್ರು ದೇಶದಂತೆ ವ್ಯವಹರಿಸುತ್ತಾ ಬಂದಿದೆ. ಚೀನಾ ಭಾರತದ ಶತ್ರು ದೇಶ ಎಂಬದರಲ್ಲಿ ಅನುಮಾನವಿಲ್ಲ. ಮಿತ್ರನಂತೆ ಸೋಗಲಾಡಿತನವನ್ನು ತೋರಿಸುತ್ತಲೇ ಭಾರತದ ಮೇಲೆ ಮಿಲಿಟರಿ ಹಾಗೂ ಆರ್ಥಿಕ ಆಕ್ರಮಣಗಳನ್ನು ಮಾಡುತ್ತಲೇ ಬಂದಿದೆ ಎಂದು ಆರೋಪಿಸಿದ ಅವರು, ಈ ಹಿನ್ನೆಲೆಯಲ್ಲಿ ಆರ್ಥಿಕ ಆಕ್ರಮಣವನ್ನು ತಡೆಗಟ್ಟಲು ದೇಶದಾದ್ಯಂತ ಚೀನಾ ವಸ್ತುಗಳ ಬಹಿಷ್ಕಾರಕ್ಕೆ ನಿರ್ಧಾರಕೈಗೊಳ್ಳಲಾಗಿದೆ ಎಂದರು.

ಅಭಿಯಾನ: ಆ. 6 ರಿಂದ 20 ರವರೆಗೆ ನಗರ ಸೇರಿದಂತೆ ಗ್ರಾಮೀಣ ಪ್ರದೇಶಗಳಲ್ಲಿ ಮನೆಗಳನ್ನು ಸಂಪರ್ಕ ಮಾಡುವ ಮೂಲಕ ಅವರಲ್ಲಿ ಚೀನಾದ ವಸ್ತುಗಳನ್ನು ಬಹಿಷ್ಕರಿಸು ವಂತೆ ಜಾಗೃತಿ ಮೂಡಿಸುವದ ರೊಂದಿಗೆ ಸಹಿ ಸಂಗ್ರಹ ಮಾಡಿ ಕೇಂದ್ರ ಸರಕಾರಕ್ಕೆ ಕಳುಹಿಸಿ ಕೊಡುವಂತೆ ನಿರ್ಧಾರ ಕೈಗೊಳ್ಳಲಾಯಿತು.

ಇದೇ ಸಂದರ್ಭ ಬೈಕ್ ರ್ಯಾಲಿ, ಪಾದಯಾತ್ರೆ, ವಿಚಾರ ಸಂಕಿರಣಗಳ ಮೂಲಕ ಜನರಲ್ಲಿ ಜಾಗೃತಿ ಮೂಡಿಸುವದು, ಶಾಲಾ-ಕಾಲೇಜುಗಳಲ್ಲಿ ಕಾರ್ಯಕ್ರಮ, ಸತ್ಯಾಗೃಹ ಮೂಲಕ ಜಾಗೃತಿ ಮೂಡಿಸುವ ನಿರ್ಧಾರ ಕೈಗೊಳ್ಳಲಾಯಿತಿ.

ಈ ಸಂದರ್ಭ ಸಭೆಯಲ್ಲಿ ಪ್ರಮುಖರಾದ ಚಕ್ಕೇರ ಮನು ಕಾವೇರಪ್ಪ, ಅರುಣ್ ಕುಮಾರ್, ಶಿವಾಜಿ, ತಿಮ್ಮಪ್ಪ, ಧನಂಜಯ, ಕುಟ್ಟಂಡ ಮಿರತ್, ಶ್ಯಾಂ ಪ್ರಸಾದ್ ಹಾಗೂ ಇನ್ನಿತರರು ಉಪಸ್ಥಿತರಿದ್ದರು.

ದೆಹಲಿಯಲ್ಲಿ ರ್ಯಾಲಿ

ಚೀನಾ ವಸ್ತುಗಳನ್ನು ಬಹಿಷ್ಕರಿಸುವ ಅಭಿಯಾನದೊಂದಿಗೆ ಆ. 29 ರಂದು ದೆಹಲಿಯ ರಾಮ್‍ಲೀಲಾ ಮೈದಾನದಲ್ಲಿ ಬೃಹತ್ ರ್ಯಾಲಿ ಹಮ್ಮಿಕೊಳ್ಳಲಾಗಿದೆ. ಈ ರ್ಯಾಲಿಯಲ್ಲಿಯೂ ಜಿಲ್ಲೆಯ ಜನತೆ ಪಾಲ್ಗೊಳ್ಳುವಂತೆ ಸ್ವದೇಶಿ ಜಗದೀಶ್ ಕರೆ ನೀಡಿದ್ದಾರೆ.