ಸಿದ್ದಾಪುರ, ಜು. 15: ಆನೆ ಕಾರ್ಯಾಚರಣೆಗೆ ಸಂಬಂಧಿಸಿದಂತೆ ಜನತೆಗೆ ನೆರವಾಗುವ ನಿಟ್ಟಿನಲ್ಲಿ ರಚನೆ ಮಾಡಲಾಗಿರುವ ರ್ಯಾಪಿಡ್ ರೆಸ್ಪಾನ್ಸ್ ಟೀಂ ಉತ್ತಮ ಸ್ಪಂದನ ನೀಡುತ್ತಿದ್ದು, ಹಗಲು ರಾತ್ರಿಯೆನ್ನದೆ ತೋಟಗಳಲ್ಲಿ ಬೀಡು ಬಿಟ್ಟಿರುವ ಕಾಡಾನೆಗಳನ್ನು ಅಟ್ಟುವ ಕಾಯಕದಲ್ಲಿ ನಿರತವಾಗಿದೆ. 24 ಗಂಟೆ ಕಾಲ ಕೂಡ ಸೇವೆಯಲ್ಲಿರುವ ತಂಡ ಕರೆ ಮಾಡಿದ ಕೂಡಲೇ ಸ್ಪಂದಿಸುತ್ತಾ, ಆನೆಗಳನ್ನು ಅಟ್ಟುವತ್ತ ಗಮನ ಹರಿಸುತ್ತಿದ್ದು ನಾಗರಿಕರ ಶ್ಲಾಘನೆಗೂ ಪಾತ್ರವಾಗಿದೆ.

ಸಿದ್ದಾಪುರ ಸುತ್ತಮುತ್ತ ವರ್ಷಗಳಿಂದ ಬೀಡು ಬಿಟ್ಟಿದ್ದ ಕಾಡಾನೆಗಳು ಅರಣ್ಯದತ್ತ ಅಟ್ಟುವ ಕಾಯಕದಲ್ಲಿ ತೊಡಗಿಸಿಕೊಂಡಿದ್ದು, 17 ಆನೆಗಳಿರುವ ಹಿಂಡನ್ನು ಗುಹ್ಯ ಗ್ರಾಮದಿಂದ ಕಾರಿಬೆಟ್ಟದ ಕಡೆಗೆ ಓಡಿಸುವಲ್ಲಿ ಸಫಲವಾಗಿದೆ. ಮಳೆ - ಗಾಳಿಯನ್ನು ಲೆಕ್ಕಿಸದೆ ಮರವನ್ನೇರಿ ಆನೆಗಳ ಇರುವಿಕೆಯನ್ನು ಗುರುತಿಸಿ ಅಟ್ಟಿಸಿಕೊಂಡು ಹೋಗಲಾಗುತ್ತಿದೆ ಕೆಲವೊಮ್ಮೆ ಆನೆಗಳು ಹಿಮ್ಮೆಟ್ಟಿಸಿದಾಗ ಓಡಿ ತಪ್ಪಿಸಿಕೊಂಡ ಪ್ರಸಂಗ ಕೂಡ ಎದುರುಗೊಳ್ಳುತ್ತಿದೆ. ಕಳೆದ ಕೆಲವು ದಿನಗಳಿಂದ ಗುಹ್ಯ ಗ್ರಾಮದ ಕಾಫಿ ತೋಟಗಳಲ್ಲಿ ದಾಂಧಲೆ ನಡೆಸುತ್ತಿದ್ದ ಕಾಡಾನೆಗಳ ಹಿಂಡನ್ನು ಓಡಿಸುವಲ್ಲಿ ಸಫಲವಾಗಿದೆ.

