ಸಿದ್ದಾಪುರ, ಜು. 15: ಪಟ್ಟಣ ದಲ್ಲೇ ಕಸ ಸುರಿದ ಗ್ರಾ.ಪಂ ನಿಲುವನ್ನು ಸಮರ್ಥಿಸಿಕೊಂಡ ಅಧ್ಯಕ್ಷರನ್ನು ಗ್ರಾಮಸ್ಥರು ತರಾಟೆಗೆ ತೆಗೆದುಕೊಂಡು, ಗ್ರಾ.ಪಂ ಮುಂಭಾಗ ಪ್ರತಿಭಟನೆ ನಡೆಸಿದ ಪ್ರಸಂಗ ಇಂದು ಎದುರಾಯಿತು.

ಸಿದ್ದಾಪುರ ಗ್ರಾ. ಪಂ.ಯ ಟ್ರಾಕ್ಟ್ರರ್ ನಲ್ಲಿ ಕಳೆದ ಎರಡು ವಾರದಿಂದ ಶೇಖರಿಸಿಟ್ಟಿದ್ದ ತ್ಯಾಜ್ಯ ಹಾಗೂ ಕೊಳೆತ ಕಸಗಳನ್ನು ಪಂಚಾಯಿತಿಯವರು ಸಿದ್ದಾಪುರ ಪಟ್ಟಣದ ಬಸ್ ನಿಲ್ದಾಣ ಸಮೀಪ ಇರುವ ಸಾರ್ವಜನಿಕ ಸ್ಥಳದಲ್ಲಿ ಶುಕ್ರವಾರ ಮಧ್ಯರಾತ್ರಿ ಸುರಿದಿದ್ದು, ಶನಿವಾರದಂದು ಪಟ್ಟಣ ವ್ಯಾಪ್ತಿಯಲ್ಲಿ ದುರ್ನಾತದಿಂದ ಸಾರ್ವಜನಿಕರು ಮೂಗು ಮುಚ್ಚಿಕೊಂಡೇ ಓಡಾಡುವಂತೆ ಪರಿಸ್ಥಿತಿ ನಿರ್ಮಾಣವಾಗಿತ್ತು. ಕಸ ಸುರಿದ ಪ್ರದೇಶದ ಸಮೀಪವೇ ಸರಕಾರಿ ಆಸ್ಪತ್ರೆ ಹಾಗೂ ದೇವಾಲಯವಿದ್ದು, ಸಾರ್ವಜನಿಕರು ಅತಿಹೆಚ್ಚು ನಡೆದಾಡುವ ಪ್ರದೇಶ ವಾಗಿದೆ. ಈ ಹಿನೆÀ್ನಲೆಯಲ್ಲಿ ಪಂಚಾಯಿತಿಯ ಬೇಜವಾಬ್ದಾರಿಯ ಬಗ್ಗೆ ವಾಹನ ಚಾಲಕರು ಹಾಗೂ ಸಾರ್ವಜನಿಕರು ಗ್ರಾಮ ಪಂಚಾಯಿತಿ ಅಧ್ಯಕ್ಷ ಮಣಿ ಅವರನ್ನು ಭೇಟಿ ಮಾಡಿ ಸಾರ್ವಜನಿಕ ಸ್ಥಳದಲ್ಲಿ ಕೊಳೆತ ಕಸವನ್ನು ತಂದು ಯಾಕೆ ಸುರಿದಿರುತ್ತೀರಾ, ಈಗಾಗಲೇ ಡೆಂಗೀ ಸೇರಿದಂತೆ ಇನ್ನಿತರ ಸಾಂಕ್ರಾಮಿಕ ರೋಗಗಳು ಹರಡಿದ್ದು, ಶುಚಿತ್ವ ಕಾಪಾಡುವಂತೆ ಹಾಗೂ ವಾಹನ ನಿಲ್ದಾಣದಲ್ಲಿ ಹಾಕಿರುವ ಕಸವನ್ನು ಕೂಡಲೇ ತೆರವುಗೊಳಿಸುವಂತೆ ಕೋರಿದರು. ಇದಕ್ಕೆ ಸಮರ್ಪಕವಾಗಿ ಉತ್ತರಿಸದ ಅಧ್ಯಕ್ಷ ಮಣಿ ಉಡಾಫೆ ಉತ್ತರ ನೀಡಿದ ಕಾರಣ ಆಕ್ರೋಶ ಗೊಂಡ ವಾಹನ ಚಾಲಕರು, ವರ್ತಕರು ಹಾಗೂ ಸಾರ್ವಜನಿಕರು ಪಂಚಾಯಿತಿ ಅಧ್ಯಕ್ಷರ ಕಾರ್ಯವೈಖರಿ ಯನ್ನು ಖಂಡಿಸಿ ಪಂಚಾಯಿತಿಯ ಕಛೇರಿ ಎದುರು ದಿಢೀರ್ ಪ್ರತಿಭಟನೆ ನಡೆಸಿದರು.

