ಮಡಿಕೇರಿ, ಜು. 15: ಭಾರತ ದೇಶ ಅಭಿವೃದ್ಧಿ ಹೊಂದುತ್ತಿರುವ ದೇಶವಾಗಿದ್ದು, ಶೇ. 65 ರಷ್ಟಿರುವ ಜನತೆಯ ಕೈಯಲ್ಲಿ ದೇಶದ ಭವಿಷ್ಯ ಅಡಗಿದೆ ಎಂದು ಶಾಸಕ ಕೆ.ಜಿ. ಬೋಪಯ್ಯ ಅಭಿಪ್ರಾಯಪಟ್ಟಿದ್ದಾರೆ.

ನಗರದ ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆಯ ವಾರ್ಷಿಕ ಚಟುವಟಿಕೆಗಳ ಉದ್ಘಾಟನಾ ಸಮಾರಂಭ ಮತ್ತು ಪರಿಸರ ಜಾಗೃತಿ ಕಾರ್ಯಕ್ರಮ ಉದ್ಘಾಟನೆ ನೆರವೇರಿಸಿ ಮಾತನಾಡಿದರು.

ಮಾಜಿ ರಾಷ್ಟ್ರಪತಿ ದಿ. ಅಬ್ದುಲ್ ಕಲಾಂ 2020ಕ್ಕೆ ಭಾರತ ವಿಶ್ವದಲ್ಲಿ ಶಕ್ತಿಶಾಲಿ ದೇಶವಾಗಿ ರೂಪುಗೊಳ್ಳಲಿದೆ ಎಂದು ಕರೆ ನೀಡಿದ್ದು, ಆ ನಿಟ್ಟಿನಲ್ಲಿ ಯುವ ಜನತೆ ಕಾರ್ಯೋನ್ಮುಖ ವಾಗಬೇಕಾಗಿದೆ. ಪಠ್ಯ ಪುಸ್ತಕಗಳಿಗೆ ಮಾತ್ರ ಸೀಮಿತವಾಗಿ ಪದವಿ ಪಡೆಯುವದೇ ವಿದ್ಯಾರ್ಥಿಗಳ ಉದ್ದೇಶವಾಗಿರಬಾರದು. ಪಠ್ಯೇತರ ಚಟುವಟಿಕೆಗಳಲ್ಲಿ ಭಾಗವಹಿಸಿ, ಸಾಮಾಜಿಕ ಚಟುವಟಿಕೆಗಳನ್ನು ಕೈಗೊಂಡು ಮನಸ್ಸನ್ನು ಗಟ್ಟಿ ಮಾಡಿ ಕೊಂಡು ಮುಂದಿನ ಸವಾಲುಗಳಿಗೆ ವಿದ್ಯಾರ್ಥಿಗಳು ಸಿದ್ಧರಾಗಬೇಕಾಗಿದೆ. ಯುವ ಜನತೆ ತಮ್ಮಲ್ಲಿರುವ ಪ್ರತಿಭೆಗಳನ್ನು ಅನಾವರಣಗೊಳಿಸಿ ಕೊಂಡು ಸಂವಿಧಾನ ಬದ್ಧ ಆದರ್ಶಗಳೊಂದಿಗೆ ರಾಷ್ಟ್ರೀಯ ಸೇವಾ ಯೋಜನೆಗಳ ಚಟುವಟಿಕೆಗಳಲ್ಲಿ ಭಾಗವಹಿಸುವ ಮೂಲಕ ಕ್ರಿಯಾಶೀಲ ರಾಗಿಸಬೇಕು ಎಂದು ಕರೆ ನೀಡಿದರು.

ಇದೇ ಸಂದರ್ಭ ಕಾಲೇಜಿಗೆ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸಲು ಜಿಲ್ಲೆಯ ಜನಪ್ರತಿನಿಧಿಗ ಳೊಂದಿಗೆ ಚರ್ಚಿಸಿ ಕಲ್ಪಿಸುವ ಭರವಸೆ ನೀಡಿದರು.

ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ಕನ್ಯಾಡಿ ಸೇವಾ ಭಾರತಿ ಕಾರ್ಯದರ್ಶಿ ಕೆ. ವಿನಾಯಕರಾವ್ ಮಾತನಾಡಿ, ಸೇವೆಯೊಂದಿಗೆ ಏಕೆ, ಯಾವಾಗ ಮತ್ತು ಎಲ್ಲಿ ಎಂಬ ದೃಷ್ಟಿ ಇಟ್ಟುಕೊಂಡು ಮಾಡಿದಾಗ ಸೇನೆ ಸಾರ್ಥಕತೆ ಪಡೆದುಕೊಳ್ಳುತ್ತದೆ. ಮಹಾತ್ಮರು ಸೇವೆ ಮತ್ತು ತ್ಯಾಗ ಮಾಡಿದ ಪರಿಣಾಮ ಇಂದಿಗೂ ಅಜರಾಮರವಾಗಿದ್ದಾರೆ. ನಾವು ಮಾಡಿದ ಸಣ್ಣ ಸಣ್ಣ ಕೆಲಸಗಳಿಂದ ನಮಗೆ ಮಹಾನತೆ ಲಭಿಸುತ್ತದೆ. ರಾಷ್ಟ್ರೀಯ ಶಕ್ತಿಯಾಗಿ ವಿದ್ಯಾರ್ಥಿಗಳು ಜೀವನ ಸಾಗಿಸಿದಾಗ ಮಾದರಿ ವ್ಯಕ್ತಿಗಳಾಗಿ ರೂಪುಗೊಳ್ಳುತ್ತಾರೆ. ಸೇವೆಯನ್ನು ನಿತ್ಯ ಕಾಯಕ ಅಂದುಕೊಂಡು ಸಮಾಜ ಕಟ್ಟುವ ಕೆಲಸದಲ್ಲಿ ತೊಡಗಬೇಕು. ಹಿರಿಯರ ಆದರ್ಶಗಳು ವಿದ್ಯಾರ್ಥಿಗಳಿಗೆ ಪ್ರೇರಣೆಯಾಗಬೇಕು. ಯುವ ಜನತೆಯ ಕಾಯಕದಿಂದಾಗಿ ಇಂದು ಭಾರತ ದೇಶ ವಿಶ್ವದ ಪ್ರಮುಖ ರಾಷ್ಟ್ರಗಳ ಪೈಕಿ 3ನೇ ಸ್ಥಾನದಲ್ಲಿದೆ ಎಂದ ಅವರು, ಸೇವಾ ಮನೋ ಭಾವನೆಯ ಮೂಲಕ ವಿದ್ಯಾರ್ಥಿ ಜೀವನವನ್ನು ಸಾರ್ಥಕತೆಗೊಳಸಿ ಕೊಂಡು ಸಮಾಜದಲ್ಲಿ ಉತ್ತಮ ವ್ಯಕ್ತಿಯಾಗಿ ರೂಪುಗೊಳ್ಳಬೇಕು ಎಂದು ಹೇಳಿದರು.

ಸಮಾರಂಭದ ಅಧ್ಯಕ್ಷತೆ ವಹಿಸಿದ ಕಾಲೇಜಿನ ಪ್ರಾಂಶುಪಾಲೆ ಡಾ. ಪಾರ್ವತಿ ಅಪ್ಪಯ್ಯ ಮಾತನಾಡಿ, ವಿದ್ಯಾರ್ಥಿಗಳು ಸೇವೆಯ ಮೂಲಕ ತಮ್ಮ ವ್ಯಕ್ತಿತ್ವವನ್ನು ರೂಪಿಸಿಕೊಳ್ಳಬೇಕು ಎಂದು ಹೇಳಿದರು.

ಇದೇ ಸಂದರ್ಭ ವಿವಿಧ ಸ್ಪರ್ಧೆಗಳಲ್ಲಿ ಭಾಗವಹಿಸಿ ವಿಜೇತರಾದ ರಾಷ್ಟ್ರೀಯ ಸೇವಾ ಯೋಜನೆಯ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು.

ವೇದಿಕೆಯಲ್ಲಿ ಕಾಲೇಜಿನ ಶಿಕ್ಷಕ ಹಾಗೂ ಪೋಷಕರ ಸಂಘದ ಅಧ್ಯಕ್ಷ ಆನಂದ ಉಪಸ್ಥಿತರಿದ್ದರು.

ವಿದ್ಯಾರ್ಥಿನಿ ಲಿಲ್ಲಿ ಪುಷ್ಪ ಪ್ರಾರ್ಥಿಸಿ, ದಿವ್ಯಶ್ರೀ ತಂಡ ಎನ್‍ಎಸ್‍ಎಸ್ ಗೀತೆ ಹಾಡಿದರೆ, ರಾಷ್ಟ್ರೀಯ ಸೇವಾ ಯೋಜನೆ ಅಧಿಕಾರಿಗಳಾದ ಡಾ. ಮಾಧವ ಪ್ರಾಸ್ತಾವಿಕವಾಗಿ ಮಾತನಾಡಿ, ಸ್ವಾಗತಿಸಿದರು. ಗೀತಾಂಜಲಿ ವಂದಿಸಿದರು.