ಆಲೂರು ಸಿದ್ಧಾಪುರ/ಶನಿವಾರಸಂತೆ, ಜು. 15: ಬುದ್ಧಿಜೀವಿ ಎನಿಸಿಕೊಂಡ ಮನುಷ್ಯನ ದುರಾಸೆಯ ಫಲವಾಗಿ ಇಂದು ಹವಾಮಾನದಲ್ಲಿ ಭಾರೀ ವೈಪರೀತ್ಯವನ್ನು ಅನುಭವಿಸುವಂತಹ ದುರ್ಗತಿ ಬಂದೊದಗಿದೆ ಎಂದು ಮುದ್ದಿನಕಟ್ಟೆ ಮಠದ ಅಭಿನವ ಸಿದ್ಧಲಿಂಗ ಶಿವಾಚಾರ್ಯ ಸ್ವಾಮೀಜಿ ಹೇಳಿದರು.
ಜಿಲ್ಲಾ ಶರಣ ಸಾಹಿತ್ಯ ಪರಿಷತ್ ಹಾಗೂ ಶನಿವಾರಸಂತೆಯ ಪ್ರಥಮ ದರ್ಜೆ ಕಾಲೇಜು ಇವರ ಸಂಯುಕ್ತಾಶ್ರಯದಲ್ಲಿ ಕಾಲೇಜು ಸಭಾಂಗಣದಲ್ಲಿ ಆಯೋಜಿಸಿದ್ದ ಲಿಂ. ಮಲ್ಲಮ್ಮ ಹನುಮಂತಪ್ಪ ದತ್ತಿ ಉಪನ್ಯಾಸ ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿ, ಮಾತನಾಡಿದರು.
ಇಂದು ಯಾವದೇ ಗ್ಯಾರಂಟಿ, ವಾರಂಟಿ ಇಲ್ಲದ ದೇಹವನ್ನು ಹೊಂದಿರುವ ಮನುಷ್ಯ ಅತಿಯಾಸೆ ಯಿಂದ ಜೀವನ ಪರ್ಯಂತ ಹಣ, ಆಸ್ತಿ ಗಳಿಸುತ್ತಲೇ ಹೋಗುತ್ತಾನೆ. ಆಸ್ತಿಗಾಗಿ ಇಡೀ ಕುಟುಂಬ, ನೆರೆಹೊರೆಯವರನ್ನೇ ನಿಷ್ಠುರ ಮಾಡಿಕೊಳ್ಳುತ್ತಾನೆ. ಆದರೆ ಮನುಷ್ಯ ತನ್ನ ಆಯುಷ್ಯಾವಧಿಯಲ್ಲಿ ಪರೋಪಕಾರವನ್ನು ಮಾಡುತ್ತಾ, ಸಮಾಜ ಸ್ಮರಿಸುವಂತಹ ಕಾರ್ಯಗಳನ್ನು ಮಾಡಿದರೆ ಸತ್ತಮೇಲೆ ಕೂಡ ಮೋಕ್ಷ ಸಿಗುತ್ತದೆ ಎಂಬುದನ್ನು ಮರೆತಿದ್ದಾನೆ ಎಂದರು.
ಯಾವದೇ ಜಾತಿ, ಧರ್ಮದವರಿಗೂ ಸಂಸ್ಕಾರ ಎಂಬುದು ಅಗತ್ಯ. ಈ ನಿಟ್ಟಿನಲ್ಲಿ ವಿದ್ಯಾರ್ಥಿ ಜೀವನದಿಂದಲೇ ಪರಸ್ಪರ ಅನ್ಯೋನತೆ, ಸಹಕಾರ ಮನೋಭಾವನೆಗಳನ್ನು ಮೈಗೂಡಿಸಿಕೊಳ್ಳುವಂತೆ ಕರೆ ನೀಡಿದರು.
ಕಾರ್ಯಕ್ರಮದಲ್ಲಿ ಕೃಷಿಯಲ್ಲಿ ವೈಜ್ಞಾನಿಕ ಪದ್ಧತಿ ಎಂಬ ವಿಷಯದ ಬಗ್ಗೆ ಶನಿವಾರಸಂತೆ ವಿಘ್ನೇಶ್ವರ ಬಾಲಿಕಾ ಪದವಿ ಪೂರ್ವ ಕಾಲೇಜಿನ ಉಪನ್ಯಾಸಕ ಕೆ.ಪಿ. ಜಯಕುಮಾರ್ ಮಾತನಾಡಿ, ಈ ಹಿಂದೆ ಸಂತೋಷ ತರಿಸುತ್ತಿದ್ದ ಕೃಷಿ ಇಂದು ಕಣ್ಣೀರು ತರಿಸುತ್ತಿದೆ. ಇಂದು ಮಳೆ, ಬೆಳೆ, ಬೆಲೆ ಮಾತ್ರವಲ್ಲ ಅದಕ್ಕೂ ಮಿಗಿಲಾಗಿ ಕಾರ್ಮಿಕರು ಕೈಕೊಡುತ್ತಿದ್ದಾರೆ. ಕೃಷಿಕರ ದನ ಮೇಯಿಸಲು ಹುಲ್ಲುಗಾವಲಿಲ್ಲ, ಕಾಯಲು ಕಾರ್ಮಿಕರಿಲ್ಲ, ಕೃಷಿಕರ ಮಕ್ಕಳಿಗೆ ಪುರುಸೊತ್ತೇ ಇಲ್ಲ. ಕೃಷಿಕರ ಕುಟುಂಬದವರಿಗೆ ಬದುಕಿಗಿಂತ ಮನರಂಜನೆಯೇ ಮುಖ್ಯವಾಗಿದೆ. ಹೀಗಾಗಿ ಈ ಎಲ್ಲಾ ಇಲ್ಲಗಳ ನಡುವೆ ಕೃಷಿಕ ಇಂದು ಯಾಂತ್ರೀಕೃತ ಪದ್ಧತಿಗೆ ಮಾರುಹೋಗಬೇಕಾಗಿದೆ ಎಂದರು.