ಪ್ರತಿಭಟನಾ ಸಭೆಯಲ್ಲಿ ಮಾತನಾಡಿದ ಕಾರ್ಮಿಕ ಮುಖಂಡ ಎನ್.ಡಿ. ಕುಟ್ಟಪ್ಪ, ಗ್ರಾ.ಪಂ. ಸಮರ್ಪಕ ವಾಗಿ ಕಸವಿಲೇವಾರಿ ಮಾಡದೇ ಪಟ್ಟಣದಲ್ಲೇ ಕೊಳೆತ ತ್ಯಾಜ್ಯವನ್ನು ಸುರಿದು ಬೇಜವಾಬ್ದಾರಿ ಪ್ರದರ್ಶಿಸಿ ದ್ದಾರೆ. ಇದರಿಂದಾಗಿ ರೋಗ ರುಜಿನಗಳು ಹರಡುವ ಭೀತಿ ಎದುರಾಗಿದ್ದು, ಈ ಬಗ್ಗೆ ಅಧ್ಯಕ್ಷರ ಬಳಿ ವಿಚಾರಿಸಿದಾಗ ಅವರು ದರ್ಪದಿಂದ ವರ್ತಿಸಿದ್ದಾರೆ ಎಂದು ಆರೋಪಿಸಿದರು. ಪಂಚಾಯಿತಿ ಅಧ್ಯಕ್ಷರು ಪ್ರತಿಭಟನೆ ನಿರತರೊಂದಿಗೆ ದರ್ಪದಿಂದ ವರ್ತಿಸಿರುವದು ಖಂಡನೀಯ. ಕೂಡಲೇ ಮಣಿ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡುವಂತೆ ಒತ್ತಾಯಿಸಿದರು. ಪ್ರತಿಭಟನಾಕಾರ ಬಳಿ ಆಗಮಿಸಿದ ಅಧ್ಯಕ್ಷರು ಸಮರ್ಪಕವಾಗಿ ಉತ್ತರಿಸದ ಕಾರಣ ಪ್ರತಿಭಟನೆಕಾರರು ಅಧ್ಯಕ್ಷರನ್ನು ತರಾಟೆಗೆ ತೆಗೆದುಕೊಂಡಾಗ ಸ್ಥಳದಲ್ಲಿದ್ದ ಗ್ರಾ.ಪಂ. ಸದಸ್ಯ ಟಿ.ಹೆಚ್. ಮಂಜುನಾಥ್ ಅಧ್ಯಕ್ಷರನ್ನು ಸಮರ್ಥಿಸಿ ಮಾತನಾಡಿದರು. ಈ ಸಂದರ್ಭ ಪ್ರತಿಭಟನಾಕಾರರು ಮಂಜುನಾಥ್ ಅವರನ್ನು ತೀವ್ರವಾಗಿ ತರಾಟೆಗೆ ತೆಗೆದು ಅವರ ವಿರುದ್ಧ ಹರಿಹಾಯ್ದರು. ಇದರಿಂದಾಗಿ ಸದಸ್ಯ ಮಂಜುನಾಥ್ ತೀವ್ರ ಮುಜುಗರಕ್ಕೆ ಒಳಗಾದ ಪ್ರಸಂಗವೂ ನಡೆಯಿತು.

