ಚೆಟ್ಟಳ್ಳಿ, ಜು. 15: ಮೈಸೂರಿನ ಕೊಡವ ಸಮಾಜದಲ್ಲಿ ಮೈಸೂರಿನ ಭಗವತಿ ಕೊಡವ ಸಂಘ ಮತ್ತು ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ ಅವರ ಜಂಟಿ ಆಶ್ರಯದಲ್ಲಿ ವಿಭಿನ್ನವಾದ ‘ಕೊಡವಪೈತಂಡೆ’ ನಮ್ಮೆ ಮತ್ತು ‘ನರಿಮಂಗಲ” ಎನ್ನುವ ವಿಶಿಷ್ಟ ಕಾರ್ಯಕ್ರಮ ಜರುಗಿತು.
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಮೇಜರ್ ಜನರಲ್ ಕೋದಂಡ ಕರುಂಬಯ್ಯ ಅವರು ಕೊಡವರ ಆಚಾರ ವಿಚಾರ ಶ್ರೇಷ್ಠವಾದದ್ದು, ಅದು ಶ್ರೀಮಂತ ಸಂಸ್ಕೃತಿಯನ್ನು ಹೊಂದಿದ್ದು, ತುಂಬ ಅರ್ಥಗರ್ಭಿತವಾಗಿದೆ ಎಂದರು. ಕೊಡವರು ಸಣ್ಣ ಮಟ್ಟದಲ್ಲಿ ಜನಸಂಖ್ಯೆ ಹೊಂದಿದ್ದರು ಎಲ್ಲ ರಂಗದಲ್ಲಿಯೂ ಮುಂದೆ ಇರುವದು ಹೆಮ್ಮೆಯ ವಿಚಾರವಾಗಿದೆ ಎಂದರು. ಸರಕಾರ ಕೊಡವರಿಗೆ ಮೈನಾರಿಟಿ ಕೊಡುವ ಬಗ್ಗೆ ಚಿಂತಿಸಬೇಕೆಂದರು. ನಮ್ಮ ವಕ್ಕ ಪದ್ಧತಿ ಬಹಳ ವಿಶಿಷ್ಟ ಹಾಗೂ ವಿಭಿನ್ನವಾಗಿದ್ದು ನಮಗೆ ನಾಗಾಲ್ಯಾಂಡಿನ ಹಾಗೆ ವಿಶೇಷ ಮಾನ್ಯತೆ ಸಿಗಬೇಕೆಂದು ಸರಕಾರವನ್ನು ಒತ್ತಾಯಿಸಿದರು. ನಮಗೆ ಹಳೆಯ ಕಾಲದಲ್ಲಿ ಲಿಪಿ ಇದ್ದು, ಅದು ಉತ್ತರ ಕರ್ನಾಟಕದ ಉಪಭಾಷೆಯಂತಿದ್ದು, ಈಗ ದಕ್ಷಿಣ ಕನ್ನಡ ಪ್ರಭಾವದಿಂದ ಕಾಲಕ್ರಮೇಣ ಅಳಿಸಿಹೋಗಿದೆ ಎಂದರು. ನಮ್ಮ ಜನ್ಮಭೂಮಿಯನ್ನು ಉಳಿಸಿಕೊಳ್ಳುವದು ನಮ್ಮ ಕರ್ತವ್ಯವಾಗಿದೆ. ನಾವು ಎಲ್ಲಿ ಎದ್ದರು ಕೊನೆಗೆ ಅಲ್ಲಿಗೆ ಹೋಗಬೇಕಾಗುವದೆಂದರು.
ಎ.ಸಿ.ಪಿ. (ನಿವೃತ್ತ) ಅರಮಣಮಾಡ ಕೆ. ಸುರೇಶ್ ಅವರು ಮಾತನಾಡಿ, ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ ಒಳ್ಳೆಯ ಕಾರ್ಯಕ್ರಮಗಳನ್ನು ಭಾಷಿಕರಿಗೆ ತಾರತಮ್ಯವಿಲ್ಲದೆ ನೀಡುತ್ತಾ ಬಂದಿದ್ದು, ಹೆಮ್ಮೆಯ ವಿಷಯವಾಗಿದೆ ಎಂದರು. ಅಕಾಡೆಮಿ ಅಧ್ಯಕ್ಷÀ ಬಿದ್ದಾಟಂಡ ತಮ್ಮಯ್ಯ ಅವರನ್ನು ಶ್ಲಾಘಿಸಿ ಅಭಿನಂದಿಸಿದರು .
ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಕೊಡಗಿನ ಉಸ್ತುವಾರಿ ಸಚಿವ ಸೀತಾರಾಂ ಅವರ ಆಪ್ತ ಕಾರ್ಯದರ್ಶಿ ಕದ್ದಣಿಯಂಡ ಹರೀಶ್ ಬೋಪಣ್ಣ ಮಾತನಾಡಿ, ಕೊಡಗಿನಲ್ಲೂ ಹಾಗೂ ಹೊರ ಜಿಲ್ಲೆ, ರಾಜ್ಯಗಳಲ್ಲೂ ನೂರಕ್ಕೂ ಅಧಿಕ ಕಾರ್ಯಕ್ರಮಗಳನ್ನು ನೀಡಿ ನಮ್ಮ ಸಂಸ್ಕೃತಿಯ ಕಲಿಕೆ ಹಾಗೂ ಒಳಿತಿಗೆ ಕಾರಣರಾಗಿರುವ ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ ಅಧ್ಯಕ್ಷರಿಗೂ ಹಾಗೂ ಸದಸ್ಯರಿಗೂ ಅಭಿನಂದನೆ. ಕೊಡಗಿನಿಂದ ಹೊರಗೆ ಎಲ್ಲೇ ಸಂಪಾದನೆ ಮಾಡಿದರು ಅದರ ಹೂಡಿಕೆಯನ್ನು ಕೊಡಗಿನಲ್ಲೇ ಮಾಡಬೇಕೆಂದು ಅವರು ಜನಾಂಗ ಬಾಂಧವರಿಗೆ ಕಿವಿಮಾತನ್ನು ಹೇಳಿದರು. ಕೊಡಗಿನಂತಹ ಪುಟ್ಟ ಜಿಲ್ಲೆಯಲ್ಲಿ ನಮ್ಮ ಶ್ರೀಮಂತ ಸಂಸ್ಕೃತಿ ವಿಶ್ವದೆಲ್ಲೆಡೆ ಪಸರಿಸುವಾಗ ಅದನ್ನು ಅದರ ಮೂಲಸ್ಥಾನವಾದ ಕೊಡಗಿನಲ್ಲಿ ಉಳಿಸಿ ಬೆಳೆಸಬೇಕು. ನಾವು ನಮ್ಮ ಮಣ್ಣನ್ನು ಹೊರಗಿನವರಿಗೆ ಮಾರಿದಲ್ಲಿ ನಮ್ಮ ಮಣ್ಣಿನ ಜೊತೆಯಲ್ಲಿ ನಮ್ಮ ಸಂಸ್ಕೃತಿಯು ನಾಶವಾಗುವದೆಂದರು. ಕೊಡಗಿನ ಇತ್ತೀಚಿನ ಬೆಳವಣಿಗೆಯನ್ನು ನೋಡಿದರೆ ತುಂಬ ದುಃಖವಾಗುತ್ತದೆ. ಏಕೆಂದರೆ ಎಲ್ಲಿ ಬೆಟ್ಟಗುಡ್ಡಗಳನ್ನು ಕೊರೆದು ರೆಸಾರ್ಟ್‍ಗಳನ್ನು ನಿರ್ಮಿಸುತ್ತಿದ್ದಾರೆ. ತಾವುಗಳು ಕೊಡಗಿನ ಮಣ್ಣನ್ನು ಇನ್ನು ಮುಂದೆಯಾದರೂ ಮಾರದೆ ನಮ್ಮ ಪುಟ್ಟ ಜಿಲ್ಲೆಯ ಶ್ರೀಮಂತ ಸಂಸ್ಕೃತಿಯನ್ನು ಉಳಿಸುವಂತಾಗಬೇಕೆಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಬಿದ್ದಾಟಂಡ ತಮ್ಮಯ್ಯ ಅಕಾಡೆಮಿ ಅಧ್ಯಕ್ಷನಾದ ನಂತರ ಸದಸ್ಯರ ಸಹಕಾರದಿಂದ ನೂರಕ್ಕೂ ಅಧಿಕ ಕಾರ್ಯಕ್ರಮವನ್ನು ಹಲವು ಕಡೆ ನೀಡಲು ಸಾಧ್ಯವಾಯಿತು. ನಮ್ಮ ಅವಧಿಯಲ್ಲಿ ಹಲವು ಶಾಲೆಗಳಲ್ಲಿ, ಆಟ್ ಪಾಟ್ ಕಾರ್ಯಕ್ರಮಗಳನ್ನು ನೀಡುತ್ತಾ ಬಂದು ಶಾಲೆ ಮಕ್ಕಳಿಗೆ ನಮ್ಮ ಆಚಾರ ವಿಚಾರ ತಿಳಿಯುವಂತಾಗಿದೆ ಎಂದರು. ನಮ್ಮ ಸಂಸ್ಕೃತಿಯಾದ ಮಂದ್, ಮಾನಿ ಹಲವು ಕಡೆ ಮುಚ್ಚಿ ಹೋಗಿದ್ದು, ನಮ್ಮ ಅವಧಿಯಲ್ಲಿ ಮೂವತ್ತಕ್ಕೂ ಅಧಿಕ ಮಂದ್‍ಗಳನ್ನು ತೆರೆಯಿಸಿ ಆಟ್ ಪಾಟ್ ಕಾರ್ಯಕ್ರಮಗಳನ್ನು ಆಯೋಜಿಸಿ, ಅದಕ್ಕೆ ಸಂಬಂಧಪಟ್ಟ ಪರಿಕರಗಳನ್ನು ವಿತರಿಸಿ ಅವು ಇನ್ನು ಮುಂದಕ್ಕೆ ಸಾಂಗವಾಗಿ ನಡೆಯುವಂತಾಗಿದೆ ಎಂದರು. ನಮ್ಮ ಅವಧಿಯಲ್ಲಿ ಏಳು ಸಿ.ಡಿ.ಯನ್ನು ಬಿಡುಗಡೆಗೊಳಿಸಿ ಹಳೆ ಕಾಲದ ಹಾಡುಗಳನ್ನು ಕ್ಯಾಸೆಟ್ಟಿನಿಂದ ನಾದಲಹರಿಯ ತಮ್ಮು ಪೂವಯ್ಯ ಅವರ ಸಹಕಾರದೊಂದಿಗೆ ಹೊರ ತಂದ್ದಿದೇವೆ. ಯಾವದೇ ಕಾರ್ಯಕ್ರಮಗಳನ್ನು ಮಾಡುವಾಗ ಹಿರಿಯರ ಸಲಹೆಯಂತೆ ಮುಂದುವರಿಯುತ್ತೇವೆ ಎಂದರು. ಕೊಡಗಿನ ಆಚಾರ ವಿಚಾರ ಸಂಸ್ಕøತಿಯ ದಾಖಲೆಯನ್ನು ಸಿರಿಗಂಧ ಶ್ರೀನಿವಾಸ್ ಮೂರ್ತಿಯವರಿಂದ ನಿರ್ಮಿಸುತ್ತಿದ್ದೇವೆ ಎಂದರು. ಕೊಡಗಿನ ಜನ ಹೊರಗಡೆ ಇರುವವರು ಕನಿಷ್ಟ ಪಕ್ಷ ಮನೆಗೆ ಇಬ್ಬರಾದರೂ ಕೊಡಗಿನಲ್ಲಿಯೇ ಓಟಿನ ಹಕ್ಕನ್ನು ಪಡೆದುಕೊಳ್ಳಬೇಕೆಂದರು. ಆದರೆ ಮಾತ್ರ ನಮ್ಮತನವನ್ನು ಉಳಿಸಿಕೊಳ್ಳಬಹುದೆಂದರು. ಇದು ನಮ್ಮ ಸಂಸ್ಕೃತಿಯಾದ ಕೋವಿಯ ಹಕ್ಕಿಗೂ ಅನ್ವಯವಾಗುತ್ತದೆ ಎಂದರು.
