ಕುಶಾಲನಗರ, ಜು. 17: ಕುಶಾಲನಗರ ಅರಣ್ಯ ವಲಯದ ಆನೆಕಾಡು ಸುತ್ತಮುತ್ತ ಅರಣ್ಯ ವ್ಯಾಪ್ತಿಯಲ್ಲಿ ಹಲವು ಸಮಯದಿಂದ ಉಪಟಳ ನೀಡುತ್ತಿದ್ದ ಒಂಟಿ ದಂತದ ಸಲಗವೊಂದನ್ನು ಅರಣ್ಯ ಇಲಾಖೆ ಸೋಮವಾರ ಸೆರೆಹಿಡಿಯುವಲ್ಲಿ ಯಶಸ್ವಿಯಾಗಿದೆ.ಬೆಳಗಿನ ಜಾವದಿಂದ ಕಾರ್ಯಾಚರಣೆ ನಡೆಸಿದ ಅರಣ್ಯ ಇಲಾಖೆ ಅಧಿಕಾರಿ, ಸಿಬ್ಬಂದಿಗಳು ಮಧ್ಯಾಹ್ನ 12 ಗಂಟೆ ವೇಳೆಗೆ ಸಲಗವನ್ನು ಹಿಡಿದು ಅರವಳಿಕೆ ನೀಡಿ ನಂತರ ಬಂಡೀಪುರ ಅರಣ್ಯಕ್ಕೆ ಸಾಗಿಸಿದ್ದಾರೆ.45 ರಿಂದ 50 ವರ್ಷ ಪ್ರಾಯದ ಭಾರೀ ಗಾತ್ರದ ಕಾಡಾನೆಯನ್ನು ದುಬಾರೆ ಮತ್ತಿತರ ಸಾಕಾನೆ ಶಿಬಿರಗಳ 7 ಆನೆಗಳ ಸಹಾಯದಿಂದ ಸೆರೆಹಿಡಿಯಲಾಯಿತು. ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಎಸ್.ಎಸ್ .ಲಿಂಗರಾಜು ನೇತೃತ್ವದಲ್ಲಿ ಆನೆ ಸೆರೆ ಕಾರ್ಯಾಚರಣೆ ಆರಂಭಿಸಿದ ಅರಣ್ಯ ಇಲಾಖೆ ತಂಡ ಆನೆಯನ್ನು ಪತ್ತೆಹಚ್ಚಿ ಅರವಳಿಕೆ ನೀಡಲಾಯಿತು. ಅರವಳಿಕೆ ತಜ್ಞ ವನ್ಯಜೀವಿ ವಿಭಾಗದ ವೈದ್ಯರಾದ ಡಾ. ಉಮಾಶಂಕರ್ ಹಾಗೂ ಶಾರ್ಪ್ ಶೂಟರ್ ವೆಂಕಟೇಶ್ ಅರೆವಳಿಕೆ ಚುಚ್ಚುಮದ್ದು ನೀಡಿದ ಬಳಿಕ ಅರಣ್ಯದೊಳಗೆ ಅನತಿ ದೂರ ಓಡಾಡಿ ನೆಲಕ್ಕುರುಳಿದ ಕಾಡಾನೆಯನ್ನು ಸಾಕಾನೆಗಳ ಸಹಾಯದಿಂದ ಹಗ್ಗದಿಂದ ಬಿಗಿದು ಬಂಧಿಸಲಾಯಿತು. ವನ್ಯಜೀವಿ ತಜ್ಞ ಡಾ.ಉಮಾಶಂಕರ್ ಅವರು ಆನೆಗೆ ಮತ್ತೆ ಅಮಲು ಇಳಿಸುವ ಚುಚ್ಚುಮದ್ದು ನೀಡಿ ಸಾಕಾನೆಗಳ ಸಹಾಯದೊಂದಿಗೆ ಲಾರಿಗೆ ಸಾಗಿಸಲು ಕ್ರಮ ಕೈಗೊಳ್ಳಲಾಯಿತು.