ಕಸವನ್ನು ತೆಗೆಯುವವರೆಗೂ ಸ್ಥಳದಿಂದ ಕದಲುವದಿಲ್ಲವೆಂದು ಪಟ್ಟುಹಿಡಿದ ಪ್ರತಿಭಟನಾಕಾರರು ಅಧ್ಯಕ್ಷ ಮಣಿ, ಪಿ.ಡಿ.ಓ ಹಾಗೂ ಆಡಳಿತ ಮಂಡಳಿಯ ವಿರುದ್ಧ ದಿಕ್ಕಾರ ಕೂಗಿ ಧರಣಿ ಕುಳಿತರು. ಈತನ್ಮದ್ಯೆ ಪಿ.ಡಿ.ಓ ವಿಶ್ವನಾಥ್ ಪ್ರತಿಭಟನಾಕಾರ ರೊಂದಿಗೆ ದೂರವಾಣಿ ಮೂಲಕ ಸಂಪರ್ಕಿಸಿ ಪಟ್ಟಣದಲ್ಲಿ ಸುರಿದಿರುವ ತ್ಯಾಜ್ಯವನ್ನು ತೆಗೆದು ಬೇರೆಡೆಗೆ ಸ್ಥಳಾಂತರಿಸುವದಾಗಿ ಭರವಸೆ ನೀಡಿದದರು. ಆದರೆ ಪ್ರತಿಭಟನಾ ಕಾರರು ಸುರಿಯುವ ಮಳೆಯನ್ನು ಲೆಕ್ಕಿಸದೆ ಪ್ಲಾಸ್ಟಿಕ್ ಹೊದಿಕೆಯನ್ನು ಗ್ರಾ.ಪಂ. ಮುಂಭಾಗ ಕಟ್ಟಿ ಅಪರಾಹ್ನ 3 ಗಂಟೆಯವರೆಗೆ ಹೋರಾಟ ಮುಂದುವರೆಸಿದರು. ಪ್ರತಿಭಟನಾ ಕಾರರ ಒತ್ತಡಕ್ಕೆ ಮಣಿದ ಗ್ರಾ.ಪಂ. ಪೌರಕಾರ್ಮಿಕರ ಸಹಾಯದಿಂದ ಕೊನೆಗೂ ಪಟ್ಟಣದಲ್ಲಿ ಸುರಿದ ತ್ಯಾಜ್ಯವನ್ನು ಟ್ರಾಕ್ಟರ್‍ನಲ್ಲಿ ತುಂಬಿಸಿ ಬೇರೆಡೆಗೆ ಸ್ಥಳಾಂತರಿಸಿತು.

ಪ್ರತಿಭಟನೆಯಲ್ಲಿ ವಾಣಿಜ್ಯ ವಾಹನ ಚಾಲಕರ ಸಂಘದ ಅಧ್ಯಕ್ಷ ಅಬ್ದುಲ್ ರಹಮಾನ್, ಭಾರತೀಯ ಮಜ್ದೂರ್ ಸಂಘದ ಅಧ್ಯಕ್ಷ ಸೂದನ ಸತೀಶ್, ವಿವಿಧ ಸಂಘಟನೆಗಳ ಪ್ರಮುಖರಾದ ಸಾಲಿ ಪೌಲೋಸ್, ಮಂಜು, ವಾಹನ ಚಾಲಕರಾದ ಪವಿತ್ರ, ರವಿ, ಸಿದ್ದಿಕ್, ವರ್ತಕರಾದ ನವೀದ್, ವಿಜಯನ್, ಆರ್. ಸುಬ್ರಮಣಿ, ಶಾಬೀರ್ ಸೇರಿದಂತೆ ಇನ್ನಿತರರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು.ಶನಿವಾರಸಂತೆ : ಕೇಂದ್ರ ಸರಕಾರ ರೈತ ವಿರೋಧಿ ನೀತಿ ಅನುಸರಿಸುತ್ತಿದೆ ಎಂದು ಆರೋಪಿಸಿ ಶನಿವಾರಸಂತೆ ಹೋಬಳಿ ಕಾಂಗ್ರೆಸ್ ವತಿಯಿಂದ ಶನಿವಾರ ಪಟ್ಟಣದಲ್ಲಿ ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಯಿತು.

