ಸುಂಟಿಕೊಪ್ಪ, ಜು. 15: ಆಸ್ತಿ ವಿಷಯದಲ್ಲಿ ಮನಃಸ್ತಾಪದೊಂದಿಗೆ ಖಾಲಿ ಹಾಳೆಯಲ್ಲಿ ತಾಯಿಯಿಂದ ಸಹಿ ಪಡೆಯಲು ಮುಂದಾಗಿದ್ದ ವ್ಯಕ್ತಿಯೊಬ್ಬ ಈ ಕುರಿತು ಆಕ್ಷೇಪಿಸಿದ್ದ ತನ್ನ ತಮ್ಮನ ಮೇಲೆ ಗುಂಡು ಹಾರಿಸಿ ಕೊಲೆಗೈದಿರುವ ದುಷ್ಕøತ್ಯ ಇಂದು ಬೆಳಿಗ್ಗೆ ಸಂಭವಿಸಿದೆ. ಹರದೂರು ಗ್ರಾಮದ ಸುಕ್ರುಬಾಣೆ ನಿವಾಸಿ ಮೇದುರ ದಿ. ದೇವಯ್ಯ ಎಂಬವರ ಪುತ್ರರಾದ ಎಂಡಿ. ಹರೀಶ್ ಕಾವೇರಪ್ಪ ಹಾಗೂ ಎಂ.ಡಿ. ಸುರೇಶ್ ನಡುವೆ ಆಸ್ತಿ ಸಂಬಂಧ ವಿವಾದ ಹುಟ್ಟಿಕೊಂಡಿತ್ತು. ಇಂದು ಕಲಹ ವಿಕೋಪಕ್ಕೆ ತಿರುಗಿದ್ದು, ಅಣ್ಣ ಹರೀಶ್ ಕಾವೇರಪ್ಪ ತನ್ನ ತಮ್ಮ ಸುರೇಶ್ ಮೇಲೆ ಕೋವಿಯಿಂದ ಗುಂಡು ಹಾರಿಸಿ ಕೊಲೆ ಮಾಡಿದ್ದಾನೆ.

ಆರೋಪಿಯು ಕೆಲವು ದಿನಗಳಿಂದ ತಾಯಿ ಪಾರ್ವತಿ ಬಳಿ ತೆರಳಿ, ಬಿಳಿ ಹಾಳೆಯೊಂದಕ್ಕೆ ಸಹಿ ಹಾಕುವಂತೆ ಪೀಡಿಸುತ್ತಿದ್ದನೆನ್ನಲಾಗಿದ್ದು, ನಿನ್ನೆ ಕೂಡ ಮಡಿಕೇರಿಯಿಂದ ಪತ್ನಿಯೊಂದಿಗೆ ತೆರಳಿದ ಹರೀಶ್ ತಾಯಿ ಬಳಿ ಹಾಳೆಯೊಂದಕ್ಕೆ ಸಹಿ ಹಾಕುವಂತೆ ಪೀಡಿಸಿದ್ದು, ಈ ವೇಳೆ ಸುರೇಶ್ ಆಕ್ಷೇಪಿಸಿದಲ್ಲದೆ, ಪಂಚಾಯಿತಿದಾರರನ್ನು ಕರೆಸಿ ನಾಲ್ಕು ಮಂದಿ ಎದುರು ಸಮಸ್ಯೆ ಪರಿಹರಿಸಿಕೊಳ್ಳುವಂತೆ ಹೇಳಿದ್ದಾಗಿ ಗೊತ್ತಾಗಿದೆ.

ಆದರೆ ಹಠ ಬಿಡದ ಹರೀಶ್ ರಾತ್ರಿ ಪತ್ನಿಯನ್ನು ಮಡಿಕೇರಿಗೆ ಕಳುಹಿಸಿ ಬಹಳ ಹೊತ್ತು ತಮ್ಮ ಹಾಗೂ ತಾಯಿಯೊಂದಿಗೆ ಕಲಹ ಮಾಡಿದ್ದಾಗಿಯೂ, ಇಂದು ಬೆಳ್ಳಂಬೆಳಿಗ್ಗೆ ಮತ್ತೆ ತಾಯಿ ಪಾರ್ವತಿ ಬಳಿ ಸಹಿಗಾಗಿ ಹೋದಾಗ ಅಣ್ಣ ಹಾಗೂ ತಮ್ಮನ ನಡುವೆ ಮಾತಿನ ಚಕಮಕಿ ನಡೆದಿದ್ದಾಗಿ ತಿಳಿದು ಬಂದಿದೆ.

ಈ ವೇಳೆ ತಮ್ಮನಿಗೆ ಪಾಠ ಕಲಿಸುವದಾಗಿ ಕ್ರೋಧದಿಂದಲೇ ಹರೀಶ್ ರಸ್ತೆಯತ್ತ ತೆರಳಿದ್ದು, ತಮ್ಮ ಸುರೇಶ್ ಎಂದಿನಂತೆ ಗದ್ದೆಯತ್ತ ಹೋಗಿದ್ದಾನೆ. ಪೂರ್ವ ನಿಯೋಜಿತವೆಂಬಂತೆ ಹರೀಶ್ ಕಾವೇರಪ್ಪ ತನ್ನ ವಾಹನದೊಂದಿಗೆ (ಓಮ್ನಿ ಕಾರು - ಕೆಎ12 - ಪಿ-2663) ಕೋವಿ ಸಹಿತ ಹೋಗಿ ಗದ್ದೆಯಲ್ಲಿದ್ದ ತಮ್ಮನ್ನ ಬೆನ್ನಿಗೆ ಗುಂಡು ಹಾರಿಸಿದ್ದಾನೆ.

