ಮಡಿಕೇರಿ, ಜು.15: ಜಿಲ್ಲೆಯಲ್ಲಿ ಪರಿಶಿಷ್ಟ ಪಂಗಡ ಸಮುದಾಯದ ನಿವೇಶನ ಹಾಗೂ ವಸತಿ ರಹಿತರು ಹೆಸರು ನೋಂದಾಯಿಸಿಕೊಳ್ಳುವಂತೆ ಈಗಾಗಲೇ ಪ್ರಕಟಣೆ ಹೊರಡಿಸ ಲಾಗಿತ್ತು, ಆದರೆ ಕೇವಲ 300 ಮಂದಿ ಮಾತ್ರ ಹೆಸರು ನೋಂದಾಯಿಸಿ ಕೊಂಡಿದ್ದಾರೆ ಎಂದು ಜಿಲ್ಲಾಧಿಕಾರಿ ಡಾ.ರಿಚರ್ಡ್ ವಿನ್ಸೆಂಟ್ ಡಿಸೋಜ ಅವರು ಹೇಳಿದರು.ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ಅನುಸೂಚಿತ ಜಾತಿ ಮತ್ತು ಅನುಸೂಚಿತ ಪಂಗಡಗಳ (ದೌರ್ಜನ್ಯ ನಿಯಂತ್ರಣ) ಜಿಲ್ಲಾ ಜಾಗೃತಿ ಮತ್ತು ಉಸ್ತುವಾರಿ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಜಿಲ್ಲಾಡಳಿತವು ನಿವೇಶನ ರಹಿತರಿಗೆ ಒಂದು ಸಾವಿರ ನಿವೇಶನ ಒದಗಿಸಲು ಮುಂದಾಗಿದೆ. ಆದರೆ ನಿವೇಶನ ಹಾಗೂ ವಸತಿ ರಹಿತರು ಹೆಸರು ನೋಂದಾಯಿಸಿಕೊಳ್ಳುವಂತೆ ಮನವಿ ಮಾಡಿದ್ದರೂ ಮುಂದೆ ಬರುತ್ತಿಲ್ಲ. ಈ ರೀತಿ ಆದರೆ ಹೇಗೆ ಎಂದು ಜಿಲ್ಲಾಧಿಕಾರಿ ಪ್ರಶ್ನಿಸಿದರು.

(ಮೊದಲ ಪುಟದಿಂದ) ನಿವೇಶನ ಹಾಗೂ ವಸತಿ ರಹಿತರು ತಮ್ಮ ಹೆಸರು, ವಿಳಾಸ, ಪಡಿತರ ಚೀಟಿ ಇತರ ಯಾವದಾದರೂ ಜಿಲ್ಲೆಯಲ್ಲಿ ವಾಸದ ದೃಡೀಕರಣದ ದಾಖಲೆಯ ಪ್ರತಿ ನೀಡಬೇಕಿದೆ. ಅದನ್ನೂ ಒದಗಿಸಲು ಸಾಧ್ಯವಿಲ್ಲದಿದ್ದರೆ ಹೇಗೆ ಎಂದು ಅವರು ಹೇಳಿದರು.

ಮುಂದಿನ ತಿಂಗಳು ಜಿಲ್ಲಾ ಉಸ್ತುವಾರಿ ಸಚಿವರಿಂದ ಜಿಲ್ಲೆಯ ಬಡವರಿಗೆ 94ಸಿ ನಡಿ ಒಂದು ಸಾವಿರಕ್ಕೂ ಹೆಚ್ಚು ಹಕ್ಕುಪತ್ರ ವಿತರಿಸಲು ಸಿದ್ಧತೆಗಳು ನಡೆದಿವೆ ಎಂದು ಇದೇ ಸಂದರ್ಭದಲ್ಲಿ ಹೇಳಿದರು.

ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಹಾಗೂ ಇತರ ಹಿಂದುಳಿದ ಬಡವರಿಗೆ ನಿವೇಶನ ಒದಗಿಸುವದು ಸರ್ಕಾರದ ಆದ್ಯ ಕರ್ತವ್ಯವಾಗಿದೆ. ಆ ನಿಟ್ಟಿನಲ್ಲಿ ಜಮೀನು ಗುರ್ತಿಸ ಲಾಗುತ್ತದೆ. ಮುಂದಿನ ಪೀಳಿಗೆ ಯಾದರೂ ಸುಧಾರಣೆ ಕಾಣಬೇಕು ಎಂದು ಅವರು ನುಡಿದರು.

ಲೋಕೋಪಯೋಗಿ ಇಲಾಖೆ ವತಿಯಿಂದ 2016-17ನೇ ಸಾಲಿನಲ್ಲಿ ಪರಿಶಿಷ್ಟರಿಗೆ ಮೀಸಲಿಟ್ಟ ಅನುದಾನದಲ್ಲಿ ಯಾವ ಪರಿಶಿಷ್ಟ ಕಾಲೋನಿಯಲ್ಲಿ ರಸ್ತೆ, ಚರಂಡಿ ನಿರ್ಮಾಣ ಮಾಡಿದ್ದಾರೆ ಎಂಬ ಬಗ್ಗೆ ಮಾಹಿತಿ ಪಡೆದುಕೊಳ್ಳುವಂತೆ ಸಮಾಜ ಕಲ್ಯಾಣಾಧಿಕಾರಿಯವರಿಗೆ ಸೂಚನೆ ನೀಡಿದರು.