(ಮೊದಲ ಪುಟದಿಂದ) ಗುಹ್ಯ ಗ್ರಾಮದ ಎಂಜಲ್ ಫೀಲ್ಡ್ ತೋಟ ಸೇರಿದಂತೆ ಪ್ರೌಢಶಾಲೆಯ ಸುತ್ತಮುತ್ತಲ ಕೆಲ ಕಾಫಿ ತೋಟಗಳಲ್ಲಿ ಕಳೆದ ಕೆಲ ದಿನಗಳಿಂದ ಕಾಡಾನೆ ಹಿಂಡು ಬೀಡುಬಿಟ್ಟಿತ್ತು. ತೋಟದಲ್ಲಿನ ಕೃಷಿಯನ್ನು ನಾಶಪಡಿಸಿ, ದಾಂಧÀಲೆ ನಡೆಸುತ್ತಿದ್ದ ಕಾಡಾನೆಗಳನ್ನು ಕಾಡಿಗಟ್ಟಲು ಸಾಕಷ್ಟು ಶ್ರಮ ವಹಿಸಿತ್ತು. ಆದರೂ ಕೂಡ ಕಾರ್ಯಾಚರಣೆ ನಡೆಸಿ ಓಡಿಸಿದ ಕಾಡಾನೆಗಳು ಮರಳಿ ತೋಟಗಳಲ್ಲಿ ಬೀಡುಬಿಟ್ಟಿದ್ದು, ಇದರಿಂದಾಗಿ ತೋಟದ ಮಾಲಿಕರು, ಕಾರ್ಮಿಕರು ಹಾಗೂ ಶಾಲಾ ಮಕ್ಕಳು ಆತಂಕಕ್ಕೆ ಒಳಗಾಗಿದ್ದರು. ಕಾಡಾನೆಗಳನ್ನು ಅತ್ತಿತೋಪು ತೋಟದ ಮೂಲಕ ಬಿ.ಬಿ.ಟಿ.ಸಿ. ಹಾಗೂ ಕೌರಿಬೆಟ್ಟ ತೋಟದವರೆಗೆ ಓಡಿಸಲಾಗಿದೆ. ಕಾಡಾನೆಗಳ ಹಿಂಡನ್ನು ಹಾಗೇಯೇ ಮಾಲ್ದಾರೆ ಅರಣ್ಯಕ್ಕೆ ಓಡಿಸುವ ಪ್ರಯತ್ನವನ್ನು ಆರ್.ಎಫ್.ಓ. ಗೋಪಾಲ ಮಾರ್ಗದರ್ಶನದಲ್ಲಿ ಉಪವಲಯ ಅರಣ್ಯಾಧಿಕಾರಿ ಕಳ್ಳೀರ ದೇವಯ್ಯ ನೇತೃತ್ವದ ಅರಣ್ಯ ಇಲಾಖೆಯ ರ್ಯಾಪಿಡ್ ರೆಸ್ಪಾನ್ಸ್ ಟೀಮ್ ಮುಂದುವರೆಸಿದೆ. ಕಾಡಾನೆಗಳ ಒಂದು ಹಿಂಡನ್ನು ಗುಹ್ಯ ಗ್ರಾಮದಿಂದ ಓಡಿಸಲಾಗಿದ್ದು, ಮತ್ತಷ್ಟು ಕಾಡಾನೆಗಳು ಗುಹ್ಯ ಗ್ರಾಮದಲ್ಲಿ ಇರುವದಾಗಿ ಗ್ರಾಮಸ್ಥರು ಆತಂಕ ವ್ಯಕ್ತಪಡಿಸಿದ್ದಾರೆ. ಕಾಡಾನೆಯ ಹಿಂಡಿನಿಂದ ಬೇರ್ಪಟ್ಟಿರುವ ಕಾಡಾನೆಗಳು ಕಾಫಿ ತೋಟದಲ್ಲಿ ಬೀಡುಬಿಟ್ಟಿವೆ. ಗುಹ್ಯ, ಕಕ್ಕಟ್ಟುಕಾಡು, ಪಳ್ಳಕ್ಕರೆ ಸೇರಿದಂತೆ ಸುತ್ತಮುತ್ತಲ ಕಾಫಿ ತೋಟಗಳಲ್ಲಿ ಬೀಡುಬಿಟ್ಟಿದ್ದು, ಎಚ್ಚರಿಕೆಯಿಂದಿರುವಂತೆ ಸೂಚನೆ ನೀಡಲಾಗಿದೆ.

- ವಾಸು ಆಚಾರ್ಯ