ಫೀಲ್ಡ್ ಮಾರ್ಷಲ್ ಕಾರ್ಯಪ್ಪ ರಸ್ತೆಯಲ್ಲಿ ಸಾಗಿದ ಪ್ರತಿಭಟನಾ ಮೆರವಣಿಗೆ ನಾಡಕಚೇರಿ ಆವರಣದಲ್ಲಿ ಸಮಾವೇಶಗೊಂಡಿತು. ಸಂಕಷ್ಟದಲ್ಲಿರುವ ಕರ್ನಾಟಕ ರೈತರ ರಾಷ್ಟ್ರೀಕೃತ ಬ್ಯಾಂಕಿನಲ್ಲಿರುವ ಸಾಲವನ್ನು ಸಂಪೂರ್ಣ ಮನ್ನಾ ಮಾಡುವ ಬಗ್ಗೆ ಮನವಿಯನ್ನು ಪ್ರಧಾನಮಂತ್ರಿ ಅವರಿಗೆ ರವಾನಿಸುವಂತೆ ಕಂದಾಯ ಪರಿವೀಕ್ಷಕ ಮಧುಸೂದನ್ ಅವರ ಮೂಲಕ ಸಲ್ಲಿಸಲಾಯಿತು.

ಈ ಸಂದರ್ಭ ಕಾರ್ಮಿಕ ಘಟಕ ಜಿಲ್ಲಾ ಅಧ್ಯಕ್ಷ ವಿ.ಪಿ. ಶಶಿಧರ್, ತಾ.ಪಂ. ಸದಸ್ಯ ಬಿ.ಎಸ್. ಅನಂತಕುಮಾರ್ ಮಾತನಾಡಿದರು.

ಪ್ರತಿಭಟನೆಯ ನೇತೃತ್ವವನ್ನು ಸೋಮವಾರಪೇಟೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೆ.ಎಂ. ಲೋಕೇಶ್, ಕಾರ್ಯದರ್ಶಿ ಎಸ್.ಸಿ. ಶರತ್‍ಶೇಖರ್, ಕಾರ್ಮಿಕ ಘಟಕದ ರಾಜ್ಯಾಧ್ಯಕ್ಷ ಮುತ್ತಪ್ಪ, ಹೋಬಳಿ ಅಧ್ಯಕ್ಷ ಸಿ.ಬಿ. ಅಬ್ಬಾಸ್ ವಹಿಸಿದ್ದರು. ಕಾಂಗ್ರೆಸ್ ಪ್ರಮುಖರಾದ ಎಸ್.ಕೆ. ವೀರಪ್ಪ, ಕುಮುದಾ ಧರ್ಮಪ್ಪ, ಮಿಥುನ್ ಹಮೀದ್, ರಾಜಮ್ಮ ರುದ್ರಯ್ಯ, ಮಹಮ್ಮದ್ ಪಾಶ, ಬಿ.ಟಿ. ರಂಗಸ್ವಾಮಿ, ವಿ.ಟಿ. ನಾಗರಾಜ್, ಅಬ್ಬಾಸ್, ಶುಕ್ಲಾಂಬರ್, ಹರೀಶ್, ಲೀಲಾದಾಸ್, ಇತರರು ಪಾಲ್ಗೊಂಡಿದ್ದರು. ಕೂಡಿಗೆ: ಕೊಡಗು ಜಿಲ್ಲೆಯ ಕುಶಾಲನಗರ ಹೋಬಳಿ ವ್ಯಾಪ್ತಿಯಲ್ಲಿ ಸಾವಿರಾರು ಎಕರೆ ಪ್ರದೇಶದಲ್ಲಿ ಈ ವ್ಯಾಪ್ತಿಯ ಜನರು ಮಳೆಯಾಶ್ರಿತವಾಗಿ ಮೆಕ್ಕೆಜೋಳ ಬೆಳೆಯುವದು ವಾಡಿಕೆ. ಅದರಂತೆ ತಮ್ಮ ಜಮೀನಿಗೆ ರೈತರು ಬಿತ್ತನೆ ಬೀಜ ಖರೀದಿಸಿ ಬಿತ್ತನೆ ಮಾಡಿದ್ದಾರೆ.