ಸಾಕಾನೆಗಳಾದ ಅಭಿಮನ್ಯು, ಕೃಷ್ಣ, ಗಜೇಂದ್ರ, ಹರ್ಷ, ವಿಕ್ರಂ, ಧನಂಜಯ ಹಾಗೂ ಕೆಂಜನ್ ಆನೆಗಳ ನೆರವಿನೊಂದಿಗೆ ಮುಖ್ಯ ರಸ್ತೆ ಬಳಿಗೆ ಕರೆದೊಯ್ಯಲು ಮುಂದಾದ ಸಂದರ್ಭ ಸಲಗ ಕೆಲಕಾಲ ಸತಾಯಿಸಿದರೂ ಬಳಿಕ ಎಳೆದು ಕರೆತಂದು ಲಾರಿಗೆ ಸ್ಥಳಾಂತರಿಸುವಲ್ಲಿ ಯಶಸ್ಸು ಕಂಡರು. ನಂತರ ಸೆರೆಹಿಡಿದ ಕಾಡಾನೆಯನ್ನು ಲಾರಿ ಮೂಲಕ ಬಂಡೀಪುರ ಅರಣ್ಯಕ್ಕೆ ಸಾಗಿಸಲಾಯಿತು. ಬಂಡೀಪುರ ಅರಣ್ಯದಲ್ಲಿ ಕಾಡಿಗೆ ಬಿಡುವದಾಗಿ ಅರಣ್ಯ ಇಲಾಖೆ ಮೂಲಗಳು ತಿಳಿಸಿವೆ.
ಈ ಸಂದರ್ಭ ಸುದ್ದಿಗಾರ ರೊಂದಿಗೆ ಮಡಿಕೇರಿ ವಿಭಾಗದ ಉಪ ಸಂರಕ್ಷಣಾಧಿಕಾರಿ ಸೂರ್ಯಸೇನ್ ಮಾತನಾಡಿ, ಈ ವ್ಯಾಪ್ತಿಯಲ್ಲಿ ಉಪಟಳ ನೀಡುತ್ತಿದ್ದ ಕಾರಣ ಸರಕಾರದ ಆದೇಶ ಪಡೆದು ಇಲಾಖೆ ಸೆರೆಹಿಡಿದಿದೆ. ಕಳೆದೆರೆಡು ದಿನಗಳಿಂದ ಆನೆಯ ಚಲನವಲನದ ಮೇಲೆ ಸಿಬ್ಬಂದಿಗಳು ನಿಗಾವಹಿಸಿ ದ್ದರು. ಅದರಂತೆ ಆನೆಯನ್ನು ಸೆರೆಹಿಡಿದು ಸ್ಥಳಾಂತರಿಸಲಾಗಿದೆ
(ಮೊದಲ ಪುಟದಿಂದ) ಎಂದು ಮಾಹಿತಿ ನೀಡಿದರು. ಸದ್ಯದಲ್ಲಿಯೇ ವೀರಾಜಪೇಟೆ ವಿಭಾಗದಲ್ಲಿ ಕಾಡಾನೆಯೊಂದನ್ನು ಸೆರೆಹಿಡಿಯುವ ಕಾರ್ಯಾಚರಣೆ ಬಗ್ಗೆ ಮುನ್ಸೂಚನೆ ನೀಡಿದರು.
ಸೆರೆಯಾದ ಒಂಟಿ ದಂತದ ಕಾಡಾನೆ ಕಳೆದೆರೆಡು ತಿಂಗಳ ಹಿಂದೆ 7ನೇ ಹೊಸಕೋಟೆಯಲ್ಲಿ ಮಹಿಳೆಯೊಬ್ಬರ ಮೇಲೆ ಧಾಳಿ ನಡೆಸಿದ ಪರಿಣಾಮ ಸರೋಜ ಎಂಬವರು ಮೃತಪಟ್ಟಿದ್ದರು. ಸುತ್ತಮುತ್ತಲ ವ್ಯಾಪ್ತಿಯಲ್ಲಿ ತೋಟಗಳಿಗೆ ನುಗ್ಗಿ ಬೆಳೆಗಳಿಗೆ ಹಾನಿ ಮಾಡುವದರೊಂದಿಗೆ ಆಗಾಗ್ಗೆ ಕಾಡಿನಿಂದ ನಾಡಿಗೆ ಲಗ್ಗೆ ಹಾಕುತ್ತಿದ್ದ ಒಂಟಿ ಸಲಗದ ಸೆರೆಯಿಂದ ಬೆಳೆಗಾರರು ಹಾಗೂ ರೈತಾಪಿ ವರ್ಗ ನಿಟ್ಟುಸಿರುಬಿಡುವಂತಾಗಿದೆ. ಹೊಸಕೋಟೆ ವ್ಯಾಪ್ತಿಯಲ್ಲಿ ಇತ್ತೀಚೆಗೆ ಈ ಸಲಗೆ ಗೂಡ್ಸ್ ವಾಹನವೊಂದಕ್ಕೆ ಹಾನಿ ಮಾಡಿದ ಘಟನೆಯೂ ನಡೆದಿತ್ತು.