ಗುಂಡಿನ ಶಬ್ದ ಕೇಳಿ ಸುರೇಶ್ ಪತ್ನಿ ಶಾರದ ಗದ್ದೆಯತ್ತ ಹೋಗುವಷ್ಟರಲ್ಲಿ ಆರೋಪಿಯು ಆಕೆಯನ್ನು ಕೊಲ್ಲುವದಾಗಿ ಕೋವಿ ತೋರಿಸಿದ್ದು, ಭಯಗೊಂಡ ಶಾರದ ತಪ್ಪಿಸಿಕೊಂಡು ಮನೆಯತ್ತ ಓಡಿ ಹೋಗಿದ್ದಾಗಿ ತಿಳಿದು ಬಂದಿದೆ. ಇತ್ತ ಘಟನಾ ಸ್ಥಳದಿಂದ ಕೋವಿಯೊಂದಿಗೆ ವಾಹನದಲ್ಲಿ ಆರೋಪಿಯು ಪರಾರಿಯಾದ್ದುದ್ದಾಗಿ ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. ಅಲ್ಲಿಂದ ಸುಂಟಿಕೊಪ್ಪದಲ್ಲಿ ಕಾರು ನಿಲ್ಲಿಸಿ ಬೇರೆ ವಾಹನದಲ್ಲಿ ಕುಶಾಲನಗರಕ್ಕೆ ತೆರಳಿದ್ದ ಹರೀಶ್ ಕಾವೇರಪ್ಪ ಬೆಂಗಳೂರು ಬಸ್ ಏರಲು ಹೊಂಚು ಹಾಕುತ್ತಿದ್ದ ವೇಳೆ ಪೊಲೀಸ್ ಬಲೆಗೆ ಸಿಲುಕಿದ್ದಾನೆ. ಈ ಕೃತ್ಯದ ಬಗ್ಗೆ ಸುರೇಶ್ ಪತ್ನಿ ನೀಡಿದ ದೂರಿನನ್ವಯ ಆರೋಪಿಯನ್ನು ಕೋವಿ ಹಾಗೂ ವಾಹನ ಸಹಿತ ಬಂಧಿಸಲಾಗಿದೆ.

(ಮೊದಲ ಪುಟದಿಂದ) ಅಲ್ಲದೆ, ರಕ್ತದ ಮಡುವಿನಲ್ಲಿ ಬಿದ್ದಿದ್ದ ಸುರೇಶ್‍ನನ್ನು ಸುಂಟಿಕೊಪ್ಪ ಆಸ್ಪತ್ರೆಗೆ ಕರೆ ತಂದಿದ್ದು ಇಲ್ಲಿ ವೈದ್ಯರು ಲಭಿಸದೆ, ಮಡಿಕೇರಿಯ ಜಿಲ್ಲಾಸ್ಪತ್ರೆಗೆ ತರುವಷ್ಟರಲ್ಲಿ ಪ್ರಾಣಪಕ್ಷಿ ಹಾರಿ ಹೋಗಿದೆ. ದುರ್ದೈವಿ ಸುರೇಶ್ ಪತ್ನಿ ಶಾರದ, ಪುತ್ರಿ ಯಜ್ಞ ಹಾಗೂ ತಾಯಿ ಪಾರ್ವತಿಯನ್ನು ಆಗಲಿದ್ದು, ಜಿಲ್ಲಾ ಸರಕಾರಿ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ಬಳಿಕ ಈ ಸಂಜೆ ಶವವನ್ನು ಹರದೂರುವಿಗೆ ಕೊಂಡೊಯ್ಯಲಾಯಿತು. ತಾ. 16ರಂದು (ಇಂದು) ಶವ ಸಂಸ್ಕಾರ ನಡೆಯಲಿದೆ ಎಂದು ಕುಟುಂಬ ಮೂಲಗಳು ತಿಳಿಸಿವೆ.

ಆರೋಪಿ ಹರೀಶ್ ಕಾವೇರಪ್ಪ ಇಲ್ಲಿನ ಹೊಸ ಬಡಾವಣೆಯಲ್ಲಿರುವ ಕೊಡಗು ಜಿಲ್ಲಾ ಸಹಕಾರಿ ನೌಕರರ ಸಂಘದ ಕಚೇರಿಯ ವ್ಯವಸ್ಥಾಪಕನಾಗಿದ್ದು, ನಿನ್ನೆ ರಜೆಯಲ್ಲಿ ತೆರಳುವದರೊಂದಿಗೆ ಇಂದು ಬೆಳಿಗ್ಗೆ ಆಸ್ತಿಗಾಗಿ ತಮ್ಮನ್ನನ್ನು ಬಲಿ ಪಡೆದಿರುವ ಪ್ರಕರಣ ನಡೆದಿದೆ. ಸುಂಟಿಕೊಪ್ಪ ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿದೆ. ಜಿಲ್ಲಾ ಪೊಲೀಸ್ ಅಧೀಕ್ಷಕ ಪಿ ರಾಜೇಂದ್ರ ಪ್ರಸಾದ್ ಮಾರ್ಗದರ್ಶನದಲ್ಲಿ ಡಿವೈಎಸ್‍ಪಿ ಸಂಪತ್‍ಕುಮಾರ್, ವೃತ್ತ ನಿರೀಕ್ಷಕ ಕ್ಯಾತೆಗೌಡ, ಸುಂಟಿಕೊಪ್ಪ ಠಾಣಾಧಿಕಾರಿ ಬೋಜಪ್ಪ ಮತ್ತು ಪೊಲೀಸರು ಸ್ಥಳ ಮಹಜರು ನಡೆಸಿ ಕಾನೂನು ಕ್ರಮ ಕೈಗೊಂಡಿದ್ದಾರೆ.