ಪ್ರತಿ ಹೋಬಳಿ ಕೇಂದ್ರಗಳಲ್ಲಿ ಅಂಬೇಡ್ಕರ್ ಭವನ ನಿರ್ಮಾಣ ಸಂಬಂಧ ಜಾಗ ಬೇಕಿದ್ದು, ಈ ಸಂಬಂಧ ಕಂದಾಯಾಧಿಕಾರಿಗಳಿಗೆ ಕನಿಷ್ಟ 25 ರಿಂದ 50 ಸೆಂಟ್ ಜಾಗವನ್ನು ಗುರುತಿಸಲು ಸೂಚನೆ ನೀಡಿದ್ದೇನೆ. ಈ ಬಗ್ಗೆ ತಾಲೂಕು ಸಮಾಜ ಕಲ್ಯಾಣಾಧಿಕಾರಿಗಳು ಹೆಚ್ಚಿನ ಮುತುವರ್ಜಿ ವಹಿಸಬೇಕಿದೆ ಎಂದು ಹೇಳಿದರು.

ಆರ್ಜಿ ಗ್ರಾಮದಲ್ಲಿ ಸ್ಮಶಾನ ಭೂಮಿ ಗುರುತಿಸಿದರೂ ಇನ್ನೂ ಆರ್‍ಟಿಸಿ ಪಡೆಯದಿದ್ದರೆ ಹೇಗೆ ಎಂದು ತಾಲೂಕು ಸಮಾಜ ಕಲ್ಯಾಣಾಧಿಕಾರಿಗಳನ್ನು ಪ್ರಶ್ನಿಸಿದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪಿ.ರಾಜೇಂದ್ರ ಪ್ರಸಾದ್ ಮಾತನಾಡಿ ಭೂಮಿ ಸೇರಿದಂತೆ ಇತರ ಇಲಾಖೆಗೆ ಸಂಬಂಧಿಸಿದ ಕೆಲಸ ಮಾಡಿಸಿಕೊಳ್ಳಲು ಸಮಾಜ ಕಲ್ಯಾಣಾಧಿಕಾರಿಗಳು ವಿಶೇಷ ಕಾಳಜಿ ವಹಿಸಬೇಕು ಎಂದು ಸಲಹೆ ಮಾಡಿದರು.

ಉಪ ವಿಭಾಗಾಧಿಕಾರಿ ಡಾ. ನಂಜುಂಡೇಗೌಡ ಅವರು ತಾಲೂಕು ಸಮಾಜ ಕಲ್ಯಾಣಾಧಿಕಾರಿಗಳು ನಿವೇಶನ, ಸ್ಮಶಾನ ಭೂಮಿ ಮತ್ತಿತರವನ್ನು ಒದಗಿಸಲು ಕಂದಾಯಾಧಿಕಾರಿಗಳೊಂದಿಗೆ ಸಮನ್ವಯತೆ ಸಾಧಿಸಬೇಕು ಎಂದು ಹೇಳಿದರು.

ಸಮಿತಿ ಸದಸ್ಯರಾದ ಮುತ್ತಪ್ಪ, ಜೆ.ಪಿ.ರಾಜು, ಪಳನಿ ಪ್ರಕಾಶ್, ಎಂ.ಬಿ.ಜೋಯಪ್ಪ, ಸುಕುಮಾರ್ ಮಾತನಾಡಿ ಸರ್ಕಾರ ಪರಿಶಿಷ್ಟರಿಗಾಗಿ ಮೀಸಲಿರಿಸಿರುವ ಅನುದಾನವನ್ನು ಪರಿಣಾಮಕಾರಿಯಾಗಿ ತಲುಪಿಸಬೇಕು ಎಂದರು.

ಮೀನುಗಾರಿಕೆ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕ ಕೆ.ಟಿ.ದರ್ಶನ್, ಅವರು ಹಾರಂಗಿ ಹಿನ್ನೀರಿನ ಪ್ರದೇಶದಲ್ಲಿ ಹಿಂದುಳಿದ ಸಮುದಾಯಕ್ಕೆ ಸೇರಿದ ಕುಟುಂಬಗಳು ಟೆಂಟ್‍ನಲ್ಲಿ ವಾಸ ಮಾಡುತ್ತಿದ್ದಾರೆ. ಅವರಿಗೆ ನಿವೇಶನ ಒದಗಿಸುವಂತೆ ಜಿಲ್ಲಾಧಿಕಾರಿ ಅವರಲ್ಲಿ ಮನವಿ ಮಾಡಿದರು. ಜಿಲ್ಲಾ ಸಮಾಜ ಕಲ್ಯಾಣಾಧಿಕಾರಿ ಮಾಯಾದೇವಿ ಗಲಗಲಿ, ಐಟಿಡಿಪಿ ಇಲಾಖೆ ಅಧಿಕಾರಿ ಪ್ರಕಾಶ್, ತಾ.ಪಂ.ಇಒ ಪಡ್ನೇಕರ್, ತಾಲೂಕು ಸಮಾಜ ಕಲ್ಯಾಣಾಧಿಕಾರಿ ಗಳಾದ ರಾಮೇಗೌಡ, ಚನ್ನಬಸವಯ್ಯ, ಮಂಜುನಾಥ, ಜಗದೀಶ್ ಇತರರು ಇದ್ದರು.