ಪ್ರಾಥನೆಯನ್ನು ಪೂಥೇರಾ ಮೊಣ್ಣಪ್ಪ ಮಾಡಿದರೆ, ಸ್ವಾಗತವನ್ನು ಬಲ್ಲಚಂಡ ಸುಬ್ಬಯ್ಯಮಾಡಿದರು. ಚಿಂಡಮಾಡ ಮೌಲ್ಯ ತಂಡದವರಿಂದ ಸ್ವಾಗತ ನೃತ್ಯ ನೆರವೇರಿತು.
ಅನಂತರ ನಡೆದ ಕಾರ್ಯಕ್ರಮದಲ್ಲಿ ದಿ. ನಾಪಂಡ ತಿಮ್ಮಯ್ಯ ಅವರ ಬಾಳೋಪಾಟ್ ಕ್ಯಾಸೆಟನ್ನು ಸಿ.ಡಿ. ಮುಖಂತರ ಪುನರ್ ಬಿಡುಗಡೆಗೊಳಿಸಲಾಯಿತು. ಉಳುವಂಗಡ ಕಾವೇರಿ ಉದಯ ಬರೆದ ‘ಕೊದಿರ ಪೂಮಳೆ’ ಎನ್ನುವ ಪುಸ್ತಕವನ್ನು ಹರೀಶ್ ಬೋಪಣ್ಣ ಬಿಡುಗಡೆಗೊಳಿಸಿದರು. ಭಗವತಿ ಸಂಘ ಮೈಸೂರಿನವರಿಂದ ಕತ್ತಿಯಾಟ್, ಬೊಳಕಾಟ್, ಉಮ್ಮತ್ತಾಟ್ಟ್ ಕಾರ್ಯಕ್ರಮಗಳು ಪ್ರೇಕ್ಷಕರ ಮನ ಸೂರೆಗೊಂಡವು. ಚೇನಂಡ ರಘು ಸುಬ್ಬಯ್ಯ ಹಾಡುಗಾರಿಕೆ ನಡೆಸಿಕೊಟ್ಟರು. ಕೀತಿಯಂಡ ಕಾವ್ಯ ಕುಟ್ಟಪ್ಪ ವಿಚಾರ ಮಂಡನೆ ಮಾಡಿದರು. ಮುಕ್ಕಾಟಿರ ಅಶ್ವಿನಿ ನಂಜಪ್ಪ ಮಗು ನಾಮಕರಣ ಪದ್ಧತಿಯನ್ನು ಅನಾವರಣಗೊಳಿಸಿದರು. ನಂತರ ಭಗವತಿ ಸಂಘದಿಂದ ಪೈತಾಂಡೆ ನಮ್ಮೆ, ಕೆಮ್ಮಿ ಕುತ್ತಿ ಮಂಗಲ, ನರಿ ಮಂಗಲ ಕಾರ್ಯಕ್ರಮವನ್ನು ನಡೆಸಿಕೊಟ್ಟರು .
ವೇದಿಕೆಯಲ್ಲಿ ಮೈಸೂರು ಮಿತ್ರ ಸಂಪಾದಕ ಕೆ.ಬಿ. ಗಣಪತಿ, ಮೂವೇರ ಕುಟ್ಟಪ,್ಪ ಅಧ್ಯಕ್ಷರು ಕೊಡವ ಸಮಾಜ ಮೈಸೂರು, ಬಲ್ಯಮೀದೇರಿರ ನಾಣಯ್ಯ, ಡಾ. ಅದೇಂಗಡ ಕುಟ್ಟಪ್ಪ, ಎ.ಕೆ. ಸುರೇಶ ನಿವೃತ್ತ ಎ.ಸಿ.ಪಿ. ಉಪಸ್ಥಿತರಿದ್ದರು.