ಕಾರ್ಯಕ್ರಮವನ್ನು ಉದ್ಘಾಟಿಸಿದ ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷೆ ಲೋಕೇಶ್ವರಿ ಗೋಪಾಲ್ ಮಾತನಾಡಿ, ಕೃಷಿಕರ ಮನೆಗೆ ಸೊಸೆಯಾಗಿ ಬರುವವರನ್ನು ತಮ್ಮ ಮಗಳಂತೆ ಗೌರವಿಸುತ್ತಾರೆ. ಆದರೆ ನಗರ ಪ್ರದೇಶಗಳಿಗೆ ಮದುವೆಯಾಗಿ ಬರುವ ಹೆಣ್ಣು ಮಕ್ಕಳನ್ನು ದುಡಿದು ಹಣಗಳಿಸುವ ಕಾರ್ಮಿಕರಂತೆ ಕಾಣುತ್ತಾರೆ. ನಮ್ಮ ಕೃಷಿ ಭೂಮಿಯಲ್ಲಿ ದುಡಿಯಲು ಯಾರೂ ಹಿಂಜರಿಯಬಾರದು. ಕೃಷಿಕರ ಮಕ್ಕಳು ತಮ್ಮ ತಂದೆ, ತಾಯಿಯನ್ನು ಪೂಜ್ಯ ಭಾವನೆಯಿಂದ ಕಾಣುವಂತಾಗ ಬೇಕೆಂದರು. ಶರಣ ಸಾಹಿತ್ಯ ಪರಿಷತ್ ಕೇವಲ ಒಂದು ವರ್ಗಕ್ಕೆ ಮೀಸಲು ಎಂದುಕೊಂಡಿದ್ದೆ. ಆದರೆ 12ನೇ ಶತಮಾನದಲ್ಲಿ ಬಸವಣ್ಣನವರು ಸಮಾನತೆಯನ್ನು ಸಾರಿದವರು. ಅದರಂತೆ ಇಂದು ಶರಣ ಸಾಹಿತ್ಯ ಪರಿಷತ್ ಸಮಾಜದಲ್ಲಿನ ಎಲ್ಲಾ ಜಾತಿ, ಮತ, ಧರ್ಮದವರನ್ನು ಸದಸ್ಯ ರನ್ನಾಗಿಸಿ ಕೊಂಡು ಸಮಾನತೆಯ ಸಮಾಜವನ್ನು ನಿರ್ಮಿಸಲು ಹೊರಟಿರುವದು ಉತ್ತಮ ಬೆಳವಣಿಗೆಯಾಗಿದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಶರಣ ಸಾಹಿತ್ಯ ಪರಿಷತ್‍ನ ಅಧ್ಯಕ್ಷ ಎಸ್. ಮಹೇಶ್ ಮಾತನಾಡಿ, ಸಮಾಜದ ಸಮಾನತೆಗಾಗಿ ಶರಣ ಸಾಹಿತ್ಯ ಪರಿಷತ್ ಶ್ರಮಿಸುತ್ತಿದ್ದು, ಮುಂದಿನ ದಿನಗಳಲ್ಲಿ ಜಿಲ್ಲೆಯ ವಿವಿಧೆಡೆಗಳಲ್ಲಿ ದತ್ತಿ ಉಪನ್ಯಾಸ ಹಮ್ಮಿಕೊಳ್ಳುತ್ತಾ, ಸಾಹಿತ್ಯ, ಕೃಷಿ, ಸಂಸ್ಕøತಿ ಸೇರಿದಂತೆ ವಿವಿಧ ಕ್ಷೇತ್ರಗಳ ಬಗ್ಗೆ ಸಾರ್ವಜನಿಕರಲ್ಲಿ ಆಸಕ್ತಿ ಮೂಡಿಸುವ ಕಾರ್ಯವನ್ನು ಮಾಡಲಿದೆ ಎಂದರು.
ವೇದಿಕೆಯಲ್ಲಿ ಜಿ.ಪಂ. ಮಾಜಿ ಸದಸ್ಯ ಡಿ.ಬಿ. ಧರ್ಮಪ್ಪ, ಶನಿವಾರಸಂತೆ ಗ್ರಾ.ಪಂ. ಅಧ್ಯಕ್ಷ ಮಹಮ್ಮದ್ ಗೌಸ್, ತಾಲೂಕು ಪಂಚಾಯಿತಿ ಸದಸ್ಯ ಅನಂತ್ ಕುಮಾರ್, ಪತ್ರ ಕರ್ತರ ಸಂಘದ ಅಧ್ಯಕ್ಷ ಹರೀಶ್, ಕಾಲೇಜಿನ ಆಡಳಿತ ಮಂಡಳಿ ಉಪಾಧ್ಯಕ್ಷ ಮಹಮ್ಮದ್ ಪಾಷ, ಕಾಲೇಜಿನ ಪ್ರಾಂಶುಪಾಲ ಉಮಾಶಂಕರ್, ತಾಲೂಕು ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ಮಹಾದೇವಪ್ಪ ಮತ್ತಿತರರು ಉಪಸ್ಥಿತರಿದ್ದರು.