ಮಡಿಕೇರಿ, ಜು. 17: ಪ್ರಾಕೃತಿಕವಾಗಿ ಹಲವಾರು ವಿಶಿಷ್ಟತೆಗಳನ್ನು ಹೊಂದಿರುವ ಕೊಡಗು ಜಿಲ್ಲೆಯಲ್ಲಿ ಮರಗಳೂ ವಿಶೇಷವಾಗಿ ಗಮನ ಸೆಳೆಯುತ್ತಿವೆ. ಭಾರೀ ಗಾತ್ರದೊಂದಿಗೆ ಮುಗಿಲು ಮುಟ್ಟುವಷ್ಟು ಎತ್ತರದ ಮರಗಳನ್ನು ಜಿಲ್ಲೆಯ ಅಲ್ಲಲ್ಲಿ ಕಾಣಬಹುದು... ಕೊಡಗಿನಲ್ಲಿ ಕಂಡುಬರುವ ಕಾಡು ಮಾವಿನ ಮರಗಳ ಗಾತ್ರ ಎತ್ತರ ಬಹುಶಃ ಬೇರೆಲ್ಲೂ ಕಾಣಸಿಗದು.

ಈ ಮೇಲಿನ ಚಿತ್ರವೊನ್ನಮ್ಮೆ ಗಮನಿಸಿ. ಈ ಮರ ಕೆಲ ದಿನಗಳ ಹಿಂದೆ ಧರೆಗುರುಳಿದೆ. ಬಿದ್ದ ಮರದ ಬುಡದ ಸುತ್ತಳತೆÀ ನೆಲದಿಂದ ಎಷ್ಟಿತ್ತು ಗೊತ್ತೆ... 22 ಅಡಿಗೂ ಅಧಿಕ ದಕ್ಷಿಣ ಕೊಡಗಿನ ಬಾಡಗರಕೇರಿ ಗ್ರಾಮದಲ್ಲಿ ಕಾಯಪಂಡ ಕುಟುಂಬಸ್ಥರ ಮನೆಗೆ ತೆರಳುವ ದಾರಿಗೆ ಅಡ್ಡಲಾಗಿ ಈ ಮರ ಬಿದ್ದಿದ್ದು, ಹಲವು ದಿನ ಸಂಪರ್ಕ ಕಡಿತ ಗೊಂಡಿತ್ತು.

ಕಿರಿದಾದ ಬದಲಿ ದಾರಿಯೊಂದು ಇದ್ದ ಕಾರಣ ಇಲ್ಲಿನ ನಿವಾಸಿಗಳು ಕೆಲವು ದಿನ ಸುಧಾರಿಸಿಕೊಂಡರು. ಈ ಮರವನ್ನು ತೆರವುಗೊಳಿಸಲು ಪಟ್ಟ ಪರಿಶ್ರಮವೂ ಅಪಾರ. ಇದರೊಂದಿಗೆ ಭಾರೀ ಖರ್ಚು ಇಲ್ಲಿನವರಿಗೆ ಆಗಿದೆ. ಅಂದ ಹಾಗೆ ಇದು ಬದನಿಮರ... ಸತತ ಒಂದು ವಾರ 8 ಮಂದಿ ಕಾರ್ಮಿಕರು ಕಾರ್ಯನಿರ್ವಹಿಸ ಬೇಕಾಯಿತು.

ಮರ ತೆರವುಗೊಳಿಸುವ ಮೂರು ಮಿಷಿನ್‍ಗಳನ್ನೂ ಬಳಸಬೇಕಾದ ಅನಿವಾರ್ಯತೆ ಎದುರಾಗಿತ್ತು. ಅಂದ ಹಾಗೆ ಖರ್ಚಾಗಿರುವ ಹಣವೆಷ್ಟು ಗೊತ್ತೆ ಬರೋಬ್ಬರಿ 25 ಸಾವಿರ... ಈ ಮೊತ್ತವನ್ನು ಸದ್ಯದ ಮಟ್ಟಿಗೆ ಸ್ಥಳೀಯ ನಿವಾಸಿಗಳೇ ಭರಿಸಿದ್ದಾರೆ.

ಮಾತ್ರವಲ್ಲದೆ ಪಂಚಾಯಿತಿ ಅಥವಾ ಇನ್ಯಾರದೇ ಸಹಕಾರವಿಲ್ಲದೆ ಸ್ಥಳೀಯರೇ ಮರ ತೆರವುಗೊಳಿಸಿದ್ದಾರೆ. ಪಂಚಾಯಿತಿಯ ಗಮನಕ್ಕೆ ಇದನ್ನು ತರಲಾಗಿದ್ದು, ಕೇವಲ ರೂ. 1 ಸಾವಿರ ಹಣ ಸಿಗುವ ಮಾತು ಕೇಳಿ ಬಂದಿದೆ. ಅಬ್ಬಬ್ಬಾ... ಏನಿದು ಮರದ ಮಹಿಮೆ...

-ಶಶಿ