ವೀರಾಜಪೇಟೆ, ಜು. 15: ಕರ್ತವ್ಯದೊಂದಿಗೆ ದೇವರ ಪ್ರಾರ್ಥನೆಯಿಂದ ಮನಸ್ಸಿಗೆ ಶಾಂತಿ ನೆಮ್ಮದಿ ದೊರಕಲಿದೆ ಎಂದು ಜಿಲ್ಲಾ ಪಂಚಾಯತ್ ಸಾಮಾಜಿಕ ನ್ಯಾಯ ಸಮಿತಿ ಅಧ್ಯಕ್ಷ ಎಂ.ಕೆ. ವಿಜು ಸುಬ್ರಮಣಿ ಹೇಳಿದರು.

ವೀರಾಜಪೇಟೆ ಸಮೀಪದ ಹೊಸಕೋಟೆ ಗ್ರಾಮದಲ್ಲಿ ನೂತನವಾಗಿ ನಿರ್ಮಿಸುತ್ತಿರುವ ಶ್ರೀ ಚಾಮುಂಡೇಶ್ವರಿ ದೇವಾಲಯಕ್ಕೆ ಭೂಮಿ ಪೂಜೆ ನೆರವೇರಿಸಿದ ಬಳಿಕ ಮಾತನಾಡಿದ ಅವರು ಅನೇಕ ವರ್ಷಗಳಿಂದ ಚಿಕ್ಕದಾಗಿ ಪೂಜಿಸಿಕೊಂಡು ಬರುತ್ತಿದ್ದ ದೇವಾಲಯವು ಇನ್ನು ಮುಂದೆ ಅಭಿವೃದ್ಧಿ ಹೊಂದುವ ಮೂಲಕ ಉತ್ತಮ ಕ್ಷೇತ್ರವಾಗಲಿ, ಇದಕ್ಕೆ ಸಹಕಾರ ನೀಡುವದಾಗಿ ಹೇಳಿದರು

ತಾಲೂಕು ಪಂಚಾಯಿತಿ ಸದಸ್ಯ ಅಜಿತ್ ಕರುಂಬಯ್ಯ ಮಾತನಾಡಿ, ಈ ಗ್ರಾಮದಲ್ಲಿ ಚಿಕ್ಕದಾಗಿ ನಡೆಸಿಕೊಂಡು ಬಂದಿರುವ ಚಾಮುಂಡೇಶ್ವರಿ ದೇವಾಲಯ ಬೇಗನೆ ಕಾಮಗಾರಿ ಮುಗಿಯಲಿ. ತಾ.ಪಂ. ಅನುದಾನದಲ್ಲಿ ದೇವಾಲಯದ ಸುತ್ತು ಕಂಪೌಂಡನ್ನು ಮಾಡಲಾಗುವದು ಅನುದಾನದ ಕೊರತೆ ಇದ್ದಲ್ಲಿ ಸ್ವಂತ ಖರ್ಚಿನಿಂದಾದರೂ ಮಾಡುವದಾಗಿ ಹೇಳಿದರು. ವೀರಾಜಪೇಟೆ ಪಟ್ಟಣ ಪಂಚಾಯಿತಿ ಅಧ್ಯಕ್ಷ ಇ.ಸಿ. ಜೀವನ್ ಮಾತನಾಡಿ ದೇವಾಲಯಗಳ ನಿರ್ಮಾಣದಿಂದ ಹಿಂದೂ ಬಾಂಧವರು ಒಂದುಗೂಡಲು ಸಾಧ್ಯವಾಗುತ್ತದೆ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶ್ರೀ ಚಾಮುಂಡೇಶ್ವರಿ ದೇವಾಲಯ ಸಮಿತಿ ಅಧ್ಯಕ್ಷ ಟಿ.ಕೆ. ಮನೋಹರ್ ಮಾತನಾಡಿ, 50 ವರ್ಷಗಳ ಹಿಂದೆ ತಂದೆಯವರು ಚಾಮುಂಡೇಶ್ವರಿ ದೇವರನ್ನು ಪೂಜಿಸಿಕೊಂಡು ಬರುತಿದ್ದರು. ಈಗ ತಾನು ಪೂಜೆ ನಡೆಸಿಕೊಂಡು ಬರುತಿದ್ದು, ಹಳೆಯ ದೇವಾಲಯವನ್ನು ಕೆಡವಿ ನೂತನ ದೇವಾಲಯ ನಿರ್ಮಿಸಲು ಅಂದಾಜು ರೂ. 13 ಲಕ್ಷ ಆಗಬಹುದು ಇದಕ್ಕೆ ಗ್ರಾಮಸ್ಥರ ಹಾಗೂ ದಾನಿಗಳ ಸಹಕಾರದಿಂದ ಸಾಧ್ಯ ಎಂದರು.

ವೇದಿಕೆಯಲ್ಲಿ ಹೊಸಕೋಟೆ ಗ್ರಾಮ ಪಂಚಾಯಿತಿ ಸದಸ್ಯ ಸಕುಮ, ಬಿಳುಗುಂದ ಗ್ರಾ.ಪಂ. ಅಭಿವೃದ್ಧಿ ಅಧಿಕಾರಿ ಪ್ರಮೋದ್, ವಕೀಲರು ಬಿ.ಜೆ.ಪಿ. ಸ್ಥಾಯಿ ಸಮಿತಿ ಅಧ್ಯಕ್ಷ ಪ್ರಮೋದ್, ವೀರಾಜಪೇಟೆ ಎಸ್.ಎನ್.ಡಿ.ಪಿ ಅಧ್ಯಕ್ಷ ಪಿ.ನಾರಾಯಣ, ಓಣಂ ಆಚರಣಾ ಸಮಿತಿಯ ಪಿ.ಆರ್. ಬಾಬು ಮುಂತಾದವರು ಉಪಸ್ಥಿತರಿದ್ದರು. ಪೂಜೆ ಪುನಸ್ಕಾರ ತಂತ್ರಿಗಳಾದ ಶ್ರೀ ರಾಜೇಂದ್ರ ಸರಸ್ವತಿ ಸ್ವಾಮಿ ನೇತೃತ್ವದಲ್ಲಿ ನಡೆಯಿತು. ಆಟೋ ಚಾಲಕರ ಸಂಘದ ಅಧ್ಯಕ್ಷ ಎಂ.ಎಂ. ಶಶಿಧರನ್ ಸ್ವಾಗತಿಸಿ ವಂದಿಸಿದರು. ನೂತನ ದೇವಾಲಯಕ್ಕೆ ಭೂಮಿ ಪೂಜೆ ಸಂದರ್ಭ ಗ್ರಾಮಸ್ತರು ಹೆಚ್ಚನ ಸಂಖ್ಯೆಯಲ್ಲಿ ಆಗಮಿಸಿದ್ದರು.