ಸೋಮವಾರಪೇಟೆ, ಜು. 15: ತಾಲೂಕು ಕೇಂದ್ರದಲ್ಲಿರುವ ಸರ್ಕಾರಿ ಆಸ್ಪತ್ರೆ ಹಾಗೂ ತಾಲೂಕು ಕಚೇರಿಯಲ್ಲಿ ಅವ್ಯವಸ್ಥೆಗಳು ಮಿತಿಮೀರಿದ್ದು, ಆಡಳಿತಗಾರರು ನಿರ್ಲಕ್ಷ್ಯ ವಹಿಸಿದ್ದಾರೆ ಎಂದು ಆರೋಪಿಸಿರುವ ಜೆಡಿಎಸ್, ಇದನ್ನು ಖಂಡಿಸಿ ತಾ. 17 ರಂದು ಪೂರ್ವಾಹ್ನ 11 ಗಂಟೆಗೆ ನಗರದಲ್ಲಿ ಪ್ರತಿಭಟನೆ ನಡೆಸಲಾಗುವದು ಎಂದು ತಿಳಿಸಿದೆ.
ಈ ಬಗ್ಗೆ ಹೇಳಿಕೆ ನೀಡಿರುವ ಪಕ್ಷದ ಕ್ಷೇತ್ರ ಸಮಿತಿ ಅಧ್ಯಕ್ಷ ಹೆಚ್.ಆರ್. ಸುರೇಶ್, ಸೋಮವಾರಪೇಟೆ ಸರ್ಕಾರಿ ಆಸ್ಪತ್ರೆಯಲ್ಲಿ ಸ್ತ್ರೀ ರೋಗ ತಜ್ಞರು, ಅರೆವಳಿಕೆ ವೈದ್ಯರು, ಮಕ್ಕಳ ತಜ್ಞರು ಸೇರಿದಂತೆ ಇತರ ತಜ್ಞರ ಕೊರತೆಯಿದೆ. 12 ವೈದ್ಯರಿರಬೇಕಾದಲ್ಲಿ ಕೇವಲ 4 ಮಂದಿ ಕೆಲಸ ಮಾಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.
ಸೋಮವಾರಪೇಟೆ ಸರ್ಕಾರಿ ಆಸ್ಪತ್ರೆಯ ಆರೋಗ್ಯ ರಕ್ಷಾ ಸಮಿತಿ ಸಭೆ ಕಳೆದ 4 ವರ್ಷಗಳಿಂದ ನಡೆದಿಲ್ಲ. ಆಸ್ಪತ್ರೆಯ ಅವ್ಯವಸ್ಥೆಗಳಲ್ಲಿ ಯಾವದೇ ಬದಲಾವಣೆಯಾಗಿಲ್ಲ. ತಕ್ಷಣ ಸಮಿತಿಯನ್ನು ವಿಸರ್ಜಿಸಬೇಕು ಎಂದು ಸುರೇಶ್ ಆಗ್ರಹಿಸಿದ್ದಾರೆ.
ಇಲ್ಲಿನ ತಾಲೂಕು ಕಚೇರಿಯಲ್ಲಿ ಭ್ರಷ್ಟಾಚಾರ ತಾಂಡವವಾಡುತ್ತಿದೆ. ಬಡವರ ಕೆಲಸಗಳು ಸಮರ್ಪಕವಾಗಿ ನಡೆಯುತ್ತಿಲ್ಲ. ಆರ್ಟಿಸಿ ವಿತರಿಸಲು 2 ಕೌಂಟರ್ಗಳನ್ನು ತೆರೆಯುವಂತೆ ಸಚಿವರೇ ಸೂಚಿಸಿದ್ದರೂ ಇಂದಿಗೂ ಕಾರ್ಯಗತವಾಗಿಲ್ಲ. ಪಡಿತರ ವಿತರಣೆಯೂ ಪಾರದರ್ಶಕವಾಗಿಲ್ಲ. ನೆಮ್ಮದಿ ಕೇಂದ್ರದಲ್ಲಿ ಮಧ್ಯಾಹ್ನದ ನಂತರ ಆದಾಯ-ಜಾತಿ ದೃಡೀಕರಣ ಪತ್ರ ಸಿಗುತ್ತಿಲ್ಲ. ಈ ಅವ್ಯವಸ್ಥೆಗಳ ವಿರುದ್ಧ ಜೆಡಿಎಸ್ ಕಾರ್ಯಕರ್ತರಿಂದ ಪ್ರತಿಭಟನೆ ನಡೆಯಲಿದ್ದು, ಸರ್ಕಾರಿ ಆಸ್ಪತ್ರೆಯಿಂದ ತಾಲೂಕು ಕಚೇರಿವರೆಗೆ ಪ್ರತಿಭಟನಾ ಮೆರವಣಿಗೆ ನಡೆಯಲಿದೆ ಎಂದು ಮಾಹಿತಿ ನೀಡಿದ್ದಾರೆ.