ಆದರೆ, ಕುಶಾಲನಗರ ಹೋಬಳಿಯ ಶಿರಂಗಾಲ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಕೆಲವು ಗ್ರಾಮಗಳ ರೈತರಿಗೆ ಬೆಂಗಳೂರಿನ ಟೆಲ್ಟಾ ಸೈನ್ಸ್ ಕಾರ್ಪೋರೇಷನ್ ಕಂಪನಿಯ ವತಿಯಿಂದ ವಿತರಣೆ ಮಾಡಿರುವ ಮೆಕ್ಕೆಜೋಳದ ಬಿತ್ತನೆ ಬೀಜವು ಕಳಪೆ ಗುಣಮಟ್ಟದ್ದಾಗಿದೆ ಎಂದು ಈ ವ್ಯಾಪ್ತಿಯ ರೈತರು ಆರೋಪಿಸಿದ್ದಾರೆ.

ರೈತರು ಜಮೀನಿನನ್ನು ಕ್ರಮಬದ್ಧವಾಗಿ ಬೇಸಾಯ ಮಾಡಿ, ಬಿತ್ತನೆ ಮಾಡಲಾಗಿದ್ದರೂ ಈವರೆಗೂ ಶೇ.30 ಭಾಗದಷ್ಟು ಜೋಳ ಹುಟ್ಟಿದ್ದು, ಇನ್ನುಳಿದ ಶೇ.70 ಭಾಗದಷ್ಟು ಖಾಲಿ ಜಾಗವಾಗಿದೆ. ಈ ಬೇಸಾಯಕ್ಕೆ ರೈತರು 20 ರಿಂದ 30 ಸಾವಿರದಷ್ಟು ಹಣ ಖರ್ಚು ಮಾಡಿದ್ದರೂ ಸಹ ಪ್ರಯೋಜನವಾಗಿಲ್ಲ. ಟೆಲ್ಟಾ ಸೈನ್ಸ್ ಕಾರ್ಪೋರೇಷನ್ ಕಂಪನಿಯು ಖಾಸಗಿ ಕಂಪನಿಯಾಗಿದ್ದು, ಸಾಲವಾಗಿ ರೈತರಿಗೆ ಬಿತ್ತನೆ ಬೀಜ ಹಾಗೂ ಗೊಬ್ಬರ ನೀಡುತ್ತೇವೆ ಎಂಬ ಆಸೆ ಹುಟ್ಟಿಸಿ, ಈ ಸಾಲಿನಲ್ಲಿ ಕಳಪೆ ಮಟ್ಟದ ಬಿತ್ತನೆ ಬೀಜವನ್ನು ರೈತರುಗಳಿಗೆ ನೀಡಿ, ಬಿತ್ತನೆ ಮಾಡಿಸಿದ್ದಾರೆ ಎನ್ನಲಾಗಿದೆ.

