ಮಡಿಕೇರಿ, ಜು. 15: ಕೊಡಗಿನಲ್ಲಿ ಮಳೆಗಾಗಿ ರಾಜ್ಯ ಸರಕಾರ ವಿಷಕಾರಕ ಮೋಡ ಬಿತ್ತನೆಯೊಂದಿಗೆ ಕೃಷಿ ಫಸಲು ಸೇರಿದಂತೆ ಪ್ರಾಕೃತಿಕ ಸಂಪತ್ತು ನಾಶಕ್ಕೆ ಕಾರಣವಾಗುತ್ತಿದೆ ಎಂದು ಕೊಡಗು ಪಶ್ಚಿಮಘಟ್ಟ ಮೂಲ ನಿವಾಸಿ ಸಂಘಟನೆ ಸಂಚಾಲಕ ಕಾಳಚಂಡ ರವಿ ತಮ್ಮಯ್ಯ ಆರೋಪಿಸಿದ್ದು, ಇಂತಹ ಮೋಡ ಬಿತ್ತನೆ ವಿರುದ್ಧ ಜಿಲ್ಲೆಯ ಜನತೆ ಸಂಘಟಿತ ಹೋರಾಟ ನಡೆಸುವಂತೆ ಕರೆ ನೀಡಿದ್ದಾರೆ.

‘ಶಕ್ತಿ’ಯೊಂದಿಗೆ ಹೇಳಿಕೆ ನೀಡಿರುವ ಅವರು, ಕೃತಕ ಮಳೆಗಾಗಿ ‘ಸಲ್ಫರ್ ಆಕ್ಸೈಡ್’ ನಂತಹ ವಿಷಕಾರಕ ದ್ರಾವಣದಿಂದ ಮೋಡ ಬಿತ್ತುವದು, ಗರ್ಭಿಣಿ ಸ್ತ್ರೀಯನ್ನು ಅವಧಿಗೆ ಮುನ್ನ ಬಲವಂತವಾಗಿ ಹೆರಿಗೆ ಮಾಡಿಸಿದಂತೆ ಎಂದು ಮಾರ್ಮಿಕ ಪ್ರತಿಕ್ರಿಯೆ ನೀಡಿದ್ದಾರೆ.

ರಾಜ್ಯ ಸರಕಾರದಲ್ಲಿ ಯಾರೋ ಹಣಗಳಿಕೆಯ ದುರುದ್ದೇಶದಿಂದ ಕೋಟಿಗಟ್ಟಲೆ ಹಣವನ್ನು ಮಳೆಯ ನೆಪದಲ್ಲಿ ಪ್ರಕೃತಿ ನಾಶಕ್ಕೆ ಬಳಸುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ ಅವರು, ಇಂತಹ ಮಳೆಯಿಂದ ಕೊಡಗಿನಲ್ಲಿ ಈಗಷ್ಟೆ ಫಲ ಕೊಡುತ್ತಿರುವ ಕಿತ್ತಳೆ ಸಹಿತ ಕಾಫಿಗೂ ಕೊಳೆರೋಗ, ಬೆಂಕಿ ರೋಗ ಕಾಣಿಸಿಕೊಳ್ಳಲಿದೆ ಎಂದು ತಮ್ಮ ಅನುಭವವನ್ನು ಹಂಚಿಕೊಂಡರು.

ಅಲ್ಲದೆ ಜಿಲ್ಲೆಯ ಬಾವಿ, ಕೆರೆಗಳಲ್ಲಿ ಸಂಗ್ರಹಗೊಳ್ಳುವ ನೈಸರ್ಗಿಕ ನೀರಿನ ಮೇಲೂ ಕೃತಕ ಮೋಡ ಬಿತ್ತನೆಯಿಂದ ವಿಷಮಿಶ್ರಿತ ಮಳೆ ಪರಿಣಾಮ ಬೀರುತ್ತದೆ ಎಂದು ಟೀಕಿಸಿದ ಅವರು, ಜನಪ್ರತಿನಿಧಿಗಳು ಎಚ್ಚೆತ್ತುಕೊಂಡು ಕೊಡಗಿನಲ್ಲಿ ಮೋಡ ಬಿತ್ತನೆ ಮಾಡದಂತೆ ಸರಕಾರದಿಂದ ನಿಯೋಜನೆಗೊಂಡಿರುವ ಖಾಸಗಿ ಸಂಸ್ಥೆಗೆ ತಾಕೀತು ಮಾಡುವಂತೆ ಒತ್ತಾಯಿಸಿದ್ದಾರೆ.