ಸಿದ್ದಾಪುರ, ಜು. 15: ಸಿದ್ದಾಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಅವರೆಗುಂದ ಗಿರಿಜನ ಹಾಡಿಯ ಸಮುದಾಯ ಭವನದಲ್ಲಿ ಅರಣ್ಯ ಹಕ್ಕು ಗ್ರಾಮ ಸಭೆಯು ಹಾಡಿಯ ಮುಖಂಡ ಎಂ.ಸಿ. ವಾಸು ಅಧ್ಯಕ್ಷತೆಯಲ್ಲಿ ನಡೆಯಿತು.

ಈ ಸಂದರ್ಭ ಎಂ.ಸಿ. ವಾಸು ಮಾತನಾಡಿ, ತಲೆತಲಾಂತರದಿಂದ ಹಾಡಿಯಲ್ಲಿ ವಾಸವಿರುವ ಆದಿವಾಸಿಗಳು ಮೂಲ ಸೌಲಭ್ಯ ವಂಚಿತರಾಗಿದ್ದಾರೆ. 2006ರ ಅರಣ್ಯ ಹಕ್ಕು ಕಾಯ್ದೆ ಜಾರಿಗೆ ಬಂದಿದ್ದರೂ ಕೂಡ ಅಧಿಕಾರಿಗಳ ಮತ್ತು ಜನಪ್ರತಿನಿಧಿಗಳ ನಿರ್ಲಕ್ಷ್ಯದಿಂದ ಸೌಲಭ್ಯಗಳು ಹಾಡಿಯ ಜನರಿಗೆ ತಲುಪುತ್ತಿಲ್ಲವೆಂದು ಅಸಮಾಧಾನ ವ್ಯಕ್ತಪಡಿಸಿದರು. ಸಮುದಾಯ ಹಕ್ಕುಪತ್ರ ಕೆಲವರಿಗೆ ಸಿಕ್ಕಿದೆಯಾದರೂ ಇನ್ನೂ ಹಲವರು ಹಕ್ಕುಪತ್ರದಿಂದ ವಂಚಿತರಾಗಿದ್ದಾರೆ ಎಂದು ಆರೋಪಿಸಿದರು.

ಕಾರ್ಡ್ ಸಂಸ್ಥೆಯ ರಾಯ್ ಡೇವಿಡ್ ಮಾತನಾಡಿ, ಆದಿವಾಸಿಗಳ ಹಕ್ಕನ್ನು ಕಸಿದುಕೊಳ್ಳಲಾಗುತ್ತಿದೆ ಎಂದು ಆರೋಪಿಸಿದರಲ್ಲದೇ, ಅರಣ್ಯ ಹಕ್ಕು ಕಾಯ್ದೆ ಜಾರಿಯ ಸಂದರ್ಭ ಕೇಂದ್ರದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರದಲ್ಲಿದ್ದರೇ ರಾಜ್ಯದಲ್ಲಿ ಬಿಜೆಪಿ ಅಧಿಕಾರದಲ್ಲಿತ್ತು. ಇದೀಗ ರಾಜ್ಯದಲ್ಲಿ ಕಾಂಗ್ರೆಸ್ ಮತ್ತು ಕೇಂದ್ರದಲ್ಲಿ ಬಿಜೆಪಿ ಸರ್ಕಾರ ಅಧಿಕಾರದಲ್ಲಿದೆ ಈ ಹಿನ್ನೆಲೆಯಲ್ಲಿ ಅರಣ್ಯ ಹಕ್ಕು ಕಾಯ್ದೆ ಸಮರ್ಪಕವಾಗಿ ಜಾರಿಯಾಗುತ್ತಿಲ್ಲವೆಂದು ಅಸಮಾಧಾನ ವ್ಯಕ್ತಪಡಿಸಿ ಆದಿವಾಸಿಗಳು ತಮ್ಮ ಹಕ್ಕನ್ನು ಸಂಘಟಿತ ಹೋರಾಟದ ಮೂಲಕ ಪಡೆದುಕೊಳ್ಳುವಂತೆ ಕರೆ ನೀಡಿದರು.

ಸಭೆಯಲ್ಲಿ ಗ್ರಾಮ ಪಂಚಾಯಿತಿ ಸದಸ್ಯೆ ಸರೋಜಾ, ಸಿಬ್ಬಂದಿ ಮುತ್ತುಪಾಂಡಿ, ಅರಣ್ಯ ಹಕ್ಕು ಸಮಿತಿಯ ಪ್ರಮುಖರಾದ ಪೂವಮ್ಮ, ಮಾದ ಮತ್ತಿತರರು ಉಪಸ್ಥಿತರಿದ್ದರು.