ಕುಶಾಲನಗರ, ಜು. 15: ಕೊಡಗು ಜಿಲ್ಲೆಯಲ್ಲಿ ಕಂದಾಯ ಇಲಾಖೆಯಿಂದ ಅರಣ್ಯ ಇಲಾಖೆಗೆ ಒಟ್ಟು 11722 ಹೆಕ್ಟೇರ್ ಸಿ ಮತ್ತು ಡಿ ಜಮೀನನ್ನು ವರ್ಗಾವಣೆ ಮಾಡುವಂತೆ ಜಿಲ್ಲಾ ಅರಣ್ಯ ಇಲಾಖೆ ಅಧಿಕಾರಿಗಳು ಸರಕಾರಕ್ಕೆ ಮನವಿ ಸಲ್ಲಿಸಿದ್ದಾರೆ. ಹಾರಂಗಿ ಜಲಾಶಯ ಯೋಜನೆಯ ಮುಳುಗಡೆ ಸಂತ್ರಸ್ತರಿಗೆ ಪುನರ್ವಸತಿ ಕಲ್ಪಿಸುವ ಸಂಬಂಧ ಸರಕಾರ 1964 ರಲ್ಲಿ ನೀಡಿದ ಆದೇಶ ನೀಡಿದರೂ ಇದುವರೆಗೆ ಈ ಪ್ರಕ್ರಿಯೆ ನಡೆದಿಲ್ಲ ಎಂದು ಇಲಾಖೆ ಸರಕಾರದ ಪ್ರಧಾನ ಕಾರ್ಯದರ್ಶಿಗಳಿಗೆ ಮಾಹಿತಿ ನೀಡಿದೆ.
1972 ರಲ್ಲಿ ಅಂದಿನ ಮೈಸೂರು ಸರಕಾರದ ಆದೇಶದಂತೆ ಸೋಮವಾರಪೇಟೆ ಅರಣ್ಯ ವಲಯದ ಯಡವನಾಡು ಅರಣ್ಯ ಪ್ರದೇಶದಿಂದ 900 ಎಕರೆ ಮತ್ತು ಕುಶಾಲನಗರ ಅರಣ್ಯ ವಲಯದ ಅತ್ತೂರು ಅರಣ್ಯ ಪ್ರದೇಶದ 3000 ಎಕರೆ ಭೂಮಿಯನ್ನು ಹಾರಂಗಿ ಮುಳುಗಡೆ ಸಂತ್ರಸ್ತರಿಗೆ ಬಿಡುಗಡೆಗೊಳಿಸಿದ್ದು, ಇದಕ್ಕೆ ಬದಲಿಯಾಗಿ ಕಂದಾಯ ಇಲಾಖೆ ಒಟ್ಟು 18000 ಎಕರೆ ಜಮೀನನ್ನು ಅರಣ್ಯ ಇಲಾಖೆಗೆ ಹಸ್ತಾಂತರಿಸುವಂತೆ ಆದೇಶ ಹೊರಡಿಸಿತ್ತು.
ಈ ಸಂಬಂಧ ಕೊಡಗು ಜಿಲ್ಲಾಧಿಕಾರಿಗಳ ಕಛೇರಿಯಿಂದ 2012 ರಲ್ಲಿ ಕಂದಾಯ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳಿಗೆ ಹಲವಾರು ಬಾರಿ ಪತ್ರ ಸಲ್ಲಿಸಿ ಯಡವನಾಡು ಮತ್ತು ಅತ್ತೂರು ಗ್ರಾಮವನ್ನು ಕಂದಾಯ ಗ್ರಾಮವನ್ನಾಗಿ ಘೋಷಿಸುವದು ಹಾಗೂ ಅರಣ್ಯ ಇಲಾಖೆಗೆ ಈ ಭೂಮಿಯನ್ನು ಹಸ್ತಾಂತರಿಸಲು ಕೋರಲಾಗಿತ್ತು. ಆದರೆ ಇದುವರೆಗೆ ಈ ಕಾರ್ಯ ನೆನೆಗುದಿಗೆ ಬಿದ್ದಿದ್ದು ಇದೀಗ ಜಿಲ್ಲೆಗೆ ವಿಧಾನಸಭಾ ಅರ್ಜಿ ಸಮಿತಿ ಭೇಟಿ ನೀಡಿದ ಸಂದರ್ಭ ಜಿಲ್ಲೆಯ ಅರಣ್ಯ ಇಲಾಖೆಯ ಹಿರಿಯ ಅಧಿಕಾರಿಗಳು ಮನವಿ ಪತ್ರ ಸಲ್ಲಿಸಿದ್ದಾರೆ.
ಕೊಡಗು ಅರಣ್ಯ ವೃತ್ತದ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಲಿಂಗರಾಜು, ಮಡಿಕೇರಿ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಸೂರ್ಯಸೇನ್ ಈ ಬಗ್ಗೆ ಅರ್ಜಿ ಸಮಿತಿಯ ಪ್ರಮುಖರೊಂದಿಗೆ ಚರ್ಚೆ ನಡೆಸಿದ್ದಾರೆ. ಅತ್ತೂರು ಮತ್ತು ಯಡವನಾಡು ವ್ಯಾಪ್ತಿಯಲ್ಲಿ ನೀಡಿದ 3900 ಎಕರೆ ಭೂಮಿಗೆ ಬದಲಾಗಿ ಮರು ಜಮೀನಿಗೆ ಬೇಡಿಕೆ ಸಲ್ಲಿಸಿದ್ದಾರೆ.
ಈ ಭೂಮಿಯಲ್ಲಿ ಬಹುತೇಕ ಜಮೀನು ಪ್ರದೇಶ ಜಿಲ್ಲೆಯ ಕಾವೇರಿ ಜಲಾನಯನ ಪ್ರದೇಶಗಳಲ್ಲಿದ್ದು, ಇವುಗಳ ಸಂರಕ್ಷಣೆ ಹಾಗೂ ಅಭಿವೃದ್ಧಿ ಮಾಡುವ ನಿಟ್ಟಿನಲ್ಲಿ ತಕ್ಷಣ ಇಲಾಖೆಗೆ ವರ್ಗಾಯಿಸಬೇಕಾಗಿದೆ ಎಂದು ಮಡಿಕೇರಿ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಸೂರ್ಯಸೇನ್ ತಿಳಿಸಿದ್ದಾರೆ.
- ಚಂದ್ರಮೋಹನ್