ಒಂಟಿ ಸಲಗದ ಸೆರೆ ಕಾರ್ಯಾಚರಣೆಯ ವಾಸನೆ ದೊರೆತ ಹಿನ್ನೆಲೆಯಲ್ಲಿ ಕಳೆದ ಎರಡು ವಾರಗಳಿಂದ ತನ್ನ ನೆಲೆ ಹಾಗೂ ಮಾರ್ಗವನ್ನು ಆಗಾಗ್ಗೆ ಬದಲಿಸುತ್ತಿದ್ದ ಬಗ್ಗೆ ಅರಣ್ಯ ಸಿಬ್ಬಂದಿಗಳು ಮಾಹಿತಿ ನೀಡಿದ್ದು ಕೊನೆಗೂ ಸಲಗವನ್ನು ಪತ್ತೆಹಚ್ಚುವಲ್ಲಿ ಯಶಸ್ವಿಯಾಗಿರುವ ಬಗ್ಗೆ ಹರ್ಷ ವ್ಯಕ್ತಪಡಿಸುತ್ತಿದ್ದುದು ಕಂಡುಬಂತು.
ಒಂಟಿ ಸಲಗದ ಕಾರ್ಯಾಚರಣೆಯನ್ನು ಅರಣ್ಯ ಇಲಾಖೆ ಗುಪ್ತವಾಗಿ ನಡೆಸಿದ್ದರೂ ಜಿಲ್ಲೆಯ ಪತ್ರಕರ್ತರು, ಮಾಧ್ಯಮ ಮಿತ್ರರು ಜಾಡನ್ನು ಅರಸಿ ಸ್ಥಳದಲ್ಲಿ ಕಂಡುಬಂದಿದ್ದು ಅರಣ್ಯಾಧಿಕಾರಿಗಳಿಗೆ ಅಚ್ಚರಿ ಮೂಡಿಸಿದಂತಿತ್ತು. ಆನೆಕಾಡು ಬಳಿ ಮುಖ್ಯರಸ್ತೆಯಿಂದ ಸುಮಾರು 3 ಕಿಮೀ ಅಂತರದ ಅರಣ್ಯದಲ್ಲಿ ಈ ಕಾರ್ಯಾಚರಣೆ ನಡೆಸಲಾಗಿತ್ತು. ಕಾರ್ಯಾಚರಣೆಯ ಮಾಹಿತಿ ತಿಳಿದ ನೂರಾರು ನಾಗರಿಕರು ಆನೆ ಕಾರ್ಯಾಚರಣೆಯನ್ನು ವೀಕ್ಷಿಸಲು ತಾಮುಂದು ನಾಮುಂದು ಎಂಬಂತೆ ತಮ್ಮ ಮೊಬೈಲ್ಗಳಲ್ಲಿ ಕ್ಲಿಕ್ಕಿಸುತ್ತಿದ್ದುದು ಕಾರ್ಯಾಚರಣೆ ನಡೆಸುತ್ತಿದ್ದ ಸಿಬ್ಬಂದಿಗಳಿಗೆ ಕಿರಿಕಿರಿ ಉಂಟು ಮಾಡುತ್ತಿತ್ತು.
ವೀರಾಜಪೇಟೆ ವಿಭಾಗದ ಅರಣ್ಯ ಉಪ ಸಂರಕ್ಷಣಾಧಿಕಾರಿ ಕ್ರಿಸ್ತರಾಜ್, ಸೋಮವಾರಪೇಟೆ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಎಂ.ಎಸ್. ಚಿಣ್ಣಪ್ಪ, ಕುಶಾಲನಗರ ವಲಯ ಅರಣ್ಯಾಧಿಕಾರಿ ನೆಹರು, ಉಪ ವಲಯಾಧಿಕಾರಿಗಳಾದ ರಂಜನ್, ಶಿವರಾಮ್, ದೇವಿಪ್ರಸಾದ್, ಆರ್ಆರ್ಟಿ ತಂಡ ಸದಸ್ಯರು, ಮಾವುತ ಕಾವಾಡಿಗಳು ಸೇರಿದಂತೆ 70 ಕ್ಕೂ ಅಧಿಕ ಮಂದಿ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು. - ಸಿಂಚು