ಮಡಿಕೇರಿ, ಜು. 17: ಕೊಡಗು ಜಿಲ್ಲೆಯಲ್ಲಿ ಮಳೆಯ ನಡುವೆ ಕಾಣಿಸಿಕೊಂಡಿರುವ ಡೆಂಗ್ಯೂಜ್ವರ ಇತ್ಯಾದಿ ಬಗ್ಗೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಿಂದ ಎಲ್ಲಾ ರೀತಿ ಮುಂಜಾಗ್ರತಾ ಕ್ರಮ ಕೈಗೊಳ್ಳುವಂತೆ ಮೇಲ್ಮನೆ ಸದಸ್ಯ ಎಂ.ಪಿ. ಸುನಿಲ್ ಸುಬ್ರಮಣಿ ಅವರು ಸಂಬಂಧಿಸಿದ ಅಧಿಕಾರಿಗಳಗೆ ಸೂಚನೆ ನೀಡಿದ್ದಾರೆ.ಜಿಲ್ಲಾ ಆರೋಗ್ಯ ಇಲಾಖೆ ಅಧಿಕಾರಿಗಳಿಂದ ಈ ಬಗ್ಗೆ ಮಾಹಿತಿ ಪಡೆದುಕೊಂಡ ಅವರು, ಯಾವದೇ ಆಸ್ಪತ್ರೆ ಹಾಗೂ ಗ್ರಾಮೀಣ ಆರೋಗ್ಯ ಕೇಂದ್ರಗಳಿಗೆ ಬರುವ ರೋಗಿಗಳಿಗೆ ಔಷಧಿಯ ಕೊರತೆ ಆಗದಂತೆ ಗಮನ ವಹಿಸಬೇಕೆಂದು ನಿರ್ದೇಶಿಸಿದರು. ಈ ವೇಳೆ ಶಾಸಕರಿಗೆ ಮಾಹಿತಿ ನೀಡಿದ ಸಹಾಯಕ ಆರೋಗ್ಯಾಧಿಕಾರಿ ಡಾ. ಶಿವಕುಮಾರ್ ಅವರು, ಕುಶಾಲನಗರ ಸುತ್ತಮುತ್ತ ಹಾಗೂ ಕೂಡಿಗೆ ವ್ಯಾಪ್ತಿಯಲ್ಲಿ ಹೆಚ್ಚಿನ ಡೆಂಗ್ಯೂ ಸೋಂಕು ಕಾಣಿಸಿಕೊಂಡಿದ್ದು, ಪ್ರಸಕ್ತ ಪರಿಸ್ಥಿತಿ ಹತೋಟಿಗೆ ಬಂದಿದೆ ಎಂದು ತಿಳಿಸಿದರು.
ಜಿಲ್ಲೆಯಲ್ಲಿ ಇದುವರೆಗೆ 121 ಡೆಂಗ್ಯೂ ಪ್ರಕರಣಗಳು ಕಂಡು ಬಂದಿದ್ದಾಗಿ ಶಾಸಕರಿಗೆ ಅಂಕಿ ಅಂಶ ನೀಡಿದ ಅಧಿಕಾರಿಗಳು, ಪ್ರಾರಂಭದಲ್ಲಿ ಕರಿಕೆಯಲ್ಲಿ 2 ಪ್ರಕರಣ ಸೇರಿದಂತೆ ಮಡಿಕೇರಿ ನಗರದಲ್ಲಿ 7 ರೋಗಿಗಳಿಗೆ ಸೋಂಕು ಗೋಚರಿಸಿದ್ದಾಗಿ ತಿಳಿಸಿದರು. ಕೂಡಿಗೆ ವ್ಯಾಪ್ತಿಯಲ್ಲಿ 33 ಪ್ರಕರಣಗಳು, ಬಾಳೆಲೆ ವ್ಯಾಪ್ತಿಯಲ್ಲಿ 12 ಮಂದಿಗೆ ಡೆಂಗ್ಯೂ ಪತ್ತೆಯಾಗಿದ್ದಾಗಿ ವಿವರಿಸಿದರು. ಮಡಿಕೇರಿ ತಾಲೂಕಿನಲ್ಲಿ 22, ಸೋಮವಾರಪೇಟೆ ತಾಲೂಕಿನಲ್ಲಿ 58 ಹಾಗೂ ವೀರಾಜಪೇಟೆ ತಾಲೂಕಿನಲ್ಲಿ 41 ಪ್ರಕರಣಗಳು ಸೇರಿದಂತೆ ಇದುವರೆಗೆ ಜಿಲ್ಲೆಯಲ್ಲಿ ಒಟ್ಟು 121 ಪ್ರಕರಣಗಳು ಪತ್ತೆಯಾಗಿದ್ದು, ಈಗ ಹತೋಟಿಗೆ ಬಂದಿದೆ ಎಂದು ಮಾಹಿತಿ ನೀಡಿದರು. ಈ ನಿಟ್ಟಿನಲ್ಲಿ ಎಲ್ಲಾ ರೀತಿ ಮುಂಜಾಗ್ರತಾ ಕ್ರಮದ ಅಗತ್ಯವಿದೆ ಎಂದು ಸುನಿಲ್ ಸುಬ್ರಮಣಿ ಸಲಹೆಯಿತ್ತರು.