ಜೋಳ ಸರಿಯಾಗಿ ಹುಟ್ಟದ ಕಾರಣ ರೈತರುಗಳು ಕಂಪನಿಯ ಅಧಿಕಾರಿಗಳನ್ನು ಸಂಪರ್ಕಿಸಿದರೆ ಸ್ಪಂದಿಸದ ಅಧಿಕಾರಿಗಳು ನಿರ್ಲಕ್ಷ್ಯ ತೋರಿದ ಹಿನ್ನೆಲೆಯಲ್ಲಿ ಸ್ಥಳೀಯ ಗ್ರಾಮಸ್ಥರುಗಳು ಹಾಗೂ ರೈತರು, ಬಿಜೆಪಿ ಯುವ ಮೋರ್ಚಾದ ಮುಖಂಡರುಗಳಾದ ಶಶಿಕಿರಣ್, ಗಣೇಶ್, ಕುಮಾರ್ ಇವರ ಸಹಕಾರದೊಂದಿಗೆ ಕಂಪನಿಯ ಮ್ಯಾನೇಜರ್ ಅವರನ್ನು ಶಿರಂಗಾಲಕ್ಕೆ ಕರೆಸಿ, ಜಮೀನಿನಲ್ಲಿ ಹುಟ್ಟದ ಜೋಳವನ್ನು ಪರಿಶೀಲಿಸಲಾಯಿತು.

ಸ್ಪಂದಿಸದ ಅಧಿಕಾರಿಗಳ ವಿರುದ್ಧ ಕುಶಾಲನಗರ ಗ್ರಾಮಾಂತರ ಪೊಲೀಸ್ ಠಾಣೆಗೆ ದೂರು ನೀಡಿದ ರೈತರು ಹಾಗೂ ಮುಖಂಡರುಗಳು, ಪೊಲೀಸರ ಸಹಕಾರದೊಂದಿಗೆ ಕಂಪನಿಯ ಅಧಿಕಾರಿಗಳನ್ನು ಠಾಣೆಗೆ ಕರೆಸಿದರು. ರೈತರು ಈ ಕಂಪೆನಿಯಿಂದ ಪಡೆದ 5.ಕೆ.ಜಿ. ಜೋಳದ ಬಿತ್ತನೆ ಬೀಜದ ಬ್ಯಾಗ್‍ನ ಹಣ ಹಾಗೂ ಖರ್ಚುಮಾಡಿದ ಹಣಕ್ಕೆ ಪರಿಹಾರವಾಗಿ ಒಬ್ಬೊಬ್ಬ ರೈತರಿಗೆ 5000 ರೂ. ಕೊಡುವಂತೆ ಕುಶಾಲನಗರ ಗ್ರಾಮಾಂತರ ಪೊಲೀಸ್ ಠಾಣಾಧಿಕಾರಿ ಮಹೇಶ್ ಅವರ ಸಮ್ಮುಖದಲ್ಲಿ ತೀರ್ಮಾನಿಸಿ, ಲಿಖಿತ ರೂಪದಲ್ಲಿ ಬರೆಸಿಕೊಡಲಾಯಿತು.

ಈ ಸಂದರ್ಭ ರೈತರುಗಳಾದ ಮಹಾದೇವ, ಗಂಗಾಧರ್, ಮನುಕುಮಾರ್, ಹರಿಹರ, ನರಸಿಂಹ, ವೆಂಕಟೇಶ್, ಪ್ರಸನ್ನ, ಮೋಹನ, ಗಣೇಶ್, ಕುಳ್ಳಯ್ಯ ಸೇರಿದಂತೆ ಕೂಡುಮಂಗಳೂರು ಬಿಜೆಪಿ ಯುವಮೋರ್ಚದ ಅಧ್ಯಕ್ಷ ಶಶಿಕಿರಣ್ ಇದ್ದರು.